ವಿಜಯಪುರ: ಇದು ಶಿವಾಜಿ ಮಹಾರಾಜ ಶಿಕ್ಷಣ ಪಡೆದ ಪವಿತ್ರ ಭೂಮಿ. ಗೋ ಹತ್ಯೆಯ ವಿರುದ್ಧ ಪ್ರಥಮ ಬಾರಿಗೆ ಇಲ್ಲೇ ಕ್ರಾಂತಿ ಆಗಿತ್ತು. ಶಿವಾಜಿ ಮಹಾರಾಜರು ಕ್ರಾಂತಿ ಮಾಡಿದ್ದು ಗೊತ್ತಿದೆ. ಇಂಥ ಜಿಲ್ಲೆಯನ್ನ ಕಡೆಗಣಿಸಲ್ಲ ಅಂದುಕೊಂಡಿದ್ದೇನೆ. ಜಿಲ್ಲೆಗೆ ಸಚಿವ ಸ್ಥಾನ ಸಿಗದಿದ್ದರೆ ಮತ್ತೊಮ್ಮೆ ಕ್ರಾಂತಿ. ಕ್ರಾಂತಿಯ ಬಗ್ಗೆ ನಾನು ಹೇಳುವುದಕ್ಕೆ ಹೋಗುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಇಂದು (ಆಗಸ್ಟ್ 2) ತಿಳಿಸಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಬಳಿಕ ಸಚಿವ ಸಂಪುಟ ರಚನೆಗೆ ವಿವಿಧ ಶಾಸಕರ ಕಸರತ್ತು ಜೋರಾಗಿ ಸಾಗುತ್ತಿದೆ. ಹಲವು ಜಿಲ್ಲೆಯ ಶಾಸಕರು ತಮಗೂ ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಭೇಟಿಯಲ್ಲಿದ್ದಾರೆ. ಸಚಿವ ಸಂಪುಟ ನಿರ್ಧಾರ ಕೈಗೊಂಡೇ ಅಲ್ಲಿಂದ ಕರ್ನಾಟಕಕ್ಕೆ ವಾಪಸಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಶಾಸಕ ಯತ್ನಾಳ್ ಕೂಡ ತಮ್ಮ ಜಿಲ್ಲೆಗೆ ಸಚಿವ ಸ್ಥಾನ ಸಿಗಬೇಕು ಎಂಬ ಆಗ್ರಹ ವ್ಯಕ್ತಪಡಿಸಿದ್ದಾರೆ.
ದೆಹಲಿಗೆ ಹೋದರೆ ಸಚಿವ ಸ್ಥಾನ ಸಿಗುತ್ತೆ ಎಂಬುದು ತಪ್ಪು. ನನಗೆ ಸಚಿವ ಸ್ಥಾನದ ಬಗ್ಗೆ ಯಾವುದೇ ಸೂಚನೆ ಬಂದಿಲ್ಲ. ಕ್ಷೇತ್ರದಲ್ಲಿದ್ದು ಒಳ್ಳೆಯ ಕೆಲಸ ಮಾಡಲು ಸೂಚನೆ ಬಂದಿದೆ. ಹೀಗಾಗಿ ಕ್ಷೇತ್ರದಲ್ಲಿದ್ದು ಕೆಲಸ ಮಾಡುತ್ತಿದ್ದೇನೆ ಎಂದು ಬಸನಗೌಡ ಪಾಟೀಲ ಯತ್ನಾಳ್ ತಿಳಿಸಿದ್ದಾರೆ. ನಿನ್ನೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ವಿಚಾರವಾಗಿಯೂ ಅವರು ಪ್ರತಿಕ್ರಿಯಿಸಿದ್ದಾರೆ.
ಈಶ್ವರಪ್ಪ, ನಾವೆಲ್ಲರೂ ಒಟ್ಟಾಗಿ ಪಕ್ಷ ಕಟ್ಟೋಣ ಎಂದು ಹೇಳಿದ್ದಾರೆ. ಮುಂದೆ ಬಿಜೆಪಿ ಸರ್ಕಾರ ತರಬೇಕು ಎಂದು ಹೇಳಿದ್ದಾರೆ. ನನಗೆ ವಯಸ್ಸಾಗಿದೆ, ನಿಮಗೆ ಭವಿಷ್ಯ ಇದೆ ಎಂದಿದ್ದಾರೆ. 2023ಕ್ಕೆ ನನಗೆ 74 ವರ್ಷ ವಯಸ್ಸಾಗುತ್ತೆ ಎಂದು ಹೇಳಿದ್ದಾರೆ. ಬಿಜೆಪಿಯಲ್ಲಿ ಎಲ್ಲರಿಗೂ ಒಂದೇ ಕಾನೂನು ಇರುತ್ತದೆ. ಪಕ್ಷದ ಋಣ ತೀರಿಸಲು ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಹೇಳಿದ್ದಾರೆ. ಕೆ.ಎಸ್.ಈಶ್ವರಪ್ಪ ನನಗೆ ಬುದ್ಧಿ ಮಾತುಗಳನ್ನು ಹೇಳಿದ್ದಾರೆ. ಪಕ್ಷಕ್ಕೆ ಹಾನಿ ಆಗದಂತೆ ನೋಡಿಕೊಳ್ಳೋಣ ಎಂದಿದ್ದಾರೆ. ಪಕ್ಷದ ನಿಷ್ಠಾವಂತರಲ್ಲೇ ಸೇರಿ ಕೆಲಸ ಮಾಡೋಣ ಎಂದಿದ್ದಾರೆ ಎಂದು ವಿಜಯಪುರ ನಗರದಲ್ಲಿ ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆ ನೀಡಿದ್ಧಾರೆ.
ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ಸಚಿವನಾಗಲ್ಲ ಎಂದು ಹೇಳಿದ್ದೆ. ನಾನು ಹೇಳಿದಂತೆಯೇ ನಡೆದುಕೊಂಡಿದ್ದೇನೆ. ನಾನು ಎರಡು ಮೂರು ಸಂಕಲ್ಪ ಮಾಡಿದ್ದೆ, ಅದೆಲ್ಲಾ ಈಡೇರಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ ನೀಡಿದ್ದಾರೆ. ದೆಹಲಿಗೆ ಹೋದಾಗ ನಾನು ಎಂದೂ ನನ್ನ ಬಗ್ಗೆ ಹೇಳಿಲ್ಲ. ಪಕ್ಷದ ಹಿತದೃಷ್ಟಿಯಿಂದ ಮಾತ್ರ ನಾನು ಮಾತಾಡಿದ್ದೇನೆ. ಸಂಪುಟ ರಚನೆಯಲ್ಲಿ ವಿಜಯಪುರ ಜಿಲ್ಲೆಯನ್ನ ಕಡೆಗಣಿಸಲ್ಲ ಎಂಬ ವಿಶ್ವಾಸವಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ನಾವೆಲ್ಲರೂ ಶೇ 100ರಷ್ಟು ಒಪ್ಪಿದ್ದೇವೆ: ಶಾಸಕ ಯತ್ನಾಳ್
ಬಿ.ಎಸ್. ಯಡಿಯೂರಪ್ಪ ನನಗೆ ಸಿಎಂ ಸ್ಥಾನವನ್ನು ತಪ್ಪಿಸಿದರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್!
(Basanagouda Patil Yatnal on BJP Politics Karnataka Govt Cabinet KS Eshwarappa BS Yediyurappa Basavaraj Bommai)