ಮುಂದೆಯೂ ಬಿಜೆಪಿ ಅಧಿಕಾರಕ್ಕೆ ಬಂದ್ರೆ ದೇಶದಲ್ಲಿ ಚುನಾವಣೆಯೇ ನಡೆಯಲ್ಲ, ಮೋದಿಯನ್ಜು ಬಲಶಾಲಿ ಮಾಡ್ಬೇಡಿ ಎಂದ ಖರ್ಗೆ
ಲೋಕಸಭಾ ಚುನಾವಣೆಗೆ (Lok sabha Election 2024) ಕಾಂಗ್ರೆಸ್ (Congress) ಭಾರಿ ತಯಾರಿ ಮಾಡಿಕೊಳ್ಳಲು ದಕ್ಷಿಣ ಕನ್ನಡ ಜಿಲ್ಲೆಯಿಂದ ಆರಂಭಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೊದಲ ಸಮಾವೇಶ (Congress convention) ಮಂಗಳೂರಿನಲ್ಲಿ ನಡೆದಿದ್ದು, ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾವನಾತ್ಮಕವಾಗಿ ಮಾತುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರು, (ಫೆಬ್ರವರಿ 17): ನಮ್ಮ ರಾಜ್ಯಕ್ಕೆ ದುಡ್ಡು ಎಷ್ಟು ಬರಬೇಕು ಅದು ಬರುತ್ತಿಲ್ಲ. ನಮ್ಮ ಪಾಲಿನ ಹಣ ಸಿಗುತ್ತಿಲ್ಲ. ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ ನಮ್ಮ ಮೊದಲ ಗ್ಯಾರಂಟಿ ಎಂಎಸ್‌ಪಿ ಖಾತರಿ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೆ ತರುತ್ತೇವೆ. ಮುಂದೆಯೂ ಬಿಜೆಪಿ(BJP) ಅಧಿಕಾರಕ್ಕೆ ಬಂದ್ರೆ ದೇಶದಲ್ಲಿ ಚುನಾವಣೆಯೇ ನಡೆಯಲ್ಲ. ಸರ್ವಾಧಿಕಾರ ಬರುತ್ತೆ. ಮೋದಿಯನ್ನು (Narendra Modi) ಶಕ್ತಿಶಾಲಿಯಾಗಿ ಮಾಡಬೇಡಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President Mallikarjun kharge) ಮನವಿ ಮಾಡಿದ್ದಾರೆ.
ಮಂಗಳೂರಿನ ಅಡ್ಯಾರ್ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಖರ್ಗೆ. ಇವತ್ತು ಕೆಲ ಪಕ್ಷಗಳು ನಮ್ಮನ್ನು ಹೊಡೆಸಿ ಸತತವಾಗಿ ಆಳಬೇಕೆಂದು ಹೊರಟಿದ್ದಾರೆ. ಮೋದಿ ಏನಾದರೂ ಜಮೀನು ಕೊಟ್ರಾ..? ಮೋದಿ ಹೇಳಿದ ನೌಕರಿ ನಿಮಗೆ ಸಿಕ್ತಾ? ಮಂಗಳೂರಿನವರು ಬಹಳ ಬುದ್ದಿವಂತ ಜನರಿದ್ದಾರೆ. ದೇಶದ ಪ್ರಧಾನಮಂತ್ರಿ ಹೇಗೆ ಸುಳ್ಳಾಡುತ್ತಾರೆ. ನಾವು ಆರು ಗ್ಯಾರಂಟಿ ಕೊಟ್ಟಿದ್ದೇವೆ. ಇವತ್ತು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇವೆ. ಮೋದಿ ಮೋದಿ ಅಂದ್ರೆ ಹೊಟ್ಟೆ ತುಂಬುತ್ತಾ ಎಂದು ಪ್ರಶ್ನಿಸಿದರು.
