ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಮುಜುಗರ ತರುವ ಕೆಲಸ ಯಾರು ಮಾಡಲ್ಲ: ಶ್ರೀರಾಮುಲು

ಬಿಜೆಪಿ ವಿರುದ್ಧ ಜನಾರ್ಧನ ರೆಡ್ಡಿ ಮುನಿಸು ವಿಚಾರವಾಗಿ ಮಾತನಾಡಿದ ಸಚಿವ ಬಿ.ಶ್ರೀರಾಮುಲು, ಯಾವುದೇ ಪರಿಸ್ಥಿತಿಯಲ್ಲಿ ಜನಾರ್ದನ ರೆಡ್ಡಿ ತಿರಸ್ಕಾರ ಮಾಡುವ ಕೆಲಸ ಮಾಡುವುದಿಲ್ಲ ಎಂದಿದ್ದಾರೆ.

ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಮುಜುಗರ ತರುವ ಕೆಲಸ ಯಾರು ಮಾಡಲ್ಲ: ಶ್ರೀರಾಮುಲು
ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಮುಜುಗರ ತರುವ ಕೆಲಸ ಯಾರು ಮಾಡಲ್ಲ ಎಂದ ಸಚಿವ ಬಿ.ಶ್ರೀರಾಮುಲು
Follow us
TV9 Web
| Updated By: Rakesh Nayak Manchi

Updated on:Nov 01, 2022 | 11:57 AM

ಬಳ್ಳಾರಿ: ಬಿಜೆಪಿಗೆ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ (Gali Janardhana Reddy) ಅವರ ಕೊಡುಗೆ ಅಪಾರವಾಗಿದೆ. ಯಾವತ್ತಿದರೂ ಜನಾರ್ದನ ರೆಡ್ಡಿ ಬಿಜೆಪಿ (BJP) ಪಕ್ಷದ ಪರವಾಗಿ ಇರುತ್ತಾರೆ. ಅವರಿಗೆ ಯಾರು ಕೂಡ ಮುಜುಗರ ತರುವ ಕೆಲಸ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು (B.Sriramulu) ಹೇಳಿದ್ದಾರೆ. ಬಿಜೆಪಿ ವಿರುದ್ಧ ಜನಾರ್ಧನ ರೆಡ್ಡಿ ಮುನಿಸು ವಿಚಾರವಾಗಿ ಬಳ್ಳಾರಿಯಲ್ಲಿ ಮಾತನಾಡಿದ ಸಚಿವರು, ಜನಾರ್ದನ ರೆಡ್ಡಿ ಏನು ಹೇಳಿದ್ದಾರೆ ಗೊತ್ತಿಲ್ಲ. ಮಾಧ್ಯಮದ ಮೂಲಕ ನನಗೂ ವಿಚಾರ ಗೊತ್ತಾಗಿದೆ. ಬಿಜೆಪಿಗೆ ಜನಾರ್ದನ ರೆಡ್ಡಿ ಕೊಡುಗೆ ಬಹಳಷ್ಟಿದೆ. ಅವರು ಯಾಕೆ ಹೀಗೆ ಮಾತಾಡಿದ್ದಾರೆ ಗೊತ್ತಿಲ್ಲ. ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.

ಜನಾರ್ಧನ ರೆಡ್ಡಿ ಹೇಳಿಕೆ ವಿಚಾರವಾಗಿ ಅವರ ಮನವೊಲಿಸುವ ಕೆಲಸ ಮಾಡುತ್ತೇವೆ. ಈ ಕುರಿತಾಗಿ ಜನಾರ್ದನ ರೆಡ್ಡಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ, ಬೇಸರ ಆಗಿದ್ದರೂ ಅವರ ಮನವೋಲಿಸುವ ಕಾರ್ಯ ಮಾಡುತ್ತೇವೆ. ನಮ್ಮ ಪಕ್ಷದ ನಾಯಕರ ಜೊತೆ ರೆಡ್ಡಿ ವಿಚಾರವಾಗಿ ಚರ್ಚೆ ಮಾಡಲಾಗುವುದು ಎಂದರು.

