ಯಾವ ಖಾತೆ ಇದ್ದರೂ ಅದರ ಯೋಜನೆಗಳನ್ನು ತಳಮಟ್ಟದ ಜನರಿಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ: ಶಶಿಕಲಾ ಜೊಲ್ಲೆ

ಯಾವ ಖಾತೆ ಇದ್ದರೂ ಅದರ ಯೋಜನೆಗಳನ್ನು ತಳಮಟ್ಟದ ಜನರಿಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ: ಶಶಿಕಲಾ ಜೊಲ್ಲೆ
ಸಚಿವೆ ಶಶಿಕಲಾ ಜೊಲ್ಲೆ

ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆಂತಯ್ಯ ಎಂದು ಹೇಳಿದ ಶಶಿಕಲಾ ಜೊಲ್ಲೆ, ನಾನು ರಾಜಕಾರಣ ಮಾಡುತ್ತಿದ್ದೇನೆ. ಓರ್ವ ಮಹಿಳೆಯಾಗಿ ಶಾಸಕಿಯಾಗಿ ಕೆಲಸ ಮಾಡಿದ್ದೇನೆ ಎಂದಿದ್ದಾರೆ.

TV9kannada Web Team

| Edited By: Skanda

Aug 07, 2021 | 3:14 PM

ವಿಜಯಪುರ: ನೂತನ ಸಚಿವ ಸಂಪುಟದಲ್ಲಿ ಮುಜರಾಯಿ ಇಲಾಖೆ ಸಚಿವೆಯಾಗಿ ನೇಮಕಗೊಂಡಿರುವ ಶಶಿಕಲಾ ಜೊಲ್ಲೆ (Shashikala Jolle) ತಮಗೆ ನೀಡಿದ ಖಾತೆಯ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಹೇಳಿದ್ದಾರೆ. ಖಾತೆ ಹಂಚಿಕೆಯಲ್ಲಿ ಹಿಂಬಡ್ತಿ, ಮುಂಬಡ್ತಿ ಎಂಬುದು ಇರಲ್ಲ. ನಮಗೆ ಸಕಾರಾತ್ಮಕ ಚಿಂತನೆ ಇರಬೇಕು. ಕೆಲಸ ಮಾಡುವವರಿಗೆ ಮತ್ತು ಜನತೆಗೆ ನ್ಯಾಯ ಕೊಡುವವರಿಗೆ ಖಾತೆ ಯಾವುದಾದರೇನು? ನನಗೆ ಕೊಟ್ಟ ಖಾತೆಯನ್ನ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

ಯಾವ ಖಾತೆ ಇದ್ದರೂ ಆ ಖಾತೆ ಯೋಜನೆಗಳನ್ನು ತಳಮಟ್ಟದ ಜನತೆಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ. ಎರಡು ವರ್ಷಗಳಿಂದ ಮಹಿಳಾ ಮತ್ತು‌ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಉತ್ತಮ‌ ಕೆಲಸ ಮಾಡಿದ ಸಮಾಧಾನವಿದೆ. ಜಿಲ್ಲಾ ಉಸ್ತುವಾರಿ ಸಚಿವೆಯಾಗಿ, ಸ್ವಂತ ಕ್ಷೇತ್ರದಲ್ಲೂ ಶಾಸಕಿಯಾಗಿಯೂ ಉತ್ತಮ ಕೆಲಸ ಮಾಡಿದ್ದೇನೆ. ನನ್ನ ಜವಾಬ್ದಾರಿಯನ್ನು ‌ನಾನು ಸರಿಯಾಗಿ ನಿರ್ವಹಣೆ ಮಾಡಿದ್ದೇನೆ. ಈಗ ವಹಿಸಿರುವ ಖಾತೆಯ ಯೋಜನೆಗಳನ್ನು ರಾಜ್ಯದ ಜನರಿಗೆ ಮುಟ್ಟಿಸುವೆ. ಖಾತೆ ಹಂಚಿಕೆ ಕುರಿತು ಅಸಮಾಧಾನವಿಲ್ಲ ಎಂದು ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ಖಾತೆ ನಿರ್ವಹಣೆ ಜತೆಗೆ ಪಕ್ಷ ಸಂಘಟನಯನ್ನೂ ಮಾಡುವೆ. ಖಾತೆ ಹಂಚಿಕೆಯಲ್ಲಿ ಹಿಂಬಡ್ತಿ ಮುಂಬಡ್ತಿ ಎಂದು ಇರುವುದಿಲ್ಲ. ಅದು ತಿಳಿದುಕೊಳ್ಳುವವರ ಮೇಲೆ ಹೋಗುತ್ತದೆ. ನಮಗೆ ಸಕಾರಾತ್ಮಕ ಚಿಂತನೆ ಇರಬೇಕು ಅಷ್ಟೇ ಎಂದ ಸಚಿವೆ ಇದೇ ವೇಳೆ ಅಕ್ಕಮಹಾದೇವಿ ಅವರ ವಚನ ಹೇಳಿದ್ದಾರೆ. ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆಂತಯ್ಯ ಎಂದು ಹೇಳಿದ ಅವರು, ನಾನು ರಾಜಕಾರಣ ಮಾಡುತ್ತಿದ್ದೇನೆ. ಓರ್ವ ಮಹಿಳೆಯಾಗಿ ಶಾಸಕಿಯಾಗಿ ಕೆಲಸ ಮಾಡಿದ್ದೇನೆ. ಪಕ್ಷದ ವರಿಷ್ಠರು ನೀಡಿದ ಜವಾಬ್ದಾರಿ ಪ್ರಾಮಾಣಿಕವಾಗಿ ನಿರ್ವಹಿಸುವೆ ಎಂದು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿಸಿದ್ದಾರೆ.

