ಬಿಜೆಪಿ ಅಧಿಕಾರಕ್ಕೆ ಬಂದಿರೋದು ಕೇವಲ ವೀರಶೈವ ಲಿಂಗಾಯತ ಮತದಿಂದ ಅಲ್ಲ, ಸಂಕುಚಿತ ಮನೋಭಾವ ಬೇಡ – ಯತ್ನಾಳ್

| Updated By: Skanda

Updated on: Jul 25, 2021 | 9:30 AM

ಸಂಕುಚಿತ ಭಾವನೆಯಿಂದ ರಾಜ್ಯದಲ್ಲಿ ಕೆಲ ವೀರಶೈವ-ಲಿಂಗಾಯತ ಸ್ವಾಮಿಜಿಗಳಿಂದ ನಡೆಯುತ್ತಿರುವ ವ್ಯಕ್ತಿ ಕೇಂದ್ರಿಕೃತ ಹೋರಾಟ ಎಲ್ಲ ಜಾತಿಯ ಸ್ವಾಮೀಜಿಗಳನ್ನು ಹೊಡೆದೆಬ್ಬಿಸುವಂತಿದೆ. ಸಮಾಜಕ್ಕೆ ಕೆಟ್ಟ ಹೆಸರು ತರುವಂತಿದೆ. ಇದು ಹಿಂದೂ ಸಮಾಜವನ್ನು ಒಡೆಯುವಂತಿದೆ.

ಬಿಜೆಪಿ ಅಧಿಕಾರಕ್ಕೆ ಬಂದಿರೋದು ಕೇವಲ ವೀರಶೈವ ಲಿಂಗಾಯತ ಮತದಿಂದ ಅಲ್ಲ, ಸಂಕುಚಿತ ಮನೋಭಾವ ಬೇಡ - ಯತ್ನಾಳ್
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
Follow us on

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿನ ಬೆಳವಣಿಗೆಗಳು ಕೇವಲ ರಾಜಕೀಯ ವಲಯದಲ್ಲಿ ಮಾತ್ರವಲ್ಲದೇ ಜಾತಿ, ಧರ್ಮ, ಸಮುದಾಯಗಳ ನಡುವೆಯೂ ಸಂಚಲನ ಮೂಡಿಸಿದೆ. ಮುಖ್ಯಮಂತ್ರಿ ಗಾದಿಯಿಂದ ಬಿ.ಎಸ್.ಯಡಿಯೂರಪ್ಪ (B.S Yediyurappa) ನಿರ್ಗಮಿಸಬಾರದು ಎಂದು ವೀರಶೈವ-ಲಿಂಗಾಯತ ಸಮುದಾಯದ ಮಠಾಧೀಶರು (Religious Leaders) ಪಟ್ಟು ಹಿಡಿದಿದ್ದಾರೆ. ಆದರೆ ಅದಕ್ಕೆ ಫೇಸ್​ಬುಕ್​ ಪೋಸ್ಟ್ (Facebook Post) ಮೂಲಕ ತಿರುಗೇಟು ನೀಡಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal), ರಾಜಕೀಯದಲ್ಲಿ ಧರ್ಮವಿರಬೇಕು. ಧರ್ಮದಲ್ಲಿ ಎಂದೂ ರಾಜಕೀಯ ಬೆರೆಸಬಾರದು. ಸ್ವಾಮೀಜಿಗಳ ಹೋರಾಟ ಸಮಾಜಕ್ಕೆ ಕೆಟ್ಟ ಹೆಸರು ತರುವಂತಿದೆ. ಸ್ವಾಮೀಜಿಗಳ ಹೋರಾಟ ಹಿಂದೂ ಸಮಾಜವನ್ನ (Hindu) ಒಡೆಯುವಂತಿದೆ. ಆದ್ದರಿಂದ ಸಮಾಜದ ಸ್ವಾಮೀಜಿಗಳು ಎಲ್ಲವನ್ನೂ ಅರ್ಥೈಸಿಕೊಳ್ಳಿ ಎಂದು ಹೇಳಿದ್ದಾರೆ.