ಈಗ ಕೊಟ್ಟಿರುವ ಗ್ಯಾರಂಟಿಯಾದರೂ ನೆನಪಿಡಿ
ಮಂಗಳೂರಿನಲ್ಲಿ ಮುಂಜಾನೆ ಎದ್ದ ಕೂಡಲೇ ಕಾಂಗ್ರೆಸ್ ಗೆ ಬೈತಾರೆ. ಇದು ಯಾವ ನ್ಯಾಯ..? ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರಿಗೆ ಬಡವರನ್ನು ತುಳಿಯಬೇಕು ಎಂಬುವುದೇ ಗುರಿ. ನೀವು ಈಗ ಓಡಾಡುವ ಸೇತುವೆ ಆಗಿದ್ದು ಕಾಂಗ್ರೆಸ್ ಕಾಲದಲ್ಲಿ. ಇಷ್ಟೊಂದು ಕೊಟ್ಟಿದ್ದರೂ ಅವರೇ ನಮ್ಮ ವಿರುದ್ಧ ಮಾತನಾಡ್ತಿದ್ದಾರೆ. ಬಿಜೆಪಿ ಮಾತು ಕೇಳಿ ಇಲ್ಲಿ ಒಬ್ಬರಿಗೊಬ್ಬರುಹೊಡೆದಾಡಿಕೊಳ್ಳುತ್ತಿದ್ದಾರೆ. ಇಲ್ಲಿನ ಬಡವರಿಗೆ ಅಧಿಕಾರ ಕೊಟ್ಟಿದ್ದು ಸಹ ಕಾಂಗ್ರೆಸ್ ಪಾರ್ಟಿ. ಹಿಂದೆ ಮಾಡಿದ ಗ್ಯಾರಂಟಿ ಮರೆತರೆ, ಆದ್ರೆ ಈಗ ಕೊಟ್ಟಿರುವ ಗ್ಯಾರಂಟಿಯನ್ನಾದರೂ ನೆನಪಿಡಿ ಎಂದು ಹೇಳಿದರು.
ಗ್ಯಾರಂಟಿ ಮಾಡಿದ ಮೇಲೆ ಮೋದಿಯವರು ಎಚ್ಚರ ಆಗಿದ್ದಾರೆ. ನಾನ್ಯಾಕೆ ಕೊಡಬಾರದು ಎಂದು ಈಗ ಮೋದಿ ಶುರು ಮಾಡಿದ್ದಾರೆ. ಆದ್ರೆ ಅವರ ಯಾವ ಗ್ಯಾರಂಟಿಯು ಈಡೇರಿಲ್ಲ. ಈಗ ದಿನ ಪತ್ರಿಕೆಯಲ್ಲಿ ಗ್ಯಾರಂಟಿಯದ್ದೆ ಬರುತ್ತಿದೆ. ನಾವು ಯಾರು ಸಿದ್ದರಾಮಯ್ಯ ಗ್ಯಾರಂಟಿ ಎಂದು ಹೇಳುತ್ತಿಲ್ಲ. ಕಾಂಗ್ರೆಸ್ ಗ್ಯಾರಂಟಿ ಎಂದು ಹೇಳುತ್ತೇವೆ. ಆದ್ರೆ, ಮೋದಿ ಅವರು ಬಿಜೆಪಿ ಗ್ಯಾರಂಟಿ ಎಂದು ಹೇಳಲ್ಲ. ಮೋದಿ ಗ್ಯಾರಂಟಿ ಅಂತಾ ಹೇಳುತ್ತಾರೆ ಎಂದರು.
