ಬೆಂಗಳೂರು: ಅರಣ್ಯ ಸಚಿವ ಈಶ್ವರ ಖಂಡ್ರೆ (Eshwara Khandre) ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಗಾಗಿ ಮಾಜಿ ಗೃಹ ಸಚಿವ, ಬಿಜೆಪಿ ನಾಯಕ ಆರಗ ಜ್ಞಾನೇಂದ್ರ (Araga Jnanendra) ವಿಷಾದ ವ್ಯಕ್ತಪಡಿಸಿದರು. ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಆ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಎಲ್ಲೂ ಉಲ್ಲೇಖಿಸಿಲ್ಲ. ಖಂಡ್ರೆ ಅವರನ್ನು ನೋಯಿಸಬೇಕು ಎಂಬ ಉದ್ದೇಶದಿಂದಲೂ ಮಾತನಾಡಿಲ್ಲ. ನನ್ನ ಮಾತಿನಿಂದ ಅವರ ಮನಸ್ಸಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.
ಕಸ್ತೂರಿ ರಂಗನ್ ವರದಿ ಅನುಷ್ಠಾನ ಕುರಿತು ಸಚಿವ ಈಶ್ವರ ಖಂಡ್ರೆಯವರ ಹೇಳಿಕೆ ವಿರುದ್ಧ ತೀರ್ಥಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ್ದೇನೆ. ಇಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಎಲ್ಲೂ ನಾನು ಉಲ್ಲೇಖಿಸಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಅನುಭವಿ ರಾಜಕಾರಣಿ, ಹಿರಿಯ ಮುತ್ಸದ್ದಿ. ಅವರನ್ನು ಟೀಕೆ ಮಾಡುವಷ್ಟು ದೊಡ್ಡವನು ನಾನಲ್ಲ. ಖರ್ಗೆ ಅಥವಾ ಖಂಡ್ರೆ ಅವರನ್ನು ನೋಯಿಸಲು ಆ ರೀತಿ ಮಾತನಾಡಿಲ್ಲ. ಅದನ್ನು ರಾಜಕೀಯವಾಗಿ ಬಳಸುವುದಾದರೆ ಬಳಸಲಿ. ನನ್ನ ಮಾತಿನಿಂದ ಅವರ ಮನಸ್ಸಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
ಕಾಡೇ ಇಲ್ಲದ ಪ್ರದೇಶದವರು ಅರಣ್ಯ ಸಚಿವರಾಗಿದ್ದಾರೆ. ಇದು ಕರ್ನಾಟಕದ ದುರಂತ. ಪಶ್ಚಿಮ ಘಟ್ಟದವರ ಸಮಸ್ಯೆ ಬಗ್ಗೆ ಸಚಿವರಿಗೆ ಅರಿವಿಲ್ಲ ಎಂದು ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದರು. ಮುಂದುವರಿದು, ಉತ್ತರ ಕರ್ನಾಟಕ ಭಾಗದವರು ಸುಟ್ಟು ಕರಕಲಾಗಿರುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ನೋಡಿದರೆ ಅಲ್ಲಿನವರ ಸ್ಥಿತಿ ಗೊತ್ತಾಗುತ್ತದೆ. ಖಂಡ್ರೆ ಅವರ ತಲೆ ಕೂದಲಿನಿಂದ ಮುಚ್ಚಿಕೊಂಡಿದ್ದರಿಂದ ಉಳಿದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದರು. ಜ್ಞಾನೇಂದ್ರ ಅವರ ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಇದನ್ನೂ ಓದಿ: ಅರಣ್ಯವೇ ಇಲ್ಲದ ಪ್ರದೇಶದಿಂದ ಬಂದವರು ಅರಣ್ಯ ಸಚಿವರಾಗಿದ್ದಾರೆ: ಈಶ್ವರ ಖಂಡ್ರೆ ವಿರುದ್ಧ ಆರಗ ಜ್ಞಾನೇಂದ್ರ ವಾಗ್ದಾಳಿ
ಖರ್ಗೆ, ಈಶ್ವರ್ ಖಂಡ್ರೆ ಬಗ್ಗೆ ಆರಗ ನೀಡಿದ್ದ ಹೇಳಿಕೆ ಖಂಡಿಸಿ ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನ ಬಳಿ ಪಕ್ಷದ ಕಾರ್ಯಕರ್ತರು ಧರಣಿ ನಡೆಸಿದರು. ಆರಗ ಜ್ಞಾನೇಂದ್ರ ವಿರುದ್ಧ ಧಿಕ್ಕಾರ ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಅವಹೇಳನಾಕಾರಿಯಾಗಿ ಮಾತಾಡಿದ್ದಾರೆ. ಕೇಸ್ ದಾಖಲಿಸಿಕೊಂಡು ಮಾಜಿ ಸಚಿವ ಆರಗರನ್ನು ಬಂಧಿಸಬೇಕು. ಅವರು ಕ್ಷಮೆ ಕೇಳಿದರೆ ಸಾಲದು, ಅವರನ್ನು ಬಂಧಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ಗತರು ಆಗ್ರಹಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