ರಾಜಕೀಯದಲ್ಲಿ ಧರ್ಮವಿರಬೇಕು. ಧರ್ಮದಲ್ಲಿ ಎಂದೂ ರಾಜಕೀಯ ಬೆರೆಸಬಾರದು ಎಂಬ ತತ್ವದಡಿ, ಯಾವುದೇ ಮಠ-ಮಾನ್ಯಗಳ ಮಠಾಧೀಶರನ್ನು ನೇಮಿಸುವಾಗ ರಾಜಕೀಯ ಪ್ರವೇಶಿಸಬಾರದು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕೆಲವೇ ಕೆಲವು ವೀರಶೈವ-ಲಿಂಗಾಯತ ಮಠಾಧೀಶರು ವ್ಯಕ್ತಿಯೊಬ್ಬರ ಪರವಾಗಿ ಬೀದಿಗೆ ಬಂದು ಲಾಬಿ ಮಾಡುವುದರಿಂದ, ರಾಜ್ಯದ ವಿವಿಧ ಸಮುದಾಯದವರು ಆ ಸಮುದಾಯದ ಮಠಾಧೀಶರ ಮೇಲೆ ವ್ಯತಿರಿಕ್ತ ಪರಿಣಾಮವಾಗಿ, ರಾಜಕೀಯ ಸಂಚಲನ ಉಂಟುಮಾಡುತ್ತದೆ. ಇದರಿಂದ ನಮ್ಮ ಸಮಾಜಕ್ಕೆ ಕಳಂಕ ಬರುತ್ತದೆ. ಹಿಂದೆ ಎಲ್ಲ ಜಾತಿಯ ಮಠಾಧೀಶರು, ದಾಸರು, ಶರಣರು, ಸಂತರು ಸಮಾನತೆಯನ್ನು ಪರಿಪಾಲಿಸುತ್ತಾ ಬಂದಿದ್ದರು. ಅಲ್ಲದೇ ಸಂಕುಚಿತ ಮನೋಭಾನೆಯಿಂದ ಬದುಕಿಲ್ಲ, ಬದುಕಲಿಲ್ಲ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಧರ್ಮದ ಎಲ್ಲಾ ಜಾತಿಯ ಜನರ ಆಶೀರ್ವಾದ, ಸಹಕಾರ, ಬೆಂಬಲದಿಂದ, ಹಿಂದುತ್ವದ ಆಧಾರದ ಮೇಲೆ ಬಿಜೆಪಿ ಸರ್ಕಾರ ರಚನೆಯಾಗಿದೆಯೇ ಹೊರತು ಕೇವಲ ವೀರಶೈವ ಲಿಂಗಾಯತ ಮತದಿಂದಲ್ಲ ಎಂಬ ಅರಿವು ನಮಗಿರಬೇಕು. ದೇಶದ ಪ್ರಧಾನ ಮಂತ್ರಿಗಳು, ಕೇಂದ್ರದ ನಾಯಕರುಗಳು, ದೇಶದ ಅಥವಾ ರಾಜ್ಯದ ಹಿತದೃಷ್ಟಿಯಿಂದ ಪಕ್ಷಕ್ಕೆ ಮತ್ತು ರಾಜ್ಯಕ್ಕೆ ಒಳ್ಳೆಯದಾಗುವ ನಿಟ್ಟಿನಲ್ಲಿ ಸಮರ್ಥವಾದ, ಸೂಕ್ತವಾದ ನಿರ್ಣಯ ಕೈಗೊಳ್ಳುತ್ತಾರೆ ಎಂಬ ನಂಬಿಕೆ ಇರಬೇಕು. ಅವರ ಮೇಲೆ ನಂಬಿಕೆ ಇಡದೇ, ವಿಶ್ವಾಸವಿಡದೇ, ಲಾಬಿ ಮಾಡಿ, ಒತ್ತಡ ತಂತ್ರ ರೂಪಿಸುವುದು, ಧರ್ಮಗುರುಗಳ ಕೆಲಸವಲ್ಲ. ಇದರಿಂದ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತದೆ. ದೇಶದಲ್ಲಿ ಸ್ವಾಮೀಜಿಗಳ, ಸಂತರ, ಶರಣರ, ಸೇನಾನಿಗಳ, ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ, ಮತಾಂಧರ ಹಾವಳಿ ಹೆಚ್ಚಾದಾಗ, ಮಠ-ದೇವಸ್ಥಾನಗಳಿಗೆ ಧಕ್ಕೆಯಾದಾಗ, ಸಮಸ್ತ ಹಿಂದೂಗಳ ಪರವಾಗಿ ಹೋರಾಟಕ್ಕೆ ಇಳಿಯಬೇಕು ಹೊರತು ಈ ರೀತಿ ಒಬ್ಬ ವ್ಯಕ್ತಿಗಾಗಿ ಅಲ್ಲ ಎಂದು ಕಿಡಿಕಾರಿದ್ದಾರೆ.

