ವಿಶ್ಲೇಷಣೆ: 2024ರ ಮಹಾ ಚುನಾವಣೆಗೆ ರಾಜಕೀಯ ಸ್ಥಿತ್ಯಂತರದ ಮುನ್ನುಡಿ ಬರೆಯಲಿದೆಯೇ ಕೇಂದ್ರ ಸಹಕಾರ ಇಲಾಖೆ?

| Updated By: Srinivas Mata

Updated on: Jul 08, 2021 | 7:57 PM

2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಸಹಕಾರ ಇಲಾಖೆಯ ಹೊಣೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ವಹಿಸಲಾಗಿದೆಯೇ?

ವಿಶ್ಲೇಷಣೆ: 2024ರ ಮಹಾ ಚುನಾವಣೆಗೆ ರಾಜಕೀಯ ಸ್ಥಿತ್ಯಂತರದ ಮುನ್ನುಡಿ ಬರೆಯಲಿದೆಯೇ ಕೇಂದ್ರ ಸಹಕಾರ ಇಲಾಖೆ?
ಅಮಿತ್ ಶಾ (ಸಂಗ್ರಹ ಚಿತ್ರ)
Follow us on

ಹೊಸದಾಗಿ ಅಸ್ತಿತ್ವಕ್ಕೆ ಬಂದ ಸಹಕಾರ ಇಲಾಖೆಯ ಹೊಣೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ವಹಿಸಲಾಗಿದೆ. ಕೇಂದ್ರ ಸರ್ಕಾರದ ಈ ಪ್ರಯತ್ನದ ಹಿಂದೆ ಇರುವ ಉದ್ದೇಶಗಳು ಬಹಳ ಸ್ಪಷ್ಟವಾಗಿವೆ. 2024ರ ಮಹಾ ಚುನಾವಣೆಗಾಗಿ ರೂಪಿಸುತ್ತಿರುವ ಕಾರ್ಯತಂತ್ರದ ಜೊತೆಗೆ ದೇಶದಲ್ಲಿ ಈಗಾಗಲೇ ಹಳಿ ತಪ್ಪಿರುವ ಮತ್ತು ಕೆಲವೆಡೆ ಹಳಿ ತಪ್ಪುತ್ತಿರುವ ಸಹಕಾರ ಚಳವಳಿಯಲ್ಲಿ ಸರಿಯಾದ ಕ್ರಮ ತರುವ ಉದ್ದೇಶದ ಆಶಯವೂ ನೂತನ ಸಚಿವಾಲಯ ರಚನೆಯ ಹಿನ್ನೆಲೆಯಲ್ಲಿ ಇದೆ ಎಂದು ಹಲವರು ವಿಶ್ಲೇಷಿಸುತ್ತಿದ್ದಾರೆ.

ದೆಹಲಿಯಲ್ಲಿ ಹಲವು ತಿಂಗಳಿಂದ ನಡೆಯುತ್ತಿರುವ ಮತ್ತು ದೇಶದ ಹಲವೆಡೆ ಬೆಂಬಲ ಪಡೆದುಕೊಳ್ಳಲು ಯತ್ನಿಸುತ್ತಿರುವ ಕೃಷಿ ಕಾನೂನುಗಳ ಹಿನ್ನೆಲೆಯಲ್ಲಿಯೂ ನೂತನ ಸಚಿವಾಲಯ ರಚನೆ ಮಹತ್ವ ಪಡೆದುಕೊಂಡಿದೆ. ಕೃಷಿ ಚಳವಳಿಯೂ ಕ್ರಮೇಣ ರಾಜಕೀಯ ಆಯಾಮ ಪಡೆದುಕೊಂಡಿದ್ದು ಮತ್ತು ಬಿಜೆಪಿಯ ವಿರುದ್ಧ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇನ್ನೊಂದು ವರ್ಷದಲ್ಲಿ (2022) ಚುನಾವಣೆ ಎದುರಿಸಬೇಕಾದ ಪಂಜಾಬ್, ಉತ್ತರಾಖಂಡ್ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ರೈತ ಚಳವಳಿಯು ಬಿಜೆಪಿಗೆ ಹೊಡೆತ ನೀಡಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ದೇಶದ ಸಹಕಾರ ಚಳವಳಿಗೆ ಈ ಸಚಿವಾಲಯವು ಪ್ರತ್ಯೇಕ ಆಡಳಿತಾತ್ಮಕ, ಕಾನೂನು ಮತ್ತು ನೀತಿ ನಿರೂಪಣಾ ಚೌಕಟ್ಟನ್ನು ಒದಗಿಸಲಿದೆ. ಸಹಕಾರ ಸಂಘಗಳು ಜನರ ಅಭ್ಯುದಯಕ್ಕಾಗಿ ಕೆಲಸ ಮಾಡಬೇಕೆನ್ನುವ ಆಶಯಕ್ಕೆ ಪೂರಕವಾಗಿಯೇ ತಳಮಟ್ಟದ ಈ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಹೊಸ ಇಲಾಖೆಯು ಪ್ರಯತ್ನಿಸಲಿದೆ ಎಂದು ಸಂಪುಟ ಕಾರ್ಯದರ್ಶಿ ಜುಲೈ 6ರ ಹೇಳಿಕೆಯಲ್ಲಿ ತಿಳಿಸಿದ್ದರು. ಭಾರತದಲ್ಲಿ ಹಲವು ಯಶಸ್ವಿ ಸಹಕಾರ ಚಳವಳಿಗಳ ಉದಾಹರಣೆಯಿದೆ. ಇಂದಿಗೂ ಸಹಕಾರ ಚಳವಳಿಯ ಅತಿಮುಖ್ಯ ಸಂಸ್ಥೆ ಎನಿಸಿದ ಅಮುಲ್ 1946ರಲ್ಲಿ ಸ್ಥಾಪನೆಯಾಗಿತ್ತು.

