ಬೊಮ್ಮಾಯಿ ಮಂತ್ರಿ ಮಂಡಲದಲ್ಲಿ ಮಹತ್ವದ, ಆಯಕಟ್ಟಿನ ಇಲಾಖೆ ನೀಡಿದರೂ ರಗಳೆ ತೆಗೆದ ಬಳ್ಳಾರಿ ಕಡೆಯ ಇಬ್ಬರು ಸಚಿವರು

| Updated By: Skanda

Updated on: Aug 07, 2021 | 1:50 PM

ಆನಂದ್ ಸಿಂಗ್​ ಅಸಮಾಧಾನದ ಕುರಿತು ರಾಯಚೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ವಸತಿ ಖಾತೆ ಸಚಿವ ವಿ.ಸೋಮಣ್ಣ, ಖಾತೆ ಹಂಚಿಕೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಪರಮಾಧಿಕಾರ. ತಮ್ಮ ಖಾತೆ ಬಗ್ಗೆ ಆನಂದ್ ಸಿಂಗ್ ಅಸಮಾಧಾನ ಹೊರಹಾಕಿದ್ದಾರೆ. ಆದರೆ, ಪ್ರತಿಯೊದು ಖಾತೆಯಲ್ಲೂ ತನ್ನದೇ ಆದ ಶಕ್ತಿ ಇರುತ್ತದೆ‌ ಎಂದಿದ್ದಾರೆ.

ಬೊಮ್ಮಾಯಿ ಮಂತ್ರಿ ಮಂಡಲದಲ್ಲಿ ಮಹತ್ವದ, ಆಯಕಟ್ಟಿನ ಇಲಾಖೆ ನೀಡಿದರೂ ರಗಳೆ ತೆಗೆದ ಬಳ್ಳಾರಿ ಕಡೆಯ ಇಬ್ಬರು ಸಚಿವರು
ಬಿ.ಶ್ರೀrರಾಮುಲು, ಆನಂದ್ ಸಿಂಗ್
Follow us on

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರಿಗೆ ಖಾತೆ ಹಂಚಿಕೆಯಾಗಿದೆ (CM Bommai Karnataka Cabinet). ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಮಂತ್ರಿಯಾಗಿದ್ದ ಬಹುತೇಕರಿಗೆ ಆಯಾ ಖಾತೆಗಳೇ ಸಿಕ್ಕಿವೆಯಾದರೂ ಕೆಲ ಅಚ್ಚರಿಯ ಬೆಳವಣಿಗೆಗಳಿಗೂ, ಬದಲಾವಣೆಗಳಿಗೂ ಇದು ಸಾಕ್ಷಿಯಾಗಿದೆ. ಮೊದಲ ಬಾರಿ ಸಚಿವರಾದ ಆರಗ ಜ್ಞಾನೇಂದ್ರ ಅವರಿಗೆ ಗೃಹ ಇಲಾಖೆಯಂತಹ ಪ್ರಬಲ ಖಾತೆ ದೊರಕಿದೆ. ಇತ್ತ ಉಪಮುಖ್ಯಮಂತ್ರಿ ಸ್ಥಾನದ ಆಕಾಂಕ್ಷೆಯಲ್ಲಿದ್ದ ಶ್ರೀರಾಮುಲು ಅವರಿಗೆ ಸಾರಿಗೆ ಹಾಗೂ ಪರಿಶಿಷ್ಟ ಪಂಗಡ ಅಭಿವೃದ್ಧಿ ಖಾತೆಯನ್ನು ವಹಿಸಲಾಗಿದೆ. ಹೀಗಾಗಿ ಬಳ್ಳಾರಿಯ ಶ್ರೀರಾಮುಲು (B Sriramulu) ಅಸಮಾಧಾನ ಹೊರಹಾಕಿದ್ದಾರೆ. ಇನ್ನೊಂದೆಡೆ ಬಳ್ಳಾರಿ ಭಾಗದ ಇನ್ನೋರ್ವ ನಾಯಕನಾದ ಆನಂದ್ ಸಿಂಗ್ (Anand Singh) ಅವರಿಗೆ ಪರಿಸರ, ಪ್ರವಾಸೋದ್ಯಮ ಇಲಾಖೆ ಸಿಕ್ಕಿದ್ದು, ಅವರು ಕೂಡಾ ತಕರಾರು ತೆಗೆದಿದ್ದಾರೆ. ಯಾವುದೇ ಮಂತ್ರಿ ಮಂಡಲದಲ್ಲಿ ಅತ್ಯಂತ ಮಹತ್ವದ ಮತ್ತು ಆಯಕಟ್ಟಿನ ಇಲಾಖೆಗಳಾದ ಸಾರಿಗೆ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಗಳ ಬಗ್ಗೆ ಇಬ್ಬರು ಸಚಿವರು ರಗಳೆ ತೆಗೆದಿರುವುದು ಕುತೂಹಲ ಮೂಡಿಸಿದೆ. ಇವರಿಬ್ಬರನ್ನು ಹೊರತುಪಡಿಸಿದರೆ ಅನುಭವಿಗಳು, ಹಿರಿಯರು, ಕಿರಿಯರು ಸೇರಿದಂತೆ ಬಹುತೇಕ ಎಲ್ಲಾ ಸಚಿವರೂ ಖುಷಿಯಲ್ಲಿದ್ದಾರೆ ಎನ್ನುವುದು ಗಮನಾರ್ಹ.