ಸಂಕುಚಿತ ಭಾವನೆಯಿಂದ ರಾಜ್ಯದಲ್ಲಿ ಕೆಲ ವೀರಶೈವ-ಲಿಂಗಾಯತ ಸ್ವಾಮಿಜಿಗಳಿಂದ ನಡೆಯುತ್ತಿರುವ ವ್ಯಕ್ತಿ ಕೇಂದ್ರಿಕೃತ ಹೋರಾಟ ಎಲ್ಲ ಜಾತಿಯ ಸ್ವಾಮೀಜಿಗಳನ್ನು ಹೊಡೆದೆಬ್ಬಿಸುವಂತಿದೆ. ಸಮಾಜಕ್ಕೆ ಕೆಟ್ಟ ಹೆಸರು ತರುವಂತಿದೆ. ಇದು ಹಿಂದೂ ಸಮಾಜವನ್ನು ಒಡೆಯುವಂತಿದೆ. ಆದ್ದರಿಂದ ಸಮಾಜದ ಸ್ವಾಮೀಜಿಗಳು ಎಲ್ಲವನ್ನು ಅರ್ಥೈಸಿಕೊಂಡು, ಉದಾತ್ತ ಮನಸ್ಸಿನಿಂದ ಸಮಾಜಕ್ಕೆ ಮುಜುಗರವಾಗದ ರೀತಿಯಲ್ಲಿ ವೀರಶೈವ-ಲಿಂಗಾಯತ ಸಮಾಜದ ಘನತೆಯನ್ನು ಎತ್ತಿ ಹಿಡಿದು, ನಾವೇನಿದ್ದರೂ ಹಿಂದೂಗಳು ಎಂಬ ಭಾವನೆಯ ಜೊತೆಗೆ, ರಾಜಕೀಯ ಮತ್ತು ಧರ್ಮದ ಅರಿವಿನೊಂದಿಗೆ ರಾಜ್ಯದ ಹಿತಕ್ಕೆ ಬಧ್ಧರಾಗಿ ಬದುಕೋಣ ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:
250ಕ್ಕೂ ಹೆಚ್ಚು ಸ್ವಾಮೀಜಿಗಳಿಂದ ಮುಖ್ಯಮಂತ್ರಿ ನಿವಾಸದಲ್ಲಿ ಯಡಿಯೂರಪ್ಪ ಭೇಟಿ 

ನನ್ನನ್ನು ಬಿಜೆಪಿಯಿಂದ ಉಚ್ಛಾಟಿಸಲು ಸಾಧ್ಯವಿಲ್ಲ; ನನ್ನ ಹಿಂದೆ ಹಿಂದೂ ಧರ್ಮ‌ ಮತ್ತು ನನ್ನ ಸಮಾಜದ ಶಕ್ತಿ ಇದೆ: ಬಸನಗೌಡ ಪಾಟೀಲ ಯತ್ನಾಳ್

(Basanagouda Patil Yatnal slams religious leaders for supporting BS Yediyurappa in the name of religion)