ಬೆಂಗಳೂರು: ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ ಇಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ. ರಾಜ್ಯಪಾಲ ಥಾವರಚಂದ್ ಗೆಹಲೋತ್ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ 30ನೇ ಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿಯಾಗಿ ಮೊದಲ ದಿನವೇ ಹೊಸ ಘೋಷಣೆಗಳನ್ನು ಮಾಡಿರುವ ಬಸವರಾಜ ಬೊಮ್ಮಾಯಿ, ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ₹1 ಸಾವಿರ ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ರೈತರ ಮಕ್ಕಳು ಕಲಿಕೆಯಿಂದ ವಂಚಿತರಾಗಬಾರದು. ಹೀಗಾಗಿ ಶಿಷ್ಯ ವೇತನ ಜಾರಿ ಮಾಡಲಾಗುವುದು ಎಂದಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದರ್ಶನ ಅಂದರೆ ಅವರ ದಿಟ್ಟ ನಿರ್ಧಾರ ಪಾಲನೆ ಮಾಡುವುದು. ಕೊವಿಡ್ ಸಂಕಷ್ಟದಲ್ಲಿ ಬಿಎಸ್‌ವೈ ದಿಟ್ಟ ನಿರ್ಧಾರ ಕೈಗೊಂಡಿದ್ದರು. ಬಿಎಸ್‌ವೈ ಕೈಗೊಂಡಿದ್ದ ಜನಪರ ಯೋಜನೆ ಜಾರಿಯಾಗುತ್ತದೆ. ‘ಬಿಎಸ್‌ವೈ ಮಾರ್ಗದರ್ಶನ ಪಾಲನೆ ಅಂದರೆ ಇದೇ’ ಎಂದು ನೂತನ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಎಜಿಯಾಗಿ ಪ್ರಭುಲಿಂಗ್ ನಾವದಗಿ ಮುಂದುವರಿಯುತ್ತಾರೆ ಎಂದು ವಿಧಾನಸೌಧದಲ್ಲಿ ನೂತನ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಹಾಲಿ ಎಜಿ ಪ್ರಭುಲಿಂಗ ನಾವದಗಿ ಬಿಎಸ್‌ವೈ ಸರ್ಕಾರದಲ್ಲಿ ನೇಮಕಗೊಂಡಿದ್ದರು ಈಗಲೂ ಅವರೇ ಅಡ್ವೊಕೆಟ್ ಜನರಲ್ ಆಗಿ ಮುಂದುವರೆಯುವುದಾಗಿ ತಿಳಿಸಿದ್ದಾರೆ.
ಪೂರ್ಣ ಪ್ರಮಾಣದಲ್ಲಿ ಸಚಿವ ಸಂಪುಟ ರಚನೆಯಾಗಿಲ್ಲ. ನಾನೊಬ್ಬನೇ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದೇನೆ. ಆದರೂ ಆಡಳಿತದಲ್ಲಿ ಯಾವುದೇ ಕೆಲಸಗಳು ನಿಲ್ಲುವುದಿಲ್ಲ. ಇಂದು ಅಧಿಕಾರಿಗಳ ಜತೆ ನಾನು ಸಭೆ ಮಾಡಿದ್ದೇನೆ. ಸಭೆಯಲ್ಲಿ ಸರ್ಕಾರದ ದಿಕ್ಸೂಚಿ ಬಗ್ಗೆ ಹೇಳಿದ್ದೇನೆ. ದಕ್ಷ, ಪ್ರಾಮಾಣಿಕ, ಜನಪರ ಆಡಳಿತ ಇರಬೇಕು. ಕಟ್ಟಕಡೆಯ ಸಮಾಜದ ಪರ ಸರ್ಕಾರ ಇರಬೇಕು. ಸರ್ಕಾರದ ಆದೇಶಗಳ ಅನುಷ್ಠಾನದಿಂದ ಅರಿವು ಮೂಡಬೇಕು. ಇತರೆ ಇಲಾಖೆಗಳ ಮಧ್ಯೆ ಸಂಬಂಧ ಚೆನ್ನಾಗಿರಬೇಕು. ಎಲ್ಲರೂ ಟೀಂ ವರ್ಕ್ ಆಗಿ ಕೆಲಸ ಮಾಡಬೇಕು. ಸಮಯಕ್ಕೆ ಸರಿಯಾಗಿ ಆದೇಶ ಅನುಷ್ಠಾನವಾಗಬೇಕು. ಯಾವುದೇ ಕೆಲಸ ತಡವಾಗದಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸಭೆಯಲ್ಲಿ ಕಟ್ಟುನಿಟ್ಟಾಗಿ ತಿಳಿಸಿದ್ದಾಗಿ ಬೊಮ್ಮಾಯಿ ಹೇಳಿದ್ದಾರೆ.
ಎಲ್ಲರೂ ಟೀಂ ವರ್ಕ್ ಆಗಿ ಕೆಲಸ ಮಾಡಬೇಕು. ನಾನು ಕೂಡ ನಿಮ್ಮ ತಂಡದ ಸದಸ್ಯ ಎಂದು ಹೇಳಿದ್ದೇನೆ. ಅಧಿಕಾರಿಗಳು ನನ್ನ ಕಚೇರಿಗೆ ಬಂದು ಸಲಹೆ ನೀಡಬಹುದು. ಸಲಹೆ ನೀಡುವುದಕ್ಕೆ ಅಧಿಕಾರಿಗಳಿಗೆ ಸ್ವತಂತ್ರವಿದೆ. ಅಧಿಕಾರಿಗಳ ಕಾರ್ಯಕ್ಷಮತೆ ಗುರುತಿಸಿ ಜವಾಬ್ದಾರಿ ನೀಡುವುದಾಗಿ ತಿಳಿಸಿದ್ದೇನೆ ಎಂದು ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ನನ್ನ ಆಡಳಿತ ‘ಜನಪರ ಇರುವ ಸ್ಟ್ಯಾಂಪ್’ ಆಗುತ್ತೆ. ಪವರ್ ಆಫ್ ಸೆಂಟರ್ ಒಬ್ಬ ವ್ಯಕ್ತಿ ಕೇಂದ್ರಿತವಲ್ಲ. ನನ್ನ ಪ್ರಕಾರ ಟೀಂ ವರ್ಕ್ ಪವರ್ ಆಫ್ ಸೆಂಟರ್. ನಾಳೆ ಕಾರವಾರಕ್ಕೆ ಹೋಗಿ ಸಮಗ್ರ ಪರಿಸ್ಥಿತಿ ಅರ್ಥ ಮಾಡಿಕೊಂಡು ಸಭೆ ನಡೆಸಿ ತೀರ್ಮಾನ ಮಾಡಲಾಗುವುದು. ನನ್ನ ಆಡಳಿತ ಜನಪರ ಆಡಳಿತದ ಸ್ಟಾಂಪ್ ಆಗಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಸಿಎಂ ಆಗುತ್ತಿದ್ದಂತೆ ಜಿಲ್ಲಾ ಪ್ರವಾಸ ಕೈಗೊಂಡ ಬೊಮ್ಮಾಯಿ ನಾಳೆಯೇ ಉತ್ತರ ಕನ್ನಡ ಜಿಲ್ಲೆಗೆ ತೆರಳಲಿದ್ದಾರೆ. ನೆರೆ ಪೀಡಿತ ಪ್ರದೇಶಗಳ ವೀಕ್ಷಣೆಗೆ ಮುಂದಾದ ಹೊಸ ಸಿಎಂ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಸಂಧ್ಯಾ ಸುರಕ್ಷಾ ಯೋಜನೆಯನ್ನು 1 ಸಾವಿರ ರೂ.ನಿಂದ 1200 ರೂ.ಗೆ ಹೆಚ್ಚಳ ಮಾಡಲಾಗುವುದು. ವಿಧವಾ ವೇತನ ಹಾಲಿ 600 ರೂ.ಇದ್ದು ಅದನ್ನು 800 ರೂ.ಗೆ ಏರಿಕೆ ಮಾಡಲಾಗುವುದು. ಅಂಗವಿಕಲ ವೇತನ 600 ರೂ.ರಿಂದ 800 ರೂ.ಗೆ ಏರಿಕೆ ಆಗಲಿದೆ.
