ವಿಪಕ್ಷ ನಾಯಕರ ಆಯ್ಕೆ ವಿಳಂಬಕ್ಕೆ ವರಿಷ್ಠರ ಮೇಲೆ ಮುನಿಸು: ಸತ್ಯ ಒಪ್ಪಿಕೊಂಡ ಡಿವಿ ಸದಾನಂದಗೌಡ
ಆರು ತಿಂಗಳಾದರೂ ಕರ್ನಾಟಕಕ್ಕೆ ವಿಪಕ್ಷ ನಾಯಕನನ್ನು ಆಯ್ಕೆ ಮಾಡದಿರುವ ಬಗ್ಗೆ ಮಾಜಿ ಸಿಎಂ ಡಿವಿ ಸದಾನಂದಗೌಡ ಅವರು ಅಸಮಾಧಾನ ಹೊರಹಾಕಿದ್ದರು. ಇದೀಗ, ಆರ್.ಅಶೋಕ್ ಅವರನ್ನು ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದೆ. ಆದರೆ, ಮೂರು ತಿಂಗಳ ಹಿಂದೆಯೇ ಆಯ್ಕೆ ಮಾಡಬೇಕಿತ್ತು ಎಂದ ಸದಾನಂದಗೌಡ, ವರಿಷ್ಠರ ಮೇಲೆ ಇದ್ದ ಕೋಪ ನಿಜವೆಂದು ಒಪ್ಪಿಕೊಂಡಿದ್ದಾರೆ.
ಬೆಂಗಳೂರು, ನ.20: ಆರು ತಿಂಗಳಾದರೂ ಕರ್ನಾಟಕಕ್ಕೆ ವಿಪಕ್ಷ ನಾಯಕನನ್ನು ಆಯ್ಕೆ ಮಾಡದಿರುವ ಬಗ್ಗೆ ಮಾಜಿ ಸಿಎಂ ಡಿವಿ ಸದಾನಂದಗೌಡ (DV Sadananda Gowda) ಅವರು ಅಸಮಾಧಾನ ಹೊರಹಾಕಿದ್ದರು. ಇದೀಗ, ಆರ್.ಅಶೋಕ್ (R.Ashok) ಅವರನ್ನು ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದೆ. ಆದರೆ, ಮೂರು ತಿಂಗಳ ಹಿಂದೆಯೇ ಆಯ್ಕೆ ಮಾಡಬೇಕಿತ್ತು ಎಂದ ಸದಾನಂದಗೌಡ, ವರಿಷ್ಠರ ಮೇಲೆ ಇದ್ದ ಕೋಪ ನಿಜವೆಂದು ಒಪ್ಪಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೂರು ತಿಂಗಳ ಮುಂಚೆಯೇ ವಿಪಕ್ಷ ನಾಯಕನ ಘೋಷಣೆ ಮಾಡಬೇಕಿತ್ತು. ಆ ಘೋಷಣೆ ಮಾಡಿದ್ದರೆ ಬಿಜೆಪಿ ಇನ್ನೂ ಶಕ್ತಿಯುತವಾಗುತ್ತಿತ್ತು. ಆಯ್ಕೆ ವಿಳಂಬ ಮಾಡಿದ್ದಕ್ಕೆ ಪಕ್ಷದ ವರಿಷ್ಠರ ಮೇಲೆ ಕೋಪ ಇತ್ತು. ಈಗ ಆ ಕೋಪ ಶಮನ ಆಗಿದೆ ಎಂದರು.
ಅಶೋಕ್ ಸಿಎಂ ಆಗಲಿ: ಡಿವಿ ಸದಾನಂದಗೌಡ
ಯೋಗ್ಯರಾದವರನ್ನೇ ವಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ನಾನು, ಅಶೋಕ್, ಎಲ್ಲರೂ ಸೇರಿ ಒಟ್ಟಾಗಿ ದುಡಿಯುತ್ತೇವೆ. ಅಶೋಕ್, ವಿಜಯೇಂದ್ರ ಎಲ್ಲರ ವಿಶ್ವಾಸಗಳಿಸುವ ಕೆಲಸ ಮಾಡುತ್ತಿದ್ದಾರೆ. ಪಕ್ಷದಲ್ಲಿ ಇದ್ದ ಆಂತರಿಕ ಗೊಂದಲ ನಿಭಾಯಿಸುವ ಶಕ್ತಿ ಇವರಿಗೆ ಇದೆ. ಮುಂದೆ ಅಶೋಕ್ ಸಿಎಂ ಆಗಲಿ, ಅವರಿಗೆ ಅನುಭವದ ಕೊರತೆ ಇಲ್ಲ. ಯತ್ನಾಳ್, ವಿ.ಸೋಮಣ್ಣ ಅಸಮಾಧಾನವನ್ನು ಸರಿಪಡಿಸುವ ಶಕ್ತಿ ಇದೆ. ಅಶೋಕ್ ಮೇಲೆ ಕೋಪ ಇಲ್ಲ, ಆದರೆ ಕೆಲವರ ಮೇಲೆ ಸ್ವಲ್ಪ ಬೇಸರವಿದೆ. ನಮ್ಮ ಬಳಿ ಬೆಣ್ಣೆ ಇದೆ, ಅದನ್ನು ಹಚ್ಚಿ ಅತೃಪ್ತರನ್ನು ಸಮಾಧಾನಪಡಿಸುತ್ತೇವೆ ಎಂದರು.
ಇದನ್ನೂ ಓದಿ: ಮುನಿಸಿಕೊಂಡಿರುವ ಎಲ್ಲ ನಾಯಕರ ಮನವೊಲಿಸುವ ಪ್ರಯತ್ನ ಜಾರಿಯಲ್ಲಿದೆ: ಆರ್ ಅಶೋಕ, ನಿಯೋಜಿತ ವಿರೋಧ ಪಕ್ಷ ನಾಯಕ
ವಿಪಕ್ಷ ನಾಯಕನಾಗಿ ಆಯ್ಕೆಯಾದ ನಂತರ ಆರ್ ಅಶೋಕ್ ಅವರು ಜಿಲ್ಲಾ ಪ್ರವಾಸಗಳನ್ನು ಕೈಗೊಳ್ಳುವುದರ ಜೊತೆಗೆ ನಾಯಕರನ್ನು, ಅದರಲ್ಲೂ ಮುನಿಸುಕೊಂಡಿರುವ ನಾಯಕರನ್ನು ಭೇಟಿಯಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇಂದು ಸದಾನಂದಗೌಡರ ನಿವಾಸಕ್ಕೂ ಅಶೋಕ್ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಬಳಿಕ ಮಾತನಾಡಿದ ಅಶೋಕ್, ಡಿ.ವಿ.ಸದಾನಂದಗೌಡರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. ಪಕ್ಷ ಸಂಘಟನೆ ಬಗ್ಗೆ ಸದಾನಂದಗೌಡ ಹಲವು ಸಲಹೆ ಕೊಟ್ಟಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರು ಸಹ ಸದಾನಂದಗೌಡ ಜೊತೆ ಮಾತಾಡಿದ್ದಾರೆ. ಚೆನ್ನಾಗಿ ಕೆಲಸ ಮಾಡಿ ಎಂದು ಡಿ.ವಿ.ಸದಾನಂದಗೌಡ ಹಾರೈಸಿದ್ದಾರೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