37ರ ಹರೆಯದ ಅನಿಲ್ ಕೆ ಆಂಟನಿ (Anil K Antony) ಪ್ರಭಾವಿ ರಾಜಕಾರಣಿ ಏನೂ ಅಲ್ಲ. ಆದರೆ ಅವರು ಕಾಂಗ್ರೆಸ್ (Congress) ಪಕ್ಷದಿಂದ ಹೊರನಡೆದಿರುವುದು ಗಮನಾರ್ಹ. ಅವರ ಅಪ್ಪ ಹಿರಿಯ ಕಾಂಗ್ರೆಸ್ ನಾಯಕ ಎಕೆ ಆಂಟನಿ (AK Antony) ಅವರು ಸೋನಿಯಾ ಗಾಂಧಿಯವರ ಆಪ್ತರಲ್ಲಿ ಒಬ್ಬರಾಗಿದ್ದಾರೆ. ಹೀಗಿರುವಾಗ ಅನಿಲ್ ಎಂಬ ಯುವ ನಾಯಕ ಬಿಜೆಪಿಗೆ (BJP) ಸೇರ್ಪಡೆಯಾಗಿ ಸಂಚಲನ ಸೃಷ್ಟಿಸಿದ್ದಾರೆ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಮತ್ತು ಎಂಐಟಿಯಿಂದ ಕೃತಕ ಬುದ್ಧಿಮತ್ತೆಯಲ್ಲಿ ತರಬೇತಿ ಪಡೆದ ಅನಿಲ್, ಜನವರಿ 2023 ರವರೆಗೆ ಕಾಂಗ್ರೆಸ್‌ನ ಕೇರಳ ಘಟಕದ ಡಿಜಿಟಲ್ ಮೀಡಿಯಾ ಸೆಲ್‌ನ ಮುಖ್ಯಸ್ಥರಾಗಿದ್ದರು. ಕಳೆದ ವಾರ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ವಿ ಮುರಳೀಧರನ್ ಅವರ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರ್ಪಡೆಗೊಂಡರು. ಬಿಜೆಪಿ ಸೇರಿದ ನಂತರ ಅನಿಲ್ ಆಂಟನಿ ನ್ಯೂಸ್ 9 ಪ್ಲಸ್‌ಗೆ ನೀಡಿದ ಸಂದರ್ಶನದಲ್ಲಿ, ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಬಗ್ಗೆ ಮತ್ತು ಇಂದಿನ ಭಾರತದ ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳುವ ಏಕೈಕ ಪಕ್ಷ ಬಿಜೆಪಿ ಎಂದು ಏಕೆ ಪರಿಗಣಿಸುತ್ತಾರೆ ಎಂಬುದರ ಕುರಿತು ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ
ಪ್ರಶ್ನೆ: ನೀವು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದು ಯಾಕೆ?
ನನ್ನ ಪ್ರಕಾರ ಕಾಂಗ್ರೆಸ್ ಪಕ್ಷವು ಪ್ರಸ್ತುತ ಚುಕ್ಕಾಣಿ ಇಲ್ಲದ ನಾಯಕತ್ವವನ್ನು ಹೊಂದಿದೆ. 2-3 ವ್ಯಕ್ತಿಗಳು ಪಕ್ಷದ ವೈಭವದ ಗತಕಾಲದ ಬಗ್ಗೆ ಮಾತನಾಡುತ್ತಾರೆ. ಆದರೆ ಇಂದಿನ ಮಹತ್ವಾಕಾಂಕ್ಷೆಯ ಭಾರತ ಏನು ಬಯಸುತ್ತದೆ ಎಂಬುದರ ಬಗ್ಗೆ ಯಾವುದೇ ಐಡಿಯಾ ಇಲ್ಲ. ನಿಮ್ಮ ಅದ್ಭುತವಾದ ಭೂತಕಾಲದಲ್ಲಿ ನೀವು ಯಾವಾಗಲೂ ಮುಳುಗಲು ಸಾಧ್ಯವಿಲ್ಲ. ಪ್ರಸ್ತುತ ಮಹತ್ವಾಕಾಂಕ್ಷೆಯ ಭಾರತವು ಸಾಮಾಜಿಕ ಮತ್ತು ಆರ್ಥಿಕ ಚಲನಶೀಲತೆಯನ್ನು ಬಯಸುತ್ತದೆ. ಅವರು ಹೊಸ ಉದ್ಯೋಗಾವಕಾಶಗಳೊಂದಿಗೆ ಮುಂದುವರಿಯಲು ಬಯಸುತ್ತಾರೆ. ಜನಸಂಖ್ಯೆಯ ಶೇಕಡಾ 60-65 ರಷ್ಟು ಯುವ ಜನರು ಭಾರತದಲ್ಲಿದ್ದಾರೆ. ಈ ಹೊತ್ತಲ್ಲಿ ಕಾಂಗ್ರೆಸ್ ಪಕ್ಷವು ಯುವ ಭಾರತಕ್ಕಾಗಿ ಯಾವುದೇ ಯೋಜನೆಯನ್ನು ಹೊಂದಿಲ್ಲ,
ಬಿಜೆಪಿಯೇ ನಿಮ್ಮ ಆಯ್ಕೆ ಯಾಕೆ?
