ಸುಮ್ಮ ಸುಮ್ಮನೆ ಹೆದರಿಸೋಕೆ ಬಂದರೆ ತೊಡೆ ತಟ್ಟೋದು ನನಗೆ ಗೊತ್ತಿದೆ: ಸಿದ್ದರಾಮಯ್ಯ
ಟೀಕೆಗಳಿಗೆ ನಾನು ಹೆದರುವುದಿಲ್ಲ, ತೊಡೆ ತಟ್ಟಿ ನಿಲ್ಲುತ್ತೇನೆ. ನಾನು ಮಾಡುವ ಕೆಲಸ ನ್ಯಾಯಯುತವಾಗಿದ್ದರೆ ಯಾರು ಹೇಳಿದರೂ ನಿಲ್ಲಸುವುದಿಲ್ಲ ಎಂದು ವಿಜಯನಗರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ವಿಜಯನಗರ: ಸಿದ್ದರಾಮಯ್ಯ ಏನು ಮಾಡಿದರು ಎಂದು ಕೆಲವರು ಟೀಕೆ ಮಾಡುತ್ತಾರೆ. ಆದರೆ ನಾನು ಇಂತಹ ಟೀಕೆಗಳಿಗೆ ಹೆದರುವುದಿಲ್ಲ. ಹೆದರಿಸಲು ಬಂದರೆ ನನಗೆ ತೊಡೆ ತಟ್ಟಿ ನಿಲ್ಲುವುದು ಗೊತ್ತಿದೆ ಎಂದು ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ ಮಾತನಾಡಿದ ಅವರು, ನಾನು ಮಾಡುವ ಕೆಲಸ ನ್ಯಾಯಯುತವಾಗಿದ್ದರೆ ಯಾರು ಹೇಳಿದರೂ ನಿಲ್ಲಸುವುದಿಲ್ಲ. ಅಧಿಕಾರ ಬರುತ್ತದೆ, ಹೋಗುತ್ತದೆ. ನಾನು 13 ಚುನಾವಣೆ ಎದುರಿಸಿದ್ದೇನೆ, ಐದು ಚುನಾವಣೆಗಳಲ್ಲಿ ಸೋತಿದ್ದೇನೆ. ಸೋತು ಮನೆಯಲ್ಲಿ ಕುಳಿತಿರಲಿಲ್ಲ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ್ದೇನೆ. ಯಾರಿಗೂ ಹೆದರುವ ಗಿರಾಕಿ ಅಲ್ಲ ನಾನು ಎಂದರು.
ಕುರುಬರನ್ನು ಎಸ್ಟಿಗೆ ಸೇರಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿನ್ನೆ ಹೇಳಿದ್ದಾರೆ. ಆದರೆ ಇದನ್ನು ಮಾಡುವವರು ಇವರಲ್ಲ (ರಾಜ್ಯ ಸರ್ಕಾರ), ಕೇಂದ್ರ ಸರ್ಕಾರದವರು. ನಿಮ್ಮದು ಡಬಲ್ ಇಂಜಿನ್ ಸರ್ಕಾರ ಅಂತಾರೆ. ಹಾಗಿದ್ದರೆ ಕುರುಬರನ್ನು ಎಸ್ಟಿಗೆ ಸೇರಿಸಿ ಎಂದು ಸವಾಲು ಹಾಕಿದರು.
ಇದನ್ನೂ ಓದಿ: Assembly Polls: ಸಿದ್ದರಾಮಯ್ಯ ಮತ್ತು ಮುನಿಯಪ್ಪ ನಡುವಿನ ಮುನಿಸಿಗೆ ಡಿಕೆ ಶಿವಕುಮಾರ್ ತೇಪೆ ಹಾಕುವಲ್ಲಿ ಸಫಲರಾದರೇ?
ಇವರು (ಬಿಜೆಪಿ) ಮೂಗಿಗೆ ತುಪ್ಪ ಹಚ್ಚುವವರಲ್ಲ, ಹಣೆಗೆ ತುಪ್ಪ ಹಚ್ಚುವವರು. ಇವರ ವಿರುದ್ಧ ನೀವೆಲ್ಲಾ ಧ್ವನಿ ಎತ್ತಬೇಕು. ಆರ್ಥಿಕವಾಗಿ ಹಿಂದುಳಿದವರಿಗೆ, ಮೇಲ್ಜಾತಿಯವರಿಗೆ ಮೀಸಲಾತಿ ಕೊಡಬೇಕು ಅಂತ ಸಂವಿಧಾನದಲ್ಲಿ ಎಲ್ಲಿದೆ ತೋರಿಸಿ? ಇದ್ದರೆ ಹೇಳಿ ಬಿಡಿ ನೋಡೋಣ, ನಾನು ನನ್ನ ರಾಜಕೀಯ ಜೀವನಕ್ಕೆ ರಾಜೀನಾಮೆ ಕೊಟ್ಟು ಬಿಡುತ್ತೇನೆ ಎಂದು ಸವಾಲು ಹಾಕಿದರು.
