
ದೆಹಲಿ ಫೆಬ್ರುವರಿ 17: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Aravind kejriwal) ನೇತೃತ್ವದ ಆಮ್ ಆದ್ಮಿ ಪಕ್ಷ ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದಿದೆ. ಶನಿವಾರ ಧ್ವನಿ ಮತದ ಮೂಲಕ ವಿಶ್ವಾಸಮತ ಯಾಚನೆ ನಿರ್ಣಯವನ್ನು ಅಂಗೀಕರಿಸಲಾಗಿದೆ. ಮದ್ಯದ ಅಬಕಾರಿ ನೀತಿಗೆ ಸಂಬಂಧಿಸಿದ ಆಪಾದಿತ ಹಗರಣದ ಕುರಿತು ಅವರು ಜಾರಿ ನಿರ್ದೇಶನಾಲಯದಿಂದ (ED) ಸಮನ್ಸ್ ಎದುರಿಸುತ್ತಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. 70 ಸದಸ್ಯ ಬಲದ ವಿಧಾನಸಭೆಯಲ್ಲಿ ಕೇಜ್ರಿವಾಲ್ ಸರ್ಕಾರ ಎರಡನೇ ಬಾರಿಗೆ ವಿಶ್ವಾಸಮತ ಯಾಚಿಸಿದೆ. ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (AAP) 62 ಶಾಸಕರೊಂದಿಗೆ ಬಹುಮತವನ್ನು ಹೊಂದಿದ್ದು ಬಿಜೆಪಿ ಎಂಟು ಶಾಸಕರನ್ನು ಹೊಂದಿದೆ. ಕೇಜ್ರಿವಾಲ್ ಅವರು ನಿರ್ಣಯ ಮಂಡಿಸುವಾಗ, ಬಿಜೆಪಿ ಸದಸ್ಯರು ಎಎಪಿ ಶಾಸಕರಿಗೆ ಪಕ್ಷಾಂತರ ಮಾಡಲು ಭಾರಿ ಮೊತ್ತದ ಹಣವನ್ನು ಲಂಚ ನೀಡುವ ಪ್ರಯತ್ನಗಳನ್ನು ಉಲ್ಲೇಖಿಸಿದ್ದಾರೆ. ತಮ್ಮ ಶಾಸಕರಿಗೆ ತಲಾ 25 ಕೋಟಿ ರೂ.ಗಳ ಭರವಸೆ ನೀಡಲಾಯಿತು ಎಂದಿದ್ದಾರೆ ಕೇಜ್ರಿವಾಲ್.
“ನಮಗೆ ಸದನದಲ್ಲಿ ಬಹುಮತವಿದೆ ಆದರೆ ಬಿಜೆಪಿಯು ಎಎಪಿ ಶಾಸಕರನ್ನು ಬೇಟೆಯಾಡಲು ಪ್ರಯತ್ನಿಸುತ್ತಿರುವ ಕಾರಣ ಈ ವಿಶ್ವಾಸ ಮತಯಾಚನೆ ನಿರ್ಣಯದ ಅಗತ್ಯವಿತ್ತು. ಬಿಜೆಪಿಯವರು ರಾಮಭಕ್ತರು ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ನಮ್ಮ ಆಸ್ಪತ್ರೆಗಳಲ್ಲಿ ಬಡವರ ಔಷಧಿಗಳನ್ನು ನಿಲ್ಲಿಸಿದರು. ನಾವು ಸರ್ಕಾರವನ್ನು ನಡೆಸುತ್ತಿದ್ದರೂ ಅವರು ಸೇವಾ ಇಲಾಖೆ, ಅಧಿಕಾರಿಗಳ ಮೇಲಿನ ನಿಯಂತ್ರಣದ ಮೂಲಕ ನಮ್ಮ ಕೆಲಸಗಳನ್ನು ನಿಲ್ಲಿಸುತ್ತಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
