ಅಂಬರೀಶ್ ಹೆಸರು ಹೇಳೋಕೂ ಯೋಗ್ಯತೆ ಇಲ್ಲದವರು; ಸ್ಮಾರಕ ಸಂಬಂಧ ಭೇಟಿ ಮಾಡಿದಾಗ ಮುಖಕ್ಕೆ ಪೇಪರ್ ಎಸೆದಿದ್ದನ್ನು ನೆನಪಿಸಿಕೊಳ್ಳಲಿ: ಸುಮಲತಾ
ಸ್ಮಾರಕ ಸಂಬಂಧ ಹೆಚ್.ಡಿ.ಕುಮಾರಸ್ವಾಮಿ ಭೇಟಿಗೆ ಹೋಗಿದ್ದಾಗ ಅವರು ಯಾವ ರೀತಿ ವರ್ತಿಸಿದ್ದಾರೆಂದು ನೆನಪಿಸಿಕೊಳ್ಳಲಿ. ಆಗ ಏಕವಚನದಲ್ಲಿ ಮಾತನಾಡಿ ಪೇಪರ್ ಮುಖಕ್ಕೆ ಎಸೆದಿದ್ದರು. ಅವರದ್ದು ಸಾಧನೆ ಏನು ಎಂದು ಮಾತನಾಡಿದ್ದರು.
ಬೆಂಗಳೂರು: ಸಂಸದೆ ಸುಮಲತಾ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಡುವಿನ ಗುದ್ದಾಟ ಬೇರೆ ಬೇರೆ ರೂಪ ಪಡೆದಿದ್ದು, ಅಭಿಮಾನಿಗಳ ಮಧ್ಯೆ ಜಟಾಪಟಿಗೂ ಕಾರಣವಾಗಿದ್ದು. ಇದೀಗ ವಿವಾದದ ಕುರಿತು ಸುದ್ದಿಗೋಷ್ಠಿ ನಡೆಸಿರುವ ಸುಮಲತಾ, ಅಂಬರೀಶ್ ಹೆಸರು ಹೇಳಲೂ ಅವರಿಗೆ ಯೋಗ್ಯತೆಯಿಲ್ಲ. ಅಂಬರೀಶ್ ಕಾಲದಲ್ಲಿ ಅಕ್ರಮ ನಡೆದಿದ್ದರೆ ದಾಖಲೆ ತರಲಿ. ಇಷ್ಟು ವರ್ಷ ಯಾಕೆ ಸುಮ್ಮನಿದ್ದರು? ಎಂದು ಕಿಡಿಕಾರಿರುವ ಸುಮಲತಾ ಸುದ್ದಿಗೋಷ್ಠಿ ಆರಂಭದ ವೇಳೆ ಭಾವುಕರಾಗಿದ್ದಾರೆ.
ಅವರು ಇದೇ ರೀತಿ ಮಾತನಾಡುತ್ತಲೇ ಇರಲಿ. ಅವರ ವ್ಯಕ್ತಿತ್ವ, ನಿಜ ಸ್ವರೂಪ ಏನೆಂದು ಜನರಿಗೆ ತಿಳಿಯುತ್ತದೆ. ಲೂಸ್ ಟಾಕ್‌ಗೆ ಅವರ ಹೇಳಿಕೆ ಉತ್ತಮ ಉದಾಹರಣೆ. ಇದಕ್ಕೆಲ್ಲಾ ಅಂಬರೀಶ್ ಅಭಿಮಾನಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದು ಗೊತ್ತಾಗುತ್ತದೆ. ಇವರು ಅಂಬರೀಶ್ ಹೆಸರನ್ನು ಬಳಸಿ ರಾಜಕಾರಣ ಮಾಡ್ತಿದ್ದಾರೆ ಆದರೆ, ನಾನು ಅನುಕಂಪದಲ್ಲಿ ಗೆದ್ದಿದ್ದೇನೆ ಎಂದು ಹೇಳ್ತಾರೆ. ಅಷ್ಟಿದ್ದರೆ, ಈಗ ಅವಱಕೆ ಅನುಕಂಪ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಅಂಬರೀಶ್ ಸ್ಮಾರಕವನ್ನು ಕುಮಾರಸ್ವಾಮಿ ಮಾಡಿಸಿದ್ದಲ್ಲ. ಹಾಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹಿ ಮಾಡಿ ಒಪ್ಪಿಗೆ ನೀಡಿದ್ದಾರೆ. ಸ್ಮಾರಕ ಸಂಬಂಧ ಹೆಚ್.ಡಿ.ಕುಮಾರಸ್ವಾಮಿ ಭೇಟಿಗೆ ಹೋಗಿದ್ದಾಗ ಅವರು ಯಾವ ರೀತಿ ವರ್ತಿಸಿದ್ದಾರೆಂದು ನೆನಪಿಸಿಕೊಳ್ಳಲಿ. ಆಗ ಏಕವಚನದಲ್ಲಿ ಮಾತನಾಡಿ ಪೇಪರ್ ಮುಖಕ್ಕೆ ಎಸೆದಿದ್ದರು. ಅವರದ್ದು ಸಾಧನೆ ಏನು ಎಂದು ಮಾತನಾಡಿದ್ದರು. ಈ ಘಟನೆಯಿಂದ ಬೇಸರವಾಗಿ ನಟ ದೊಡ್ಡಣ್ಣ ಕೂಡಾ ಕಣ್ಣೀರು ಹಾಕಿದ್ದಾರೆ. ಇಷ್ಟಕ್ಕೂ ಯಾರೇ ಸಿಎಂ ಆಗಿದ್ದರೂ ಅಂಬರೀಶ್ ಸ್ಮಾರಕ ಮಾಡ್ತಿದ್ದರು. ಅದು ಅವರ ಕರ್ತವ್ಯ ಎಂದು ಸುಮಲತಾ ಉತ್ತರಿಸಿದ್ದಾರೆ.
