ಬೆಂಗಳೂರು: ಸರಕು ಸೇವಾ ಸುಂಕ (Goods Service Tax – GST) ಪಾವತಿಯಲ್ಲಿ ಹಲವರು ಕಳ್ಳಮಾರ್ಗ ಕಂಡುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತನಿಖೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ವಿಧಾನಸಭೆಯಲ್ಲಿ ಎರಡನೇ ಪೂರಕ ಅಂದಾಜು ವೆಚ್ಚ ವಿಧೇಯಕದ ಮೇಲಿನ ಚರ್ಚೆಗೆ ಉತ್ತರಿಸುತ್ತಾ ಆರ್ಥಿಕ ನಿರ್ವಹಣೆ ಬಗ್ಗೆ ವಿವರಣೆ ನೀಡಿದರು. ಮುದ್ರಾಂಕ ಸುಂಕ, ಮೋಟಾರ್ ವಾಹನ ಸುಂಕ ಹಾಗೂ ಅಬಕಾರಿ ಸುಂಕ ಪಾವತಿಯಲ್ಲಿ ಆಗುತ್ತಿರುವ ಸೋರಿಕೆ ತಪ್ಪಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನುಡಿದರು.
ಐದು ವರ್ಷದಿಂದ ಸಾಧಿಸಿದ್ದ ಆರ್ಥಿಕ ಪ್ರಗತಿಯು ಕೊಡಿಡ್ ಕಾರಣದಿಂದ ಮಂಕಾಗಿದೆ. ಆದಾಯ ಸೋರಿಕೆ ತಡೆಯ ಜೊತೆಗೆ ಆಡಳಿತಾತ್ಮಕ ವೆಚ್ಚಗಳನ್ನೂ ಕಡಿಮೆ ಮಾಡಿಕೊಳ್ಳುತ್ತಿದ್ದೇವೆ. ಜಿಎಸ್ಟಿ ಪರಿಹಾರವನ್ನು ಇನ್ನೂ 3 ವರ್ಷ ವಿಸ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇವೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿದಾರಿಗೆ ತರಲು ಪ್ರಯತ್ನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು.
ಚರ್ಚೆಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸರ್ಕಾರವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಆರ್ಥಿಕ ವೆಚ್ಚ ಹೆಚ್ಚಾಗುತ್ತದೆ. ವೆಚ್ಚ ನಿಭಾಯಿಸಲಾಗದೇ ಕಷ್ಟ ಆಗಬಹುದು, ಈಗಲೇ ಮುನ್ನೆಚ್ಚರಿಕೆ ತೆಗೆದುಕೊಳ್ಳಿ ಎಂದು ಸಲಹೆ ಮಾಡಿದರು. ಒಟ್ಟು ₹ 10,265 ಕೋಟಿ ಪೂರಕ ಅಂದಾಜು ವೆಚ್ಚದಲ್ಲಿ ತೋರಿಸಿದ್ದೀರಿ ಇದರಲ್ಲಿ ₹ 6.5 ಸಾವಿರ ಕೋಟಿ ಹಣ ಹೊರಗಿನ ವೆಚ್ಚಗಳಿಗೆ ಖರ್ಚು ಮಾಡುತ್ತೇವೆ ಅಂದಿದ್ದೀರಿ. ಈ ಹಣವನ್ನು ಎಲ್ಲಿಂದ ತರ್ತೀರಿ ಎಂದು ಪ್ರಶ್ನಿಸಿದರು.
ಜಿಎಸ್ಟಿ ಪರಿಹಾರ ಹಣವನ್ನೂ ನೀವು ನಂಬುವಂತಿಲ್ಲ. ಕೇಂದ್ರದ ಜಿಎಸ್ಟಿ ಪರಿಹಾರ 2022ಕ್ಕೆ ನಿಲ್ಲಿಸಿ ಬಿಡ್ತಾರೆ, ಆಗ ಏನು ಮಾಡ್ತೀರಿ? ಅಬಕಾರಿ ಸುಂಕ ಮಾತ್ರ ನಿರೀಕ್ಷೆಗೆ ತಕ್ಕಂತೆ ಬರುತ್ತಿದೆ. ಉಳಿದ ಯಾವ ಮೂಲಗಳಿಂದಲೂ ಸಮರ್ಪಕವಾದ ನಿರೀಕ್ಷಿತ ತೆರಿಗೆ ಬರುತ್ತಿಲ್ಲ. ಯಡಿಯೂರಪ್ಪ ಮಂಡಿಸಿದ ಎರಡೂ ಬಜೆಟ್ಗಳಲ್ಲೂ ಸಾಲ ಮಾಡುವುದಾಗಿ ಹೇಳಿದ್ದಾರೆ. ಒಂದು ಸಲ ₹ 70 ಸಾವಿರ ಕೋಟಿ, ಮತ್ತೊಂದು ಸಲ ₹ 72 ಸಾವಿರ ಕೋಟಿ ಸಾಲ ಮಾಡುವುದಾಗಿ ಬಜೆಟ್ನಲ್ಲಿ ತೋರಿಸಿದ್ದಾರೆ. ಸಾಲಕ್ಕೆ ಕಡಿವಾಣ ಹಾಕದಿದ್ದರೆ ರಾಜ್ಯವು ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಎಚ್ಚರಿಸಿದರು.
ಎರಡನೇ ಪೂರಕ ಅಂದಾಜು ವೆಚ್ಚ ಮಂಡನೆಗೂ ಸಿದ್ದರಾಮಯ್ಯ ಆಕ್ಷೇಪಿಸಿದರು. ನಾನು ರಾಜಕೀಯಕ್ಕಾಗಿ ಈ ಮಾತು ಹಾಕಿಲ್ಲ. ರಾಜ್ಯದ ಹಿತಾಸಕ್ತಿಯಿಂದ ಹೇಳುತ್ತಿದ್ದೇನೆ. ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಿ, ಇಲ್ಲದಿದ್ದರೆ ರಾಜ್ಯವು ಸಂಕಷ್ಟಕ್ಕೆ ಸಿಲುಕಲಿದೆ ಎಂದು ನುಡಿದರು.
ಇದನ್ನೂ ಓದಿ: ಓಂ ಬಿರ್ಲಾರಿಂದ ಜಂಟಿ ಅಧಿವೇಶನ: ಬಿಜೆಪಿಯಿಂದ ಕೆಟ್ಟ ಸಂಪ್ರದಾಯ; ಕಾರ್ಯಕ್ರಮ ಬಹಿಷ್ಕಾರಕ್ಕೆ ಕಾಂಗ್ರೆಸ್ ನಿರ್ಧಾರ
ಇದನ್ನೂ ಓದಿ: ಯಾವುದು ಇದು ಹೊಸ ಚಾಣಕ್ಯ ವಿಶ್ವವಿದ್ಯಾನಿಲಯ? ವಿರೋಧ ಪಕ್ಷ ಎತ್ತಿದ ಪ್ರಶ್ನೆಗಳಲ್ಲಿ ಎಷ್ಟು ಹುರುಳಿವೆ?
(Basavaraj Bommai Assures to take measures to improve GST Collection)
Published On - 6:51 pm, Thu, 23 September 21