ಸಿದ್ದರಾಮಯ್ಯಗೆ ಜಾತೀಯತೆ ಬೇಕು, ಹೀಗಾಗಿ ಚುನಾವಣೆಯಲ್ಲಿ ಪರಮೇಶ್ವರ್ರನ್ನು ಸೋಲಿಸಿದರು: ಸಿ.ಟಿ.ರವಿ
ತಾನು ಹಿಂದೂ ವಿರೋಧಿ ಅಲ್ಲ, ಹಿಂದುತ್ವ ವಿರೋಧಿ, ಹಿಂದೂ ಬೇರೆ, ಹಿಂದುತ್ವ ಬೇರೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆ ಬಿಜೆಪಿಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಹೇಳಿಕೆಗೆ ತಿರುಗೇಟು ನೀಡಿದ ಸಿ.ಟಿ.ರವಿ, ಹಿಂದೂ-ಹಿಂದುತ್ವ ಎರಡೂ ಒಂದೇ ನಾಣ್ಯದ ಎರಡು ಮುಖ ಇದ್ದ ಹಾಗೆ ಎಂದಿದ್ದಾರೆ.
ಶಿವಮೊಗ್ಗ: ಹಿಂದೂ-ಹಿಂದುತ್ವ ಎರಡೂ ಒಂದೇ ನಾಣ್ಯದ ಎರಡು ಮುಖ ಇದ್ದ ಹಾಗೆ. ಸನಾತನ ಧರ್ಮ ಬೇರೆ ಅಲ್ಲ, ಹಿಂದೂ, ಹಿಂದುತ್ವ ಬೇರೆ ಅಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi) ಹೇಳುವ ಮೂಲಕ “ತಾನು ಹಿಂದೂ ವಿರೋಧಿ ಅಲ್ಲ, ಹಿಂದುತ್ವ ವಿರೋಧಿ, ಹಿಂದೂ ಬೇರೆ, ಹಿಂದುತ್ವ ಬೇರೆ” ಎಂದು ಹೇಳಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರಿಗೆ ತಿರುಗೇಟು ನೀಡಿದರು. ಜಿಲ್ಲೆಯ ಸೊರಬ ಪಟ್ಟಣದಲ್ಲಿ ಮಾತನಾಡಿದ ಅವರು, ದೇವನೊಬ್ಬ ನಾಮ ಹಲವು ಎಂಬುವ ತತ್ವ ಹಿಂದುತ್ವದಲ್ಲಿದೆ. ಓರ್ವ ಹಿಂದೂ ಪ್ರತಿಯೊಬ್ಬರಲ್ಲೂ ಸಮಾನತೆ ಬಯಸುತ್ತಾನೆ. ಆದರೆ ಸಿದ್ದರಾಮಯ್ಯ ಜಾತಿ ಸಮಾನತೆಯನ್ನು ಬಯಸುವುದಿಲ್ಲ. ಹಿಂದುತ್ವ ಒಪ್ಪಲ್ಲ ಅಂದರೆ ಸಿದ್ದರಾಮಯ್ಯಗೆ ಸಮಾನತೆ ಬೇಕಾಗಿಲ್ಲ ಎಂದರ್ಥ ಎಂದರು.
ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಜಾತೀಯತೆ, ಅಸ್ಪೃಶ್ಯತೆ ಬೇಕು. ಅದಕ್ಕಾಗಿಯೇ ಚುನಾವಣೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಕೊರಟಗೆರೆ ಕ್ಷೇತ್ರದಲ್ಲಿ ಸೋಲಿಸಿದರು. ಸಮಾನತೆ ಬಯಸದೆ ಹಿಂದುತ್ವ ಒಪ್ಪಿಕೊಳ್ಳದಿರುವುದು ಸರಿ ಇದೆ. ಸಿದ್ದರಾಮಯ್ಯ ಜಾತಿ ಬೇಳೆ ಬೇಯಿಸುವ ರಾಜಕೀಯ ಮಾಡುತ್ತಿದ್ದಾರೆ. ಅವರ ಹೇಳಿಕೆಯಿಂದ ಎಲ್ಲವೂ ಸ್ಪಷ್ಟವಾಗುತ್ತಿದೆ ಎಂದರು.