“ಬಿಜೆಪಿಗೆ ಎಎಪಿ ಅತಿದೊಡ್ಡ ಸವಾಲಾಗಿದೆ, ಅದಕ್ಕಾಗಿಯೇ ಅದು ಎಲ್ಲಾ ಕಡೆಯಿಂದ ದಾಳಿಗೆ ಒಳಗಾಗುತ್ತಿದೆ. ಈ ವರ್ಷದ ಲೋಕಸಭೆ ಚುನಾವಣೆಯಲ್ಲಿ ಗೆದ್ದರೂ 2029ರ ಚುನಾವಣೆಯಲ್ಲಿ ಎಎಪಿ ದೇಶವನ್ನು ಬಿಜೆಪಿಯಿಂದ ಮುಕ್ತಗೊಳಿಸಲಿದೆ. ನನಗೆ ಸಮನ್ಸ್ ನೀಡುವ ಮೂಲಕ ಎಎಪಿಯನ್ನು ಅಂತ್ಯಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಅವರು ನನ್ನನ್ನು ಬಂಧಿಸಲು ಯೋಜಿಸುತ್ತಿದ್ದಾರೆ” ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ
“ಬಿಜೆಪಿ 7 ಆಪ್ ಶಾಸಕರನ್ನು ತಮ್ಮ ಪಕ್ಷಕ್ಕೆ ಸೇರಲು ಸಂಪರ್ಕಿಸಿದೆ. ಬಿಜೆಪಿಗೆ ಯಾವ ಪುರಾವೆ ಬೇಕು?” ದೆಹಲಿ ವಿಧಾನಸಭೆಯಲ್ಲಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಬಿಜೆಪಿ ಬೇಕಿದ್ದರೆ ನೂರು ಕೋಟಿ ನೀಡಬಹುದು, ನಮ್ಮ ಯಾವ ಶಾಸಕರೂ ಪಕ್ಷಾಂತರ ಮಾಡುವುದಿಲ್ಲ ಎಂದ ಆಪ್ ಶಾಸಕ ಸುರೇಂದ್ರ ಕುಮಾರ್ ಅರವಿಂದ್ ಕೇಜ್ರಿವಾಲ್ ಶೀಘ್ರದಲ್ಲೇ ಪ್ರಧಾನಿಯಾಗುತ್ತಾರೆ ಎಂದಿದ್ದಾರೆ. ಬಿಜೆಪಿ ಪಕ್ಷಗಳನ್ನು ಒಡೆಯುವುದರತ್ತ ಮಾತ್ರ ಗಮನಹರಿಸಿದೆ, ದೆಹಲಿಯಲ್ಲಿ ಆಪರೇಷನ್ ಕಮಲಕ್ಕೆ ಯತ್ನಿಸುತ್ತಿದೆ ಎಂದು ವಿಧಾನಸಭೆಯಲ್ಲಿ ಮಾತನಾಡಿದ ಎಎಪಿ ಶಾಸಕ ಕುಲದೀಪ್ ಕುಮಾರ್ ಹೇಳಿದ್ದಾರೆ. ನಾವು ಇಡಿ, ಸಿಬಿಐಗೆ ಹೆದರುವುದಿಲ್ಲ ಪ್ರತಿಪಕ್ಷದ ನಾಯಕರು ಬಿಜೆಪಿ ಸೇರಿದ ನಂತರ ಅವರ ಮೇಲಿನ ಎಲ್ಲಾ ಪ್ರಕರಣಗಳು ಮುಚ್ಚಲಾಗುತ್ತದೆ ಎಂದಿದ್ದಾರೆ ಕುಮಾರ್.
