AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಟಿ ರವಿ ಬಂಧನ ಪ್ರಕರಣ: ರಾಜ್ಯಪಾಲರ ಪತ್ರಕ್ಕೆ ಪ್ರತಿಕ್ರಿಯೆಯನ್ನೇ ನೀಡದ ಸಿಎಂ ಕಚೇರಿ!

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರ ಬಂಧನ ಮತ್ತು ಪೊಲೀಸ್ ದೌರ್ಜನ್ಯದ ಬಗ್ಗೆ ಮುಖ್ಯಮಂತ್ರಿ ಕಚೇರಿಗೆ ಡಿಸೆಂಬರ್ 31ರಂದು ಪತ್ರ ಬರೆದಿರುವುದು ತಿಳಿದುಬಂದಿದೆ. ಘಟನೆಯ ತನಿಖೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ಪತ್ರದಲ್ಲಿ ಸಲಹೆ ನೀಡಿದ್ದರು. ಆದರೆ, ಮುಖ್ಯಮಂತ್ರಿಗಳ ಕಚೇರಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.

ಸಿಟಿ ರವಿ ಬಂಧನ ಪ್ರಕರಣ: ರಾಜ್ಯಪಾಲರ ಪತ್ರಕ್ಕೆ ಪ್ರತಿಕ್ರಿಯೆಯನ್ನೇ ನೀಡದ ಸಿಎಂ ಕಚೇರಿ!
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಸಿಎಂ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಕಿರಣ್​ ಹನಿಯಡ್ಕ
| Updated By: Ganapathi Sharma|

Updated on: Jan 08, 2025 | 12:55 PM

Share

ಬೆಂಗಳೂರು, ಜನವರಿ 8: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಲ್ಲಿ ವಿಧಾನಪರಿಷತ್ ಬಿಜೆಪಿ ಸದಸ್ಯ ಸಿಟಿ ರವಿ ಅವರನ್ನು ಬೆಳಗಾವಿ ಪೊಲೀಸರು ಬಂಧಿಸಿದ ವಿಚಾರ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸದ್ದು ಮಾಡಿತ್ತು. ಪ್ರಕರಣ ಸಂಬಂಧ, ಮಧ್ಯಪ್ರವೇಶ ಮಾಡಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳ ಕಚೇರಿಗೆ ಡಿಸೆಂಬರ್ 31ರಂದೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪತ್ರ ಬರೆದಿದ್ದರು ಎಂಬುದು ಈಗ ತಿಳಿದುಬಂದಿದೆ. ಆದರೆ, ಮುಖ್ಯಮಂತ್ರಿಗಳ ಕಚೇರಿಯು ರಾಜ್ಯಪಾಲರ ಪತ್ರಕ್ಕೆ ಪ್ರತಿಕ್ರಿಯೆಯನ್ನೇ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

ರಾಜ್ಯಪಾಲರ ಪತ್ರದಲ್ಲೇನಿತ್ತು?