ಸ್ಥಳೀಯ ವ್ಯಾಪಾರಿಗಳ ಶೋಷಣೆಯಿಂದ ಜನರನ್ನು ರಕ್ಷಿಸಲೆಂದೇ ಸಹಕಾರ ಚಳವಳಿ ಆರಂಭವಾಯಿತು. ವ್ಯಾಪಾರಿಗಳು ಅನುಸರಿಸುತ್ತಿರುವ ಮೋಸದ ಪದ್ಧತಿಗಳ ಬಗ್ಗೆ ಜನರು ಜನನಾಯಕ ಸರ್ದಾರ್ ವಲ್ಲಭಭಾಯ್ ಪಟೇಲರ ಗಮನ ಸೆಳೆದು, ಪರಿಹಾರದ ಕ್ರಮಕ್ಕೆ ವಿನಂತಿಸಿದರು. ಮಧ್ಯವರ್ತಿಗಳ ಹಿಡಿತದಿಂದ ತಪ್ಪಿಸಿಕೊಂಡು, ನೀವೇ ಸ್ವತಃ ಉತ್ಪಾದನೆ, ಸಂಗ್ರಹ, ಸಂಸ್ಕರಣೆ ಮತ್ತು ಮಾರಾಟ ಚಟುವಟಿಕೆಗಳನ್ನು ನಿರ್ವಹಿಸಬಾರದೇಕೆ ಎಂದು ಪಟೇಲರು ಸಲಹೆ ಮಾಡಿದರು. ಈ ಸಲಹೆಯ ಮೇರೆಗೆ ಸಹಕಾರ ಚಳವಳಿ ಗರಿಗೆದರಿತು.

ಗುಜರಾತ್​ನಲ್ಲಿ ಸಹಕಾರ ಚಳವಳಿ ಕ್ರಮೇಣ ವೇಗ ತೆಗೆದುಕೊಂಡಿತು. ಗುಜರಾತ್ ಹಾಲು ಉತ್ಪಾದಕರ ಮಹಾಮಂಡಳವು (Gujarat Cooperative Milk Marketing Federation Ltd – GCMMF) ಯಶಸ್ವಿಯಾಗಿ ಬೆಳೆಯಿತು. ಹಾಲಿನ ಉತ್ಪನ್ನಗಳ ಮಾರಾಟವನ್ನೇ ಮುಖ್ಯ ವ್ಯವಹಾರವಾಗಿಸಿಕೊಂಡಿರುವ ಈ ಮಹಾ ಮಂಡಳವು ಇಂದು ₹ 39,200 ಕೋಟಿ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದಿದೆ.