ಮನೀಶ್ ಸಿಸೋಡಿಯಾ ಅವರ ಸ್ಪೂರ್ತಿದಾಯಕ ದೆಹಲಿ ಶಿಕ್ಷಣ ಮಾದರಿಯಿಂದ ರಾಷ್ಟ್ರದ ‘ರಾಜ’ ಸಂತೋಷವಾಗಲಿಲ್ಲ. ಎಲ್ಲೆಲ್ಲೂ ಪ್ರಧಾನಿ ಕಟೌಟ್‌ಗಳು, ದೇಶ ನಿರಂಕುಶ ಪ್ರಭುತ್ವದತ್ತ ಸಾಗುತ್ತಿದೆ. ಬಿಜೆಪಿ ಆಡಳಿತವನ್ನು ‘ಹಿಟ್ಲರ್ ಆಡಳಿತ’ಕ್ಕೆ ಹೋಲಿಸಿದ ಎಎಪಿ ಶಾಸಕ ರಾಜೇಶ್ ರಿಷಿ ಬಿಜೆಪಿ ದೆಹಲಿಯಲ್ಲಿ ‘ಆಪರೇಷನ್ ಕಮಲ’ಕ್ಕೆ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ವಿರೋಧ ಪಕ್ಷಗಳನ್ನು ಒಡೆಯಲು ಇಡಿ ಮತ್ತು ಸಿಬಿಐ ಅನ್ನು ಬಳಸಿಕೊಂಡು ಬಿಜೆಪಿ ‘ಭಯದ ರಾಜಕೀಯ’ವನ್ನು ಕರಗತ ಮಾಡಿಕೊಂಡಿದೆ ಎಂದು ಎಎಪಿ ಶಾಸಕ ವಿನಯ್ ಮಿಶ್ರಾ ಆರೋಪಿಸಿದ್ದಾರೆ. ಅದೇ ವೇಳೆ ‘ಎಎಪಿಯನ್ನು ಒಡೆಯುವ’ ಧೈರ್ಯವಿರುವ ಬಿಜೆಪಿ, ‘ಭಾರತ್ ದಲಾಲ್ ಪಾರ್ಟಿ’ ಎಂದು ಶಾಸಕ ಸಾಹಿರಾಮ್ ಹೇಳಿದ್ದು ‘ಆಪರೇಷನ್ ಕೀಚಡ್ ಅನ್ನು ಆಪ್ ಪೊರಕೆಯಿಂದ ಸ್ವಚ್ಛಗೊಳಿಸಲಾಗಿದೆ’ ಎಂದು ಪಕ್ಷದ ಶಾಸಕ ಅಖಿಲೇಶ್ ಪತಿ ತ್ರಿಪಾಠಿ ಹೇಳಿದ್ದಾರೆ.
ಎಎಪಿ ಶಾಸಕ ಸೋಮನಾಥ್ ಭಾರ್ತಿ ಪ್ರಧಾನಿ ಮೋದಿಯವರ MA in entire political science ಎಂದು ಲೇವಡಿ ಮಾಡಿದ್ದಾರೆ. ಎಎಪಿ ಶಾಸಕ ಸೋಮನಾಥ್ ಭಾರ್ತಿ ಅವರು ಕೇಜ್ರಿವಾಲ್ ರಾಜಕೀಯ ಪ್ರವೇಶವನ್ನು ‘ಅಂಧೋನ್ ಕಿ ನಗರಿ ಮೈನ್ ಆಂಖ್ ವಾಲಾ’ ಎಂದು ಹೇಳಿದ್ದಾರೆ. ಈ ವೇಳೆ ಸಿಎಂ ಕೇಜ್ರಿವಾಲ್‌ಗಾಗಿ ಒಂದು ಕವಿತೆಯನ್ನೂ ಭಾರ್ತಿ ಓದಿದ್ದಾರೆ.
ಇದನ್ನೂ ಓದಿ: Delhi liquor policy case: ಕೊನೆಗೂ ದೆಹಲಿ ನ್ಯಾಯಲಯಕ್ಕೆ ಹಾಜರಾದ ಸಿಎಂ ಅರವಿಂದ್ ಕೇಜ್ರಿವಾಲ್
ಕೇಜ್ರಿವಾಲ್ನ್ನು ಮೋದಿ ತುಳಿಯಲು ನೋಡುತ್ತಿದ್ದಾರೆ ಎಂದು ವಿಧಾನಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್ ಹೇಳಿದ್ದಾರೆ.’2024ರಲ್ಲಿ ಇಲ್ಲದಿದ್ದರೆ 2029ರಲ್ಲಿ’ ಆಮ್ ಆದ್ಮಿ ಪಕ್ಷ, ಬಿಜೆಪಿಯನ್ನು ಪರಾಭವಗೊಳಿಸಲಿದೆ ಎಂದು ಕೇಜ್ರಿವಾಲ್ ಭರವಸೆ ನೀಡಿದ್ದಾರೆ.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:14 pm, Sat, 17 February 24