ಮುಖ್ಯಮಂತ್ರಿಯಾಗಿ ಮೊದಲ ದಿನವೇ ಹೊಸ ಘೋಷಣೆಗಳನ್ನು ಮಾಡಿರುವ ಬಸವರಾಜ ಬೊಮ್ಮಾಯಿ, ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ₹1 ಸಾವಿರ ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ರೈತರ ಮಕ್ಕಳು ಕಲಿಕೆಯಿಂದ ವಂಚಿತರಾಗಬಾರದು. ಹೀಗಾಗಿ ಶಿಷ್ಯ ವೇತನ ಜಾರಿ ಮಾಡಲಾಗುವುದು ಎಂದಿದ್ದಾರೆ.
ಚಲ್ತಾ ಹೇ ಆಟಿಟ್ಯೂಡ್ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಧೋರಣೆ ಸಹಿಸಲ್ಲ ಎಂದು ಮೊದಲ ಸುದ್ದಿಗೋಷ್ಠಿಯಲ್ಲೇ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ. ಈ ಹಿಂದಿನಂತೆ ಏನೇ ಮಾಡಿದ್ರು ನಡೆಯುತ್ತೆ ಅಂದುಕೊಂಡಿದ್ರೆ ಆಗಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ನಂತರ ಸಭೆ ನಡೆಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಬಸವರಾಜ ಬೊಮ್ಮಾಯಿ, ಕನಿಷ್ಠ 5 ಪರ್ಸೆಂಟ್ ಅನಗತ್ಯ ಖರ್ಚು ಕಡಿಮೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಫೈಲ್ ಕ್ಲಿಯರೆನ್ಸ್ ಡ್ರೈವ್ ಮಾಡಲು ನಿರ್ಧರಿಸಿದ್ದೇವೆ. ಎಲ್ಲ ಇಲಾಖೆ ಅಧಿಕಾರಿಗಳು ಫೈಲ್ ಕಳಿಸುತ್ತಾರೆ. ಕನಿಷ್ಠ 15 ದಿನದೊಳಗೆ ಎಲ್ಲ ಫೈಲ್ ಕ್ಲಿಯರ್ ಆಗಬೇಕು. ಹೊಸ ದಿಕ್ಸೂಚಿಯಿಂದ ಆಡಳಿತದಲ್ಲಿ ದಕ್ಷತೆ ತರುತ್ತೇವೆ. ಜನಸಾಮಾನ್ಯರಿಗೆ ಎಲ್ಲ ಕಾರ್ಯಕ್ರಮಗಳು ತಲುಪುತ್ತವೆ. ನಿಗದಿತ ಸಮಯದಲ್ಲಿ ಕಾರ್ಯಕ್ರಮ ತಲುಪುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
I congratulate Shri @BSBommai on taking oath as the Chief Minister of Karnataka. He will definitely take the state to greater heights of progress and prosperity. I extend my best wishes to him for a successful tenure.
— Rajnath Singh (@rajnathsingh) July 28, 2021
Hearty Congratulations to Sri @BSBommai avaru on swearing-in as the Chief Minister of Karnataka.
I'm certain Karnataka will touch new heights in development & progress with your able leadership & rich administrative experience.
Best Wishes for a fruitful tenure. pic.twitter.com/C5BZRFB6Mk
— Shobha Karandlaje (@ShobhaBJP) July 28, 2021
ನೂತನ ಸಿಎಂ ಬಸವರಾಜ ಬೊಮ್ಮಾಯಿ ಬಗ್ಗೆ ಮಾತನಾಡಿರುವ ಸಂಸದ ತೇಜಸ್ವಿ ಸೂರ್ಯ, ಬೊಮ್ಮಾಯಿ ಅವರು ಅನುಭವವುಳ್ಳ ಮುತ್ಸದ್ದಿ ರಾಜಕಾರಣಿ. ಕರ್ನಾಟದ ನೀರಾವರಿ ಮತ್ತು ಹಣಕಾಸಿನ ಬಗ್ಗೆ ಬಹಳ ಅನುಭವವುಳ್ಳ ನಾಯಕರು, ಜೆಎಸ್ಟಿ ಕೌನ್ಸಿಲ್ ಸಭೆಗಳಲ್ಲಿ ಕರ್ನಾಟಕದ ವಿಚಾರಗಳನ್ನ ಸ್ವಷ್ಟವಾಗಿಟ್ಟು ರಾಜ್ಯದ ಹಿತ ಕಾಪಾಡಿದವರು, ಅವರು ಸಿಎಂ ಆಗಿರೋದು ರಾಜ್ಯಕ್ಕೆ ಒಳ್ಳೆಯದಾಗಲಿದೆ. ಅಭಿವೃದ್ದಿ ವೇಗಾವಾಗುತ್ತೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಿಎಂ ಆಯ್ಕೆಯ ಬಗ್ಗೆ ಪಕ್ಷದಲ್ಲಿ ಯಾವುದೇ ಅಪಸ್ವರದ ಸಂಸ್ಕ್ರತಿಯಿಲ್ಲ, ಪಕ್ಷದ ನಾಯಕರು ಹಿರಿಯರೆಲ್ಲ ಸೇರಿ ಮಾಡಿದ್ದಾರೆ ಅದರ ಬಗ್ಗೆ ಯಾರಿಗೂ ಅಸಮಧಾನವಿಲ್ಲ ಎಂದು ದೆಹಲಿಗೆ ತೆರಳುವ ಮುನ್ನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಥಾಣದಲ್ಲಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದಾರೆ.
Congratulations and best wishes to Shri @BSBommai Ji on taking oath as the Chief Minister of Karnataka. I am sure under the guidance of PM @narendramodi Ji he will further boost BJP’s resolve to serve the poor and farmers of the state with his wisdom and experience.
— Amit Shah (@AmitShah) July 28, 2021
ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ
Congratulations to Shri @BSBommai Ji on taking oath as Karnataka’s CM. He brings with him rich legislative and administrative experience. I am confident he will build on the exceptional work done by our Government in the state. Best wishes for a fruitful tenure.
— Narendra Modi (@narendramodi) July 28, 2021
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವಿಟರ್ನಲ್ಲಿ ಹಾಡಿ ಹೊಗಳಿದ್ದಾರೆ. ಬಿಎಸ್‌ವೈಗೆ ಪಕ್ಷದ ಮೇಲಿನ ಬದ್ಧತೆ ಅವರ್ಣನೀಯ. ಸಾಮಾಜಿಕ ನ್ಯಾಯ, ರಾಜ್ಯದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ. ಪಕ್ಷದ ಅಭಿವೃದ್ಧಿಗೆ ಅವರ ಕೊಡುಗೆ ಬಣ್ಣಿಸಲು ಶಬ್ದಗಳಿಲ್ಲ. ದಶಕಗಳ ಕಾಲ ರಾಜ್ಯವನ್ನು ಸುತ್ತಾಡಿ ಪಕ್ಷವನ್ನ ಕಟ್ಟಿದರು. ಯಡಿಯೂರಪ್ಪ ಪಕ್ಷ ಕಟ್ಟಿದ್ದು ಸ್ಮರಣೀಯ ಕೊಡುಗೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
No words will ever do justice to the monumental contribution of Shri @BSYBJP Ji towards our Party and for Karnataka’s growth. For decades, he toiled hard, travelled across all parts of Karnataka and struck a chord with people. He is admired for his commitment to social welfare.
