ಸಂಪುಟ ರಚನೆಗೆ ಸಿಕ್ತಾ ಗ್ರೀನ್ ಸಿಗ್ನಲ್? ದೆಹಲಿಯಿಂದ ಸಿಎಂ ಹೊತ್ತು ತರುವ ಹೊಸ ಸಚಿವರ ಲಿಸ್ಟ್​ನಲ್ಲಿ ಯಾರಿದ್ದಾರೆ ?

ಸಂಪುಟ ರಚನೆಗೆ ಸಿಕ್ತಾ ಗ್ರೀನ್ ಸಿಗ್ನಲ್? ದೆಹಲಿಯಿಂದ ಸಿಎಂ ಹೊತ್ತು ತರುವ ಹೊಸ ಸಚಿವರ ಲಿಸ್ಟ್​ನಲ್ಲಿ ಯಾರಿದ್ದಾರೆ ?
ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)

Basavaraj Bommai Cabinet: ಮೊನ್ನೆಯಷ್ಟೇ(ಜುಲೈ 31) ದೆಹಲಿಗೆ ತೆರಳಿ ವಾಪಸ್ ಬಂದಿದ್ದ ಸಿಎಂ ನಿನ್ನೆ(ಆಗಸ್ಟ್ 1) ಮತ್ತೆ ದೆಹಲಿಗೆ ಹಾರಿದ್ದಾರೆ. ಸಚಿವ ಸಂಪುಟ ರಚನೆ ಫೈನಲ್ ಮಾಡೋಕೆ ಅಂತಾನೇ ವರಿಷ್ಠರನ್ನ ಭೇಟಿಯಾಗಿದ್ದಾರೆ.

TV9kannada Web Team

| Edited By: Ayesha Banu

Aug 02, 2021 | 7:19 AM

ದೆಹಲಿ: ಕಳೆದ ಐದು ದಿನಗಳಿಂದ ಕ್ಷಣ ಕ್ಷಣಕ್ಕೂ ಕುತೂಹಲ.. ಪ್ರತಿದಿನವೂ ಹೊಸ ಹೊಸ ಬೆಳವಣಿಗೆಗಳಿಗೆ ಕಾರಣವಾಗಿದ್ದ ಸಂಪುಟ(Cabinet) ಸರ್ಕಸ್ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಬಿಎಸ್ವೈ ರಾಜೀನಾಮೆ ಬಳಿಕ ಬಿಜೆಪಿ ಸರ್ಕಾರದ ಇಂಜಿನ್ ಆಗಿ ನೇಮಕವಾಗಿರೋ ಬಸವರಾಜ ಬೊಮ್ಮಾಯಿ(CM Basavaraj Bommai) ಇಷ್ಟು ದಿನ ಏಕಾಂಗಿಯಾಗಿದ್ರು. ಈಗ ನೂತನ ಸಚಿವ ಸಂಪುಟದ ಮೂಲಕ ಆಡಳಿತ ಯಂತ್ರದ ಇಂಜಿನ್ ಸ್ಟಾರ್ಟ್ ಆಗಲಿದೆ. ಬೊಮ್ಮಾಯಿ ಸಿಎಂ ಆಗಿ ಐದು ದಿನಗಳ ಬಳಿಕ, ಅಂದ್ರೆ ಆಗಸ್ಟ್ 1 ರಂದು ಕುತೂಹಲ ಕ್ಲೈಮ್ಯಾಕ್ಸ್ಗೆ ತಲುಪಿದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಲ್ಲಿಗೆ(Delhi) ಹಾರಿದ್ದಾರೆ.

ನಿನ್ನೆ ಸಂಜೆಯೇ ದೆಹಲಿ ವಿಮಾನವೇರಿದ್ದ ಸಿಎಂ ಬೊಮ್ಮಾಯಿ, ರಾತ್ರಿ 9 ಗಂಟೆಯಷ್ಟರಲ್ಲಿ ರಾಜಧಾನಿಗೆ ಬಂದಿಳಿದಿದ್ದಾರೆ. ಆದ್ರೆ ಏರ್ಪೋರ್ಟ್ನಿಂದ ಕರ್ನಾಟಕ ಭವನಕ್ಕೆ ಬರ್ಬೇಕಿದ್ದ ಸಿಎಂ, ನೇರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿವಾಸಕ್ಕೆ ತೆರಳಿದ್ದಾರೆ. ಸಿಎಂ‌ ಬೊಮ್ಮಾಯಿಯವರಿಗೆ ಏರ್ಪೋರ್ಟ್ನಿಂದಲೇ ಸಾಥ್ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬೊಮ್ಮಾಯಿಯವರನ್ನು ತಮ್ಮ ನಿವಾಸಕ್ಕೆ‌ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಸುದೀರ್ಘ ಸಭೆ ನಡೆಸಿದ ಸಿ‌ಎಂ ಅಜ್ಞಾತ ಸ್ಥಳಕ್ಕೆ‌ ತೆರಳಿದ್ರು.

