ಬಸನಗೌಡ ಪಾಟೀಲ್ ಯತ್ನಾಳ್ ಅಸಮಾಧಾನ ಸ್ಫೋಟ: ವಿಜಯೇಂದ್ರ ನನ್ನ ಮನೆಗೆ ಕಾಲಿಡುವುದೂ ಬೇಡ ಎಂದ ಬಿಜೆಪಿ ಶಾಸಕ

ವಿಜಯೇಂದ್ರ ನೇಮಕಕ್ಕೆ ನಾನು ಯಾವುದೇ ಪ್ರತಿಕ್ರಿಯೆ ಕೊಡಲ್ಲ. ಹೈಕಮಾಂಡ್​ ವೀಕ್ಷಕರ ಬಳಿ ಹೊಂದಾಣಿಕೆ ರಾಜಕಾರಣದ ಬಗ್ಗೆ ಹೇಳಿದ್ದೇನೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗಿಯಾಗಿ ನನ್ನ ಅಭಿಪ್ರಾಯ ಹೇಳುತ್ತೇನೆ. ವಿಧಾನಸಭೆ ವಿಪಕ್ಷ ನಾಯಕ ಸ್ಥಾನ ಉತ್ತರ ಕರ್ನಾಟಕಕ್ಕೆ ಕೊಡಬೇಕು. ಅದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಯತ್ನಾಳ್ ಹೇಳಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್ ಅಸಮಾಧಾನ ಸ್ಫೋಟ: ವಿಜಯೇಂದ್ರ ನನ್ನ ಮನೆಗೆ ಕಾಲಿಡುವುದೂ ಬೇಡ ಎಂದ ಬಿಜೆಪಿ ಶಾಸಕ
ಬಸನಗೌಡ ಪಾಟೀಲ್ ಯತ್ನಾಳ್
Follow us
| Updated By: ಗಣಪತಿ ಶರ್ಮ

Updated on:Nov 17, 2023 | 2:50 PM

ಬೆಂಗಳೂರು, ನವೆಂಬರ್ 17: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಬಿವೈ ವಿಜಯೇಂದ್ರ (BY Vijayendra) ನೇಮಕಕ್ಕೆ ಈವರೆಗೆ ಒಳಗೊಳಗೇ ಅಸಮಾಧಾನ ವ್ಯಕ್ತಪಡಿಸಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಇದೀಗ ಆಕ್ರೋಶ ಹೊರಹಾಕಿದ್ದಾರೆ. ವಿಜಯೇಂದ್ರ ಅವರು ತಮ್ಮನ್ನು ಮಾತನಾಡಿಸಲು ಬರುವ ಅಗತ್ಯವಿಲ್ಲ. ಅವರು ತಮ್ಮ ಮನೆಗೆ ಕಾಲಿಡುವುದು ಬೇಡ ಎಂದು ಯತ್ನಾಳ್ ರಾಜ್ಯ ಬಿಜೆಪಿ (BJP) ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್​ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ನಿವಾಸದಲ್ಲಿದ್ದಾಗಲೇ ಯತ್ನಾಳ್ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ವಿಜಯೇಂದ್ರ ಜೊತೆ ಮಾತನಾಡಲು ಇಚ್ಛಿಸುವುದಿಲ್ಲ. ನನ್ನ ಮನೆಗೆ ವಿಜಯೇಂದ್ರ ಬರೋದು ಬೇಡ ಎಂದು ಯತ್ನಾಳ್ ಹೇಳಿದ್ದಾರೆ. ಹೀಗಾಗಿ ಹೈಕಮಾಂಡ್ ವೀಕ್ಷಕರ ಜೊತೆ ಯತ್ನಾಳ್ ಮನೆಗೆ ವಿಜಯೇಂದ್ರ ತೆರಳಿಲ್ಲ.

ಪ್ರತಿಪಕ್ಷ ಸ್ಥಾನ ಉತ್ತರ ಕರ್ನಾಟಕಕ್ಕೇ ಬೇಕು: ಯತ್ನಾಳ್ ಪಟ್ಟು

ನಿನ್ನೆ ಒಬ್ಬ ಏಜೆಂಟ್​ ನನ್ನನ್ನು ಖರೀದಿ ಮಾಡಲು ಬಂದಿದ್ದ. ವಿಜಯೇಂದ್ರ ನೇಮಕಕ್ಕೆ ನಾನು ಯಾವುದೇ ಪ್ರತಿಕ್ರಿಯೆ ಕೊಡಲ್ಲ. ಹೈಕಮಾಂಡ್​ ವೀಕ್ಷಕರ ಬಳಿ ಹೊಂದಾಣಿಕೆ ರಾಜಕಾರಣದ ಬಗ್ಗೆ ಹೇಳಿದ್ದೇನೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗಿಯಾಗಿ ನನ್ನ ಅಭಿಪ್ರಾಯ ಹೇಳುತ್ತೇನೆ. ವಿಧಾನಸಭೆ ವಿಪಕ್ಷ ನಾಯಕ ಸ್ಥಾನ ಉತ್ತರ ಕರ್ನಾಟಕಕ್ಕೆ ಕೊಡಬೇಕು. ಅದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಯತ್ನಾಳ್ ಹೇಳಿದ್ದಾರೆ.

