ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಕೊರೊನಾ ಬಿಕ್ಕಟ್ಟು: ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್
ಮೃತರ ಕುಟುಂಬಗಳಿಗೆ ಘೋಷಣೆ ಮಾಡಿದ್ದಂತೆ ₹ 1 ಲಕ್ಷ ಪರಿಹಾರವನ್ನೂ ಕೊಟ್ಟಿಲ್ಲ ಎಂದು ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಬೆಂಗಳೂರು: ಸರ್ಕಾರವು ಕೊವಿಡ್ನಿಂದ ಮೃತಪಟ್ಟವರ ಬಗ್ಗೆ ಸರ್ಕಾರ ಸುಳ್ಳು ಲೆಕ್ಕ ನೀಡಿದೆ. ಮೃತರ ಕುಟುಂಬಗಳಿಗೆ ಘೋಷಣೆ ಮಾಡಿದ್ದಂತೆ ₹ 1 ಲಕ್ಷ ಪರಿಹಾರವನ್ನೂ ಕೊಟ್ಟಿಲ್ಲ ಎಂದು ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ನಿಯಮ 69ರ ಅಡಿಯಲ್ಲಿ ಕೊವಿಡ್ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಅಧಿಕಾರಿ ರಕ್ಷಣೆ ಮಾಡುವುದಕ್ಕಾಗಿ ಮಾನವೀಯತೆಯನ್ನೇ ಮರೆತು ವರ್ತಿಸಿದ್ದೀರಿ ಎಂದು ದೂರಿದರು.
ಕೊವಿಡ್ ಬಾಧಿತರ ಮನೆಗಳಿಗೆ ನಾನು ಹೋಗಿ ನೋಡಿದ್ದೇನೆ. ಒಂದೊಂದು ಊರಿನದ್ದೂ ಕಣ್ಣೀರ ಕಥೆಗಳು. ಇರುವುದೊಂದು ದಿನ, ಸಾಯುವುದೊಂದು ದಿನ. ಬದುಕಿನ ಮಧ್ಯೆ ಏನು ಮಾಡಿದ್ದೇವೆ ಎಂಬುದು ಮುಖ್ಯ. ದುರಂತದಲ್ಲಿ ಮೃತಪಟ್ಟ 36 ಕುಟುಂಬಗಳಿಗೆ ಮೊದಲು ಪರಿಹಾರ, ಕೆಲಸ ಕೊಡಿ. ಸರ್ಕಾರ ಯಾಕೆ ಅಧಿಕಾರಿಗಳ ರಕ್ಷಣೆ ಮಾಡುತ್ತಿದೆ? ಶಿಸ್ತುಕ್ರಮ ತೆಗೆದುಕೊಳ್ಳುವ ಮೂಲಕ ಬೇಜವಾಬ್ದಾರಿ ಅಧಿಕಾರಿಗಳಿಗೆ ಕಠಿಣ ಸಂದೇಶ ಹೋಗುವಂತೆ ಮಾಡಿ ಎಂದು ಆಗ್ರಹಿಸಿದರು.
ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ಪರಿಹಾರ ಕೊಟ್ಟಿದ್ದೇವೆ ಎಂದು ಶ್ರೀರಾಮುಲು ಹೇಳಿದಾಗ, ಪರಿಹಾರದ ಘೋಷಣೆ ಆಗಿದೆ. ಈವರೆಗೆ ಇನ್ನೂ ಕೊಟ್ಟಿಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಸ್ಪಷ್ಟನೆ ನೀಡಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ-ಕಾಂಗ್ರೆಸ್ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು. ಗದ್ದಲದ ಮಧ್ಯೆಯೇ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಶ್ರೀರಾಮುಲು ಮಾತಾಡಿದ್ದು ತಪ್ಪು. ಸಂತ್ರಸ್ತರಿಗೆ ಇನ್ನೂ ಹಣ ತಲುಪಿಲ್ಲ. ಆದರೆ ಆದೇಶ ಆಗಿದೆ. ಮೃತರ ಮನೆಮನೆಗೆ ತೆರಳಿ ಕೊವಿಡ್ ಪರಿಹಾರ ಕೊಡ್ತೇವೆ. ಇದಕ್ಕಾಗಿ ₹ 200 ಕೋಟಿ ತೆಗೆದಿಟ್ಟಿದ್ದೇವೆ. ಚಾಮರಾಜನಗರ ದುರಂತದಲ್ಲಿ ಮೃತರಿಗೆ ಹಣ ಕೊಟ್ಟಿದ್ದೇವೆ ಎಂದರು.
