ಫೆ.10 ರಿಂದ 12ರವರೆಗೆ ಐತಿಹಾಸಿಕ ಲಕ್ಕುಂಡಿ ಉತ್ಸವ; ಲಾಂಛನ, ಪ್ರೋಮೋ, ಬಿಡುಗಡೆ ಮಾಡಿದ ಸಚಿವ ಸಿಸಿ ಪಾಟೀಲ್
ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಫೆ.10 ರಿಂದ 12ರವರೆಗೆ ಮೂರು ದಿನಗಳ ಕಾಲ ಐತಿಹಾಸಿಕ ಲಕ್ಕುಂಡಿ ಉತ್ಸವ ನಡೆಯಲಿದ್ದು, ಇಂದು ಸಚಿವ ಸಿಸಿ ಪಾಟೀಲ್ ಉತ್ಸವಕ್ಕೆ ಸಂಬಂಧಿಸಿದ ಲಾಂಛನ, ಪ್ರೋಮೋ ಬಿಡುಗಡೆ ಮಾಡಿದರು.
ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಫೆಬ್ರವರಿ 10 ರಿಂದ 12ರವರೆಗೆ ಮೂರು ದಿನಗಳ ಕಾಲ ಐತಿಹಾಸಿಕ ಲಕ್ಕುಂಡಿ ಉತ್ಸವ ನಡೆಯಲಿದ್ದು, ಇಂದು ಲಕ್ಕುಂಡಿಯ ಅನ್ನದಾನಿಶ್ವರ ಸಮುದಾಯ ಭವನದಲ್ಲಿ ಲಕ್ಕುಂಡಿ ಉತ್ಸವದ ಲಾಂಛನ, ಪ್ರೋಮೋ ಹಾಗೂ ಪ್ರಚಾರ ಸಾಮಗ್ರಿಗಳನ್ನು ಸಚಿವ ಸಿ ಸಿ ಪಾಟೀಲ್(C. C. Patil) ಬಿಡುಗಡೆ ಮಾಡಿದರು. ಲಕ್ಕುಂಡಿ ಉತ್ಸವದ ಯಶಸ್ವಿಗೆ ರಚಿಸಲಾದ ವಿವಿಧ ಸಮಿತಿಗಳು ವ್ಯವಸ್ಥಿತ ಕಾರ್ಯಕ್ರಮ ಆಯೋಜನೆಗೆ ಅಗತ್ಯದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೇ ನೀಡುವ ಹಿನ್ನಲೆಯಲ್ಲಿ ಸಮಯ ಹೊಂದಾಣಿಕೆ ಮಾಡಲಾಗಿದೆ. ಖ್ಯಾತ ಕಲಾವಿದರು, ಸಾಹಿತ್ಯಕಾರರಿಗೂ ಆದ್ಯತೆ ನೀಡಲಾಗಿದೆ. ಫೆ. 10 ರಂದು ಮಧ್ಯಾಹ್ನ ಜರುಗಲಿರುವ ಮೆರವಣಿಗೆಗೆ ಹೆಚ್ಚಿನ ಮೆರಗು ನೀಡುವ ಉದ್ದೇಶದಿಂದ ಸ್ಥಳೀಯ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಕಲಾತಂಡಗಳನ್ನು ಕರೆ ತರಲಾಗುತ್ತಿದೆ ಎಂದು ಸಚಿವ ಸಿ ಸಿ ಪಾಟೀಲ್ ಹೇಳಿದರು.
