ಮಾನವಹಕ್ಕುಗಳ ಆಯೋಗಕ್ಕೆ ಸಿಟಿ ರವಿ ದೂರು: ಡಿಕೆಶಿ, ಬಾದರ್ಲಿ, ಹೆಬ್ಬಾಳ್ಕರ್ ವಿರುದ್ಧ ಗಂಭೀರ ಆರೋಪ
ವಿಧಾನ ಪರಿಷತ್ ಸದಸ್ಯ ಸಿಟಿ. ರವಿ ಅವರ ಬಂಧನದ ಸಂದರ್ಭದಲ್ಲಿ ಪೊಲೀಸ್ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. 13 ಪುಟಗಳ ದೂರಿನಲ್ಲಿ ಡಿಸಿಎಂ, ಸಚಿವರು, ಹಾಗೂ ಹಲವಾರು ಪೊಲೀಸ್ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿದೆ.
ಬೆಂಗಳೂರು, ಜನವರಿ 05: ವಿಧಾನಪರಿಷತ್ ಸದಸ್ಯ ಸಿ.ಟಿ ರವಿ (CT Ravi) ವರ್ಸಸ್ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಮಾತಿನ ಯುದ್ಧದ ಪ್ರಕರಣ ಮುಂದುವರೆದಿದೆ. ದೂರು, ಪ್ರತಿದೂರುಗಳು ದಾಖಲಾಗುತ್ತಿವೆ. ಇದೀಗ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗಕ್ಕೆ ಇ-ಮೇಲ್ ಮೂಲಕ 13 ಪುಟಗಳ ದೂರನ್ನು ಸಿಟಿ ರವಿ ಸಲ್ಲಿಸಿದ್ದು, ಬಂಧನದ ವೇಳೆ ಪೊಲೀಸ್ ದೌರ್ಜನ್ಯ, ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಆರೋಪಿಸಿದ್ದಾರೆ.
ದೂರಿನಲ್ಲಿ ಡಿಸಿಎಂ ಡಿಕೆ. ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಬಸವನಗೌಡ ಬಾದರ್ಲಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ ಮತ್ತು ಅವರ ಪಿಎಗಳು ಹಾಗೂ ಹಿರೇಬಾಗೇವಾಡಿ ಸಿಪಿಐ ರಾಜು ಪಾಟೀಲ್ ಹೆಸರು ಕೂಡ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಡಿಜಿಪಿ ಅಲೋಕ್ ಮೋಹನ್ಗೆ ಸಿಟಿ ರವಿ ದೂರು: ಡಿಕೆ ಶಿವಕುಮಾರ್, ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆರೋಪ
ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಪರಮೇಶ್ವರ್, ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ ಹಿಂಸೆ ತಡೆಯುವಲ್ಲಿ ವಿಫಲರಾಗಿದ್ದಾರೆ. ಪೊಲೀಸ್ ಅಧಿಕಾರಿಗಳ ವಿರುದ್ಧ ಡಿಜಿಪಿ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಆರೋಪ ಮಾಡಿದ್ದಾರೆ.
ಒಂದ್ಕಡೆ ಸಿಐಡಿ, ದಾಖಲೆಗಳನ್ನ ಸಂಗ್ರಹಿಸುತ್ತಿದ್ದು, ಸಿಟಿ ರವಿಗೂ ನೋಟಿಸ್ ಕೊಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಮತ್ತೊಂದು ಕಡೆ ರಾಜ್ಯಪಾಲರಿಗೆ, ಡಿಐಜಿ ಅಲೋಕ್ ಮೋಹನ್ ಅವರಿಗೆ ಸಿಟಿ ರವಿ ದೂರು ನೀಡಿದ್ದು, ನನ್ನ ಕೊಟ್ಟ ಕೇಸ್ ಎಫ್ಐಆರ್ ಆಗಿಲ್ಲ ಅಂತಾ ಕಿಡಿಕಾರಿದ್ದಾರೆ.
ಇನ್ನೂ ಪ್ರಕರಣದಲ್ಲಿ ಸಿಐಡಿಗೆ ಅತಿದೊಡ್ಡ ಸವಾಲ್ ಅಂದರೆ ಪರಿಷತ್‌ನಲ್ಲಿ ಮಹಜರು ನಡೆಸುವುದು. ಈ ಸಂಬಂಧ ಈಗಾಗಲೇ ಸಭಾಪತಿಗಳಿಗೆ ಪತ್ರ ಬರೆದು ಮಹಜರಿಗೆ ಅನುಮತಿ ಕೇಳಿದ್ದಾರೆ. ಆದರೆ ಹೇಗೆ ಮಹಜರು ಮಾಡ್ತೀರಾ ಅಂತಾ ವಿವರವಾಗಿ ತಿಳಿಸುವಂತೆ ಸಭಾಪತಿ ಹೊರಟ್ಟಿ ಪ್ರಶ್ನಿಸಿದ್ದರು. ಸಿಐಡಿ ಉತ್ತರ ಬಂದ ಬಳಿಕ ಮಹಜರು ಬಗ್ಗೆ ಅಂತಿಮ ನಿರ್ಧಾರವಾಗಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಿ.ಟಿ ರವಿ, ಸದನದೊಳಗೆ ನಡೆದ ಘಟನೆಯಾಗಿದ್ದರಿಂದ ಸಭಾಪತಿಗಳದ್ದೇ ಅಂತಿಮ ತೀರ್ಮಾನ ಎಂದು ಹೇಳಿದ್ದರು.
ಇದನ್ನೂ ಓದಿ: ರಾಜ್ಯಪಾಲರಿಗೆ ಸಿಟಿ ರವಿ ದೂರು: ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯ, ಸೂಕ್ತ ಭದ್ರತೆಗೆ ಮನವಿ
ಡಿಸೆಂಬರ್ 19ರಂದು ಬೆಳಗಾವಿಯಲ್ಲಿ ಬಂಧಿಸಿ ರಾತ್ರಿಯಿಡೀ ಸುತ್ತಾಡಿಸಿರೋದಕ್ಕೆ ಗರಂ ಆಗಿದ್ದ ಸಿ.ಟಿ.ರವಿ ಇತ್ತೀಚೆಗೆ ಡಿಜಿ& ಐಜಿಪಿ ಅಲೋಕ್ ಮೋಹನ್ ಭೇಟಿ ಆಗಿ 8 ಪುಟಗಳ ದೂರು ನೀಡಿದ್ದರು. ಇಡೀರಾತ್ರಿ ಅಲೆದಾಡಿಸಿದ ಪೊಲೀಸರ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.