ಸಚಿವರ ಮನೆಗೆ ಎಂಟ್ರಿ ಸಿಗದೆ ಶಾಸಕ ಬೆಲ್ಲದ್ ವಾಪಸ್! ಮುಖ್ಯಮಂತ್ರಿ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಡುವೆ ಮೀಟಿಂಗ್ ನಡೆಯುತ್ತಿರುವಾಗಲೇ ಸಚಿವಾಕಾಂಕ್ಷಿ ಅರವಿಂದ ಬೆಲ್ಲದ್, ಪ್ರಹ್ಲಾದ್‌ ಜೋಶಿ ನಿವಾಸಕ್ಕೆ‌ ಬಂದಿದ್ದಾರೆ. ಶಾಸಕ ಅರವಿಂದ ಬೆಲ್ಲದ್‌, ಜೋಶಿ ನಿವಾಸದ ಗೇಟ್ ಬಳಿ ಬರ್ತಿದ್ದಂತೆ ಭದ್ರತಾ ಸಿಬ್ಬಂದಿ ಸರ್ ಮನೆಯಲ್ಲಿ ಇಲ್ಲ ಅಂದಿದ್ದಾರೆ. ಹೀಗಾಗಿ ಅರವಿಂದ ಬೆಲ್ಲದ್ ಬಂದ ದಾರಿಯಲ್ಲೇ ವಾಪಾಸ್ ತೆರಳಿದ್ದಾರೆ. ಅಂದಹಾಗೆ ಕಳೆದ ಕೆಲವು ದಿನಗಳಿಂದ‌‌ ದೆಹಲಿಯಲ್ಲಿಯೇ ಬೀಡು ಬಿಟ್ಟಿರೋ ಶಾಸಕ ಅರವಿಂದ ಬೆಲ್ಲದ್‌ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ.

ಇರೋ ಮೂರು ಲಿಸ್ಟ್ ಪೈಕಿ ಯಾವುದು ಆಗುತ್ತೆ ಫೈನಲ್? ಕ್ಯಾಬಿನೆಟ್ ರಚನೆ ವಿಚಾರವಾಗಿ ಹೈಕಮಾಂಡ್ ಆದೇಶ ಎದುರು ನೋಡ್ತಿದ್ದ ಸಿಎಂ ಬೊಮ್ಮಾಯಿ, ನಿನ್ನೆ ಬೆಳಗ್ಗೆ ಬಿಎಸ್ವೈ ಭೇಟಿಯಾಗಿ ಸಮಾಲೋಚನೆ ಮಾಡಿದ್ದಾರೆ. ಬೆಳಗ್ಗೆ ದಿಢೀರ್ ಅಂತಾ ಬಿಎಸ್ವೈ ಭೇಟಿಯಾಗಿದ್ದ ಬೊಮ್ಮಾಯಿ ಸಂಜೆಯಾಗ್ತಿದ್ದಂತೆ ದೆಹಲಿ ಫ್ಲೈಟ್ ಹತ್ತಿದ್ದಾರೆ. ಹೀಗಾಗಿ ಸಚಿವ ಸಂಪುಟ ರಚನೆಯಲ್ಲಿ ಬಿಎಸ್ವೈ ಪ್ರಭಾವ ಇದ್ದೇ ಇರುತ್ತೆ ಅನ್ನೋದಕ್ಕೆ ಈ ಭೇಟಿ ಸಾಕ್ಷಿಯಾಗಿದೆ. ಮತ್ತೊಂದೆಡೆ ಸಂಪುಟ ರಚನೆ ವಿಚಾರದಲ್ಲಿ ಹೈಕಮಾಂಡ್ ಲೆಕ್ಕಾಚಾರವೇ ಬೇರೆ ಇದೆ ಎನ್ನಲಾಗಿದೆ. ಹೀಗಾಗಿ ಅಂತಿಮವಾಗಿ ಸಿಎಂ ಬೊಮ್ಮಾಯಿ, ಬಿಎಸ್ವೈ ಹಾಗೂ ಹೈಕಮಾಂಡ್ ಲಿಸ್ಟ್ನಲ್ಲಿರೋ ಹೆಸರುಗಳನ್ನೇ ಅಳೆದು ತೂಗಿ ಫೈನಲ್ ಲಿಸ್ಟ್ ರೆಡಿಯಾಗಲಿದೆ.