ಹಾಲುಮತ ಗುರುಪೀಠ ಸ್ಥಾಪನೆಗಾಗಿ ನಾವೆಲ್ಲರೂ ಸೇರಿ ಹಣ ಸಂಗ್ರಹ
ಹಾಲುಮತ ಸಮುದಾಯಕ್ಕೆ ಯಾವುದೇ ಗುರುಪೀಠ ಇರಲಿಲ್ಲ. ಗುರುಪೀಠ ಸ್ಥಾಪನೆಗಾಗಿ ನಾವೆಲ್ಲರೂ ಸೇರಿ ಹಣ ಸಂಗ್ರಹಿಸಿದ್ದೆವು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಣ ಸಂಗ್ರಹ ವೇಳೆ ನನ್ನ ಜೊತೆ ಕಾರಿನಲ್ಲಿ ಹೆಚ್.ವಿಶ್ವನಾಥ್ ಬಂದಿದ್ದರು. ಅಂದು ಮೊದಲ ಮೀಟಿಂಗ್ಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಗೈರಾಗಿದ್ದ. 2ನೇ ಸಭೆಗೆ ಈಶ್ವರಪ್ಪ ಮತ್ತೆ ಗೈರು ಆದ. ನಿರಂಜನಾನಂದಪುರಿ ಸ್ವಾಮೀಜಿ ಇದು ನಿಮ್ಮ ಗಮನದಲ್ಲಿ ಇರಲಿ ಎಂದರು.
ಶಿವಮೊಗ್ಗದಲ್ಲಿ ಅಂದು ಪುಟ್ಟಪ್ಪ, ತಿಮ್ಮಯ್ಯ 3 ಲಕ್ಷ ಸಂಗ್ರಹಿಸಿದ್ದರು. ಈ ಗಿರಾಕಿ ದುಡ್ಡು ಕೊಡಬೇಕು ಅಂದ ತಕ್ಷಣ ತಪ್ಪಿಸಿಕೊಂಡುಬಿಟ್ಟ. ಈ ಗಿರಾಕಿ (ಈಶ್ವರಪ್ಪ) ಉದ್ಘಾಟನಾ ಸಮಾರಂಭಕ್ಕೂ ಬರಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಮುಂದುವರೆ ಮಾತನಾಡಿ, 1992ರಲ್ಲಿ ಕಾಗಿನೆಲೆ ಗುರುಪೀಠ ಶುರುವಾಯಿತು. ಕನಕದಾಸರ 500ನೇ ಜಯಂತಿಗೆ ನಾನು ಗುರುಪೀಠಕ್ಕೆ ಬಂದಿದ್ದೆ. ಬಹಳ ಅರ್ಥಪೂರ್ಣವಾಗಿ ಜಯಂತಿ ಮಾಡಬೇಕೆಂದು ತೀರ್ಮಾನಿಸಿ ಅಂದು ಸಿಎಂ ಆಗಿದ್ದ ಎಸ್.ಆರ್.ಬೊಮ್ಮಾಯಿ ಸಮಿತಿ ರಚಿಸಿದ್ದರು. ರಾಜ್ಯಾದ್ಯಂತ ಸಂಚರಿಸಿ ಕನಕ ಜಯಂತಿ ಆಚರಿಸಿದೆವು ಎಂದರು.
ಇಲ್ಲಲ್ಲ ಸಿಎಂ ಮಾಡುವುದು, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸಿ
ಕನಕದಾಸರ ಕೃತಿ, ಬದುಕು, ವಿಚಾರಧಾರೆ ಜನರಿಗೆ ತಿಳಿಸಲು ಸಂಚಾರ ಮಾಡಲಾಗುವುದು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಂತೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆ ಮೊಳಗಿದವು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇಲ್ಲಲ್ಲ ಸಿಎಂ ಮಾಡುವುದು, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸಿ ಎಂದು ಹೇಳುವ ಮೂಲಕ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಆಸೆಯನ್ನು ಮತ್ತೊಮ್ಮೆ ಪರೋಕ್ಷವಾಗಿ ಬಿಚ್ಚಿಟ್ಟಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:39 pm, Sun, 5 February 23