— Narendra Modi (@narendramodi) July 28, 2021
ನನ್ನ ಆತ್ಮೀಯ ಮಿತ್ರ ಮುಖ್ಯಮಂತ್ರಿಯಾಗಿದ್ದಾನೆ, ಇದು ನನಗೆ ಬಹಳ ಖುಷಿಯ ದಿನವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. B.S.ಯಡಿಯೂರಪ್ಪ ಮಾರ್ಗದರ್ಶಕರಾಗಿರುತ್ತಾರೆ. ಅವರ ಮಾರ್ಗದರ್ಶನದಲ್ಲಿಯೇ ಕೆಲಸ ಮಾಡುತ್ತೇವೆ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.
ನೂತನ ಮುಖ್ಯಮಂತ್ರಿಗಳ ಸಚಿವ ಸಂಪುಟದಲ್ಲಿ ಡಾ.ಸುಧಾಕರ್ ಗೆ ಒಳ್ಳೆ ಖಾತೆ ದೊರೆಯಲಿ ಎಂದು ಅಭಿಮಾನಿಗಳು ಪೂಜೆ ಸಲ್ಲಿಸಿದ್ದಾರೆ. ಡಾ.ಕೆ.ಸುಧಾಕರ್ ಬೆಂಬಲಿಗರಿಂದ ಪೂಜೆ ಸಲ್ಲಿಸಲಾಗಿದ್ದು, ಚಿಕ್ಕಬಳ್ಳಾಪುರ ನಗರದ ಕೊದಂಡರಾಮಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ.
ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದು, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪದಗ್ರಹಣ ಮಾಡಿದ್ದಾರೆ. ಅನುಭವಿ ಆಗಿರುವ ಅವರು ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇವತ್ತು ಅವರು ಪದಗ್ರಹಣ ಮಾಡಿರುವುದು ತುಂಬಾ ಸಂತೋಷ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದ ಸಮಗ್ರ ಅಭಿವೃದ್ಧಿಯಾಗಲಿ, ತಕ್ಷಣಕ್ಕೆ ಕೊವಿಡ್ ಮತ್ತು ಪ್ರವಾಹದ ಸಮಸ್ಯೆ ತುಂಬಾ ಕಾಡುತ್ತಿದೆ. ಕರಾವಳಿ ಮತ್ತು ಬೆಳಗಾವಿ ಪ್ರದೇಶದಲ್ಲಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಆ ಭಾಗಕ್ಕೆ ಹೆಚ್ಚು ಒತ್ತು ಕೊಡಲಿ. ಬಡವರ ಮತ್ತ ರೈತರ ಪರವಾದ ಚಿಂತನೆಗಳನ್ನಿಟ್ಟುಕೊಂಡು ರಾಜ್ಯದ ಅಭಿವೃದ್ಧಿ ಮಾಡಲಿ ಎಂದು ಹಾರೈಸಿದ್ದಾರೆ.
ಕರ್ನಾಟಕ ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಕರ್ನಾಟಕ ಮುಖ್ಯಮಂತ್ರಿಯ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಫೋಟೋ ಬದಲಾವಣೆ ಆಗಿದೆ. ಯಡಿಯೂರಪ್ಪ ಅವರ ಫೋಟೋಗಳನ್ನು ತೆಗೆದು ಬೊಮ್ಮಾಯಿ ಅವರ ಫೋಟೋ ಹಾಕಲಾಗಿದೆ.
ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಸನ್ಮಾನ್ಯ ಶ್ರೀ @BSBommai ರವರಿಂದ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ.#BasavarajSBommai #CMOfKarnataka pic.twitter.com/fjOTSO9aNj
— CM of Karnataka (@CMofKarnataka) July 28, 2021
ಬಸವರಾಜ ಬೊಮ್ಮಾಯಿ ಅನುಭವಿ ನೇತಾರರಲ್ಲಿ ಒಬ್ಬರು. ಅಭಿವೃದ್ಧಿ ಪಥದಲ್ಲಿ ಅವರ ನಾಯಕತ್ವ ಅತ್ಯಂತ ಪೂರಕ. ಹೊಸ ನಾಯಕತ್ವದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದನ್ನು ನೋಡಲು ರಾಜಭವನದ ಬಳಿ ಬಂದಿದ್ದ ಅಭಿಮಾನಿಗಳು ಪಾಸ್ ಇದ್ದರೂ ಒಳಗೆ ಪ್ರವೇಶ ಸಿಕ್ಕಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಅವರೆಲ್ಲರೂ ರಾಜಭವನದ ಹೊರಗಡೆ ದೊಡ್ಡ ಪರದೆಯಲ್ಲಿ ಟಿವಿ9ನಲ್ಲಿ ಪ್ರಸಾರವಾಗುತ್ತಿದ್ದ ಸುದ್ದಿಯನ್ನು ನೋಡಿದರು.
ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ. ವೇದಿಕೆಗೆ ತೆರಳಿ ಹೂಗುಚ್ಛ ನೀಡಿ ಅಭಿನಂದಿಸಿದ್ದು, ಉಳಿದ ಶಾಸಕರು ಕೂಡಾ ಶುಭಾಶಯ ತಿಳಿಸಲು ಆಗಮಿಸಿದ್ದಾರೆ.
ಕರ್ನಾಟಕದ 30ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ್ದು, ಮುಖ್ಯಮಂತ್ರಿ ಕೊಠಡಿಯ ನಾಮಫಲಕವನ್ನು ಬದಲಾಯಿಸಲಾಗಿದೆ.
ಬಸವರಾಜ ಬೊಮ್ಮಾಯಿ ಇಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ. ರಾಜ್ಯಪಾಲ ಥಾವರಚಂದ್ ಗೆಹಲೋತ್ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ 30ನೇ ಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ
ರಾಜ್ಯಪಾಲರ ವೇದಿಕೆಗೆ ಥಾವರಚಂದ್ ಗೆಹಲೋತ್ ಆಗಮಿಸಿದ್ದು, ರಾಷ್ಟ್ರಗೀತೆಗೆ ಎಲ್ಲರೂ ಎದ್ದು ನಿಂತು ಗೌರವಿಸಿದ್ದಾರೆ. ನಂತರ ಬಸವರಾಜ ಬೊಮ್ಮಾಯಿ ಕೂಡಾ ವೇದಿಕೆಗೆ ಆಗಮಿಸಿದ್ದಾರೆ.
ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಬಸವರಾಜ ಬೊಮ್ಮಾಯಿಗೆ ಅಭಿನಂದನೆ ಸಲ್ಲಿಸಲು ಬಂದ ಸಿ.ಪಿ.ಯೋಗೇಶ್ವರ್, ಬೊಮ್ಮಾಯಿ ಅವರನ್ನು ಮಾತನಾಡಿಸಿ ಶುಭ ಕೋರಿದರಾದರೂ ಪಕ್ಕದಲ್ಲೇ ಇದ್ದ ಯಡಿಯೂರಪ್ಪ ಅವರನ್ನು ನೋಡಿಯೂ ನೋಡದಂತೆ ತೆರಳಿದ್ದಾರೆ.