ಕಳಪೆ ಸ್ಯಾನಿಟೈಸರ್ ಪ್ರದರ್ಶಿಸಿದ ಸಿದ್ದರಾಮಯ್ಯ ಕೊವಿಡ್ ಪರಿಹಾರ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಸದನದಲ್ಲಿ ಕಳಪೆ ಸ್ಯಾನಿಟೈಸರ್ ಪ್ರದರ್ಶಿಸಿದರು. ಕೊವಿಡ್ ಪರಿಕರ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ. ₹ 9.66 ಕೋಟಿ ಮೌಲ್ಯದ ಕಳಪೆ ಸ್ಯಾನಿಟೈಸರ್ ಖರೀದಿಸಲಾಗಿದೆ. ಈ ಸ್ಯಾನಿಟೈಸರ್ ಕೆಲ ದಿನಗಳಲ್ಲಿ ಸ್ಯಾನಿಟೈಸರ್ ಕೊಳಚೆ ನೀರಂತೆ ಕಾಣುತ್ತೆ ಎಂದು ಸಿದ್ದರಾಮಯ್ಯ ಎರಡು ಸ್ಯಾನಿಟೈಸರ್ ಬಾಟಲ್ ಪ್ರದರ್ಶಿಸಿದರು.
ಈ ಸ್ಯಾನಿಟೈಸರ್ಗಳನ್ನು ಔಷಧ ನಿಯಂತ್ರಕರ ಮಂಡಳಿ ತಿರಸ್ಕರಿಸಿದೆ. ಆದರೆ ಸರ್ಕಾರ ಈಗಾಗಲೇ ಕಳಪೆ ಸ್ಯಾನಿಟೈಸರ್‌ಗೆ ₹ 2 ಕೋಟಿ ಪಾವತಿಸಿದೆ. ಒಂದು ಕಡೆ ಪರಿಹಾರ ನೀಡುವುದಕ್ಕೆ ದುಡ್ಡಿಲ್ಲ ಅಂತಾರೆ. ಇನ್ನೊಂದು ಕಡೆ ಇಂಥ ಸ್ಯಾನಿಟೈಸರ್ ಖರೀದಿಸುತ್ತಾರೆ. 2ನೇ ಅಲೆಯ ಕೋವಿಡ್ ನಿರ್ವಹಣೆಯಲ್ಲೂ ಹಗರಣ ನಡೆದಿದೆ. ಈ ಅಕ್ರಮದಲ್ಲಿ ಭಾಗಿ ಆದವರ ವಿರುದ್ಧ ಕ್ರಮ ಆಗಬೇಕು. ಸಚಿವ ಅಥವಾ ಅಧಿಕಾರಿ ಯಾರೇ ಅಕ್ರಮ ಎಸಗಿದ್ದರೂ ಶಿಕ್ಷೆ ಆಗಬೇಕು ಎಂದರು.
ಬ್ಲಾಕ್ ಫಂಗಸ್ ವೆರಿ ಡೇಂಜರ್ ಫಂಗಸ್ ಎಂದು ಕೊವಿಡ್ ನಂತರದ ಪರಿಣಾಮಗಳನ್ನು ವಿವರಿಸಿದ ಸಿದ್ದರಾಮಯ್ಯ, ಕೊವಿಡ್ ಅಲೆಯಲ್ಲಿ ಬಹಳಷ್ಟು ಸೋಂಕಿತರು ಆಮ್ಲಜನಕ ಸಕಾಲಕ್ಕೆ ಸಿಗದೆ ಸತ್ತು ಹೋದರು. ಚಾಮರಾಜನಗರದಲ್ಲಿ ಲೆಕ್ಕಕ್ಕೆ 30 ರೋಗಿಗಳು ಸತ್ತಿದ್ದಾರೆ, ಆದರೂ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೋಗಿಗಳು ಸತ್ತಿರಬಹುದು. ನಾನು ಮತ್ತು ಶಿವಕುಮಾರ್ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಹೋಗಿದ್ದೆವು. 6 ತಿಂಗಳ ಹಿಂದೆ ಮದುವೆಯಾಗಿದ್ದ ಒಬ್ಬ ವ್ಯಕ್ತಿಯೊಬ್ಬ ಮೃತಪಟ್ಟಿದ್ದ ಎಂದು ತಿಳಿಸಿದರು.
ಇದನ್ನೂ ಓದಿ: ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಮೈಸೂರು ಅತ್ಯಾಚಾರ ಪ್ರಕರಣ: ಸರ್ಕಾರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್
ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಭಾಗದ ನೇಮಕಾತಿಗೆ ಇರುವ ನಿರ್ಬಂಧ ತೆರವು: ಮುಖ್ಯಮಂತ್ರಿ ಭರವಸೆ
(Covid Discussion in Karnataka Assembly BJP Congress Siddaramaiah DK Shivakumar)