ಹಾವೇರಿ, ಜ.14: ಜಿಲ್ಲೆಯ ಹಾನಗಲ್ನಲ್ಲಿ (Hangal) ನಡೆದ ಮಹಿಳೆ ಮೇಲಿನ ಗ್ಯಾಂಗ್ ರೇಪ್ ಪ್ರಕರಣವನ್ನು ರಾಜ್ಯ ಸರ್ಕಾರ ಮುಚ್ಚಿ ಹಾಕಲು ಯತ್ನಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಪ್ರಕರಣದ ಬಗ್ಗೆ ಸಿದ್ದರಾಮಯ್ಯ (Siddaramaiah) ಅವರು ಮೌನವೇಕೆ? ಪೊಲೀಸರು ಯಾಕೆ ಎಫ್ಐಆರ್ ದಾಖಲಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ಅತ್ಯಾಚಾರದ ನಡೆದಿದೆ ಎಂದು ಮಹಿಳೆ ಹೇಳಿದರೆ ಮೊದಲು ಎಫ್ಐಆರ್ ದಾಖಲಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶವಿದೆ. ಆದರೆ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಕೇವಲ ಹಲ್ಲೆ ಸೆಕ್ಷನ್ ಹಾಕಿದ್ದಾರೆ. ಪೊಲೀಸರದ್ದೇ ಇಲ್ಲಿ ದೊಡ್ಡ ಅಪರಾಧ ಇದೆ. ನಿರಂತರವಾಗಿ ರೇಪ್ ಆಗಿದೆ ಎಂದು ನ್ಯಾಯಾಧೀಶರ ಮುಂದೆ ಮಹಿಳೆ ಹೇಳಿಕೆ ಕೊಟ್ಟ ನಂತರ ಪ್ರಕರಣ ದಾಖಲಿಸಲಾಗಿದೆ. ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸ ಹಾನಗಲ್ ಪೊಲೀಸರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಕರಣ ಸಂಬಂಧ ನಿಷ್ಪಕ್ಷಪಾತ ತನಿಖೆ ಆಗಬೇಕು. ಆದರೆ ಆಗಿಲ್ಲ. ಆರು ಜನ ಅರೆಸ್ಟ್ ಆಗಿದ್ದಾರೆ. ನಾನು ಭೇಟಿ ಆಗುತ್ತೇನೆ ಅಂತ ಸಂತ್ರಸ್ತೆಯನ್ನು ಸ್ಥಳ ತೋರಿಸುವ ನೆಪದಲ್ಲಿ ಶಿರಸಿಗೆ ಕರೆದೊಯ್ದಿದ್ದಾರೆ. ಪಕ್ಕದ ಊರಿನಲ್ಲಿ ಏನು ಅತ್ಯಾಚಾರ ಆಗಿದೆ, ಆ ಊರಿನ ಜನರ ಕೈಯಲ್ಲಿ ಸಂತ್ರಸ್ತೆಯನ್ನು ನೀಡಿದ ಹಾಗೆ ಆಗಿದೆ ಎಂದರು.
ಇದನ್ನೂ ಓದಿ: ಹಾನಗಲ್ ಗ್ಯಾಂಗ್ ರೇಪ್ ಕೇಸ್ ಮುಚ್ಚಿ ಹಾಕುವುದರಲ್ಲಿ ಪೊಲೀಸರೇ ಭಾಗಿಯಾಗಿದ್ದಾರೆ: ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪ
ಗ್ಯಾಂಗ್ ರೇಪ್ ಪ್ರಕರಣವು ರಾಷ್ಟ್ರ ಮಟ್ಟದಲ್ಲಿ ಸುದ್ದಿ ಆದರೂ ಸಿದ್ದರಾಮಯ್ಯ ಅವರು ಒಂದು ಪದ ಮಾತಾಡಿಲ್ಲ. ನನಗೆ ಆಶ್ಚರ್ಯ ಆಗಿದೆ. ಪ್ರಕರಣದ ಬಗ್ಗೆ ಸಿದ್ದರಾಮಯ್ಯ ಯಾಕೆ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಬೊಮ್ಮಾಯಿ ಪ್ರಶ್ನಿಸಿದರು.