ಬಿಜೆಪಿಗೆ ಸಿಕ್ಕಿರುವ ಬೆಂಬಲ ನೋಡಿ ಕುಮಾರಸ್ವಾಮಿಗೆ ಹತಾಶೆ: ಸಿ.ಟಿ.ರವಿ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಆರ್ಎಸ್ಎಸ್ ಹುನ್ನಾರ ನಡೆಸುತ್ತಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ನೀಡಿದ ಹೇಳಿಕೆಗೆ ಟಾಂಗ್ ಕೊಟ್ಟ ಸಿ.ಟಿ.ರವಿ, ಬಿಜೆಪಿಗೆ ಸಿಕ್ಕಿರುವ ಬೆಂಬಲ ನೋಡಿ ಕುಮಾರಸ್ವಾಮಿ ಅವರು ಹತಾಶರಾಗಿದ್ದಾರೆ. ಕಳೆದ ಬಾರಿ ಹಾಸನದಲ್ಲಿ ಗೆದ್ದಿದ್ದೇ ಅವರಿಗೆ ಅರಗಿಸಿಕೊಳ್ಳಲು ಆಗಿಲ್ಲ. ಈ ಬಾರಿ ಹಾಸನ ಜಿಲ್ಲೆಯಲ್ಲಿ 5 ಕ್ಷೇತ್ರ ಗೆಲ್ಲುತ್ತೇವೆ ಎಂಬ ವರದಿ ಅವರಿಗೆ ಸಿಕ್ಕಿದೆ. ಹೀಗಾಗಿ ಅಸಮಾಧಾನಗೊಂಡು ಕುಮಾರಸ್ವಾಮಿ ಈ ರೀತಿ ಮಾತನಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ದಕ್ಷಿಣ ಕನ್ನಡ: ರೋಡ್ ಶೋ ವೇಳೆ ರಸ್ತೆಯ ಗುಂಡಿಗಳನ್ನು ಅಮಿತ್ ಶಾ ಲೆಕ್ಕ ಹಾಕಲಿ: ಯು.ಟಿ.ಖಾದರ್
ಸಾಮಾನ್ಯ ಕಾರ್ಯಕರ್ತನಿಗೂ ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಆಗುವ ಯೋಗ್ಯತೆ ಇದೆ. ಚಹಾ ಮಾರುವ ಮೋದಿ ಪ್ರಧಾನಿ, ರೈತನ ಮಗ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರು. ಆದರೆ ಜೆಡಿಎಸ್ ಪಕ್ಷದಲ್ಲಿ ಆ ರೀತಿ ಇಲ್ಲ. ಹಾಸನದಲ್ಲಿ ಭವಾನಿ ರೇವಣ್ಣ ಅವರೇ ಜೆಡಿಎಸ್ ಅಭ್ಯರ್ಥಿ ಆಗಬೇಕು, ಎಂಎಲ್ಸಿ ಟಿಕೆಟ್ ಸೂರಜ್ಗೆ, ಎಂಪಿ ಟಿಕೆಟ್ ಪ್ರಜ್ವಲ್ಗೆ ಕೊಡಬೇಕು. ರಾಮನಗರ ಬಿಟ್ಟು ಕೊಡಲು ಅನಿತಾ ಕುಮಾರಸ್ವಾಮಿ ಅವರಿಗೆ ಯೋಗ್ಯತೆ ಇರೋದು. ಕ್ಷೇತ್ರ ಬಿಟ್ಟುಕೊಟ್ಟರೂ ನಿಖಿಲ್ ಕುಮಾರಸ್ವಾಮಿಗೆ ಕೊಡುತ್ತಾರೆ. ಇದನ್ನೇ ತ್ಯಾಗ ಅನ್ನೋದಾ? ಎಂದು ಪ್ರಶ್ನಿಸಿದರು. ಅಲ್ಲದೆ, ಜೆಡಿಎಸ್ನಲ್ಲಿ ದೊಡ್ಡಗೌಡರು, ಸಣ್ಣಗೌಡರು, ಮರಿಗೌಡರಿಗೆ ಮಾತ್ರ ಚಾನ್ಸ್ ಇರುತ್ತದೆ ಎಂದು ಹೇಳುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯವರು ಜೆಡಿಎಸ್ ಶಾಸಕಕಾಂಗ ಪಕ್ಷದ ನಾಯಕರಿಗೆ ಟಾಂಗ್ ಕೊಟ್ಟರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:16 pm, Mon, 6 February 23