ಪಕ್ಷ ಕಟ್ಟುವ ವಿಚಾರದಲ್ಲಿ ಜನಾರ್ದನ ರೆಡ್ಡಿ ಪಾತ್ರ ಅಪಾರವಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ಜನಾರ್ಧನ ರೆಡ್ಡಿ ಅವರನ್ನು ತಿರಸ್ಕಾರ ಮಾಡುವ ಕೆಲಸ ಮಾಡುವುದಿಲ್ಲ. ಅವರಿಗೆ ಮುಜುಗರ ತರುವ ಕೆಲಸ ಯಾರು ಮಾಡುವುದಿಲ್ಲ. ಏನೇ ಲೋಪ ಆಗಿದ್ದರೂ ನಾನು ಬಿಜೆಪಿ ನಾಯಕರೊಂದಿಗೆ ಮಾತಾಡಿ ಸರಿಪಡಿಸುವೆ ಎಂದರು.

ಯಾವತ್ತಿದರೂ ಜನಾರ್ಧನ ರೆಡ್ಡಿ ಬಿಜೆಪಿ ಪಕ್ಷದ ಪರವಾಗಿ ಇರುತ್ತಾರೆ. ಈಗಲೂ ಬಿಜೆಪಿಯಲ್ಲೇ ಇದ್ದಾರೆ. ಆದರೆ ಸಕ್ರಿಯ ರಾಜಕಾರಣ ಬಗ್ಗೆ ಅವರ ಜೊತೆ ಕೇಳುತ್ತೇನೆ. ಸಕ್ರಿಯ ರಾಜಕಾರಣಕ್ಕೆ ಬರಬೇಕು ಅನ್ನೋದು ನನ್ನ ಇಚ್ಚೆಯಾಗಿದೆ. ಈ ಬಗ್ಗೆ ಯಾವುದೇ ಅಭ್ಯಂತರ ಇಲ್ಲ ಎಂದರು.

ಜನಾರ್ಧನ ರೆಡ್ಡಿ ಹೇಳಿದ್ದೇನು?

ವಿರೋಧ ಪಕ್ಷಗಳು ನನ್ನನ್ನು ಟೀಕಿಸುವ ಹಕ್ಕಿದೆ. ಆದರೆ ಬಿಜೆಪಿಯಿಂದ ಇದನ್ನು ನಿರೀಕ್ಷಿಸುವುದಿಲ್ಲ. ಏಕೆಂದರೆ ಪಕ್ಷ ಕಟ್ಟಲು ಮತ್ತು ಅಧಿಕಾರಕ್ಕೆ ಏರಲು ನನ್ನದೂ ಪಾತ್ರ ದೊಡ್ಡದಿದೆ ಎಂದರು. ಅಲ್ಲದೆ ರಾಜಕೀಯ ಜೀವನದಲ್ಲಿ ತೃಪ್ತಿ ಇರುವುದರಿಂದ ಶೀಘ್ರದಲ್ಲೇ ನನ್ನ ಮುಂದಿನ ನಡೆಯನ್ನು ನಿರ್ಧರಿಸುವುದಾಗಿ ಜನಾರ್ಧನ ರೆಡ್ಡಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯು ಬಿಜೆಪಿಗೆ ಮುಜುಗರ ಉಂಟುಮಾಡಿತ್ತು.