ಬಸವರಾಜ ಬೊಮ್ಮಾಯಿ ನೂತನ ಸಿಎಂ ಆಗಿರುವ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ, ಬೊಮ್ಮಾಯಿ ಅವರನ್ನು ಸಿಎಂ ಮಾಡಿರುವುದು ಹೈಕಮಾಂಡ್. ಎಲ್ಲರ ಸರ್ವಾನುಮತದಿಂದ ಘೋಷಣೆ ಮಾಡಲಾಗಿದೆ. ನಾನು ಸೂಪರ್ ಸಿಎಂ ಟ್ಯಾಗ್ನಿಂದ ಹೊರ ಬಂದಿದ್ದೇನೆ ಎಂದು ಹೇಳಿದ್ದಾರೆ. ಬೇರೆ ಪಕ್ಷದಿಂದ ಬಂದವರನ್ನು ಒಳ್ಳೆಯ ರೀತಿ ನಡೆಸಿಕೊಳ್ತಾರೆ. ಸಚಿವ ಸಂಪುಟದಲ್ಲಿ ಯುವಕರಿಗೆ ಸ್ಥಾನ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.
ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ರಾಜಭವನಕ್ಕೆ ಆಗಮಿಸಿರುವ ಬಿ.ಎಸ್.ಯಡಿಯೂರಪ್ಪ, ವೀಕ್ಷಕರ ಸಾಲಿನ ಮೊದಲ ಆಸನದಲ್ಲೇ ಕುಳಿತಿದ್ದು, ಅವರ ಪಕ್ಕದಲ್ಲೇ ಬೊಮ್ಮಾಯಿ ಆಸೀನರಾಗಿದ್ದಾರೆ. ಮೊದಲ ಸಾಲಿನ ಕೊನೆಯ ಆಸನದಲ್ಲಿ ಅಶೋಕ್ ಕುಳಿತಿದ್ದು, ಮಾಜಿ ಸಚಿವ ಅರ್.ವಿ.ದೇಶಪಾಂಡೆ ರಾಜಭವನಕ್ಕೆ ಆಗಮಿಸಿದ್ದಾರೆ.
ನೂತನ ಸಂಪುಟದಲ್ಲಿ ಡಿಸಿಎಂಗಳನ್ನು ನೇಮಿಸಿದಂತೆ ಬೆಳಗಾವಿಯಲ್ಲಿ ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಆಗ್ರಹಿಸಿದ್ದಾರೆ. ಡಿಸಿಎಂಗಳ ನೇಮಕಾತಿಗೆ ಸಂವಿಧಾನದಲ್ಲಿ ಅವಕಾಶ ಇಲ್ಲ. ನೇಮಕ ಮಾಡಿದ್ರೆ ಕೋರ್ಟ್ ಮೊರೆ ಹೋಗಿ ತಡೆ ತರಬೇಕಾಗುತ್ತದೆ. ಡಿಸಿಎಂ ಹುದ್ದೆ ಸೃಷ್ಟಿಗೆ ಸಂವಿಧಾನ ಪರಿಚ್ಚೇಧ 163, 164ರಲ್ಲಿ ಉಲ್ಲೇಖವಿಲ್ಲ. ಡಿಸಿಎಂ ನೇಮಕಾತಿ ಸಾಂಪ್ರದಾಯಿಕವಾಗಿ ನಡೆದು ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಕಾರಿಗಳು ಲಿಖಿತವಾಗಿ ತಿಳಿಸಿದ್ದಾರೆ. ಸರ್ಕಾರ ಸಂವಿಧಾನ ಪರವಾಗಿ ನಡೆಯುತ್ತೋ, ಸಾಂಪ್ರದಾಯಿಕವಾಗಿ ನಡೆಯುತ್ತೋ ತಿಳಿಸಿ? ಈ ಕುರಿತು ರಾಜ್ಯಪಾಲರಿಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮೇಲ್ ಮಾಡಿ ಮನವಿ ಮಾಡಿದ್ದೇನೆ. ಸಾಂಪ್ರದಾಯಿಕವಾಗಿ ಸರ್ಕಾರ ನಡೆಯುತ್ತಿದ್ರೆ ಇಬ್ಬರು ಸಿಎಂಗಳನ್ನು ನೇಮಿಸಿ. ಪ್ರತಿಯೊಂದು ಜಾತಿಗೆ ಡಿಸಿಎಂ ಮಾಡಿ ಅದಕ್ಕೆ ನಮ್ಮದೇನೂ ತಕರಾರಿಲ್ಲ. ಬೆಳಗಾವಿ ಸುವರ್ಣವಿಧಾನಸೌಧಕ್ಕೆ ಒಬ್ಬ ಸಿಎಂರನ್ನು ಮಾಡಿ, ಬೆಂಗಳೂರು ವಿಧಾನಸೌಧಕ್ಕೆ ಒಬ್ಬ ಸಿಎಂರನ್ನು ಮಾಡಿ. ಡಿಸಿಎಂ ನೇಮಕ ಮಾಡುವುದಿದ್ರೆ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ನೇಮಕ ಮಾಡಿ ಎಂದಿದ್ದಾರೆ.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದಕ್ಕೆ ಪ್ರತಿಕ್ರಿಯಿಸಿರುವ ಶಿವಕುಮಾರ್ ಉದಾಸಿ, ಬಿಎಸ್‌ವೈ ಆಶೀರ್ವಾದದಿಂದ ಬೊಮ್ಮಾಯಿ ಸಿಎಂ ಆಗಿದ್ದಾರೆ, ನಾನು ಆಕಾಂಕ್ಷಿ ಆಗಿರಲಿಲ್ಲ. ನಮ್ಮ ಭಾಗದವರೇ ಸಿಎಂ ಆಗಿರೋದು ಖುಷಿ ತಂದಿದೆ. ಬಡವರ ಪರವಾದ ಕಲ್ಯಾಣ ಕಾರ್ಯಕ್ರಮ ಮಾಡ್ತೀವಿ ಅಂತ ನಿನ್ನೆ ಹೇಳಿದ್ರು. ರಾಜ್ಯದ ಅಭಿವೃದ್ಧಿ ಪರ ಕೆಲಸ ಮಾಡಲೆಂದು ಹಾರೈಸುತ್ತೇನೆ ಎಂದಿದ್ದಾರೆ.
ಬೊಮ್ಮಾಯಿಗೆ ತಂದೆಯಿಂದ ಬಂದ ಬಳುವಳಿ ಇದೆ, ಅವರು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ಸೋಮಣ್ಣ ಅಭಿಪ್ರಾಯಪಟ್ಟಿದ್ದಾರೆ. ಸಂಕಷ್ಟದ ಸಮಯದಲ್ಲಿ ಜವಾಬ್ದಾರಿ ನೀಡಲಾಗಿದೆ. ಬೊಮ್ಮಾಯಿ ಇದನ್ನು ನಿಭಾಯಿಸುತ್ತಾರೆ. ಸಚಿವ ಸ್ಥಾನ ಹಂಚಿಕೆ ಹೈಕಮಾಂಡ್ ಹಾಗೂ ಬೊಮ್ಮಾಯಿಗೆ ಬಿಡುತ್ತೇನೆ. ಯಾರು ಏನು ಕೆಲಸ ಮಾಡುತ್ತಾರೆ ಎನ್ನುವುದು ಅವರಿಗೆ ಗೊತ್ತು ಎಂದು ಹೇಳಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಸಿಎಂ ಆಗಿ ಬೊಮ್ಮಾಯಿ ಪದಗ್ರಹಣ ನೆರವೇರಲಿದ್ದು, ಪದಗ್ರಹಣ ಬಳಿಕ ವಿಧಾನಸೌಧದ ಸಿಎಂ ಕಚೇರಿಯಲ್ಲಿ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಲಿದ್ದಾರೆ.
