ಅನಂತ ಕುಮಾರ್ ತನ್ನ ಗುರುವಿನ ಹತ್ಯೆಗೆ ನ್ಯಾಯ ಒದಗಿಸುವ ಕೆಲಸ ಮಾಡಲಿ: ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ, ಬಿಜೆಪಿ ಸಂಸದ ಅನಂತ ಕುಮಾರ್ ತನ್ನ ಗುರುವಿನ ಹತ್ಯೆಗೆ ನ್ಯಾಯ ಒದಗಿಸುವ ಕೆಲಸ ಮಾಡಲಿ ಎಂದು ಕಿಡಿಕಾರಿದ್ದಾರೆ. ಋಣ ತೀರಿಸುವ ಬಗ್ಗೆ ಮಾತನಾಡುವ ಸಂಸದರು ಅವರ ರಾಜಕೀಯ ಗುರುಗಳ ಹತ್ಯೆ ಸಂಬಂಧಿಸಿ ಹೋರಾಡಲಿ ಎಂದು ಹೇಳಿದ್ದಾರೆ.
ಕಾರವಾರ, ಜನವರಿ 14: ಬಿಜೆಪಿ ಸಂಸದ ಅನಂತ ಕುಮಾರ್ ತನ್ನ ಗುರುವಿನ ಹತ್ಯೆಗೆ ನ್ಯಾಯ ಒದಗಿಸುವ ಕೆಲಸ ಮಾಡಲಿ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ (Shambhu Shetty) ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಂತಿಯ ಹೂದೋಟವಾಗಿರುವ ಜಿಲ್ಲೆಯಲ್ಲಿ ಕೋಮುಗಲಭೆ ಸೃಷ್ಠಿಸಲು ಸಂಸದರು ಹುನ್ನಾರ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆಯು ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಇಲಾಖೆಯನ್ನು ಒತ್ತಾಯಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರು ಹಾಗೂ ಮಾಜಿ ಪ್ರಧಾನಿ ವಿರುದ್ಧ ಅನಂತ ಕುಮಾರ್ ಅವಹೇಳನ ಮಾತುಗಳನ್ನಾಡಿದ್ದಾರೆ. ಕೋಮು ಭಾವನೆ ಸೃಷ್ಟಿಸಲು ಸಂಸದರು ಹೊರಟಿದ್ದಾರೆ. ಋಣ ತೀರಿಸುವ ಬಗ್ಗೆ ಮಾತನಾಡುವ ಸಂಸದರು ಅವರ ರಾಜಕೀಯ ಗುರುಗಳ ಹತ್ಯೆ ಸಂಬಂಧಿಸಿ ಹೋರಾಡಲಿ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಪ್ರಚೋದನಾಕರಿ ಹೇಳಿಕೆ: ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಸುವೋಟೊ ಕೇಸ್ ದಾಖಲು
ಭಟ್ಕಳದಲ್ಲಿ ಶಾಸಕರಾಗಿದ್ದ ಡಾ. ಯು. ಚಿತ್ತರಂಜನ್ ಅವರ ಹತ್ಯೆಯ ರೂವಾರಿ ಯಾರು ಎಂದು ಬಹಿರಂಗಪಡಿಸಲು ಹೋರಾಡಲಿ. ತನಿಖೆಗೆ ಸಂಸದರು ಯಾವತ್ತೂ ಒತ್ತಾಯಿಸಿಲ್ಲ, ಯಾಕೆ ನಿಮಗೆ ಇಷ್ಟೊಂದು ಅಸಡ್ಡೆ ಎಂದು ಪ್ರಶ್ನಿಸಿದ್ದಾರೆ. ಚಿತ್ತರಂಜನ್ ಅವರ ಆತ್ಮಕ್ಕೆ ಗೊತ್ತು ನನ್ನನ್ನು ಕೊಂದವರು ಯಾರು ಅಂತಾ, ಆ ಋಣ ತೀರಿಸುವ ಜವಾಬ್ದಾರಿ ಸಂಸದರ ಮೇಲಿದೆ ಎಂದಿದ್ದಾರೆ.
ಆ ಕುಟುಂಬಕ್ಕೂ ನ್ಯಾಯ ಸಿಕ್ಕಿಲ್ಲ
ಪರೇಶ್ ಮೇಸ್ತಾ ಪ್ರಕರಣದಲ್ಲಿ ಹನಿ ಹನಿ ರಕ್ತಕ್ಕೂ ನ್ಯಾಯ ಒದಗಿಸುತ್ತೇನೆ ಎಂದು ಹೇಳಿದ್ದರು. ರಕ್ತಕ್ಕೂ ನ್ಯಾಯ ದೊರಕಿಲ್ಲ, ಆ ಕುಟುಂಬಕ್ಕೂ ನ್ಯಾಯ ಸಿಕ್ಕಿಲ್ಲ. ಸಿಬಿಐ ಬಿ ರಿಪೋರ್ಟ್ ಬಂದಿದೆ, ಆ ಕುಟುಂಬ ಬೀದಿಗೆ ಬಿದ್ದಿದೆ. ಅನಂತ ಕುಮಾರ್ ಹೆಗಡೆಯವರು ದ್ವೇಷಿಸುವ ಜನಾಂಗದ ಜತೆಯೇ ದೈನಂದಿನ ಚಟುವಟಿಕೆಯಲ್ಲಿ ಒಟ್ಟಾಗಿದ್ದಾರೆ.
ಇದನ್ನೂ ಓದಿ: ಬಹು ದಿನಗಳ ಬಳಿಕ ಆಕ್ಟೀವ್ ಆದ ಅನಂತಕುಮಾರ್ ಹೆಗಡೆ ವಿರುದ್ಧ ಬೆಂಬಲಿಗರ ಅಸಮಾಧಾನ
ನಿಮ್ಮ ವ್ಯಾಪಾರ, ವಹಿವಾಟು ಅವರ ಮುಖಾಂತರವೇ, ಅವರ ಪಾಲುದಾರಿಕೆಯಲ್ಲೇ ನಡೆಯುತ್ತದೆ. ಈ ರೀತಿ ಹೊರಗೊಂದು ಒಳಗೊಂದು ಯಾಕೆ? ತನ್ನದೇ ಸರಕಾರಕ್ಕೆ ಒತ್ತಡ ಹಾಕಿ ಚಿತ್ತರಂಜನ್, ತಿಮ್ಮಪ್ಪ ನಾಯ್ಕ್ ಹಾಗೂ ಪರೇಶ್ ಮೇಸ್ತಾ ಪ್ರಕರಣಕ್ಕೆ ನ್ಯಾಯ ಕೊಡಿಸಲು ಹೋರಾಡಬೇಕು. ಇಲ್ಲದಿದ್ದರೆ ಇವರ ಮಾತು ಕೇವಲ ಚುನಾವಣೆಗಾಗಿ ಮತ ಪಡೆಯಲು. ಬಿಜೆಪಿಯಿಂದ ಸೀಟು ಗಿಟ್ಟಿಸಿಕೊಳ್ಳಲು ನಡೆಸುವ ಗಿಮಿಕ್ ಎಂದು ಭಾವಿಸಬೇಕಷ್ಟೇ ಎಂದು ವಾಗ್ದಾಳಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.