ಉತ್ಸವದ ಉದ್ಘಾಟನಾ ಕಾರ್ಯಕ್ರಮದ ನಂತರ ರಂಗಾಯಣ ಕಲಾವಿದರಿಂದ ವೀರ ರಾಣಿ ಕಿತ್ತೂರ ರಾಣಿ ಚನ್ನಮ್ಮ ನಾಟಕ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮವನ್ನು ಹಸರೀಕರಣದ ಮಹತ್ವಾಕಾಂಕ್ಷೆಯೊಂದಿಗೆ ಸಸಿ ನೆಡುವ ಮೂಲಕ ಉದ್ಘಾಟಿಸಲಾಗುವುದು. ಉತ್ಸವದ ಯಶಸ್ವಿಗಾಗಿ ಎಲ್ಲರ ಸಹಕಾರ ಅಗತ್ಯವಾಗಿದ್ದು ಲಕ್ಕುಂಡಿಯ ವೈಭವವನ್ನು ನಾಡಿನಾದ್ಯಂತ ಫಸರಿಸಲು ಎಲ್ಲರ ಪಾಲ್ಗೊಳ್ಳುವಿಕೆ ಹಾಗೂ ಸಹಕಾರ ಅಗತ್ಯವಾಗಿದೆ ಎಂದರು. ಉತ್ಸವಕ್ಕೆ ಆಗಮಿಸುವ ಎಲ್ಲರಿಗೂ ಮೂರು ದಿನಗಳ ಕಾಲ ಉಪಹಾರ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ರಾಷ್ಟ್ರ ಮಟ್ಟದ ಕಲಾವಿದರನ್ನ ಆಯ್ಕೆ ಮಾಡಲಾಗಿದೆ ಎಂದರು. ಉತ್ಸವದ ಹಿನ್ನಲೆಯಲ್ಲಿ ಗ್ರಾಮಸ್ಥರು ತಮ್ಮ ಮನೆಗಳ ಮುಂದೆ ರಂಗೋಲಿ ಹಾಗೂ ಬಾಳೆ ಕಂಬಗಳನ್ನು ಹಚ್ಚುವುದರ ಮೂಲಕ ಗ್ರಾಮದ ಸೌಂದರ್ಯವನ್ನು ಹೆಚ್ಚಿಸಲು ಗ್ರಾಮಸ್ಥರಲ್ಲಿ ಮನವಿ ಮಾಡಿದ ಅವರು ಸದರಿ ಉತ್ಸವವನ್ನು ಪಕ್ಷಾತೀತವಾಗಿ ಆಚರಿಸಲಾಗುತ್ತಿದ್ದು ಸರ್ವರೂ ಭಾಗಿಯಾಗುವಂತೆ ಸಚಿವ ಸಿ.ಸಿ.ಪಾಟೀಲ ಕೋರಿದರು.
ಇದನ್ನೂ ಓದಿ:ಗದಗ: ಮತ್ತೆ ತಾರಕಕ್ಕೇರಿದ ಶಿವಾನಂದ ಮಠದ ಉತ್ತರಾಧಿಕಾರಿ ವಿವಾದ, ಹಿರಿಯ, ಕಿರಿಯ ಶ್ರೀಗಳೆದುರೇ ಭಕ್ತರ ವಾಗ್ವಾದ
ಫೆ. 11 ರಂದು ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಖ್ಯಾತ ಗಾಯಕಿ ಅನನ್ಯ ಭಟ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಇನ್ನು ಫೆ.12 ರಂದು ಸಾಯಂಕಾಲ ಸಮಾರೋಪ ಸಮಾರಂಭ ನಂತರ ಸಿಡಿಮದ್ದು ಪ್ರದರ್ಶನ, ಕೊನೆಯಲ್ಲಿ ಖ್ಯಾತ ಗಾಯಕ ಕುನಾಲ್ ಗಾಂಜಾವಾಲ ಅವರಿಂದ ಸಂಗೀತ ರಸದೌತಣ ಏರ್ಪಡಿಸಿದೆ. ಈ ನಡುವೆ ಬೆಳಗಿನಿಂದ ಮಧ್ಯಾಹ್ನದವರೆಗೆ ವಿವಿಧ ವಿಷಯಗಳ ಕುರಿತು ಗೋಷ್ಠಿಗಳು ಜರುಗಲಿವೆ ಎಂದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