ಸಭೆ ವಿಳಂಬ: ಡಿಕೆ ಶಿವಕುಮಾರ್ ನಡೆಗೆ ಆಕ್ರೋಶಗೊಂಡು ಹೊರ ನಡೆದ ಬಿಜೆಪಿ ಶಾಸಕರು
ಡಿಕೆ ಶಿವಕುಮಾರ್ ನಡೆಗೆ ಬೆಂಗಳೂರು ಬಿಜೆಪಿಯ ಕೆಲ ಶಾಸಕರು ಆಕ್ರೋಶಗೊಂಡು ಸಭೆಯಿಂದ ಹೊರ ನಡೆದಿದ್ದಾರೆ. ಏನಿದು ಸಭೆ? ಇಲ್ಲಿದೆ ವಿವರ
ಬೆಂಗಳೂರು: ಬೆಂಗಳೂರಿನಲ್ಲಿ ಮಳೆ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಿದ್ದು, ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಹೊಂದಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು (ಸೋಮವಾರ) ಬೆಳಗ್ಗೆ 11ಕ್ಕೆ ಕರೆದಿದ್ದರು. ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ರೀತಿಯ ಸರ್ವ ಪಕ್ಷ ಸಭೆ ಆಯೋಜಿಸಲಾಗಿತ್ತು. ಆದ್ರೆ, ಮೊದಲ ಸಭೆ ಸರಿಯಾದ ಸಮಯಕ್ಕೆ ನಡೆಯದೇ ಬಿಜೆಪಿ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಡಿಕೆ ಶಿವಕುಮಾರ್ ಅವರ ನಡೆಗೆ ಆಕ್ರೊಶಗೊಂಡು ಸಭೆಗೆ ಬಂದಿದ್ದ ಬಿಜೆಪಿ ಶಾಸಕರು ವಾಪಸ್ ಹೋಗಿದ್ದಾರೆ. ಶಾಸಕಾರದ ಶಾಸಕ ಸೋಮಶೇಖರ್, ಭೈರತಿ ಬಸವರಾಜ್, ಅಶ್ವತ್ಥ್ ನಾರಾಯಣ, ಎಸ್.ಆರ್.ವಿಶ್ವನಾಥ್ , ಮುನಿರತ್ನ ಬೇಸರದಲ್ಲೇ ವಿಧಾನಸೌಧದಿಂದ ಹೊರಟು ಹೋದರು.
ಹೌದು…ಸಮಯಕ್ಕೆ ಸರಿಯಾಗಿ ಸಭೆ ಆರಂಭಿಸಿಲ್ಲವೆಂದು ಬಿಜೆಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ಅಶ್ವತ್ಥ್ ನಾರಾಯಣ ಪ್ರತಿಕ್ರಿಯಿಸಿದ್ದು, ಬೆಂಗಳೂರಲ್ಲಿ ಮಳೆ ಹಾಗೂ ಪ್ರವಾಹ ನಿರ್ವಹಣೆ ಸಲುವಾಗಿ ಸಭೆ ಕರೆಯಲಾಗಿತ್ತು. ನಿನ್ನೆ ಸಂಜೆ ವಾಟ್ಸಪ್ ಮೂಲಕ ಸಭೆಗೆ ಆಹ್ವಾನ ನೀಡಿದ್ದರು. ನಮಗೆ ಸಭೆಗೆ ಕರೆದು ಒಂದು ಗಂಟೆಯಿಂದ ಡಿ.ಕೆ ಶಿವಕುಮಾರ್ ಕಾಯಿಸಿದ್ದಾರೆ. ತಡವಾಗಿ ಆಗಮಿಸುವ ಬಗ್ಗೆ ಮಾಹಿತಿ ನೀಡಿರಲಿಲ್ಲ. ಈ ಮೂಲಕ ಉದ್ದೇಶಪೂರ್ವಕವಾಗಿ ಅವರ ನಡುವಳಿಕೆ ಪ್ರದರ್ಶಿಸಿದ್ದಾರೆ. ಹೀಗಾಗಿ ಸಭೆಯಿಂದ ನಿರ್ಗಮಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಇನ್ನು ವಿಧಾನಸೌಧದಿಂದ ಸಮ್ಮೇಳನ ಸಭಾಂಗಣದಲ್ಲಿ ಡಿಕೆ ಶಿವಕುಮಾರ್ ನೇತೃತ್ವದ ಸಭೆ ತಡವಾಗಿ ಆರಮಭವಾಗಿದ್ದು, ಸಭೆಯಲ್ಲಿ ಶಾಸಕರಾದ ರವಿಸುಬ್ರಹ್ಮಣ್ಯ, ಎಂ.ಕೃಷ್ಣಪ್ಪ, ಸಿ.ಕೆ.ರಾಮಮೂರ್ತಿ, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಭಾಗಿಯಾಗಿದ್ದಾರೆ. ಇನ್ನುಳಿದಂತೆ ನಗರದ ಬಿಜೆಪಿಯ ಐವರು ಶಾಸಕರು ಸಭೆ ವಿಳಂಬವಾಯಿತು ಎಂದು ಸಭೆಗೆ ಗೈರಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಬಿದ್ದ ಭಾರಿ ಮಳೆಯಿಂದ ಕೆಲ ಪ್ರದೇಶದಲ್ಲಿ ಅನಾಹುತ ಸಂಭವಿಸಿತ್ತು. ಅಂಡರ್ ಪಾಸ್ ಗಳಲ್ಲಿ ನೀರು ನಿಂತಿದ್ದ ಪರಿಣಾಮವಾಗಿ ಪ್ರಾಣ ಹಾನಿಯೂ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಇಂತಹ ಅನಾಹುತ ಸಂಭವಿಸುವುದನ್ನು ತಡೆಯುವ ನಿಟ್ಟಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಬಿಬಿಎಂಪಿ ವ್ಯಾಪ್ತಿ ಎಲ್ಲಾ ಶಾಸಕರು ಮತ್ತು ಸಂಸದರ ಸಭೆ ಕರೆದಿದ್ದರು. ವಿಧಾನಸೌಧದಲ್ಲಿ ಇಂದು (ಸೋಮವಾರ) ಬೆಳಗ್ಗೆ 11 ಗಂಟೆಗೆ ಸಭೆ ನಿಗದಿಯಾಗಿತ್ತು. ಈ ಸಭೆಗೆ ಬೆಂಗಳೂರು ಭಾಗದ ಎಲ್ಲಾ ಪಕ್ಷದ ಶಾಸಕರು ಹಾಗೂ ಸಂಸದರಿಗೆ ಆಹ್ವಾನ ನೀಡಲಾಗಿತ್ತು.
Published On - 1:18 pm, Mon, 5 June 23