Basavaraj Bommai: ಸಿಎಂ ಆಗಿ ಬಸವರಾಜ ಬೊಮ್ಮಾಯಿ; ರೇಸ್ನಲ್ಲಿದ್ದ ಇತರರು ಹಿಂದೆ ಬಿದ್ದದ್ದೆಲ್ಲಿ?
Karnataka Politics: ಸ್ವಹಿತಕ್ಕಿಂತ ಪಕ್ಷದ ಹಿತ ಯೋಚಿಸಿದ ಪ್ರಲ್ಹಾದ ಜೋಶಿ ಸಿಎಂ ಗಾದಿಯನ್ನು ನಿರಾಕರಿಸಿದ ನಂತರವೇ ಲಿಂಗಾಯತ ಸಿಎಂ ಎಂಬುದು ಖಚಿತವಾಯಿತು ಮತ್ತು ಇತರರ ಹೆಸರುಗಳು ಮುನ್ನೆಲೆಗೆ ಬಂದವು.
ಕರ್ನಾಟಕದ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ನಿರ್ಧರಿಸಲು ಬಿಜೆಪಿಯ ವರಿಷ್ಠರು ಯಾವ ಅಂಶಗಳನ್ನು ಪರಿಗಣಿಸಿದರು ಎಂದು ಸಹಜವಾಗಿ ಎಲ್ಲರಿಗೂ ಕುತೂಹಲ ಹುಟ್ಟದಿರದು. ಲಿಂಗಾಯತ ಸಮುದಾಯದ (Lingayat Community) ನಾಯಕರನ್ನೇ ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಬೇಕು ಎಂದು ಬಿ.ಎಸ್.ಯಡಿಯೂರಪ್ಪ (BS Yediyurappa) ಶರತ್ತು ವಿಧಿಸಿದ್ದರೇ ಎಂಬ ಪ್ರಶ್ನೆಗಳೂ ಹುಟ್ಟಿಕೊಂಡಿವೆ. ಆದರೆ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಹೊರತುಪಡಿಸಿಯೂ ಇತರ ಲಿಂಗಾಯತ ನಾಯಕರಿದ್ದರಲ್ಲ..ಅವರನ್ನೇಕೆ ಪರಿಗಣಿಸಿಲ್ಲ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಹೊಸ ಪ್ರಯೋಗಕ್ಕೆ ಮುಂದಾಗುವ ಯೋಚನೆ ಇದ್ದ ಹೈಕಮಾಂಡ್ ತನ್ನ ಪ್ರಯತ್ನವನ್ನು ಕೈಬಿಟ್ಟು, ರೆಬೆಲ್ ಆಗಬಹುದಾದ ನಿರ್ಧಾರದಿಂದ ಹಿಂದೆ ಸರಿದ ಬಗ್ಗೆಯೂ ಹಲವಾರು ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಹರಿದಾಡಲು ಆರಂಭಿಸಿವೆ.
ಹಾಗಾದರೆ ಬಿಜೆಪಿ ಹೈಕಮಾಂಡ್ ಮುಂದೆ ಸಿಎಂ ಹುದ್ದೆಗಾಗಿ ನಿಜಕ್ಕೂ ಯಾರ ಹೆಸರುಗಳು ಇದ್ದವು ಎಂದು ಹುಡುಕುತ್ತ ಹೊರಟರೆ ಪ್ರಲ್ಹಾದ ಜೋಶಿ ಅವರ ಹೆಸರು ಮೊದಲು ನಿಲ್ಲುತ್ತದೆ. ಆದರೆ ಸ್ವತಃ ಪ್ರಲ್ಹಾದ ಜೋಶಿ ಅವರೇ ತಾನು ಮುಖ್ಯಮಂತ್ರಿಯಾಗುವುದಿಲ್ಲ, ರಾಜ್ಯ ರಾಜಕಾರಣಕ್ಕೆ ಪಲ್ಲಟಗೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸ್ಥಾನವನ್ನು ನಿರಾಕರಿಸಿದ್ದರಂತೆ ಎನ್ನುತ್ತವೆ ಬಲ್ಲ ಮೂಲಗಳು. ಸದ್ಯ ಕೇಂದ್ರ ಸರ್ಕಾರದ ಆಯಕಟ್ಟಿನ ಜಾಗ ಅಲಂಕರಿಸಿರುವ ಅವರ ಅನುಪಸ್ಥಿತಿ ಕೇಂದ್ರ ಸರ್ಕಾರಕ್ಕೆ ಸ್ವಲ್ಪ ಹಿನ್ನೆಡೆಯನ್ನೂ ಉಂಟುಮಾಡುವ ಸಾಧ್ಯತೆ ಇದ್ದಿದ್ದಂತೂ ಖರೆ. ಸ್ವಹಿತಕ್ಕಿಂತ ಪಕ್ಷದ ಹಿತ ಯೋಚಿಸಿದ ಪ್ರಲ್ಹಾದ ಜೋಶಿ ಸಿಎಂ ಗಾದಿಯನ್ನು ನಿರಾಕರಿಸಿದ ನಂತರವೇ ಲಿಂಗಾಯತ ಸಿಎಂ ಎಂಬುದು ಖಚಿತವಾಯಿತು ಮತ್ತು ಇತರರ ಹೆಸರುಗಳು ಮುನ್ನೆಲೆಗೆ ಬಂದವು.