ಕಾಂಗ್ರೆಸ್ ಬಿಟ್ಟರೆ ರಾಷ್ಟ್ರೀಯ ಮಹತ್ವ ಹೊಂದಿರುವ ಏಕೈಕ ಪಕ್ಷ ಬಿಜೆಪಿ. ಅದೇ ಸಮಯದಲ್ಲಿ, ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯು ದೇಶವನ್ನು ಮುನ್ನಡೆಸಲು ಸ್ಪಷ್ಟವಾದ ನಿರ್ದೇಶನವನ್ನು ಹೊಂದಿದೆ. ಸಾಮಾನ್ಯವಾಗಿ, ಪಕ್ಷಗಳು ಚುನಾವಣೆಯಿಂದ ಚುನಾವಣೆಗೆ ಯೋಚಿಸುತ್ತವೆ. ಆದರೆ ಬಿಜೆಪಿಗೆ 25 ವರ್ಷಗಳ ಆಕಾಂಕ್ಷೆ, ಮಹತ್ವಾಕಾಂಕ್ಷೆ ಮತ್ತು ಧ್ಯೇಯವಿದೆ. ಆದ್ದರಿಂದ, ರಾಷ್ಟ್ರೀಯ ಪರಿವರ್ತನಾ ಪ್ರಕ್ರಿಯೆಯ ಭಾಗವಾಗಲು ಬಯಸುವ ನನ್ನಂತಹ ಯುವ ಭಾರತೀಯನಿಗೆ ಬಿಜೆಪಿ ಸೇರುವುದು ತಾರ್ಕಿಕ ಆಯ್ಕೆಯಾಗಿದೆ.
ನಿಮ್ಮ ಅಪ್ಪ ಬಹುಕಾಲದಿಂದ ಕಾಂಗ್ರೆಸ್ ಪಕ್ಷದಲ್ಲಿದ್ದವರು. ನೀವು ಪಕ್ಷ ಬದಲಾಯಿಸಿದ್ದು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರಿದೆಯೇ?
ನಮ್ಮ ಕುಟುಂಬದಲ್ಲಿ ನಾಲ್ವರು ರಾಷ್ಟ್ರ ರಾಜಕಾರಣದ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ನನ್ನ ತಂದೆ ಮತ್ತು ನಾನು ಎರಡು ವಿಭಿನ್ನ ವ್ಯಕ್ತಿಗಳು. ಅವರ ಬಗ್ಗೆ ನನಗೆ ಹೆಚ್ಚಿನ ಗೌರವವಿದೆ. ಅದು ಬದಲಾಗಿಲ್ಲ. 65 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದ ಅವರು ಕಾಂಗ್ರೆಸ್ಸಿಗರಾಗಿಯೇ ಮುಂದುವರಿಯಲಿದ್ದಾರೆ. ಅದೇ ಸಮಯದಲ್ಲಿ, ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವು ದೇಶದ ಭವಿಷ್ಯ ಎಂದು ನಾನು ಯಾವುದೇ ರೀತಿಯಲ್ಲಿ ನಂಬುವುದಿಲ್ಲ.
ನಿಮಗಿಂತ ಹಿಂದೆಯೇ ಹಲವು ನಾಯಕರು ಕಾಂಗ್ರೆಸ್ ಪಕ್ಷ ತೊರೆದಿದ್ದಾರೆ. ಕಾಂಗ್ರೆಸ್ಸಿನಲ್ಲಿ ಏನು ನಡಿತಾ ಇದೆ?
