13 ಜಿಲ್ಲೆಗಳಿಗೆ ಮಂತ್ರಿಗಿರಿ ಇಲ್ಲ, 6 ಜಿಲ್ಲೆಗೆ ಇಬ್ಬಿಬ್ಬರು, ಲಿಂಗಾಯತರಿಗೆ ಸಿಹಿ,​ 7 ಮಂದಿ ಹಳಬರಿಗೆ ಕಹಿ; ಶಶಿಕಲಾ ಜೊಲ್ಲೆ ಏಕೈಕ ಸಚಿವೆ​

ಈ 29 ಮಂದಿ ನೂತನ ಸಚಿವ ಸಂಪುಟದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇದರಲ್ಲಿ ಬೆಂಗಳೂರು ನಗರ ಜಿಲ್ಲೆಗೆ ಒಟ್ಟು 7 ಸಚಿವ ಸ್ಥಾನ ಸಿಕ್ಕಿದ್ದು, ರಾಜ್ಯದ 6 ಜಿಲ್ಲೆಗಳಿಂದ ತಲಾ ಇಬ್ಬರು ಸಂಪುಟದಲ್ಲಿ ಇದ್ದಾರೆ.

13 ಜಿಲ್ಲೆಗಳಿಗೆ ಮಂತ್ರಿಗಿರಿ ಇಲ್ಲ, 6 ಜಿಲ್ಲೆಗೆ ಇಬ್ಬಿಬ್ಬರು, ಲಿಂಗಾಯತರಿಗೆ ಸಿಹಿ,​ 7 ಮಂದಿ ಹಳಬರಿಗೆ ಕಹಿ; ಶಶಿಕಲಾ ಜೊಲ್ಲೆ ಏಕೈಕ ಸಚಿವೆ​
ಬಸವರಾಜ ಬೊಮ್ಮಾಯಿ
Follow us
| Updated By: Digi Tech Desk

Updated on:Aug 04, 2021 | 3:57 PM

ಬೆಂಗಳೂರು: ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದ ಅಂತಿಮ ಪಟ್ಟಿ ಹೊರಬಿದ್ದಿದೆ. ಒಟ್ಟು 29 ಜನರಿಗೆ ಸದರಿ ಸಂಪುಟದಲ್ಲಿ ಸಚಿವ ಸ್ಥಾನ ಅಲಂಕರಿಸುವ ಅವಕಾಶ ಸಿಕ್ಕಿದ್ದು, ಜಾತಿವಾರು, ಜಿಲ್ಲಾವಾರು ಲೆಕ್ಕಾಚಾರಗಳು ಈಗ ಗರಿಗೆದರಿವೆ. ಹೊಸದಾಗಿ ಸಚಿವರಾಗುತ್ತಿರುವವರ ಪೈಕಿ ಲಿಂಗಾಯತ ಸಮುದಾಯಕ್ಕೆ ಬಹುದೊಡ್ಡ ಪಾಲು ಸಿಕ್ಕಿದ್ದು 8 ಮಂದಿಯ ಹೆಸರು ಅಂತಿಮಗೊಂಡಿದೆ. ಅಂತೆಯೇ ಜಿಲ್ಲಾವಾರು ಲೆಕ್ಕಾಚಾರದಲ್ಲಿ ಬೆಂಗಳೂರು ನಗರ ಜಿಲ್ಲೆಗೆ ಅದೃಷ್ಟ ಖುಲಾಯಿಸಿದ್ದು, 7 ಮಂದಿ ಸಚಿವರಾಗುತ್ತಿದ್ದಾರೆ. ಇದೆಲ್ಲಾ ವಿಚಾರಗಳ ಸವಿವರ ಮಾಹಿತಿ ಇಲ್ಲಿ ಲಭ್ಯವಿದೆ.

ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡುವ ಮುನ್ನ ಲಿಂಗಾಯತ ಸಮುದಾಯದ ಮಠಾಧೀಶರು ತಮ್ಮ ಶಕ್ತಿ ಪ್ರದರ್ಶನ ಮಾಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ತಾವೆಷ್ಟು ಪ್ರಬಲರು ಎಂಬ ಸಂದೇಶ ರವಾನಿಸಿದ್ದರು. ಮೊದಮೊದಲು ಬಿಜೆಪಿ ಹೈಕಮಾಂಡ್ ಅವರ ಒತ್ತಡಕ್ಕೆ ಮಣಿಯುವುದಿಲ್ಲ ಎಂಬ ಮಾತು ಕೇಳಿಬರುತ್ತಿತ್ತಾದರೂ ಕೊನೆಗೆ ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿ ಅವರನ್ನೇ ಸಿಎಂ ಮಾಡುವ ಮೂಲಕ ತಾವು ಲಿಂಗಾಯತರನ್ನು ಬಿಟ್ಟುಕೊಡುವುದಿಲ್ಲ ಎನ್ನುವುದನ್ನು ತೋರಿಸಿಕೊಟ್ಟರು. ಇದೀಗ ಸಚಿವ ಸಂಪುಟದಲ್ಲೂ ಲಿಂಗಾಯತ ಸಮುದಾಯಕ್ಕೆ ಒತ್ತು ಕೊಡುವ ಮೂಲಕ ಅವರನ್ನು ಎದುರು ಹಾಕಿಕೊಳ್ಳದೇ ಮುನ್ನಡೆಯಲು ನಿರ್ಧರಿಸಿದಂತೆ ಕಾಣುತ್ತಿದೆ.

ಜಾತಿವಾರು ಲೆಕ್ಕಾಚಾರ ಹೇಗಿದೆ? ನೂತನ ಸಚಿವ ಸಂಪುಟದಲ್ಲಿ ಒಟ್ಟು 8 ಮಂದಿ ಲಿಂಗಾಯತರು ಸಚಿವರಾಗುತ್ತಿದ್ದು, ವಿ.ಸೋಮಣ್ಣ, ಶಂಕರ್ ಪಾಟೀಲ್ ಮುನೇನಕೊಪ್ಪ, ಜೆ.ಸಿ.ಮಾಧುಸ್ವಾಮಿ, ಮುರುಗೇಶ್ ನಿರಾಣಿ, ಬಿ.ಸಿ.ಪಾಟೀಲ್, ಸಿ.ಸಿ.ಪಾಟೀಲ್, ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ ಮಂತ್ರಿ ಪಟ್ಟಕ್ಕೇರುತ್ತಿದ್ದಾರೆ. ಹಿಂದುಳಿದ ವರ್ಗದಲ್ಲಿ ಕುರುಬ ಸಮುದಾಯದಿಂದ ಕೆ.ಎಸ್.ಈಶ್ವರಪ್ಪ, ಭೈರತಿ ಬಸವರಾಜ್, ಎಂಟಿಬಿ ನಾಗರಾಜ್. ಬಲಿಜ ಸಮುದಾಯದಿಂದ ಮುನಿರತ್ನ, ಈಡಿಗ ಸಮುದಾಯದಿಂದ ವಿ.ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ. ರಜಪೂತ ಸಮುದಾಯದಿಂದ ಆನಂದ್ ಸಿಂಗ್ ಸಚಿವರಾಗುತ್ತಿದ್ದಾರೆ. ರೆಡ್ಡಿ ಕೋಟಾದಲ್ಲಿ ಹಾಲಪ್ಪ ಆಚಾರ್​ಗೆ ಮಂತ್ರಿ ಭಾಗ್ಯ ಒಲಿದಿದೆ. ದಲಿತ ಸಮುದಾಯದಿಂದ ಎಸ್.ಅಂಗಾರ, ಗೋವಿಂದ ಕಾರಜೋಳ, ಪ್ರಭು ಚೌಹಾಣ್ ಸಚಿವರಾಗುತ್ತಿದ್ದು, ಎಸ್‌ಟಿ ಸಮುದಾಯದ ಬಿ.ಶ್ರೀರಾಮುಲು ಅವರಿಗೂ ಸಚಿವ ಸ್ಥಾನ ಲಭ್ಯವಾಗಿದೆ.

