ಬೆಂಗಳೂರು: ಪದೇಪದೇ ನನ್ನ ತಂದೆಯ ಸಾವಿನ ವಿಚಾರ ತರಬೇಡಿ ಎಂದು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಂಬರೀಶ್ ಪುತ್ರ ಅಭಿಷೇಕ್ ಮನವಿ ಮಾಡಿದ್ದಾರೆ. ಆ ದಿನವನ್ನು ನೆನಪಿಸಿಕೊಳ್ಳೋಕೆ ನನಗೆ ಇಷ್ಟ ಇಲ್ಲ. ಅಂದು ಕುಮಾರಸ್ವಾಮಿಯವರು ಹೇಳಿರುವ ವಿಡಿಯೋ ಇದೆ. ಅವತ್ತು ನಮ್ಮಮ್ಮ ಪತಿ ಕಳೆದುಕೊಂಡ ನೋವಲ್ಲಿದ್ದರು. ಅವರು ಏನೂ ಮಾತನಾಡಿಲ್ಲ ಎಂದು ಅಭಿಷೇಕ್ ಅಂಬರೀಶ್ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಅಂಬರೀಶ್ ಮೃತದೇಹವನ್ನು ಮಂಡ್ಯಕ್ಕೆ ಕೊಂಡೊಯ್ಯಲು ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದೀರು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ತಲೆಗೆ ಗನ್ ಇಟ್ಟು ಬಾಡಿ ತೆಗೆದುಕೊಂಡು ಹೋಗಿದ್ದಾರಾ? ನಾವು ಒಪ್ಪಿಗೆ ನೀಡಿದ್ದಕ್ಕೆ ತಾನೆ ಮಂಡ್ಯಕ್ಕೆ ಕೊಂಡೊಯ್ದಿದ್ದು… ಸಾವಿನ ವಿಚಾರದಲ್ಲಿ ಪದೇಪದೆ ರಾಜಕೀಯ ನನಗೆ ಇಷ್ಟವಿಲ್ಲ ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಅವರ ಮನಸ್ಸಿನಲ್ಲಿ ಏನಿದೆ ಎಂದು ಗೊತ್ತಿಲ್ಲ. ಅವರೇ ಫೋನ್ ಟ್ಯಾಪ್ ಮಾಡುವವರು ಎಂದು ಅಭಿಷೇಕ್ ಆರೋಪಿಸಿದ್ದಾರೆ. ಸಂಸದೆಯಾಗಿ ನನ್ನ ತಾಯಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಮಗನಾಗಿ ಅವರ ಬೆನ್ನಿಗೆ ನಾನು ನಿಲ್ಲುತ್ತೇನೆ. ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಇಲ್ಲಿಗೆ ನಿಲ್ಲಿಸುವುದಿಲ್ಲ. ಮಂಡ್ಯ ಕ್ಷೇತ್ರದ ಜನತೆ ನಮ್ಮ ತಾಯಿಯ ಬೆನ್ನಿಗೆ ನಿಂತಿದ್ದಾರೆ ಎಂದು ಅವರು ಟಿವಿ9ಗೆ ಹೇಳಿಕೆ ನೀಡಿದ್ದಾರೆ.
ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿದ್ದಕ್ಕೆ ವಿರೋಧ ವ್ಯಕ್ತವಾಗಿದ್ದಕ್ಕೆ ಉತ್ತರ ನೀಡಿದ ಅವರು, ಅಕ್ರಮ ಕೆಲಸ ಮಾಡುವವರು ಯಾರಾದರೂ ತನಿಖೆಗೆ ಹೋದ್ರೆ ರೆಡ್ ಕಾರ್ಪೆಟ್ ಹಾಕಿಕೊಡ್ತಾರಾ? ಮಾಜಿ ಸಿಎಂ ಅವರು ಹಿರಿಯರು. ನಾನು ಅವರ ಸಮಾನ ಅಲ್ಲ. ಅವರು ಹೇಗೆ ಮಾತನಾಡುತ್ತಾರೆ, ಯಾಕೆ ಮಾತನಾಡುತ್ತಾರೆ ಗೊತ್ತಿಲ್ಲ. ಜನರೇ ಅವರನ್ನು ನೋಡ್ತಿದ್ದಾರೆ. ಮಾತನಾಡಿ ಪ್ರಯೋಜನ ಇಲ್ಲ ಎಂದು ಅಭಿಷೇಕ್ ಹೇಳಿದರು.
ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ‘ನಟೋರಿಯಸ್’ ಪದ ಬಳಕೆಯ ಕುರಿತಂತೆ ಮಾತನಾಡಿದ ಅಭಿಷೇಕ್, ಅವರಿಗೆ ನಟೋರಿಯಸ್ ಪದದ ಅರ್ಥವೇ ಗೊತ್ತಿಲ್ಲ. ಅಕ್ರಮ ಗಣಿಗಾರಿಕೆ ಬಗ್ಗೆ ಧ್ವನಿ ಎತ್ತಿದ್ದು ನಟೋರಿಯಸ್ಸಾ? ಯಾರು ಕ್ರಿಮಿನಲ್ ಕೆಲಸ ಮಾಡುತ್ತಾರೋ ಅವರೇ ನಟೋರಿಯಸ್. ರಾಜಕೀಯವಾಗಿ ಎಲ್ಲವನ್ನೂ ವಿರೋಧಿಸಿ. ಆದರೆ ವೈಯಕ್ತಿಕ ವಿಚಾರಗಳಿಗೆ ತಲೆಹಾಕಬೇಡಿ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಪ್ರತಾಪ್ ಸಿಂಹ ಜೆಡಿಎಸ್ ಸೇರಿದ್ರಾ? ಅವರು ಮೈಸೂರಿಗೆ ಸಂಸದರೋ? ಮಂಡ್ಯಕ್ಕೋ? – ಸುಮಲತಾ
(Abhishek Ambareesh requests HD Kumaraswamy to not bring his father death issue everytime)