ಮೊದಲು ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರಾಗಿ ಕರ್ತವ್ಯ ನಿರ್ವಹಿಸಿದ ಲಕ್ಷ್ಮಣ ಸವದಿ ಹೆಸರು ಮುಖ್ಯಮಂತ್ರಿ ರೇಸ್ನಲ್ಲಿ ಇತ್ತಂತೆ. ಆದರೆ ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿ ವಹಿಸಿದ್ದ ಜವಾಬ್ಧಾರಿಯನ್ನೇ ಲಕ್ಷ್ಮಣ ಸವದಿ ಸಮರ್ಪಕವಾಗಿ ನಿರ್ವಹಿಸಿಲ್ಲ ಎಂಬ ಗ್ರೌಂಡ್ ರಿಪೋರ್ಟ್ ವರಿಷ್ಠರನ್ನು ತಲುಪಿದೆ. ಅದರಲ್ಲೂ ಸಾರಿಗೆ ಸಿಬ್ಬಂದಿ ಮುಷ್ಕರ ದೇಶಮಟ್ಟದಲ್ಲಿ ಕರ್ನಾಟಕದ ಬಿಜೆಪಿ ಸರ್ಕಾರದ ಹೆಸರು ನಕಾರಾತ್ಮಕ ವಿಷಯಕ್ಕೆ ಪದೇಪದೇ ಕೇಳಿಬರುವಂತೆ ಮಾಡಿತ್ತು. ಇದು ಲಕ್ಷ್ಮಣ್ ಸವದಿ ಅವರನ್ನು ಉಪ ಮುಖ್ಯಮಂತ್ರಿಯಿಂದ ಮುಖ್ಯಮಂತ್ರಿ ಮಾಡುವಲ್ಲಿ ತಡೆಗೋಡೆಯಾಯಿತು.
ಮುಖ್ಯಮಂತ್ರಿ ಹುದ್ದೆಗಾಗಿ ನಡೆದ ಓಟದಲ್ಲಿ ಬಸವರಾಜ ಬೊಮ್ಮಾಯಿ ಹೆಸರು ಎರಡನೇ ಸ್ಥಾನದಲ್ಲಿತ್ತು. ಅವರ ಬಗ್ಗೆ ಯಾವುದೇ ಆರೋಪ ಕೇಳಿಬಂದಿರಲಿಲ್ಲ. ವಿವಾದಗಳಿರಲಿಲ್ಲ. ರಾಜಕೀಯದ ಕೊಳಕಿನ ಒಂದು ಚುಕ್ಕೆಯೂ ಬಸವರಾಜ ಬೊಮ್ಮಾಯಿ ಅಂಗಿಯ ಮೇಲೆ ಅಚ್ಚಾಗಿರಲಿಲ್ಲ. ಮತ್ತು ತಮಗೆ ವಹಿಸಿದ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಹಿನ್ನೆಲೆಯೂ ಅವರಿಗಿತ್ತು. ಇದೆಲ್ಲದರ ಜತೆಗೆ ಬಿ.ಎಸ್.ಯಡಿಯೂರಪ್ಪ ಕೆಜೆಪಿ ಪಕ್ಷ ಸ್ಥಾಪಿಸಿದಾಗ ಬಸವರಾಜ ಬೊಮ್ಮಾಯಿ ಬಿಜೆಪಿ ಬಿಟ್ಟುನಡೆದಿರಲಿಲ್ಲ. ಪಕ್ಷನಿಷ್ಠೆ ಮೆರೆದಿದ್ದರು. ಕೇವಲ ಪ್ಲಸ್ ಪಾಯಿಂಟ್ಗಳಿಂದಲೆ ಬಸವರಾಜ ಬೊಮ್ಮಾಯಿ ಕುರಿತ ವರದಿ ತುಂಬಿಹೋಗಿತ್ತು.