ಬೊಮ್ಮಾಯಿ ಲಿಸ್ಟ್ನಲ್ಲಿ ಯಾಱರು? ಅಸಲಿಗೆ ಸದ್ಯದ ಮಟ್ಟಿಗೆ ಸಿಎಂ ಬೊಮ್ಮಾಯಿ ಕೋಟಾ ಅಂದ್ರೆ ಬಿಎಸ್ವೈ ಕೋಟಾ ಅನ್ನೋ ಮಾತುಗಳು ಕೇಳಿ ಬರ್ತಿವೆ. ಹೀಗಾಗಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಎಂ.ಪಿ. ಕುಮಾರಸ್ವಾಮಿ, ಬಸವರಾಜ ದಡೇಸಗೂರು, ಆರಗ ಜ್ಞಾನೇಂದ್ರ, ತಿಪ್ಪಾರೆಡ್ಡಿ, ಸುಭಾಷ್ ಗುತ್ತೇದಾರ್, ಮಾಡಾಳ್ ವಿರೂಪಾಕ್ಷಪ್ಪಗೆ ಪಟ್ಟ ಸಿಗುತ್ತಾ ಅನ್ನೋ ಪ್ರಶ್ನೆ ಎದ್ದಿದೆ. ಅಷ್ಟೇ ಅಲ್ಲ ಬಿಎಸ್ವೈರನ್ನ ನಂಬಿ ಬಂದಿದ್ದ ‘ಬಾಂಬೆ ಫ್ರೆಂಡ್ಸ್’ ಅಂದ್ರೆ ವಲಸಿಗರಿಗೂ ಮಂತ್ರಿಭಾಗ್ಯ ಒಲಿಯುತ್ತಾ ಅನ್ನೋ ಅನುಮಾನ ಇದೆ.

ದೆಹಲಿ ತಲುಪಿದ ಬಳಿಕ ಬಿಎಸ್ವೈ ಕೊಟ್ಟ ಲಿಸ್ಟ್ ಚೇಂಜ್? ಸದ್ಯ ಬಿಎಸ್ವೈ ಕೋಟಾನೇ ಸಿಎಂ ಬೊಮ್ಮಾಯಿ ಕೋಟಾ ಅನ್ನೋ ಮಾತುಗಳು ಇವೆ. ಹಾಗೊಂದು ವೇಳೆ ಆದ್ರೆ, ನೂತನ ಸಂಪುಟದಲ್ಲಿ ಬೊಮ್ಮಾಯಿಯವರಿಗೆ ಹೆಚ್ಚಿನ ಆಯ್ಕೆಯ ಅವಕಾಶ ಇರಲ್ಲ. ಹಾಗಿದ್ದರೂ ಬೊಮ್ಮಾಯಿ ಬಿಎಸ್ವೈ ಕೋಟಾ ಹೊರತುಪಡಿಸಿ ಬೇರೆಯವರ ಹೆಸರನ್ನ ಹೈಕಮಾಂಡ್ ಮುಂದೆ ಪ್ರಸ್ತಾಪಿಸ್ತಾರಾ ಅನ್ನೋದು ಈಗಿರೋ ಕುತೂಹಲ.

ಇತ್ತ ಬಿಎಸ್ವೈ ಹಾಗೂ ಸಿಎಂ ಬೊಮ್ಮಾಯಿ ನೂತನ ಸಚಿವರ ಲಿಸ್ಟ್ ಮಾಡಿಕೊಂಡು ಹೈಕಮಾಂಡ್ ಮುಂದಿಟ್ಟರೂ, ವರಿಷ್ಠರ ಲೆಕ್ಕಾಚಾರವೇ ಬೇರೆ ಇರಬಹುದು. ಹೈಕಮಾಂಡ್ ಕೂಡಾ ನೂತನ ಸಚಿವರ ಲಿಸ್ಟ್ ಮಾಡಿಟ್ಟುಕೊಂಡಿರಬಹುದು.