ನನ್ನ ಕೆಲವು ಅನುಭವಗಳು ಮತ್ತು ಕೌಶಲ್ಯಗಳನ್ನು ನಾನು ಕಾಂಗ್ರೆಸ್ ಪಕ್ಷಕ್ಕಾಗಿ ಬಳಸಲು ಬಯಸುತ್ತೇನೆ. ಸಮಸ್ಯೆ ಏನೆಂದರೆ, ಕಾಂಗ್ರೆಸ್ ಪಕ್ಷದಲ್ಲಿ ಅನೇಕ ನಾಯಕರು, ಯುವಕರು ಮತ್ತು ಹಿರಿಯರ ಅನುಭವಗಳು ಪಕ್ಷಕ್ಕೆ ಬಳಕೆಯಾಗದೆ ಉಳಿದಿದೆ. ಗುಲಾಂ ನಬಿ ಆಜಾದ್, ಕ್ಯಾಪ್ಟನ್ ಅಮರಿಂದರ್ ಸಿಂಗ್ ಅಥವಾ ಜ್ಯೋತಿರಾದಿತ್ಯ ಸಿಂಧಿಯಾ, ಹಾರ್ದಿಕ್ ಪಟೇಲ್, ಜೈವೀರ್ ಶೆರ್ಗಿಲ್ ಅಥವಾ ಸುಶ್ಮಿತಾ ದೇವ್ ಅವರಂತಹ ಯುವ ನಾಯಕರಾಗಿದ್ದರೂ, ಕಾಂಗ್ರೆಸ್ ಅವರನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದೆ. ಇಂದಿಗೂ ಸಹ ಡಾ. ಶಶಿ ತರೂರ್, ಸಚಿನ್ ಪೈಲಟ್ ಅವರಂತಹ ಮಹಾನ್ ಜನಾಕರ್ಷಣೆಯನ್ನು ಹೊಂದಿರುವ ಜನರಿದ್ದಾರೆ, ಅವರು ಉತ್ತಮ ನಾಯಕರೆಂದು ನಾನು ನಂಬುತ್ತೇನೆ. ಅವರನ್ನು ಇನ್ನೂ ಬಳಸಿಕೊಳ್ಳಲಾಗಿಲ್ಲ.
ಇದನ್ನೂ ಓದಿ: ITI ವಿದ್ಯಾರ್ಥಿಗಳಿಗೆ ಉದ್ಯೋಗ ಕೌಶಲ್ಯ ಪಠ್ಯಕ್ರಮದ ಡಿಜಿಟಲ್ ಆವೃತ್ತಿ ಬಿಡುಗಡೆ ಮಾಡಿದ ಧರ್ಮೇಂದ್ರ ಪ್ರಧಾನ್
ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿರುವ ಹಲವು ಸಮಸ್ಯೆಗಳಿಗೆ ರಾಹುಲ್ ಗಾಂಧಿಯೇ ಕಾರಣ ಎಂದು ಗುಲಾಂ ನಬಿ ಆಜಾದ್ ಆರೋಪಿಸಿದ್ದಾರೆ. ರಾಹುಲ್ ಬಗ್ಗೆ ನಿಮ್ಮ ಅಭಿಪ್ರಾಯ?
ರಾಹುಲ್ ಗಾಂಧಿ ಯಾರ ಸಲಹೆ ಪಡೆಯುತ್ತಾರೋ ಗೊತ್ತಿಲ್ಲ. ಉದಾಹರಣೆಗೆ, ಯುಪಿಎಯಲ್ಲಿ ಅತ್ಯಂತ ಸಕ್ರಿಯ ನಾಯಕರಾದ ಶರದ್ ಪವಾರ್, ಅದಾನಿ ವಿಷಯದ ಬಗ್ಗೆ ಏನೋ ಹೇಳಿದರು. ಮರುದಿನ, ಏಪ್ರಿಲ್ 8 ರಂದು ರಾಹುಲ್ ಗಾಂಧಿ ಅನಗತ್ಯವಾದ ವಿಷಯವೊಂದನ್ನು ಟ್ವೀಟ್ ಮಾಡಿದ್ದಾರೆ. ಅನುಭವಸ್ಥ ಮತ್ತು ಪ್ರಬುದ್ಧ ವ್ಯಕ್ತಿಗಳ ಸಲಹೆಗೆ ವಿರುದ್ಧವಾಗಿ ಏನನ್ನಾದರೂ ಮಾಡುವುದು ರಾಹುಲ್ ಗಾಂಧಿಯವರ ಮೂಲ ಪ್ರವೃತ್ತಿ ಎಂದು ನಾನು ನಂಬುತ್ತೇನೆ.
ಸಂದರ್ಶನ: ಗುಲಾಂ ಜಿಲಾನಿ
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