ನಾನು ಯಡಿಯೂರಪ್ಪ ಸಿಎಂ ಆಗಿದ್ದಾಗಲೂ ಲಾಬಿ ಮಾಡಿಲ್ಲ. ಈಗಲೂ ಯಾವುದೇ ಲಾಬಿ ಮಾಡಲ್ಲ. ಸಚಿವ ಸ್ಥಾನದ ಆಕಾಂಕ್ಷಿಯೂ ಅಲ್ಲ. ಆದರೆ, ಸಚಿವಗಿರಿ ಕೊಟ್ಟರೆ ನಿಭಾಯಿಸಬಲ್ಲೆ. ಅವಕಾಶ ಕೊಟ್ಟರೆ ಸಂತೋಷ. ನಮ್ಮಲ್ಲಿ ವಲಸಿಗರು, ಮೂಲ ಎಂಬ ಭೇದಭಾವ ಇಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಬಸವರಾಜ ಬೊಮ್ಮಾಯಿ ತಮ್ಮ ನಿವಾಸದಿಂದ ರಾಜಭವನದತ್ತ ಹೊರಟಿದ್ದಾರೆ. ಅವರಿಗೆ ಬಾಂಬೆ ಟೀಂ ಸದಸ್ಯರಾದ ಡಾ.ಸುಧಾಕರ್, ಎಸ್ ಟಿ ಸೋಮಶೇಖರ್, ನಾರಾಯಣಗೌಡ, ಶಿವರಾಮ್ ಹೆಬ್ಬಾರ್, ಬೈರತಿ ಬಸವರಾಜು, ಬಿ.ಸಿ.ಪಾಟೀಲ್ ಸಾಥ್ ನೀಡಿದ್ದಾರೆ.
ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲಿರುವ ಬಸವರಾಜ್ ಬೊಮ್ಮಾಯಿ ನಿವಾಸಕ್ಕೆ ದೌಡಾಯಿಸಿರುವ ಬಾಂಬೆ ಟೀಂ ಸದಸ್ಯರು, ಮಾತುಕತೆ ನಡೆಸುತ್ತಿದ್ದಾರೆ. ಡಾ.ಸುಧಾಕರ್, ಎಸ್ ಟಿ ಸೋಮಶೇಖರ್, ನಾರಾಯಣಗೌಡ, ಶಿವರಾಮ್ ಹೆಬ್ಬಾರ್, ಬೈರತಿ ಬಸವರಾಜು, ಬಿ.ಸಿ.ಪಾಟೀಲ್ ಎಲ್ಲರೂ ಬೊಮ್ಮಾಯಿ ನಿವಾಸಕ್ಕೆ ಆಗಮಿಸಿದ್ದಾರೆ.
ಮುಖ್ಯಮಂತ್ರಿ ಪದಗ್ರಹಣ ಸಮಾರಂಭ ಹಿನ್ನೆಲೆ ರಾಜಭವನಕ್ಕೆ ಬಸವರಾಜ ಬೊಮ್ಮಾಯಿ ಪತ್ನಿ ಚನ್ನಮ್ಮ, ಪುತ್ರ ಭರತ್ ಪುತ್ರಿ ಆದಿತಿ ಆಗಮಿಸಿದ್ದಾರೆ.
ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಬೊಮ್ಮಾಯಿ ಅವರ ಸಹೋದರಿ ಉಮಾ ಪಾಟೀಲ್ ತಮ್ಮ ಸಹೋದರನ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದಾರೆ. ಹುಬ್ಬಳ್ಳಿಯ ಮಾರುತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಬಸವರಾಜ ಬೊಮ್ಮಾಯಿ, ಕಾರ್ಯಾರಂಭ ಮಾಡುವ ಹಿನ್ನೆಲೆ ವಿಧಾನಸೌಧದ ಸಿಎಂ ಕಚೇರಿ ಬಳಿ ಸ್ವಚ್ಚತಾ ಕಾರ್ಯ ಭರದಿಂದ ಸಾಗಿದೆ. ಮೂರನೇ ಮಹಡಿಯ ಸಿಎಂ ಕೊಠಡಿ ಕಿಟಕಿ ಬಾಗಿಲುಗಳನ್ನು ಸಿಬ್ಬಂದಿ ಸ್ವಚ್ಛಗೊಳಿಸುತ್ತಿದ್ದಾರೆ.
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ, ರಾಜಭವನದತ್ತ ಬಸವರಾಜ ಬೊಮ್ಮಾಯಿ ಕುಟುಂಬ ಸದಸ್ಯರು ಹೊರಟಿದ್ದಾರೆ. ಬಸವರಾಜ ಬೊಮ್ಮಾಯಿ ಪದಗ್ರಹಣ ಸಮಾರಂಭದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.
ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಬಸವರಾಜ ಬೊಮ್ಮಾಯಿ ಪದಗ್ರಹಣ ಸಮಾರಂಭದ ನಂತರ ದೆಹಲಿಗೆ ತೆರಳಿ ವರಿಷ್ಠರ ಜತೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ಆರ್.ಅಶೋಕ್ ಹೇಳಿದ್ದಾರೆ.
ಸಚಿವ ಸಂಪುಟ ರಚನೆ ವಿಚಾರವಾಗಿ ಸಲಹೆ ನೀಡಿರುವ ಬಿಜೆಪಿ ಎಂಎಲ್‌ಸಿ ಹೆಚ್.ವಿಶ್ವನಾಥ್, ಸಂಪುಟ ರಚನೆ ವೇಳೆ ಎಲ್ಲ ಸಮುದಾಯ ಹಾಗೂ ಯುವಕರಿಗೆ ಹೆಚ್ಚು ಆದ್ಯತೆ ನೀಡಬೇಕು. ರಾಜ್ಯದಲ್ಲಿ ಅಭಿವೃದ್ಧಿ, ಉತ್ತಮ ಆಡಳಿತ ನಿರೀಕ್ಷಿಸಬಹುದು. ನನಗೆ ಯಾವ ಮಂತ್ರಿಗಿರಿಯೂ ಬೇಡ, ಬೇರೆಯವರಿಗೆ ಅವಕಾಶ ನೀಡಲಿ ಎಂದಿದ್ದಾರೆ. ಹಳಬರು, ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡಲಿ. ಮೋದಿ ಯಾವ ಫಾರ್ಮುಲಾದಲ್ಲಿ ಸಂಪುಟ ರಚಿಸಿದರೋ ಅದನ್ನೇ ಅನುಸರಿಸಲಿ ಎಂದಿದ್ದಾರೆ.