ಇನ್ನು ಬ್ರಾಹ್ಮಣ ಸಮುದಾಯದಿಂದ ಶಿವರಾಮ್ ಹೆಬ್ಬಾರ್, ಬಿ.ಸಿ.ನಾಗೇಶ್ ಸಚಿವರಾಗುತ್ತಿದ್ದು, ಒಕ್ಕಲಿಗ ಸಮುದಾಯದಿಂದ ಸಿ.ಎನ್‌ ಅಶ್ವತ್ಥ ನಾರಾಯಣ, ಕೆ.ಸಿ.ನಾರಾಯಣ ಗೌಡ, ಆರ್.ಅಶೋಕ್, ಡಾ. ಕೆ.ಸುಧಾಕರ್, ಆರಗ ಜ್ಞಾನೇಂದ್ರ, ಕೆ.ಗೋಪಾಲಯ್ಯ, ಎಸ್‌.ಟಿ ಸೋಮಶೇಖರ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಲಿಂಗಾಯತ ಸಮುದಾಯದಲ್ಲಿ ಮುರುಗೇಶ್ ನಿರಾಣಿ, ಶಂಕರ ಪಾಟೀಲ್​ ಮುನೇನಕೊಪ್ಪ, ಸಿ.ಸಿ.ಪಾಟೀಲ್‌ ಪಂಚಮಸಾಲಿ ಸಮುದಾಯವನ್ನು ಪ್ರತಿನಿಧಿಸಿದರೆ, ವಿ.ಸೋಮಣ್ಣ ಗೌಡ ಲಿಂಗಾಯತರನ್ನೂ, ಜೆ.ಸಿ.ಮಾಧುಸ್ವಾಮಿ ನೊಳಂಬ ಲಿಂಗಾಯತರನ್ನೂ, ಬಿ.ಸಿ.ಪಾಟೀಲ್ ಸಾದರ ಲಿಂಗಾಯತರನ್ನೂ, ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ ಬಣಜಿಗ ಲಿಂಗಾಯತರನ್ನೂ ಪ್ರತಿನಿಧಿಸುತ್ತಿದ್ದಾರೆ.

ಕ್ಷೇತ್ರವಾರು ಲೆಕ್ಕಾಚಾರ ಹೀಗಿದೆ: 1. ಕೆ.ಎಸ್.ಈಶ್ವರಪ್ಪ – ಶಿವಮೊಗ್ಗ 2. ಅರಗ ಜ್ಞಾನೇಂದ್ರ – ತೀರ್ಥಹಳ್ಳಿ 3. ಬಿ.ಸಿ ಪಾಟೀಲ್ – ಹಿರೇಕೆರೂರು. 4. ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ 5. ಉಮೇಶ್ ಕತ್ತಿ – ಹುಕ್ಕೇರಿ 6. ಎಸ್.ಟಿ.ಸೋಮಶೇಖರ್ – ಯಶವಂತಪುರ 7. ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ 8. ಭೈರತಿ‌ ಬಸವರಾಜ – ಕೆ.ಆರ್ ಪುರಂ 9. ಮುರುಗೇಶ್ ನಿರಾಣಿ – ಬಿಳಿಗಿ 10. ಶಿವರಾಂ ಹೆಬ್ಬಾರ್ – ಯಲ್ಲಾಪುರ 11. ಶಶಿಕಲಾ ಜೊಲ್ಲೆ – ನಿಪ್ಪಾಣಿ 12. ಕೆ.ಸಿ ನಾರಾಯಣ್ ಗೌಡ – ಕೆ‌ಆರ್ ಪೇಟೆ 13. ಸುನೀಲ್ ಕುಮಾರ್ – ಕಾರ್ಕಳ 14. ಆರ್. ಅಶೋಕ್ – ಪದ್ಮನಾಭ ನಗರ 15. ಗೋವಿಂದ ಕಾರಜೋಳ – ಮುಧೋಳ 16. ಮುನಿರತ್ನ – ಆರ್​ಆರ್ ನಗರ 17. ಬಿ.ಶ್ರೀ ರಾಮುಲು – ಮೊಳಕಾಲುಮ್ಮೂರು 18. ಗೋಪಾಲಯ್ಯ – ಮಹಾಲಕ್ಷ್ಮಿ ಲೇಔಟ್ 19. ಮಾಧುಸ್ವಾಮಿ – ಚಿಕ್ಕನಾಯಕನಹಳ್ಳಿ 20. ಹಾಲಪ್ಪ ಆಚಾರ್ – ಯಲ್ಬುರ್ಗ 21. ಶಂಕರ್ ಪಾಟೀಲ್ ಮುನೇನಕೊಪ್ಪ – ನವಲುಗುಂದ 22. ಬಿ.ಸಿ ನಾಗೇಶ್ – ತಿಪಟೂರು 23. ಪ್ರಭು ಚೌವ್ಹಾಣ್ – ಔರಾದ್ 24. ವಿ.ಸೋಮಣ್ಣ – ಗೋವಿಂದರಾಜನಗರ 25. ಎಸ್.ಅಂಗಾರ – ಸುಳ್ಯ 26. ಆನಂದ್ ಸಿಂಗ್ – ಹೊಸಪೇಟೆ 27. ಸಿ ಸಿ‌ ಪಾಟೀಲ್ – ನರಗುಂದ 28. ಎಂ.ಟಿ.ಬಿ ನಾಗರಾಜ್ – ಬೆಂಗಳೂರು ಗ್ರಾಮಾಂತರ (ಎಂಎಲ್​ಸಿ) 29. ಕೋಟಾ ಶ್ರೀನಿವಾಸ ಪೂಜಾರಿ – ದಕ್ಷಿಣ ಕನ್ನಡ (ಎಂಎಲ್​ಸಿ)