ಬಿಜೆಪಿಯಲ್ಲಿ ದಕ್ಷಿಣ ಕರ್ನಾಟಕದವರೇ ವಿಪಕ್ಷ ನಾಯಕರು ಆಗಬೇಕಾ? ಮಂಗಳೂರು ಬಿಟ್ಟರೆ ದಕ್ಷಿಣ ಕರ್ನಾಟಕದ ಎಷ್ಟು ಶಾಸಕರು ಇದ್ದಾರೆ? ಬಹಳಷ್ಟು ಶಾಸಕರು ನಮ್ಮ ಜೊತೆಗಿದ್ದಾರೆ, ಆದರೆ ಮಾತಾಡಲು ಧಮ್ ಇಲ್ಲ. ಬಹಳಷ್ಟು ಶಾಸಕರು ಮಕ್ಕಳನ್ನು ಲೋಕಸಭೆಗೆ ನಿಲ್ಲಿಸಬೇಕು ಅಂತಿದ್ದಾರೆ. ಉತ್ತರ ಕರ್ನಾಟಕಕ್ಕೆ ಅವಕಾಶ ಕೊಡದಿದ್ರೆ ಜನ ತೀರ್ಮಾನ ಮಾಡ್ತಾರೆ. ಆಗ ನಾವೂ ತೀರ್ಮಾನ ಮಾಡ್ತೇವೆ ಎಂದು ಶಾಸಕ ಬಸನಗೌಡ ಯತ್ನಾಳ್ ಕಿಡಿಕಾರಿದ್ದಾರೆ.

ವೀಕ್ಷಕರಿಗೆ ಎಲ್ಲ ತಿಳಿಸಿದ್ದೇನೆ: ಯತ್ನಾಳ್

ಹೈಕಮಾಂಡ್ ವೀಕ್ಷಕರನ್ನು ಭೇಟಿ ಮಾಡಿದ ಬಗ್ಗೆ ಮಾಹಿತಿ ನೀಡಿದ ಅವರು, ಚುನಾವಣೆ ವೇಳೆ ಆಗಿರುವ ಬೆಳವಣಿಗೆ ಬಗ್ಗೆ ಎಲ್ಲವನ್ನೂ ವಿವರಿಸಿದ್ದೇನೆ. ಒಂದು ವರ್ಗದ ಕೇಂದ್ರೀಕೃತವಾಗಿ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಹೈಕಮಾಂಡ್ ವೀಕ್ಷಕರಿಗೆ ರಾಜ್ಯದ ಎಷ್ಟೋ ವಿಷಯಗಳು ಗೊತ್ತಿರಲಿಲ್ಲ. ಧೈರ್ಯದಿಂದ ನಾನು ಎಲ್ಲವನ್ನೂ ಹೇಳಿದ್ದೇನೆ. ದೇಶದಲ್ಲಿ ನಾವು ಉಳಿಯಬೇಕಾದರೆ ಮೋದಿ ಮತ್ತೆ ಪ್ರಧಾನಿ ಆಗಬೇಕು. ವರಿಷ್ಠರು ಕೆಲವೇ ಚೇಲಾಗಳ ಮಾತುಕೇಳಿ ನಿರ್ಧಾರ ತೆಗೆದುಕೊಳ್ಳಬಾರದು. ಕೆಲವರು ಬ್ಲ್ಯಾಕ್​ಮೇಲ್ ಮಾಡಲು ಪ್ರಯತ್ನ ಮಾಡುತ್ತಾರೆ. ನಾನು ಭಯಪಡುವುದಿಲ್ಲ ಎಂದಿದ್ದಕ್ಕೆ ಇಬ್ಬರೂ ಬಹಳ ಖುಷಿಯಾದರು. ನೀವು ಎಲ್ಲವನ್ನೂ ಧೈರ್ಯವಾಗಿ ಹೇಳಿದ್ದೀರಿ ಅಂತಾ ವೀಕ್ಷಕರು ಹೇಳಿದರು. ಜೆಪಿ ನಡ್ಡಾ, ಪ್ರಧಾನಿಗೆ ಎಲ್ಲವನ್ನೂ ತಿಳಿಸುವುದಾಗಿ ಅವರು ಹೇಳಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ: ಶುರುವಾಯ್ತು ಯತ್ನಾಳ್, ಬೆಲ್ಲದ್ ರಾಜಕೀಯ ವರಸೆ

ಜೀ ಹುಜೂರ್ ಸಂಸ್ಕೃತಿ ನನ್ನದಲ್ಲ: ಯತ್ನಾಳ್

ಪಂಚಮಸಾಲಿ ಸಮುದಾಯವನ್ನು ಯಾವಾಗಲೂ ನಿರ್ಲಕ್ಷ್ಯ ಮಾಡಿದ್ದಾರೆ. ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಪಕ್ಷದ ಎಲ್ಲ ಹುದ್ದೆಗಳಲ್ಲಿ ದಕ್ಷಿಣ ಕರ್ನಾಟಕದವರಿಗೆ ಆದ್ಯತೆ ನೀಡಿದ್ದಾರೆ. ಸರ್.. ಸರ್.. ಅಂತಾ ಬಾಲ ಹಿಡಿದುಕೊಂಡು ಅವರ ಮನೆಗೆ ಹೋಗ್ಬೇಕಾ? ಉತ್ತರ ಕರ್ನಾಟಕಕ್ಕೆ ಕೊಡಬೇಕು ಅಂತಾ ನಾವೆಲ್ಲರೂ ಒಂದಾಗಿದ್ದೇವೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರನ್ನೂ ಭೇಟಿ ಮಾಡಿದ್ದೇವೆ. ಸಂಜೆ ವಿಪಕ್ಷ ನಾಯಕನ ಆಯ್ಕೆ ಆದ ಬಳಿಕ ಪ್ರತಿಕ್ರಿಯೆ ಕೊಡುತ್ತೇನೆ ಎಂದು ಯತ್ನಾಳ್ ಹೇಳಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:36 pm, Fri, 17 November 23