ನೂತನ ಮುಖ್ಯಮಂತ್ರಿ ಪದಗ್ರಹಣ ಸಮಾರಂಭಕ್ಕೆ ಸಿದ್ಧತೆ ಆಗುತ್ತಿರುವಾಗಲೇ ಸಚಿವ ಸ್ಥಾನ ಆಕಾಂಕ್ಷಿಗಳ ಕಸರತ್ತು ಕೂಡಾ ಮುಂದುವರೆದಿದ್ದು, ನಾನು ಖಂಡಿತಾ ಸಚಿವನಾಗುತ್ತೇನೆ ಎಂಬ ವಿಶ್ವಾಸವನ್ನು ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ಕೂಡ ಅವಕಾಶ ಆಗುತ್ತೆ ಅನ್ನೋ ವಿಶ್ವಾಸ ಇತ್ತು. ಆದರೆ ಈ ಬಾರಿ ನೂರಕ್ಕೆ ನೂರು ನನಗೆ ಅವಕಾಶ ಕೊಡುತ್ತಾರೆ. ನಮ್ಮ ವರಿಷ್ಠರು ಹಿರಿಯರು, ನೂತನ ಮುಖ್ಯಮಂತ್ರಿಗಳು ನನ್ನ ಹಿರಿತನವನ್ನ ಗಮನಿಸಿ ಜಿಲ್ಲೆಗೆ ಸಚಿವ ಸ್ಥಾನ ನೀಡುತ್ತಾರೆ ಅನ್ನೋ ನಂಬಿಕೆ ಇದೆ ಎಂದು ಕೆಕೆ ಗೆಸ್ಟ್ ಹೌಸ್ ಬಳಿ ಚಿತ್ರದುರ್ಗ ಶಾಸಕ ತಿಪ್ಪರೆಡ್ಡಿ ಹೇಳಿಕೆ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲೆಗೆ ನ್ಯಾಯ ಕೊಡಿಸುವ ಭರವಸೆ ಇದೆ. ಸಚಿವ ಸ್ಥಾನ ಕೊಟ್ಟರೆ ಚೆನ್ನಾಗಿ ಕೆಲಸ ಮಾಡುತ್ತೇನೆ. ವರಿಷ್ಠರನ್ನ ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಬೊಮ್ಮಾಯಿ ನನಗೆ ಮೊದಲಿನಿಂದಲೂ ತುಂಬಾ ಪರಿಚಯ. ಅವರು ಅನುಭವಿ ರಾಜಕಾರಣಿ. ಎರಡು ವರ್ಷದಲ್ಲಿ ರಾಜ್ಯ ಇನ್ನಷ್ಟು ಅಭಿವೃದ್ಧಿ ಆಗಲಿದೆ ಎಂದಿದ್ದಾರೆ.
ಸಚಿವ ಸ್ಥಾನ ಆಕಾಂಕ್ಷಿಗಳಲ್ಲಿ ಒಬ್ಬರಾದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಇಂದು ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ. ಯಡಿಯೂರಪ್ಪ ನಿವಾಸಕ್ಕೆ ಹಲವು ಶಾಸಕರು, ಸಚಿವ ಸ್ಥಾನ ಆಕಾಂಕ್ಷಿಗಳು ಆಗಮಿಸುತ್ತಿದ್ದು ಕೊನೇ ಕ್ಷಣದ ಕಸರತ್ತು ಮುಂದುವರೆಸಿದ್ದಾರೆ.
ನಾನು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದರಿಂದ ನನ್ನ ಕ್ಷೇತ್ರದ ಜನರು ಬಹಳ ಸಂತಸವಾಗಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ. ಕ್ಷೇತ್ರದ ಅಭಿವೃದ್ಧಿ ಸದಾಕಾಲ ಮಾಡಿಕೊಂಡು ಬಂದಿದ್ದೇನೆ. ಇನ್ನೂ ವೇಗವಾಗಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ಈ ಜನ್ಮ ಇರುವವರೆಗೂ ಜನರ ಸೇವೆ ಮಾಡಲು ಸಿದ್ಧ ಎಂದು ಟಿವಿ9ಗೆ ನೂತನ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ನಿಯೋಜಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಹೊರಟಿದ್ದಾರೆ. ಬಿಎಸ್‌ವೈ ನಿವಾಸದತ್ತ ತೆರಳುತ್ತಿರುವ ಬೊಮ್ಮಾಯಿ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಮಾತುಕತೆ ನಡೆಸಲಿದ್ದಾರೆ.
ರಾಜಭವನದ ಬಳಿ ಬಿಜೆಪಿಗರು ಆಗಮಿಸುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಬೆಂಬಲಿಗರೂ ಸಹ ರಾಜಭವನದ ಮುಂದೆ ಆಗಮಿಸುತ್ತಿದ್ದಾರೆ. ಜೈಕಾರ ಹಾಕುತ್ತಾ ರಾಜಭವನದ ಗೇಟ್ ಬಳಿ ನಿಂತಿದ್ದಾರೆ. ಅಬ್ ಕಿ ಬಾರ್ ಬೊಮ್ಮಾಯಿ ಸರ್ಕಾರ್ ಎಂದು ಘೋಷಣೆ ಹಾಕುತ್ತಿದ್ದಾರೆ. ರಾಜಭವನದ ಬಳಿ ಬಂದವರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ.
ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರು ಕೆ.ಕೆ.ಗೆಸ್ಟ್‌ಹೌಸ್‌ಗೆ ಆಗಮಿಸುತ್ತಿದ್ದಾರೆ. ಮಾಜಿ ಸಚಿವರಾದ ಆರ್.ಅಶೋಕ್, ಭೈರತಿ ಬಸವರಾಜ್, ಡಾ.ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್, ನಿರಾಣಿ, ಎಂಎಲ್‌ಸಿ ಹೆಚ್.ವಿಶ್ವನಾಥ್ ಅವರು ಕೆ.ಕೆ.ಗೆಸ್ಟ್‌ಹೌಸ್‌ಗೆ ಆಗಮಿಸಿದ್ದಾರೆ.
ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆ ಮಠಕ್ಕೆ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರಿಗೆ ಉನ್ನತ ಹುದ್ದೆ ಸಿಗುವ ಭವಿಷ್ಯವಿದೆ ಎಂದು ಶ್ರೀಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಶ್ರೀಗಳು ಭವಿಷ್ಯ ನುಡಿದಿದ್ದರು. 2 ತಿಂಗಳ ಹಿಂದೆಯೇ ನೊಣವಿನಕೆರೆ ಬಳಿಯಿರುವ ಶ್ರೀ ಕಾಡಸಿದ್ದೇಶ್ವರ ಮಠದ ಶಿವಯೋಗಿಶ್ವರ ಶ್ರೀಗಳು ಭವಿಷ್ಯ ನುಡಿದಿದ್ದರು.
ಕರ್ನಾಟಕದ ನೂತ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ ಅವರು ಕೇಂದ್ರದ ವೀಕ್ಷಕರ ಜತೆ ಚರ್ಚೆ ನಡೆಸುತ್ತಿದ್ದಾರೆ. ಬೆಂಗಳೂರಿನ ಕೆ.ಕೆ.ಗೆಸ್ಟ್ ಹೌಸ್‌ನಲ್ಲಿ ನಾಯಕರ ಜತೆ ಮಾತುಕತೆ ನಡೆಸುತ್ತಿದ್ದಾರೆ.
ರಾಜಭವನದ ಬಳಿ ಆಗಮಿಸುತ್ತಿರುವ ಬಿಜೆಪಿಗರು, ಬೊಮ್ಮಾಯಿಗೆ ಜೈಕಾರದ ಘೋಷಣೆ ಹಾಕುತ್ತಿದ್ದಾರೆ. ಅಬ್ ಕಿ ಬಾರ್ ಬೊಮ್ಮಾಯಿ ಸರ್ಕಾರ್ ಎಂದು ಘೋಷಣೆ ಕೂಗಿ ಸಂಭ್ರಮಿಸುತ್ತಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷಿಗಳು ಯಡಿಯೂರಪ್ಪ ಅವರನ್ನು ಭೇಟಿ ಮಾಡುತ್ತಿದ್ದು, ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಎಂ.ಪಿ.ಕುಮಾರಸ್ವಾಮಿ ಯಡಿಯೂರಪ್ಪ ಜತೆ ಮಾತುಕತೆ ನಡೆಸಲೆಂದು ತೆರಳಿದ್ದಾರೆ.
