Himanta Biswa Sarma: ಲಂಡನ್​​​ನಲ್ಲಿ ಭಾರತ ಬಗ್ಗೆ ಕೆಟ್ಟದಾಗಿ ಮಾತನಾಡುವ ರಾಹುಲ್ ಬಾಬಾ; ಹಿಮಂತ ಬಿಸ್ವ ಶರ್ಮಾ ವಾಗ್ದಾಳಿ

|

Updated on: Mar 13, 2023 | 3:38 PM

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿದರು.

Himanta Biswa Sarma: ಲಂಡನ್​​​ನಲ್ಲಿ ಭಾರತ ಬಗ್ಗೆ ಕೆಟ್ಟದಾಗಿ ಮಾತನಾಡುವ ರಾಹುಲ್ ಬಾಬಾ; ಹಿಮಂತ ಬಿಸ್ವ ಶರ್ಮಾ ವಾಗ್ದಾಳಿ
ಹಿಮಂತ ಬಿಸ್ವ ಶರ್ಮಾ (ಸಂಗ್ರಹ ಚಿತ್ರ)
Follow us on

ಗಂಗಾವತಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಲಂಡನ್​ನಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಈ ಹಿಂದೆ ‘ಭಾರತ್ ತೋಡೋ’ ಮಾಡಿದವರು ಈಗ ‘ಭಾರತ್ ಜೋಡೋ’ ಎನ್ನುತ್ತಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ (Himanta Biswa Sarma) ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿರುವ ಅವರು ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿದರು. ಬಳಿಕ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಹುಲ್ ಬಾಬಾ ಲಂಡನ್​​ನಲ್ಲಿ ಭಾರತ ಪ್ರಜಾಪ್ರಭುತ್ವದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ‌. ಅವರು ಬಾರತ್ ಜೋಡೋ ಯಾತ್ರೆ ಮಾಡಿದರು. ಈ ಹಿಂದೆ ಭಾರತ್ ತೋಡೊ ಮಾಡಿದ್ದು ಯಾರು ಎಂದು ಅವರನ್ನು ಪ್ರಶ್ನಿಸಿದ್ದೆ ಎಂದು ಹೇಳಿದರು.

ಇದು ಹನುಮ ಜನಿಸಿದ ಪುಣ್ಯ ಭೂಮಿ. ಇಂಥ ಪುಣ್ಯಭೂಮಿಗೆ ಬರಲು ನನಗೆ ಅವಕಾಶ ಸಿಕ್ಕಿದ್ದು ಪುಣ್ಯ. ಉತ್ತರ ಭಾರದಲ್ಲಿ ಕಾಂಗ್ರೆಸ್ ಈಗಾಗಲೇ ಮನೆ ಸೇರಿದೆ. ಇತ್ತೀಚೆಗೆ ನಡೆದ ಮೂರು ರಾಜ್ಯಗಳ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿದೆ. ಕಾಂಗ್ರೆಸ್ ತುಷ್ಟಿಕರಣ ರಾಜಕಾರಣ ಮಾಡುತ್ತಿದ್ದರೆ, ಕರ್ನಾಟಕದ ನಮ್ಮ ಸರ್ಕಾರ ಎಸ್​​​ಸಿ, ಎಸ್ಟಿ ಮೀಸಲಾತಿ ನೀಡಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ ಈ ಕೆಲಸ ಮಾಡಿರಲಿಲ್ಲ. ಮುಂಬರುವ ವಿಧಾನಸಭೆ ಚುನಾವಣೆ ನಮಗೆ ಸೆಮಿಫೈನಲ್ ಇದ್ದಹಾಗೆ‌. ಯಾಕೆಂದರೆ ಇದರ ನಂತರ ಲೋಕಸಭಾ ಚುನಾವಣೆ ಬರಲಿದೆ. ರಾಮ ಮಂದಿರ ನಿರ್ಮಾಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೊಮ್ಮೆ ಅವಕಾಶ ನೀಡೋಣ. ಉತ್ತರ ಪ್ರದೇಶ, ಗುಜರಾತ್​ ಜನ ಮತ್ತೆ ಮೋದಿಯನ್ನು ಬೆಂಬಲಿಸಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಅಂಜನಾದ್ರಿ ಕ್ಷೇತ್ರ ಅಭಿವೃದ್ಧಿಗೆ 140 ಕೋಟಿ ರೂ. ಅನುದಾನ: ಸಿಎಂ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರು ಅಂಜನಾದ್ರಿ ಅಭಿವೃದ್ಧಿಗೆ 120 ಕೋಟಿ ರೂ. ಅನುದಾನ ನೀಡಿದ್ದಾರೆ. ಹನುಮ ಜನಿಸಿದ ಪುಣ್ಯ ಭೂಮಿ ಅಂಜನಾದ್ರಿಯನ್ನು ಇಡೀ ದೇಶವೇ ತಿರುಗಿ ನೋಡುವಂತೆ ಅಭಿವೃದ್ಧಿ ಮಾಡೋಣ.

ಸಾರಿಗೆ ಸಚಿವ ಶ್ರೀರಾಮುಲು ಮಾತನಾಡಿ, ಪರಣ್ಣ ಮುನವಳ್ಳಿ ಅವರನ್ನು ಗೆಲ್ಲಿಸಲು ಅಸ್ಸಾಂ ಮುಖ್ಯಮಂತ್ರಿ ಬಂದಿದ್ದಾರೆ‌. ಪರಣ್ಣನೇ ಬಿಜೆಪಿ ಅಭ್ಯರ್ಥಿ. ಅವರನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು. ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂಜನಾದ್ರಿಗೆ ಬರುತ್ತಿದ್ದಾರೆ. 100 ಕೋಟಿ ರೂ. ವೆಚ್ಚದಲ್ಲಿ ಅಂಜನಾದ್ರಿ ಅಭಿವೃದ್ಧಿ ಮಾಡಲಾಗುತ್ತಿದೆ. ಧರ್ಮ ಉಳಿಯಬೇಕು, ಸತ್ಯ ಉಳಿಯಬೇಕು‌. ಇವೆರಡೂ ಉಳಿಯಬೇಕೆಂದರೆ ಬಿಜೆಪಿ ಗೆಲ್ಲಬೇಕು. ಮುಂದಿನ ದಿನಗಳಲ್ಲಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕಿದೆ. ನವಲಿ ಸಮಾನಾಂರ ಜಲಾಶಯದ ಡಿಪಿಎಆರ್​​ಗೆ 1000 ಕೋಟಿ ರೂ. ನೀಡಲಾಗಿದೆ. ಪರಣ್ಣ ಮುನವಳ್ಳಿ ಎಲ್ಲ ಕೆರೆ ತುಂಬಿಸುವ ಕೆಲಸ ಮಾಡಿದ್ದಾರೆ. ಮನೆ, ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ಕ್ರಮ ಕೈಗೊಂಡಿದ್ದಾರೆ. ಪರಣ್ಣ ಮುನವಳ್ಳಿ ಮೂರನೇ ಬಾರಿಗೆ ಗೆಲ್ಲಬೇಕಾಗಿದೆ ಎಂದು ರಾಮುಲು ಹೇಳಿದರು. ಭಾಷಣದಲ್ಲಿ ಎಲ್ಲಿಯೂ ಜನಾರ್ದನ ರೆಡ್ಡಿ ಹೆಸರು ಪ್ರಸ್ತಾಪಿಸಿಲ್ಲ.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