Fact Check: ಕರ್ನಾಟಕ ವಿಧಾನಸಭಾ ಚುನಾವಣಾ ವೇಳಾಪಟ್ಟಿ ವೈರಲ್, ಇಲ್ಲಿದೆ ಸತ್ಯಾಸತ್ಯತೆ
ಕರ್ನಾಟಕ ವಿಧಾನಸಭಾ ಚುನಾವಣಾ ವೇಳಾಪಟ್ಟಿ ದಿನಾಂಕ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ಪೋಸ್ಟರ್ ಸತ್ಯಾಸತ್ಯತೆ ಇಲ್ಲಿದೆ.
ಬೆಂಗಳೂರು: ಮುಂಬರುವ 2023ರ ಕರ್ನಾಟಕ ವಿಧಾನಸಭೆಯ ಚುನಾವಣೆಗೆ (Karnataka Assembly Elections 2023) ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಭರ್ಜರಿ ಸಿದ್ಧತೆಗಳು ನಡೆಸಿವೆ. ಚುನಾವಣೆ ಏಪ್ರಿಲ್ ಅಥವಾ ಮೇನಲ್ಲಿ ನಡೆಯುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಚುನಾವಣಾ ಅಖಾಡದಲ್ಲಿ ಈಗಾಗಲೇ ಮೂರು ಪಕ್ಷಗಳಿಂದ ಯಾತ್ರೆಗಳು ಆರಂಭವಾಗಿದ್ದು, ಆರೋಪ-ಪ್ರತ್ಯಾರೋಪಗಳ ಸಮರ ಜೋರಾಗಿದೆ. ಇದರ ಮಧ್ಯೆ ಚುನಾವಣಾ ವೇಳಾ ಪಟ್ಟಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರು ಅದನ್ನು ತಮ್ಮ ವಾಟ್ಸಪ್ ಸ್ಟೇಟಸ್ ಇಟ್ಟುಕೊಳ್ಳುತ್ತಿದ್ದಾರೆ. ಅಲ್ಲದೇ ಒಂದು ಗ್ರೂಪ್ನಿಂದ ಮತ್ತೊಂದು ಗ್ರೂಪ್ಗೆ ಅದು ಹರಿದಾಡುತ್ತಿದೆ. ಹಾಗಾದ್ರೆ, ವೈರಲ್ (Election date Post viral) ಆಗುತ್ತಿರುವ ಚುನಾವಣೆ ವೇಳಾಪಟ್ಟಿಯ ಸತ್ಯಾಸತ್ಯತೆ ಇಲ್ಲಿದೆ.
ಹರಿದಾಡುತ್ತಿರುವ ಎಲೆಕ್ಷನ್ ವೇಳಾಪಟ್ಟಿ ಪೋಸ್ಟರ್
ವೇಳಾ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಚುನಾವಣಾ ವೇಳಾ ಪಟ್ಟಿಯೊಂದನ್ನು ಹಂಚಿಕೊಳ್ಳಲಾಗಿದೆ. ಇದರ ಪ್ರಕಾರ ಮಾರ್ಚ್ 27ರಿಂದ ನೀತಿ ಸಂಹಿತಿ ಜಾರಿಗೆ ಬರಲಿದ್ದು , ಏಪ್ರಿಲ್ 17, ಚುನಾವಣಾ ಅಧಿಸೂಚನೆ ಪ್ರಕಟಗೊಳ್ಳುತ್ತದೆ, ಏಪ್ರಿಲ್ 26, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಏಪ್ರಿಲ್ 27 ನಾಮಪತ್ರಗಳ ಪರಿಶೀಲನೆ ನಡೆಸಲಾಗುತ್ತದೆ, ಮೇ12 ಕ್ಕೆ ಮತದಾನ ನಡೆದು, ಮೇ 15ಕ್ಕೆ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ ಎನ್ನುವ ಪೋಸ್ಟ್‌ರ್ ಹರಿದಾಡುತ್ತಿದೆ.
ಸತ್ಯಾಸತ್ಯತೆ ಇಲ್ಲಿದೆ
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ 2023ರ ಚುನಾವಣಾ ವೇಳಾ ಪಟ್ಟಿ ನಿಜವೇ ಎಂದು ಪರಿಶೀಲಿಸಿದಾಗ, ಇದು ನಕಲಿ ವೇಳಾ ಪಟ್ಟಿ ಎಂದು ತಿಳಿದು ಬಂದಿದೆ. ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಈ ಹಿಂದಿನ 2018ರ ಹಳೆಯ ವೇಳಾಪಟ್ಟಿಯನ್ನೇ ಎಡಿಟ್ ಮಾಡಲಾಗಿದೆ. ಈ ಫೋಟೊದಲ್ಲಿ 2018 ಇರುವ ಕಡೆ 2023 ಎಂದು ಎಡಿಟ್ ಮಾಡಲಾಗಿದೆ. ಎಡಿಟ್ ಮಾಡಿದ ಫೋಟೊವನ್ನೇ ಎಲ್ಲೆಡೆ ಶೇರ್ ಮಾಡಲಾಗುತ್ತಿದ್ದು, ಅದನ್ನೇ ಪ್ರಸಕ್ತ ಸಾಲಿನ ವಿಧಾನಸಭೆಯ ಚುನಾವಣೆಯ ವೇಳಾಪಟ್ಟಿ ಎಂದು ಶೇರ್ ಮಾಡಲಾಗುತ್ತಿದೆ.
ಇದನ್ನೂ ಓದಿ: Fact Check: ಗಣರಾಜ್ಯೋತ್ಸವದ ದಿನ ಬಿಹಾರದಲ್ಲಿ ಪಾಕಿಸ್ತಾನದ ಧ್ವಜ ಹಾರಾಡಿತಂತೆ! ಏನಿದರ ಸತ್ಯಾಸತ್ಯತೆ?
Published On - 8:53 pm, Mon, 6 February 23