ಎಸ್​ಟಿ ಸಮಾವೇಶಕ್ಕೆ ಕೇಂದ್ರದ ನಾಯಕರಿಗೆ ಆಹ್ವಾನ

ನವಂಬರ್ 20 ರಂದು ಬಳ್ಳಾರಿಯಲ್ಲಿ ರಾಜ್ಯಮಟ್ಟದ ಎಸ್​ಟಿ ಸಮಾವೇಶ ನಡೆಯಲಿದೆ. ಸಮಾವೇಶಕ್ಕೆ ಅಹ್ವಾನ ಮಾಡಲು ನಾನು ಈಗಾಗಲೇ ಹಲವು ಜಿಲ್ಲೆಗಳಿಗೆ ಪ್ರವಾಸ ಮಾಡಿರುವೆ. ಕೇಂದ್ರ ನಾಯಕರಿಗೂ ಆಹ್ವಾನ ನೀಡಲಾಗುತ್ತದೆ. ಕೇಂದ್ರ ನಾಯಕರು ಭಾಗಿಯಾಗುವ ಕುರಿತು ಮುಖ್ಯಮಂತ್ರಿಯವರು ನಿರ್ಧಾರ ಮಾಡಲಿದ್ದಾರೆ. ಸಮಾವೇಶಕ್ಕೆ 30 ಎಕರೆ ಪ್ರದೇಶದ ಜಮೀನಿನಲ್ಲಿ ವೇದಿಕೆ ಹಾಗೂ ಪೆಂಡಾಲ್ ಹಾಕಲಾಗುವುದು ಎಂದು ಶ್ರೀರಾಮುಲು ಹೇಳಿದರು.

ಬಳ್ಳಾರಿಯಲ್ಲಿ ಅಪ್ಪು ಪ್ರತಿಮೆ ಸ್ಥಾಪನೆ

ಬಳ್ಳಾರಿಯಲ್ಲಿ ಶ್ರೀಘ್ರದಲ್ಲೆ ಪುನೀತ್ ರಾಜಕುಮಾರ್ ಪ್ರತಿಮೆ ಸ್ಪಾಪನೆ ಮಾಡಲಾಗುವುದು ಎಂದು ಶ್ರೀರಾಮುಲು ಹೇಳಿದರು. ಪುನೀತ್ ಪ್ರತಿಮೆ ಸ್ಪಾಪನೆ ಮಾಡಲು ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ. ನಗರದ ಜಿಲ್ಕಾ ಕ್ರೀಡಾಂಗಣದ ಬಳಿಯ ಪಾರ್ಕ್​ನಲ್ಲಿ ಪುನೀತ ಪ್ರತಿಮೆ ಸ್ಪಾಪನೆ ಮಾಡಲಾಗುವುದು. ಈಗಾಗಲೇ ಪ್ರತಿಮೆ ತಯಾರಿ ಕಾರ್ಯ ನಡೆಯುತ್ತಿದೆ. ಶ್ರೀಘ್ರದಲ್ಲೇ ಕಾರ್ಯಕ್ರಮದ ದಿನ ನಿಗದಿ ಮಾಡಲಾಗುವುದು ಎಂದರು.

ರೆಡ್ಡಿ ನೋವನ್ನು ಹಿರಿಯರು ಸರಿಪಡಿಸುತ್ತಾರೆ: ಯತ್ನಾಳ್

ವಿಜಯಪುರ: ಬಿಜೆಪಿ ಮೇಲೆ ಮಾಜಿ ಸಚಿವ ಜನಾರ್ದನ ರೆಡ್ಡಿ ಮಿನಿಸು ವಿಚಾರವಾಗಿ ಮಾತನಾಡಿದ ಶಾಸಕ ಬಸವನಗೌಡ ಪಟೀಲ್ ಯತ್ನಾಳ್, ಜನಾರ್ದನ ರೆಡ್ಡಿ ಅವರಿಗೆ ನೋವಿದೆ. ಅದನ್ನು ಪಕ್ಷದ ಹಿರಿಯರು ಸರಿಪಡಿಸುತ್ತಾರೆ. ಒಂದು ಕಾಲದಲ್ಲಿ ರೆಡ್ಡಿ ಅವರಿಂದ ಬಿಜೆಪಿಗೆ ಅನಕೂಲಮಾಡಿಕೊಂಡು ಸಿಎಂ ಆಗಿದ್ದಾರೆ. ಯಾರು ರೆಡ್ಡಿ ಅವರ ಅನಕೂಲದಿಂದ ಸಿಎಂ ಆಗಿದ್ದರಓ ಅವರು ಜನಾರ್ದನ ರೆಡ್ಡಿ ಸಹಾಯಕ್ಕೆ ಹೋಗಬೇಕಿದೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ದ ಹೇಳಿಕೆ ನೀಡಿದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:11 am, Tue, 1 November 22