ಉತ್ತರ ಕನ್ನಡ, ಮಾರ್ಚ್ 12: ಬಿಜೆಪಿ ಮಾಜಿ ಶಾಸಕಿ ರೂಪಾಲಿ ನಾಯ್ಕ (Roopali Naik) ಸ್ವಪಕ್ಷದ ಸಂಸದರ ವಿರುದ್ಧವೇ ಅಸನಮಾಧಾನ ಹೊರಹಾಕಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ನಾನು ಸೋತಿದ್ದಕ್ಕೆ ಸಂಸದ ಅನಂತಕುಮಾರ್ ಹೆಗಡೆ (Ananth Kumar Hegde) ಕಾರಣ. ನಾನು ಸೋತಿದ್ದೇನೆ ಅಂದರೇ ಅದಕ್ಕೆ ಅನಂತಕುಮಾರ್ ಗೈರು ಕಾರಣ. ಹೆಗಡೆ ಒಂದು ಬಾರಿ ಪ್ರಚಾರಕ್ಕೆ ಬಂದಿದ್ದರೇ ಕಾರವಾರದಲ್ಲಿ ಗೆಲುತ್ತಿದ್ವಿ. ಈ ಮಾತನ್ನು ನಾನು ಹೇಳುತ್ತಿಲ್ಲ, ಕಾರವಾರದ ಜನ ಹೇಳುತ್ತಿದ್ದಾರೆ ಎಂದು ರೂಪಾಲಿ ನಾಯ್ಕ ಅಸಮಾಧಾನ ಹೊರ ಹಾಕಿದರು.
ಕಾರವಾರದ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅನಂತಕುಮಾರ್ ಬಳಿ ಅವರದ್ದೇ ಆದ ಕಾರ್ಯಕರ್ತರ ಪಡೆ ಇದೆ. ಈಗಲಾದರೂ ಪಕ್ಷದ ಕಚೇರಿಯಲ್ಲಿ ಸಭೆ ಕರೆದಿದ್ದಕ್ಕೆ ಅಭಿನಂದಿಸುತ್ತೇನೆ ಎಂದರು.
ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿ ಆಗಬೇಕು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ಬಿಜೆಪಿಯನ್ನ ಗೆಲ್ಲಿಸಬೇಕು. ಅನಂತಕುಮಾರ್ ಹೆಗಡೆ ಸಕ್ರಿಯ ಆಗದಿದ್ದಕ್ಕೆ ನಾನು ಆಕಾಂಕ್ಷಿ ಆಗಿದ್ದೆ. ಆದರೆ ಈಗ ಅವರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಟಿಕೆಟ್ ಆಕಾಂಕ್ಷಿ ಅಲ್ಲ. ನಾನು ಯಾವತ್ತೂ ಅನಂತಕುಮಾರ್ ಅವರಿಗೆ ಟಿಕೆಟ್ ತಪ್ಪಿಸುವ ಪ್ರಯತ್ನ ಮಾಡಿಲ್ಲ. ಅನಂತಕುಮಾರ್ ಅವರು ಮತ್ತೆ ಸಕ್ರಿಯ ರಾಜಕಾರಣಕ್ಕೆ ಬಂದಿದಕ್ಕೆ ಖುಷಿ ಆಗಿದೆ ಎಂದು ಹೇಳಿದರು.
ಇದನ್ನೂ ಓದಿ: ಸಂಸದ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಹೇಳಿಕೆಗೆ ಆರ್ ಅಶೋಕ್ ಖಡಕ್ ಪ್ರತಿಕ್ರಿಯೆ
ಕಳೆದ ಬಾರಿಗಿಂತ, ಹೆಚ್ಚಿನ ಮತವನ್ನ ಈ ಬಾರಿ ನಮ್ಮ ವಿಧಾನಸಭೆ ಕ್ಷೇತ್ರದಿಂದ ಕೊಡುತ್ತೇವೆ. ಏಳನೇ ಬಾರಿಗೆ ಅನಂತಕುಮಾರ್ ಹೆಗಡೆ ಅವರನ್ನು ಆಯ್ಕೆ ಮಾಡೋಣ ಎಂದರು.
ಜಿಲ್ಲೆಯ ಪ್ರತಿಯೊಬ್ಬ ವ್ಯಕ್ತಿ ಬಿಜೆಪಿಗೆ ಮತ ನೀಡಲು ಸಿದ್ಧನಾಗಿದ್ದಾನೆ. ನಮ್ಮ ಪಕ್ಷದಿಂದ 21 ಜನ ಆಕಾಂಕ್ಷಿಗಳು ಟಿಕೆಟ್ಗೆ ಅರ್ಜಿ ಹಾಕಿದ್ದಾರೆ. ಆದರೆ ಕಾಂಗ್ರೆಸ್ನಿಂದ ಟಿಕೆಟ್ಗಾಗಿ ಒಬ್ಬರು ಸಹ ಅರ್ಜಿ ಹಾಕಲಿಲ್ಲ. ಕಾಂಗ್ರೆಸ್ ನಾಯಕರು ಕರಿಮಣಿ ಮಾಲೀಕ ನಾನಲ್ಲ ಅಂತಿದ್ದಾರೆ. ನಾನೊಬ್ಬ ಬಿಜೆಪಿಯ ಅಭ್ಯರ್ಥಿಯಾಗಿ ಇಲ್ಲಿ ಮಾತನಾಡುತ್ತಿಲ್ಲ. ಚುನಾವಣೆಯಲ್ಲಿ ಯಾರೇ ಅಭ್ಯರ್ಥಿ ಆದರೂ ಬಿಜೆಪಿ ಗೆಲ್ಲಬೇಕು ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