ಯಾರ ಮೇಲೆ ‘ಹೈ’ ಕೃಪೆ? ಅಂದಹಾಗೆ ಸಂಪುಟ ರಚನೆಗೆ ಹೈಕಮಾಂಡ್ನಿಂದಲೂ ಪಟ್ಟಿ ರೆಡಿಯಾಗಿದೆ ಎನ್ನಲಾಗಿದ್ದು, ಆ ಪಟ್ಟಿಯಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್, ಕೃಷ್ಣರಾಜ ಕೇತ್ರದ ರಾಮದಾಸ್ ಹಾಗೂ ತಿಪಟೂರು ಕ್ಷೇತ್ರದ ಶಾಸಕ ಬಿ.ಸಿ.ನಾಗೇಶ್ ಸಹ ಇದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ, ಆರಗ ಜ್ಞಾನೇಂದ್ರ, ಅಭಯ್ ಪಾಟೀಲ್, ಸಿದ್ದು ಸವದಿ, ವೀರಣ್ಣ ಚರಂತಿ ಮಠ, ಹಾಲಪ್ಪ ಆಚಾರ್ ಸಹ ಹೈಕಮಾಂಡ್ ಪಟ್ಟಿಯಲ್ಲಿ ಇರಬಹುದು ಎನ್ನಲಾಗಿದೆ. ಇನ್ನು ದತ್ತಾತ್ರೇಯ ಪಾಟೀಲ್ ರೇವೂರ ಹೆಸರು ‘ಹೈ’ ಪಟ್ಟಿಯಲ್ಲಿ ಇರೋದು ಪಕ್ಕಾ ಅಂತಾ ಹೇಳಲಾಗ್ತಿದೆ.

ನೂತನ ಸಂಪುಟದಲ್ಲಿ ಹಿರಿತಲೆಗಳ ಕತೆ ಏನು? ನೂತನ ಸಂಪುಟ ರಚನೆ ವೇಳೆ ಹಿರಿಯ ಶಾಸಕರಿಗೆ ಕೊಕ್ ಕೊಡೋ ಸಾಧ್ಯತೆ ಬಗ್ಗೆ ಕಮಲ ಪಾಳಯದಲ್ಲಿ ಚರ್ಚೆಯಾಗ್ತಿದೆ. ಹಾಗಂತಾ ಹಿರಿಯರನ್ನ ಕೈ ಬಿಡುವ ಹಾಗಿಲ್ಲ, ವಲಸಿಗರಿಗೆ ಕೊಕ್ ಕೊಡುವಂತಿಲ್ಲ. ಯುವಕರಿಗೂ ಅವಕಾಶ ಕೊಡಬೇಕು. ಪ್ರಾದೇಶಿಕ ಅಸಮಾನತೆಯನ್ನ ಸರಿದೂಗಿಸಬೇಕು. ಅಷ್ಟೇ ಅಲ್ಲ ಸಮುದಾಯವಾರು ನ್ಯಾಯ ಒದಗಿಸಬೇಕು. ಈ ಎಲ್ಲ ಸವಾಲುಗಳು ಇರೋದ್ರಿಂದ ಕ್ಯಾಬಿನೆಟ್ ರಚನೆಯಲ್ಲಿ ಕೇವಲ ಬೊಮ್ಮಾಯಿ ಒಬ್ಬರೇ ನಿರ್ಧಾರ ಕೈಗೊಳ್ಳುವಂಥಾ ವಾತಾವರಣ ಸದ್ಯಕ್ಕಿಲ್ಲ.

ಒಟ್ನಲ್ಲಿ ನೂತನ ಸಚಿವರ ಪಟ್ಟಿ ಫೈನಲ್ ಮಾಡೋಕೆ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ಆಗಮಿಸಿದ್ದಾರೆ. ಆದ್ರೆ ಸಿಎಂ ಕೊಡೋ ಪಟ್ಟಿ ಫೈನಲ್ ಆಗುತ್ತಾ. ಹೈಕಮಾಂಡ್ ಹೊಸ ಪಟ್ಟಿ ಕೊಡುತ್ತಾ..? ಒಂದೇ ಹಂತದಲ್ಲಿ ಸಂಪುಟ ರಚನೆಯಾಗುತ್ತಾ ಅಥವಾ ಎರಡನೇ ಹಂತಕ್ಕೂ ಹೋಗುತ್ತಾ ಅನ್ನೋದು ಹೈ ಲೆವೆಲ್ ಮೀಟಿಂಗ್ ಬಳಿಕ ನಿರ್ಧಾರವಾಗಲಿದೆ.

ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ನಾವೆಲ್ಲರೂ ಶೇ 100ರಷ್ಟು ಒಪ್ಪಿದ್ದೇವೆ: ಶಾಸಕ ಯತ್ನಾಳ್

Follow us on

Related Stories

Most Read Stories

Click on your DTH Provider to Add TV9 Kannada