ಬಿಜೆಪಿ ವರಿಷ್ಠರು ತಂಗಿರುವ ಕೆಕೆ ಗೆಸ್ಟ್ ಹೌಸ್ನತ್ತ ಬಿಜೆಪಿ ಶಾಸಕರು, ಸಚಿವ ಸ್ಥಾನ ಆಕಾಂಕ್ಷಿಗಳು ಆಗಮಿಸುತ್ತಿದ್ದು, ಬಿಜೆಪಿ ಎಂಎಲ್‌ಸಿ, ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ಕೂಡಾ ಅತಿಥಿ ಗೃಹಕ್ಕೆ ಬಂದಿದ್ದಾರೆ.
ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಹಿನ್ನೆಲೆ ರಾಜಭವನದತ್ತ ಧಾವಿಸುತ್ತಿರುವ ಬಿಜೆಪಿಗರು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಜೈಕಾರ ಹಾಕುತ್ತಿದ್ದಾರೆ.
ನಿಯೋಜಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆಗೆ ದೇವಸ್ಥಾನಕ್ಕೆ ತೆರಳಿದ್ದ ಮಾಜಿ ಸಚಿವ ಬೈರತಿ ಬಸವರಾಜ್, ದೇವರ ಬಲಭಾಗಕ್ಕೆ ಹೋಗುವಂತೆ ಬೊಮ್ಮಾಯಿ ಅವರನ್ನು ಕರೆದಿದ್ದಾರೆ. ದೇವರ ಎಡಭಾಗದಲ್ಲಿ ಹೋಗುತ್ತಿದ್ದ ಬೊಮ್ಮಾಯಿ ಬಳಿ ತೆರಳಿದ ಭೈರತಿ ಬಸವರಾಜ್, ದೇವರ ಎಡಕ್ಕೆ ಬೇಡ ಬಲಭಾಗಕ್ಕೆ ಹೋಗೋಣ ಎಂದಿದ್ದಾರೆ.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮಧ್ಯಾಹ್ನ 12 ಗಂಟೆಗೆ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ವಿಧಾನಸೌಧದ ಕಾನ್ಫರೆನ್ಸ್ ಹಾಲ್‌ನಲ್ಲಿ ಸುದ್ದಿಗೋಷ್ಠಿ ಏರ್ಪಡಿಸಲಾಗಿದೆ.
ಬಿಜೆಪಿ ವರಿಷ್ಠರು ತಂಗಿರುವ ಕೆಕೆ ಗೆಸ್ಟ್ಹೌಸ್ನತ್ತ ನಿಯೋಜಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿದ್ದಾರೆ. ಆರ್.ಅಶೋಕ್ ಕೂಡಾ ಕೆಕೆ ಗೆಸ್ಟ್‌ಹೌಸ್‌ಗೆ ಬಂದಿದ್ದಾರೆ.
ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಜ್ಞಾವಿಧಿ ಸಮಾರಂಭಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಗೈರಾಗಲಿದ್ದಾರೆ. ಸಿದ್ದರಾಮಯ್ಯ ಪುತ್ರ ದಿವಂಗತ ರಾಕೇಶ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ತೆರಳಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಪ್ರಮಾಣ ವಚನ ಸಮಾರಂಭಕ್ಕೆ ಹಾಜರಾಗುವುದು ಸಾಧ್ಯವಾಗುತ್ತಿಲ್ಲ.
ನಿನ್ನೆ ಶಾಸಕಾಂಗ ಸಭೆಗೆ ಆಗಮಿಸಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವ ಕಿಶನ್ ರೆಡ್ಡಿ, ಸಹ ಉಸ್ತುವಾರಿ ಅರುಣಾ ಕೆಕೆ ಗೆಸ್ಟ್ ಹೌಸ್‌ನಲ್ಲಿ ತಂಗಿದ್ದು, ಇಂದು ಹಲವು ಸಚಿವ ಆಕಾಂಕ್ಷಿಗಳು ಅರುಣ್ ಸಿಂಗ್ ಅವರನ್ನು ಭೇಟಿಯಾಗಲಿದ್ದಾರೆ. ಇಂದು ಬಸವರಾಜ ಬೊಮ್ಮಾಯಿ ಮಾತ್ರ ಪ್ರಮಾಣ ವಚನ ಸ್ವೀಕರಿಸಲಿದ್ದು, ಸಂಪುಟಕ್ಕೆ ಸೇರಲು ಸಚಿವಾಕಾಂಕ್ಷಿಗಳು ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರನ್ನು ಪಕ್ಷದ ಶಾಸಕರು ಭೇಟಿಯಾಗಲಿದ್ದಾರೆ. ಸದ್ಯ ಬಿಜೆಪಿ ವರಿಷ್ಠರ ಭೇಟಿಗಾಗಿ ಕೆಕೆ ಗೆಸ್ಟ್ ಹೌಸ್‌ಗೆ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಆಗಮಿಸಿದ್ದಾರೆ.
ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆ ರಾಜಭವನದ ಬಳಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಪಾಸ್ ಇದ್ದವರಿಗೆ ಮಾತ್ರ ರಾಜಭವನದ ಒಳಗೆ ಪ್ರವೇಶ ನೀಡಲು ನಿರ್ಧರಿಸಲಾಗಿದೆ. ರಾಜಭವನದ ಹೊರಗೆ ಪ್ರತಿಭಟನೆಗೆ ಅವಕಾಶ ಇಲ್ಲ, ಮುನ್ನೆಚ್ಚರಿಕೆಯಾಗಿ ಪ್ರತಿಭಟನೆ ಬಗ್ಗೆ ನಿಗಾ ವಹಿಸಿದ್ದೇವೆ, ಅಹಿತಕರ ಘಟನೆ ನಡೆದರೆ ಕ್ರಮ ಕೈಗೊಳ್ಳಲಾಗಿವುದು ಎಂದು ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಮಾಹಿತಿ ನೀಡಿದ್ದಾರೆ. 50 ಅಧಿಕಾರಿಗಳ ನೇತೃತ್ವದಲ್ಲಿ 500 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ರಾಜಭವನ ಒಳಗೆ ಹಾಗೂ ಹೊರಗೆ ಅಗತ್ಯ ಭದ್ರತೆ ಕಲ್ಪಿಸಲಾಗಿದೆ ಎಂದಿದ್ದಾರೆ.