ಕರ್ನಾಟಕ ವಿಧಾನ ಪರಿಷತ್ತಿನ ಗೌರವಾನ್ವಿತ ಸದಸ್ಯರಾದ ಸಿಟಿ ರವಿ ತಮ್ಮ ಸಹೋದ್ಯೋಗಿಗಳೊಂದಿಗೆ ನನ್ನನ್ನು ಭೇಟಿಯಾಗಿ ಬೆಳಗಾವಿಯಲ್ಲಿ ಅಧಿವೇಶನ ಮುಗಿದ ನಂತರ ಇತ್ತೀಚೆಗೆ ನಡೆದ ಘಟನೆಯ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದ್ದಾರೆ. ಬೆಳಗಾವಿ ಪೊಲೀಸ್ ಕಮಿಷನರ್ ಮತ್ತು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಗಳು ಅಧೀನ ಅಧಿಕಾರಿಗಳೊಂದಿಗೆ ಅವರನ್ನು ಬಂಧಿಸಿ ಕಬ್ಬಿನ ಗದ್ದೆ, ಬಯಲುಸೀಮೆ, ಖಾನಾಪುರ, ಕಿತ್ತೂರು, ಲೋಕಾಪುರ, ಸಂಕೇಶ್ವರ ಮತ್ತು ವಿವಿಧೆಡೆ ಅಪಾಯಕಾರಿ ದೂರದ ಸ್ಥಳಗಳಿಗೆ ಕರೆದೊಯ್ದಿರುವ ಬಗ್ಗೆ ಸಿಟಿ ರವಿ ತಿಳಿಸಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿದ್ದಾಗ ರಕ್ತಸ್ರಾವವಾಗಿ ಗಾಯಗೊಂಡಿದ್ದರೂ ರಾತ್ರಿಯಿಡೀ 400 ಕಿಮೀ ದೂರ ಸುತ್ತಾಡಿಸಿದ್ದಾರೆ ಎಂದು ಅವರು ತಿಳಿಸಿರುತ್ತಾರೆ. ಅಲ್ಲದೆ, ಭಯಾನಕ ಚಿತ್ರಹಿಂಸೆ ಮತ್ತು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿರುವ ಬಗ್ಗೆ ದೂರಿದ್ದಾರೆ. ಇದು ಕ್ಷಮಿಸಲಾಗದ ಪೊಲೀಸ್ ದೌರ್ಜನ್ಯವಾಗಿದೆ ಎಂದು ರಾಜ್ಯಪಾಲರು ಮುಖ್ಯಮಂತ್ರಿಗಳ ಕಚೇರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Governor Letter

ರಾಜ್ಯಪಾಲರ ಪತ್ರದ ಪ್ರತಿ

ಮುಂದುವರಿದು, ಖಾನಾಪುರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ದೌರ್ಜನ್ಯದ ವಿರುದ್ಧ ತಾವು ಸಲ್ಲಿಸಿದ ದೂರು ಮತ್ತು ಈ ಬಗ್ಗೆ ಬೆಳಗಾವಿ ಎಸ್ಪಿ ಮನವಿ ಮಾಡಿದ್ದರೂ ಪೊಲೀಸರು ತಮ್ಮ ದೂರನ್ನು ಪರಿಗಣಿಸಿಲ್ಲ ಎಂದು ರವಿ ತಿಳಿಸಿದ್ದಾರೆ. ಆದ್ದರಿಂದ ಇಡೀ ಪ್ರಕರಣದಲ್ಲಿ, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದು, ಅವರ ಜೀವಕ್ಕೆ ಹೆಚ್ಚಿನ ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ. ಪ್ರಕರಣದ ಗಂಭೀರತೆ ಮತ್ತು ದಾಖಲೆಗಳನ್ನು ಪರಿಶೀಲಿಸಿದಾಗ, ಎರಡೂ ಸಮಸ್ಯೆಗಳು ತುಂಬಾ ಗಂಭೀರವಾಗಿವೆ ಮತ್ತು ನಿಮ್ಮ (ಮುಖ್ಯಮಂತ್ರಿಗಳ) ವೈಯಕ್ತಿಕ ಹಸ್ತಕ್ಷೇಪದ ಅಗತ್ಯವಿದೆ. ವಿಷಯವು ಚುನಾಯಿತ ಪ್ರತಿನಿಧಿಗೆ ಸಂಬಂಧಿಸಿರುವುದರಿಂದ, ಈ ವಿಷಯವನ್ನು ವೈಯಕ್ತಿಕವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ನಿಮಗೆ ಸಲಹೆ ನೀಡುತ್ತೇನೆ ಎಂದು ಮುಖ್ಯಮಂತ್ರಿ ಕಚೇರಿಗೆ ಬರೆದ ಪತ್ರದಲ್ಲಿ ರಾಜ್ಯಪಾಲರು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಮಾನವಹಕ್ಕುಗಳ ಆಯೋಗಕ್ಕೆ ಸಿಟಿ ರವಿ ದೂರು: ಡಿಕೆಶಿ, ಬಾದರ್ಲಿ, ಹೆಬ್ಬಾಳ್ಕರ್​ ವಿರುದ್ಧ ಗಂಭೀರ ಆರೋಪ

ಆದರೆ, ಈವರೆಗೆ ಸಿಎಂ ಕಚೇರಿಯಿಂದ ರಾಜ್ಯಪಾಲರ ಕಚೇರಿಗೆ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎನ್ನಲಾಗಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