ಕರ್ನಾಟಕದ ನಂದಿನಿ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಹತ್ತಾರು ಸಹಕಾರ ಸಂಘಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಹೊಸ ಕೃಷಿ ಕಾನೂನುಗಳು ಜಾರಿಗೆ ಬಂದರೆ ರೈತರ ಆದಾಯ, ಉತ್ಪಾದನೆಯ ಹೆಚ್ಚಳ ಮಾತ್ರವಲ್ಲದೆ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಸಹ ಗಣನೀಯ ಪ್ರಮಾಣದಲ್ಲಿ ಸುಧಾರಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ರೈತರ ಚಳವಳಿಯ ಪ್ರತಿರೋಧ ಎದುರಿಸುತ್ತಿರುವ ಸರ್ಕಾರವು ಆದಾಯ ಹೆಚ್ಚಳದ ಮಾತುಗಳನ್ನೇ ಪದೇಪದೇ ಹೇಳುವ ಮೂಲಕ ಅವರ ಮನವೊಲಿಸಲು ಪ್ರಯತ್ನಿಸುತ್ತಿದೆ. ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಮತ್ತು ಯೋಜಿತ ರೀತಿಯಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವಿರುವ ಅಮಿತ್​ ಶಾ ಸಹಕಾರ ಚಳವಳಿಗೆ ಹೊಸ ಬಲ ತುಂಬಲು ಯತ್ನಿಸಲಿದ್ದಾರೆ. 2024ರ ಮಹಾ ಚುನಾವಣೆಗೆ ಮೊದಲು ಸಹಕಾರ ಇಲಾಖೆಯ ಕಾರ್ಯನಿರ್ವಹಣೆ ಆರಂಭವಾಗಲಿದೆ. ಹಲವು ಕಾರಣಗಳಿಂದಾಗಿ ಈಗಾಗಲೇ ಹಿನ್ನಡೆ ಅನುಭವಿಸುತ್ತಿರುವ ಸಹಕಾರ ಚಳವಳಿಗೆ ಇದರಿಂದ ಹೊಸ ಬಲ ಸಿಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಸರ್ಕಾರವು ಬಹುರಾಜ್ಯ ಸಹಕಾರ ಸಂಸ್ಥೆಗಳನ್ನು ರೂಪಿಸಿ, ಬೆಂಬಲಿಸುವ ಬದ್ಧತೆ ಪ್ರದರ್ಶಿಸುತ್ತಿದೆ. ಸಹಕಾರ ಸಂಸ್ಥೆಗಳ ವ್ಯವಹಾರಗಳು ಸುಲಲಿತವಾಗಿ ನಡೆಯುವಂತಾಗಲು ಪ್ರತ್ಯೇಕ ಆಡಳಿತ ವ್ಯವಸ್ಥೆ ಬೇಕು ಎಂಬ ಸಲಹೆಯನ್ನು ಪ್ರಸ್ತಾಪಿಸುತ್ತಿದ್ದೇನೆ ಎಂದು ತಮ್ಮ ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ್ದರು.

ಮೋದಿ ಸರ್ಕಾರವು ಪ್ರತ್ಯೇಕ ಸಹಕಾರ ಇಲಾಖೆ ರೂಪಿಸುವ ಐತಿಹಾಸಿಕ ನಿರ್ಧಾರವನ್ನು ಪ್ರಕಟಿಸಿತು. ಸಹಕಾರದಿಂದ ಸಮೃದ್ಧಿ (ಸಹಕಾರ್​ ಸೆ ಸಮೃದ್ಧಿ) ಎಂಬ ಆಶಯಕ್ಕೆ ಅನುಗುಣವಾಗಿ ಈ ನಡೆಯನ್ನು ಸರ್ಕಾರ ಕಾರ್ಯರೂಪಕ್ಕೆ ತರುವ ಸಾಧ್ಯತೆ ಇದೆ. ನಮ್ಮ ದೇಶಕ್ಕೆ ಸಹಕಾರ ಚಳವಳಿ ಆಧರಿತ ಆರ್ಥಿಕ ಅಭಿವೃದ್ಧಿ ಮಾದರಿಯು ಪ್ರಸ್ತುತವಾಗಿದೆ. ಬಹುರಾಜ್ಯ ಸಹಕಾರ ಸಂಸ್ಥೆಗಳನ್ನು ಸ್ಥಾಪಿಸಿ, ಸುಲಲಿತ ಕಾರ್ಯನಿರ್ವಹಣೆಗೆ ಮಾಡಿಕೊಡುವ ಮೂಲಕ ಸಹಕಾರ ಇಲಾಖೆಯು ಜನರಿಗೆ ಆರ್ಥಿಕ ಬಲ ತುಂಬಲಿದೆ ಎಂದು ಸಂಪುಟ ಕಾರ್ಯದರ್ಶಿ ಹೇಳಿದ್ದಾರೆ.

ಇದನ್ನೂ ಓದಿ: Co Operation Ministry: ಸಹಕಾರ ಚಳವಳಿಗೆ ಕೇಂದ್ರ ಸಚಿವಾಲಯದ ಬಲ: ಹೊಸ ಇಲಾಖೆ ಆರಂಭ, ಈಬಾರಿಯ ಸಂಪುಟ ವಿಸ್ತರಣೆಯಲ್ಲೇ ಸಚಿವರ ನೇಮಕ

(Cooperative Ministry will be a political game changer for 2024 Says Analysts)

 

Published On - 7:54 pm, Thu, 8 July 21