ಮಂಗಳೂರಿನಲ್ಲಿ ಇವತ್ತು ನಾವು ಏನೇನು ಆಗುತ್ತಿದೆ ಎಂದು ನೋಡುತ್ತಿದ್ದೇವೆ. ಉಡುಪಿ ಮಂಗಳೂರಿನಲ್ಲಿ ಹೆಚ್ಚಿನ ಜನರಿಗೆ ಭೂ ಸುಧಾರಣೆ ಕಾಯ್ದೆಯಲ್ಲಿ ಅನುಕೂಲ ಆಗಿದೆ. ಆದ್ರೆ ಅದನ್ನು ಹೆಚ್ಚಿನವರು ನೆನಪು ಇಟ್ಟುಕೊಂಡಿಲ್ಲ. ಇವತ್ತು ಎಲ್ಲಾ ಇಲ್ಲಿ ಭಗವಧ್ವಜ ಹಿಡಿದುಕೊಂಡು ಒಡಾಡುತ್ತಿದ್ದಾರೆ. ನಿಮ್ಮನ್ನು ಮಾಲೀಕರು ಮಾಡಿದವರು ಯಾರು ಎಂದು ನೆನಪಿನಲ್ಲಿ ಇಟ್ಕೊಂಡಿಲ್ಲ ಅಂದ್ರೆ ಈ ದೇಶಕ್ಕೆ ಭವಿಷ್ಯ ಇಲ್ಲ. ಇಲ್ಲಿ ನಮ್ಮನ್ನೇ ಮರೆತರೆ ಇದು ಯಾವ ನ್ಯಾಯ. ಜಮೀನು ಕೊಟ್ಟವನನ್ನು ನೆನಪಿನಲ್ಲಿಟ್ಟುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದೇವೆಗೌಡ್ರು ಮೋದಿ ತೊಡೆ ಮೇಲೆ ಕುಳಿತಿದ್ದಾರೆ
ದೇವೆಗೌಡ್ರು ಮೋದಿ ತೊಡೆ ಮೇಲೆ ಕುಳಿತಿದ್ದಾರೆ. ಇದನ್ನು ದೇವೆಗೌಡ್ರ ಅವರ ಬಳಿಯೇ ಹೇಳಿದೆ. ನಿಮ್ಮ ಸೆಕ್ಯುಲರ್ ಪಾರ್ಟಿ ಅವರ ಜೊತೆ ಹೇಗೆ ಹೋಗುತ್ತಿದೆ ಎಂದು ಕೇಳಿದ್ದೆ. ಈ ಸಂದರ್ಭ ಮೋದಿಯು ಅಲ್ಲೇ ಪಕ್ಕದಲ್ಲಿದ್ರು. ಈಗ ಬಿಜೆಪಿ ಮತ್ತು ಜೆಡಿಎಸ್ ನವರು ಮುದ್ದಾಡ್ತಿದ್ದಾರೆ. ಈ ಸಾರಿ ಕರ್ಣಾಟಕದಲ್ಲಿ 20 ಸೀಟು ಗೆಲ್ಲುವ ನಂಬಿಕೆಯಿದೆ. ನಮ್ಮ ಜಯ ನಿಮ್ಮ ಮೇಲೆ ಅವಲಂಭಿಸಿದೆ. ಈ ಬಾರಿ ಮಂಗಳೂರು ಉಡುಪಿ ಚಿಕ್ಕಮಗಳೂರಿನಲ್ಲಿ ಹೆಚ್ಚಿನ ಶಕ್ತಿ ಪ್ರದರ್ಶನ ಮಾಡಿ ಎಂದು ಮನವಿ ಮಾಡಿದರು.
ಮೋದಿ ನಮ್ಮನ್ನು ಮುಗಿಸುವುದಕ್ಕೆ ಹೊರಟಿದ್ದಾರೆ
ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಯಾರಿಗೋಸ್ಕರ ಮಾಡುತ್ತಿದ್ದಾರೆ. ದೇಶದಲ್ಲಿರುವ ಜನರನ್ನು ಒಗ್ಗೂಡಿಸಲು, ಪ್ರಜಾಪ್ರಭುತ್ವ ಉಳಿಸುವುದೇ ಅವರ ಗುರಿ. ಆದ್ರೆ ಮೋದಿ ಅವರಿಗೂ ಗೇಲಿ ಮಾಡಿದ್ರು. ಮೋದಿ ಹೋದಲೆಲ್ಲಾ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕಾಂಗ್ರೆಸ್ ಗೆ ಬೈತಾರೆ. ನಮ್ಮಲ್ಲಿರುವ ಶಕ್ತಿಯನ್ನು ಸಹಿಸದೇ ಪದೇ ಪದೇ ನಮ್ಮ ಹೆಸರೇಳ್ತಿದ್ದಾರೆ. ಮೋದಿ ನಮ್ಮನ್ನು ಮುಗಿಸುವುದಕ್ಕೆ ಹೊರಟಿದ್ದಾರೆ. ಮೊನ್ನೆ ನಮ್ಮ ಅಕೌಂಟ್ ಅನ್ನು ಸಹ ಸೀಜ್ ಮಾಡಿದ್ರು. ಜನ ರೊಚ್ಚಿದ್ದಾಗ ಮರುದೀನ ಅಕೌಂಟ್ ರಿಲೀಸ್ ಮಾಡಿದ್ರು ಎಂದು ಕಿಡಿಕಾರಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