ಮುಖ್ಯಮಂತ್ರಿಯಾಗಲು ಓಟಕ್ಕೆ ನಿಂತಿದ್ದ ಇನ್ನೋರ್ವ ಪ್ರಮುಖ ನಾಯಕ ಅರವಿಂದ ಬೆಲ್ಲದ. ಅವರು ಸಿಎಂ ರೇಸ್ನ ಪ್ರಮುಖ ಅಭ್ಯರ್ಥಿಯೇನೋ ಹೌದು, ಆದರೆ, ಅವರಿನ್ನೂ ಮಂತ್ರಿಯೇ ಆಗಿಲ್ಲ. ಸಚಿವರಾಗಿ ಕೆಲಸ ಮಾಡಿದ ಅನುಭವವೂ ಅರವಿಂದ ಬೆಲ್ಲದ ಅವರಿಗಿಲ್ಲ. ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರಷ್ಟೇ. ಮುಂದೆ ಸಾಕಷ್ಟು ಹೇರಳ ಅವಕಾಶಗಳಿವೆ. ಈಗಲೇ ಮುಖ್ಯಮಂತ್ರಿ ಹುದ್ದೆ ಕೊಡಬೇಕಾದ ಅನಿವಾರ್ಯವೇನಿಲ್ಲ ಎಂದು ಬಿಜೆಪಿ ಹೈಕಮಾಂಡ್ಗೆ ಅನಿಸಿದೆ. ಇದೇ ಕಾರಣದಿಂದ ಅರವಿಂದ ಬೆಲ್ಲದಗೆ ಬೆಲ್ಲದ ರುಚಿ ದಕ್ಕಲಿಲ್ಲ.
ಇವರೆಲ್ಲರ ಜತೆಗೆ ಅತ್ಯಂತ ಪ್ರಮುಖ ಆಕಾಂಕ್ಷಿ ಆಗಿದ್ದವರು ಮುರುಗೇಶ್ ನಿರಾಣಿ. ಹೈಕಮಾಂಡ್ ಜತೆಗೆ ನಿಕಟ ಸಂಪರ್ಕ, ಅನುಭವ ಮತ್ತು ರಾಜಕೀಯಕ್ಕೆ ಅಗತ್ಯವಿರುವ ಇತರ ಎಲ್ಲ ಬಲಗಳೂ ಮುರುಗೇಶ್ ನಿರಾಣಿ ಬಳಿ ಇದ್ದವು. ಆದರೆ ಅವರ ಮೇಲೆ ಇರುವ ಕೆಲವು ಪ್ರಕರಣಗಳು ಸಿಎಂ ಪಟ್ಟದಿಂದ ವಂಚಿತರಾಗಿಸಿದವು ಎಂಬ ಮಾತುಗಳು ಕೇಳಿಬಂದಿವೆ.
ಇದನ್ನೂ ಓದಿ:
Basavaraj Bommai: ಯಡಿಯೂರಪ್ಪ ಉತ್ತರಾಧಿಕಾರಿ ಬಸವರಾಜ ಬೊಮ್ಮಾಯಿ, ಹೋರಾಟದ ಹಾದಿಯಲ್ಲಿ ಅರಳಿದ ನಾಯಕ
ಮಾಸ್ ಲೀಡರ್ಗಳು ಮತ್ತು ಬಿಜೆಪಿಯ ಹೊಸ ಹೈಕಮಾಂಡ್ ಸಂಸ್ಕೃತಿ: ಯಡಿಯೂರಪ್ಪ ಎಂಬ ಜೀವಂತ ಅಧ್ಯಾಯ
(Basavaraja Bommai as Karnataka new CM How other leaders in the race fallen behind)