ಈ 29 ಮಂದಿ ನೂತನ ಸಚಿವ ಸಂಪುಟದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇದರಲ್ಲಿ ಬೆಂಗಳೂರು ನಗರ ಜಿಲ್ಲೆಗೆ ಒಟ್ಟು 7 ಸಚಿವ ಸ್ಥಾನ ಸಿಕ್ಕಿದ್ದು, ರಾಜ್ಯದ 6 ಜಿಲ್ಲೆಗಳಿಂದ ತಲಾ ಇಬ್ಬರು ಸಂಪುಟದಲ್ಲಿ ಇದ್ದಾರೆ. ದಕ್ಷಿಣ ಕನ್ನಡ, ಧಾರವಾಡ, ಶಿವಮೊಗ್ಗ, ತುಮಕೂರು, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಿಂದ ಇಬ್ಬರು ಸಚಿವರಾಗುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೂ ಪರಿಗಣಿಸಿದರೆ ಹಾವೇರಿ ಜಿಲ್ಲೆಯಿಂದಲೂ ಇಬ್ಬರು ಸಂಪುಟದಲ್ಲಿ ಇದ್ದಂತಾಗುತ್ತದೆ.

13 ಜಿಲ್ಲೆಗಳಿಂದ ಯಾರೂ ಮಂತ್ರಿಗಳಿಲ್ಲ ಆದರೆ, ಈ ಬಾರಿ ಸಂಪುಟದಲ್ಲಿ 13 ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಎನ್ನುವುದು ಗಮನಾರ್ಹ ವಿಚಾರ. ಮೈಸೂರು, ಬಳ್ಳಾರಿ, ದಾವಣಗೆರೆ, ಹಾಸನ, ಕಲಬುರಗಿ, ರಾಯಚೂರು, ಯಾದಗಿರಿ, ಕೋಲಾರ, ರಾಮನಗರ, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ವಿಜಯಪುರ ಜಿಲ್ಲೆಗಳಿಗೆ ಯಾವುದೇ ಸಚಿವ ಸ್ಥಾನ ಲಭ್ಯವಾಗಿಲ್ಲ.

ಯಡಿಯೂರಪ್ಪ ಬಳಗದ ಏಳು ಜನರು ಸಂಪುಟದಿಂದ ದೂರ ಅಂತೆಯೇ, ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿದ್ದ 7 ಜನರನ್ನು ದೂರವಿಡಲಾಗಿದ್ದು, ಅವರೆಲ್ಲರಿಗೂ ಸಚಿವ ಸ್ಥಾನ ಕೈತಪ್ಪಿಹೋಗಿದೆ. ಕಳೆದ ಬಾರಿ ಉಪಮುಖ್ಯಮಂತ್ರಿಯಾಗಿದ್ದ ಲಕ್ಷ್ಮಣ ಸವದಿಗೂ ಅವಕಾಶ ತಪ್ಪಿಹೋಗಿದ್ದು, ಜಗದೀಶ್ ಶೆಟ್ಟರ್, ಸಿ.ಪಿ.ಯೋಗೀಶ್ವರ್, ಆರ್.ಶಂಕರ್, ಅರವಿಂದ್ ಲಿಂಬಾವಳಿ, ಶ್ರೀಮಂತ ಪಾಟೀಲ್, ಸುರೇಶ್ ಕುಮಾರ್ ಸಚಿವ ಸ್ಥಾನದಿಂದ ದೂರ ಉಳಿಯಲಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪ ಸರ್ಕಾರದ ಸೂಪರ್ ಸಿಎಂ​ ವಿಜಯೇಂದ್ರಗೆ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಇಲ್ಲ 

ಸಚಿವ ಸಂಪುಟದಲ್ಲಿ 29 ಸಚಿವರು; 3 ದಲಿತ, 8 ಲಿಂಗಾಯಿತ, 7 ಒಕ್ಕಲಿಗರಿಗೆ ಸ್ಥಾನ, ಡಿಸಿಎಂ ಹುದ್ದೆಯೇ ಇಲ್ಲ

Published On - 1:54 pm, Wed, 4 August 21