* ಹೊಸದಾದ, ಸಕ್ರಿಯ ಸಚಿವ ಸಂಪುಟ ರಚನೆ ಮಾಡುವುದು
* ಅತ್ಯುತ್ತಮ ತಂಡ ರಚನೆ ಮಾಡುವುದು
* ಸಂಪುಟ ಸಹೋದ್ಯೋಗಿಗಳನ್ನ ಒಟ್ಟಿಗೆ ತೆಗೆದುಕೊಂಡು ಹೋಗಬೇಕಿರುವುದು
* ಬಿಎಸ್‌ವೈ ವಿರೋಧಿ ಬಣ ಬೊಮ್ಮಾಯಿ ವಿರೋಧಿ ಬಣವಾಗಿಯೂ ಕಾಡುವ ಸಾಧ್ಯತೆ
* ಪ್ರವಾಹ ಪೀಡಿತ ಪ್ರದೇಶಗಳಿಗೆ ಆದ್ಯತೆಯ ಭೇಟಿ
* ಕೊರೊನಾ 3ನೇ ಅಲೆ ಎದುರಿಸುವುದು
* ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ, ಬಿಬಿಎಂಪಿ ಚುನಾವಣೆ
* ಸರ್ಕಾರದ ಇಮೇಜ್ ಹೆಚ್ಚಿಸಬೇಕಾಗಿರುವುದು
* 2023ರ ಚುನಾವಣೆಯಲ್ಲಿ ಹೆಚ್ಚು ಸ್ಥಾನ ತಂದುಕೊಡಬೇಕಿರುವುದು
* ಬಿಎಸ್‌ವೈ ಅವರ ರಬ್ಬರ್ ಸ್ಟಾಂಪ್ ಆಗದ ರೀತಿ ಆಡಳಿತ ನಡೆಸಬೇಕಿರುವುದು
ಈ ಹಿಂದೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಎಸ್.ಆರ್. ಬೊಮ್ಮಾಯಿ ಸೇವೆ ಸಲ್ಲಿಸಿದ್ದರು. ಇದೀಗ ಅವರ ಮಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಇದು ಕರ್ನಾಟಕ ರಾಜಕಾರಣದ ಇತಿಹಾಸವೊಂದು ಮರುಕಳಿಸಿದಂತಾಗಿದೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಹೆಚ್.ಡಿ.ಕುಮಾರಸ್ವಾಮಿ ಜೋಡಿಯಂತೆಯೇ ತಂದೆ-ಮಗ ಮುಖ್ಯಮಂತ್ರಿಯಾದ ಇತಿಹಾಸ ಮತ್ತೊಮ್ಮೆ ಮರುಕಳಿಸಿದೆ.
ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರದ ಬೆನ್ನಲ್ಲೇ ಹೊಸ ಸಚಿವ ಸಂಪುಟದ ಬಗ್ಗೆ ಕುತೂಹಲ ಮೂಡಿದ್ದು, ಯಾರಿಗೆಲ್ಲಾ ಸಚಿವ ಸ್ಥಾನ ಸಿಗಲಿದೆ ಎಂಬ ಲೆಕ್ಕಾಚಾರಗಳು ಜೋರಾಗಿ ನಡೆಯುತ್ತಿವೆ. ಸದ್ಯ ಸಣ್ಣ ನೀರಾವರಿ ಸಚಿವ ಖಾತೆಯನ್ನು ನಿಭಾಯಿಸುತ್ತಿದ್ದ ಜೆ.ಸಿ.ಮಾಧುಸ್ವಾಮಿ ಪರ ಜೆಡಿಎಸ್ ಪಕ್ಷದ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಹೇಳಿಕೆ ನೀಡಿದ್ದು, ಜೆ.ಸಿ.ಮಾಧುಸ್ವಾಮಿ ಸಚಿವರಾಗಿ ಮುಂದುವರೆದರೆ ಒಳ್ಳೆಯದು ತುಮಕೂರು ಜಿಲ್ಲೆಯ ಅಭಿವೃದ್ಧಿಪರ ಚಿಂತನೆಗಳ ದೃಷ್ಟಿಯಿಂದ ಮಾಧುಸ್ವಾಮಿ ಸಚಿವರಾಗಿ ಹಾಗೂ ಜಿಲ್ಲೆಯ ಉಸ್ತುವಾರಿಯಾಗಿ ಮುಂದುವರೆಯಬೇಕು ಎಂದಿದ್ದಾರೆ. ಅವರು ಜಿಲ್ಲೆಯಲ್ಲಿ ಬಹುತೇಕ ಕೆರೆಗಳಿಗೆ ನೀರು ತುಂಬಿಸುವ ಉತ್ತಮ ಯೋಜನೆಯನ್ನು ರೂಪಿಸಿದ್ದಾರೆ. ಅದು ಸಂಪೂರ್ಣವಾಗಿ ಅನುಷ್ಠಾನವಾಗಬೇಕಿದೆ. ಹೀಗಾಗಿ ಜೆ.ಸಿ.ಮಾಧುಸ್ವಾಮಿ ಅವರೇ ಮುಂದುವರೆಯಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಬಸವರಾಜ ಬೊಮ್ಮಾಯಿ, ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಕುಟುಂಬಸ್ಥರ ಜತೆ ದೇವಸ್ಥಾನಗಳಿಗೆ ತೆರಳಲಿದ್ದಾರೆ. ಬೆಂಗಳೂರಿನ ಸಂಜಯನಗರದಲ್ಲಿರುವ ರಾಧಾಕೃಷ್ಣ ದೇವಸ್ಥಾನ ಹಾಗೂ ಬಾಲಬ್ರೂಯಿ ಅತಿಥಿ ಗೃಹದ ಬಳಿಯಿರುವ ಆಂಜನೇಯ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆಯಲಿದ್ದಾರೆ.
ಕರ್ನಾಟಕ ರಾಜ್ಯದ ನಿಯೋಜಿತ ಮುಖ್ಯಮಂತ್ರಿ ಬಸವರಾಜ ಸೋಮಪ್ಪ ಬೊಮ್ಮಾಯಿ ಮನೆಗೆ ಮಾಜಿ ಸಚಿವ ಭೈರತಿ ಬಸವರಾಜ್ ಭೇಟಿ ನೀಡಿದ್ದಾರೆ. ಬೊಮ್ಮಾಯಿ ಇಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆಯೇ ಶಾಸಕರ ದಂಡು ಅವರ ನಿವಾಸದತ್ತ ಆಗಮಿಸುತ್ತಿದೆ.
ನೂತನ ಸಿಎಂ ಆಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ ಅವರ ಮನೆಗೆ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಬೊಮ್ಮಾಯಿ ಮನೆ ಬಳಿ ಕಾರ್ಯಕರ್ತರು, ಅಭಿಮಾನಿಗಳು ಬರುವ ಸಾಧ್ಯತೆ ಇರುವುದರಿಂದ ಮನೆ ಬಳಿ ಬ್ಯಾರಿಕೇಡ್ ಹಾಕಿ ಭದ್ರತೆ ನೀಡಲಾಗಿದ್ದು, ಆರ್.ಟಿ.ನಗರದ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಬಂದ್ ಆಗಿವೆ.
ಕೆಲವೇ ಗಂಟೆಗಳಲ್ಲಿ ಅಧಿಕಾರ ಸ್ವೀಕರಿಸಲಿರುವ ನಿಯೋಜಿತ ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ನಿವಾಸಕ್ಕೆ ಶಾಸಕರ ದಂಡು ಬರಲಾರಂಭಿಸಿದೆ. ಬೊಮ್ಮಾಯಿ ಅವರನ್ನು ಭೇಟಿಯಾಗಲು ಶಾಸಕರು ಆಗಮಿಸುತ್ತಿದ್ದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಬೊಮ್ಮಾಯಿ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಮುಖ್ಯಮಂತ್ರಿಯಾಗಿ ಆಗಿ ಇಂದು ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ರಾಜಭವನದ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿದ್ದು, ಡಿಸಿಪಿ, ಎಸಿಪಿ ಸೇರಿ 500ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
Published On - 7:30 am, Wed, 28 July 21