ಗೃಹ ಸಚಿವ ಪರಮೇಶ್ವರ್ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಅಂತಾರೆ. ಸಮುದಾಯ ಜಾತಿ ನೋಡಿ ಸೂಕ್ತ ಕ್ರಮಕ್ಕೆ ಸೂಚನೆ ನೀಡುತ್ತೀರಾ ನೀವು? ಸರ್ಕಾರದಿಂದ ಪೊಲೀಸರ ಮೇಲೆ ಕೇಸ್ ಮುಚ್ಚಿಹಾಕುವ ಒತ್ತಡ ಇದೆ. ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ಸಂತ್ರಸ್ತ ಹೆಣ್ಣುಮಗಳು ಮಾತನಾಡಿದ್ದಾರೆ. ಬಂಧಿಸಿದ್ದೇವೆಂದು ತೋರಿಸಬೇಕು, ಹೀಗಾಗಿ ಯಾರನ್ನೋ ಬಂಧಿಸಿದ್ದಾರೆ. ಯಾರು ಅತ್ಯಾಚಾರ ಮಾಡಿದ್ದಾರೆ ಅವರು ಹೊರಗೆ ಓಡಾಡುತ್ತಿದ್ದಾರೆ. ಇದು ಕೇಸ್ ಮುಚ್ಚಿ ಹಾಕಲು ಹೊರಟಿದ್ದಾರೆ ಎಂಬುದು ಬಹಳ ಸ್ಪಷ್ಟವಾಗಿ ಕಾಣುತ್ತಿದೆ ಎಂದರು.
ಮೊದಲು ಸಿಮಿ ಅಂತ ಒಂದು ಸಂಘಟನೆ ಇತ್ತು. ಅದು ಬ್ಯಾನ್ ಆಗಿದೆ. ಪಿಎಫ್ಐ ಬ್ಯಾನ್ ಮಾಡಿದ ಬಳಿಕ ಮತ್ತೆ ಹೊಸ ಸಂಘಟನೆಗಳಿಗೆ ಅವರು ಸೇರಿಕೊಂಡಿದ್ದಾರೆ. ಕಾಂಗ್ರೆಸ್ ಬಂದ ಬಳಿಕ ಅವರಿಗೆ ಶಕ್ತಿ ಬಂದಿದೆ. ಪುಡಾರಿಗಳು ಗುಂಡಾಗಳು ನಮ್ಮ ಸರ್ಕಾರ ಇದೆ ಅಂತಾರೆ. ನಮ್ಮ ಸರ್ಕಾರ ಇದೆ, ದಕ್ಕಿಸಿಕೊಳ್ಳುತ್ತೇವೆ ಅಂತಿದ್ದಾರೆ. ಹಾಗಾದರೆ ನಿಮ್ಮದು ಪುಡಾರಿಗಳು, ಗುಂಡಾಗಳ ಸರ್ಕಾರಾನಾ ಎಂದು ಪ್ರಶ್ನಿಸಿದರು.
ನಾವು ಗ್ಯಾಂಗ್ ರೇಪ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಸಂತ್ರಸ್ತೆಗೆ ಸಹಾಯ, ಸಹಕಾರ ಜೊತೆಗೆ ಕಾನೂನಿನ ನೆರವು ಕೊಡುತ್ತೇವೆ. ಸಂತ್ರಸ್ತೆಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸುದೀರ್ಘ ಹೋರಾಟ ಮಾಡುತ್ತೇವೆ. ಮೊದಲಿನಿಂದಲೂ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಆಮಿಷ ತೋರಿಸುವ ಪ್ರಯತ್ನವೂ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು.
ಹಾವೇರಿ ಜಿಲ್ಲೆ ಪೊಲೀಸರ ಮೇಲೆ ನಂಬಿಕೆ ಇಲ್ಲ. ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಮಾಡಬೇಕು. ಗೃಹಸಚಿವರು ಎಸ್ಐಟಿ ರಚನೆ ಮಾಡುತ್ತಾರೆ ಅನ್ನೋ ವಿಶ್ವಾಸ ಇದೆ. ಅಧಿವೇಶನ ವೇಳೆ ದಲಿತ ಮಹಿಳೆ ಬೆತ್ತಲೆ ಮಾಡಿ ಹಲ್ಲೆ ಮಾಡಿದ್ದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ರಾಜ್ಯದಲ್ಲಿ ಶೇಕಡಾ 30 ರಷ್ಟು ಕ್ರೈಮ್ ರೇಟ್ ಹೆಚ್ಚಳವಾಗಿದೆ. ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಸ್ಪೀಟ್ ಅಡ್ಡೆ ಶುರುವಾಗಿದೆ. ಪೊಲೀಸ್ ಇಲಾಖೆಯಲ್ಲೇ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದರು.
ವರದಿ: ಅಣ್ಣಪ್ಪ ಬರ್ಕಿ, ಟಿವಿ9 ಹಾವೇರಿ
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