ಅಂಬರೀಶ್ ಸ್ಮಾರಕಕ್ಕೂ ಮೊದಲೇ ವಿಷ್ಣುವರ್ಧನ್ ಸ್ಮಾರಕ ಸಿದ್ಧವಾಗುತ್ತದೆ. ಅವರ ಸ್ಮಾರಕದ ಕೆಲಸವೂ ಆರಂಭವಾಗಿದೆ. ಆದರೆ, ಜಾಗದ ಸಮಸ್ಯೆಯಿಂದ ಸ್ವಲ್ಪ ಗೊಂದಲವಾಗಿತ್ತು ಅಷ್ಟೆ ಎಂದಿರುವ ಸುಮಲತಾ, ಯಾವುದೇ ಹಿರಿಯ ವ್ಯಕ್ತಿತ್ವಗಳ ಬಗ್ಗೆ ಮಾತನಾಡುವುದಕ್ಕೂ ಮುನ್ನ ಆ ಯೋಗ್ಯತೆ ಅವರಿಗಿದೆಯಾ ಎಂದು ಯೋಚಿಸಲಿ ಎಂದು ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಡಾ.ರಾಜ್ಕುಮಾರ್ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಏನಾಯಿತು? ಆಗ ಮುಖ್ಯಮಂತ್ರಿ ಯಾರಿದ್ದರು? ಈಗ ಇದೆಲ್ಲಾ ಮಾತನಾಡುವುದಕ್ಕೆ ಅವರಿಗೆ ನೈತಿಕತೆ ಇದೆಯಾ ಎಂದು ಸಿಟ್ಟಾಗಿದ್ದಾರೆ.
ದಾಖಲೆ ಬಿಡುಗಡೆ ಮಾಡುತ್ತೇನೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ದಾಖಲೆ ಬಿಡುಗಡೆ ಮಾಡುವುದಾದರೆ ಚುನಾವಣೆ ಬಂದಾಗ ಏಕೆ, ಈಗಲೇ ಬಿಡುಗಡೆ ಮಾಡಲಿ. ನಾನು ಡೀಲಿಂಗ್ ಮಾಡಲು ಯಾರನ್ನೂ ಇಟ್ಟುಕೊಂಡಿಲ್ಲ. ಸಂಸದೆಯಾಗಿ ಕೇಂದ್ರದ ಯೋಜನೆ ಜಾರಿಗೆ ಯತ್ನ ಮಾಡಿದ್ದೇನೆ. ಆದರೆ, ಅಲ್ಲಿನ ಶಾಸಕರು ಯಾವುದಕ್ಕೂ ಬಿಡುತ್ತಿಲ್ಲ. ಕಮಿಷನ್ ಇಲ್ಲದೆ ಉದ್ಘಾಟನೆಗೂ ಅವಕಾಶ ಕೊಡಲ್ಲ. ಅಲ್ಲಿಯ ಜನರೇ ಈ ಮಾತನ್ನು ಹೇಳುತ್ತಿದ್ದಾರೆ. ಒಂದು ವೇಳೆ ನನ್ನ ವಿರುದ್ಧ ದಾಖಲೆ ಇದ್ದರೆ 2 ವರ್ಷ ಯಾಕೆ ಸುಮ್ಮನಿದ್ದರು. ಈಗ ಅವರ ಬಗ್ಗೆ ಮಾತನಾಡಿದಾಗ ಇದೆಲ್ಲಾ ನೆನಪಾಯಿತಾ ಎಂದು ವಾಗ್ದಾಳಿ ಮಾಡಿದ್ದಾರೆ.
Published On - 11:53 am, Fri, 9 July 21