ನನಗೂ ಅಸಮಾಧಾನವಿಲ್ಲ: ಬಿ.ಶ್ರೀರಾಮುಲು ಉಪಮುಖ್ಯಮಂತ್ರಿ ಹುದ್ದೆಯ ನಿರೀಕ್ಷೆಯಲ್ಲಿದ್ದ ಬಿ.ಶ್ರೀರಾಮುಲು ಅವರಿಗೆ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವಾಲಯದ ಜವಾಬ್ದಾರಿ ನೀಡಲಾಗಿದ್ದು, ಅದು ಅವರಿಗೆ ಅಸಮಾಧಾನ ತಂದಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಆ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಾರಿಗೆ ಹಾಗೂ ನೂತನವಾಗಿ ಸೃಷ್ಟಿಯಾಗಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವಾಲಯದ ಮಹತ್ವದ ಜವಾಬ್ದಾರಿ ನನಗೆ ನೀಡಲಾಗಿದೆ. ಜವಾಬ್ದಾರಿ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ವಂದಿಸುತ್ತಾ, ಅವರ ನಿರ್ಧಾರ ಸ್ವಾಗತಿಸುತ್ತೇನೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮಾದರಿ ಆಡಳಿತ, ಜನಪರ ಹಾಗೂ ಅಭಿವೃದ್ಧಿ ಪರ ಆಡಳಿತವೊಂದೇ ನನ್ನ, ನಮ್ಮ ಸರ್ಕಾರದ ಗುರಿ. ಮುಖ್ಯಮಂತ್ರಿಗಳ ನೇತೃತ್ವ ಹಾಗೂ ಹಿರಿಯರಾದ ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿಯತ್ತ ನಮ್ಮ ಹೆಜ್ಜೆ ಇರಲಿದೆ. ಅಸಮಾಧಾನ ಮತ್ತಿತರೆ ಸುದ್ದಿಗಳು ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದಾರೆ.

(Shashikala Jolle reaction over Karnataka Cabinet formed under CM Basavaraj Bommai)

ಇದನ್ನೂ ಓದಿ: ಬೊಮ್ಮಾಯಿ ಮಂತ್ರಿ ಮಂಡಲದಲ್ಲಿ ಮಹತ್ವದ, ಆಯಕಟ್ಟಿನ ಇಲಾಖೆ ನೀಡಿದರೂ ರಗಳೆ ತೆಗೆದ ಬಳ್ಳಾರಿ ಕಡೆಯ ಇಬ್ಬರು ಸಚಿವರು 

13 ಜಿಲ್ಲೆಗಳಿಗೆ ಮಂತ್ರಿಗಿರಿ ಇಲ್ಲ, 6 ಜಿಲ್ಲೆಗೆ ಇಬ್ಬಿಬ್ಬರು, ಲಿಂಗಾಯತರಿಗೆ ಸಿಹಿ,​ 7 ಮಂದಿ ಹಳಬರಿಗೆ ಕಹಿ; ಶಶಿಕಲಾ ಜೊಲ್ಲೆ ಏಕೈಕ ಸಚಿವೆ​

Follow us on

Most Read Stories

Click on your DTH Provider to Add TV9 Kannada