ಆನಂದ್ ಸಿಂಗ್​ಗೆ ಆನಂದವಿಲ್ಲ!
ಖಾತೆ ಹಂಚಿಕೆ ಬೆನ್ನಲ್ಲೇ ರಗಳೆ ತೆಗೆದ ಆನಂದ್ ಸಿಂಗ್, ನಾನು ನಿರೀಕ್ಷೆ ಮಾಡಿದ ಖಾತೆಯನ್ನು ಮುಖ್ಯಮಂತ್ರಿಗಳು ಕೊಟ್ಟಿಲ್ಲ. ಖಾತೆ ಹಂಚಿಕೆ ಬಗ್ಗೆ ನನಗೆ ನೋವಿದೆ ಎಂದಿದ್ದಾರೆ. ನಾಳೆ ಸಿಎಂ ಭೇಟಿಯಾಗಿ ನನ್ನ ಬೇಡಿಕೆ ಇಡುತ್ತೇನೆ. ಕೋರಿಕೆಯನ್ನು ಈಡೇರಿಸುತ್ತಾರೆ ಎಂಬ ನಂಬಿಕೆ ಇದೆ. ಒಂದುವೇಳೆ ನನ್ನ ಬೇಡಿಕೆ ಈಡೇರಿಸದಿದ್ದರೆ ಮುಂದೆ ನೋಡೋಣ ಎಂದು ಬಳ್ಳಾರಿಯಲ್ಲಿ ಪರಿಸರ ಸಚಿವ ಆನಂದ್ ಸಿಂಗ್ ಹೇಳಿಕೆ ನೀಡಿದ್ದಾರೆ.

ಸಾರಿಗೆ ಸಚಿವರಲ್ಲಿ ಅಸಮಾಧಾನದ ಹೊಗೆ!
ಸದ್ಯ ಬೆಂಗಳೂರಿನ ನಿವಾಸದಲ್ಲಿರುವ ಬಿ.ಶ್ರೀರಾಮುಲು ಆಪ್ತರ ಬಳಿ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದ್ದು, ಡಿಸಿಎಂ ಸ್ಥಾನವೂ ನೀಡಲಿಲ್ಲ, ಕೇಳಿದ ಖಾತೆಯೂ ಸಿಗಲಿಲ್ಲ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಡಿಸಿಎಂ ಸ್ಥಾನ ನೀಡದಿದ್ದಕ್ಕೆ ಮೊದಲೇ ಅಸಮಾಧಾನಗೊಂಡಿದ್ದ ಶ್ರೀ ರಾಮುಲುಗೆ ಈಗ ಸಮಾಜ ಕಲ್ಯಾಣ ಖಾತೆಯೂ ಕೈ ತಪ್ಪಿಹೋಗಿರುವುದು ತೀವ್ರ ಬೇಸರ ತರಿಸಿದೆ ಎನ್ನಲಾಗಿದೆ.

ಆನಂದ್​ ಸಿಂಗ್​ಗೆ ಸಮಾಧಾನ ಮಾಡಿದ ಸೋಮಣ್ಣ
ಆನಂದ್ ಸಿಂಗ್​ ಅಸಮಾಧಾನದ ಕುರಿತು ರಾಯಚೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ವಸತಿ ಖಾತೆ ಸಚಿವ ವಿ.ಸೋಮಣ್ಣ, ಖಾತೆ ಹಂಚಿಕೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಪರಮಾಧಿಕಾರ. ತಮ್ಮ ಖಾತೆ ಬಗ್ಗೆ ಆನಂದ್ ಸಿಂಗ್ ಅಸಮಾಧಾನ ಹೊರಹಾಕಿದ್ದಾರೆ. ಆದರೆ, ಪ್ರತಿಯೊದು ಖಾತೆಯಲ್ಲೂ ತನ್ನದೇ ಆದ ಶಕ್ತಿ ಇರುತ್ತದೆ‌. ಆನಂದ್ ಸಿಂಗ್ ಒಬ್ಬ ಕ್ರಿಯಾಶೀಲ ವ್ಯಕ್ತಿ. ಆವೇಶದಲ್ಲಿ ಸಚಿವರು ಹಾಗೆ ಮಾತನಾಡಿರಬಹುದು. ನಾನು ಅವರ ಜತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಜತೆಗೆ, ನನಗೆ ವಸತಿ ಖಾತೆ ಕೊಟ್ಟಿರೊದು ತೃಪ್ತಿದಾಯಕವಾಗಿದೆ ಎಂದೂ ತಿಳಿಸಿದ್ದಾರೆ.

(B Sriramulu Anand Singh not satisfied on their Portfolio new developments on CM Bommai Karnataka Cabinet)

ಇದನ್ನೂ ಓದಿ:
29 ಸಚಿವರಿಗೆ ಖಾತೆ ಹಂಚಿಕೆ; ಹಣಕಾಸು ಮತ್ತು ಬೆಂಗಳೂರು ಅಭಿವೃದ್ಧಿ ಖಾತೆ ತನ್ನಲ್ಲಿಯೇ ಉಳಿಸಿಕೊಂಡ ಸಿಎಂ ಬೊಮ್ಮಾಯಿ

Published On - 1:45 pm, Sat, 7 August 21