‘ಮನೆಮನ ಭೇಟಿ’ ಕಾರ್ಯಕ್ರಮದ ಮೂಲಕ 14000 ಮನೆಗಳಿಗೆ ಭೇಟಿ: ರಾಜಾಜಿನಗರ ಶಾಸಕ ಎಸ್.ಸುರೇಶ್ ಕುಮಾರ್ ಹರ್ಷ

ಕಳೆದ ಜೂನ್ ತಿಂಗಳ ಕೊನೆಯ ವಾರದಲ್ಲಿ ರಾಜಾಜಿನಗರದಲ್ಲಿ ಮನೆ_ಮನ ಭೇಟಿ ಕಾರ್ಯಕ್ರಮ ಆರಂಭಿಸಲಾಗಿತ್ತು. ಈ ಕಾರ್ಯಕ್ರಮದ ಮೂಲಕ 14 ಸಾವಿರ ಮನೆಗಳನ್ನು ಭೇಟಿಯಾಗಿದ್ದು, ಶಾಸಕ ಎಸ್.ಸುರೇಶ್ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.

'ಮನೆಮನ ಭೇಟಿ' ಕಾರ್ಯಕ್ರಮದ ಮೂಲಕ 14000 ಮನೆಗಳಿಗೆ ಭೇಟಿ: ರಾಜಾಜಿನಗರ ಶಾಸಕ ಎಸ್.ಸುರೇಶ್ ಕುಮಾರ್ ಹರ್ಷ
ಎಸ್.ಸುರೇಶ್ ಕುಮಾರ್
Follow us
Rakesh Nayak Manchi
|

Updated on:Feb 27, 2023 | 10:59 PM

ಬೆಂಗಳೂರು: ರಾಜಾಜಿನಗರ ಕ್ಷೇತ್ರದಲ್ಲಿ ಆರಂಭಿಸಿದ್ದ ಮನೆಮನ ಭೇಟಿ ಕಾರ್ಯಕ್ರಮ (Mane Mana Visit Program) ಯಶಸ್ವಿಯಾಗಿ ಸಾಗುತ್ತಿದ್ದು, ಕಳೆದ ಜೂನ್ ತಿಂಗಳಿನಿಂದ ಈವರೆಗೆ 14 ಸಾವಿರ ಮನೆಗಳನ್ನು ಭೇಟಿ ಮಾಡಲಾಗಿದೆ. ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ ಮಾಜಿ ಶಿಕ್ಷಣ ಸಚಿವರೂ ಆಗಿರುವ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ (S.Suresh Kumar), ಕಳೆದ ಜೂನ್ ತಿಂಗಳ ಕೊನೆಯ ವಾರದಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಾರಂಭಗೊಂಡ ರಾಜಾಜಿನಗರ ಕ್ಷೇತ್ರದ ನಮ್ಮ “ಮನೆ ಮನ” ಭೇಟಿ ಕಾರ್ಯಕ್ರಮ ಇಂದು ಮತ್ತೊಂದು ಮೈಲಿಗಲ್ಲು ದಾಟಿತು. ಇಂದು ಸಂಜೆ ಪ್ರಕಾಶನಗರದಲ್ಲಿ ನಮ್ಮ ಈ ಮನೆ ಮನ ಭೇಟಿ ಕಾರ್ಯಕ್ರಮ 14000 ಮನೆಗಳನ್ನು ದಾಟಿತು. ಒಮ್ಮೆ ಹಿಂತಿರುಗಿ ನೋಡಿದಾಗ ಈ ಎಲ್ಲಾ ಮನೆಗಳ ಭೇಟಿ ಸಾವಿರಾರು ಮನಗಳ ಜೊತೆ ಸಂವಾದ, ನಿಜಕ್ಕೂ ನನಗೆ ಚೈತನ್ಯ ನೀಡಿದೆ, ಜೊತೆಗೆ ಅರಿವು ಮೂಡಿಸಿದೆ ಎಂದರು.

ಎಲ್ಲಾ ಮನೆಗಳಲ್ಲಿ ನನ್ನನ್ನು ಸ್ವಾಗತಿಸಿ ಅಕ್ಕರೆಯಿಂದ ಕುಳ್ಳಿರಿಸಿ ಮಾತನಾಡಿರುವ ಎಲ್ಲ ಬಂಧುಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಮನೆಯೊಳಗೆ ಸ್ವಾಗತಿಸಿ ಉಪಚರಿಸುವ ಜನರು ನನ್ನ ಬಗ್ಗೆ ಇಟ್ಟಿರುವ ಪ್ರೀತಿಯನ್ನು ತೋರಿಸಿದ್ದಾರೆ. ಅತ್ಯಂತ ಬಡಮನೆಯಲ್ಲಿಯೂ ಹೋದ ತಕ್ಷಣ ನೀರನ್ನು ಕೊಟ್ಟು ಉಪಚರಿಸಿದ ಬಗೆಯನ್ನು ನಾನೆಂದಿಗೂ ಮರೆಯಲಾರೆ. ನನ್ನೊಡನೆ ಎಲ್ಲ ಮನೆಯವರು ಮನಬೆಚ್ಚಿ ಮಾತನಾಡಿದ್ದಾರೆ. ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ತಮಗಿರುವ ಕಷ್ಟಗಳನ್ನು ವಿವರಿಸಿದ್ದಾರೆ. ವಿದ್ಯಾರ್ಥಿಗಳಂತೂ ತಮ್ಮ ಮನೆಯ ದೊಡ್ಡವನನ್ನಾಗಿ ನನ್ನನ್ನು ಕಂಡಿದ್ದಾರೆ. ಬಹಳಷ್ಟು ಹಿರಿಯರು ತುಂಬು ಮನಸ್ಸಿನಿಂದ ಹಾರೈಸಿದ್ದಾರೆ ಎಂದರು.

ಇದನ್ನೂ ಓದಿ: Shivamogga Airport: ಮೋದಿ ಕಾರ್ಯಕ್ರಮದಲ್ಲಿ ಅಸ್ವಸ್ಥಗೊಂಡಿದ್ದ ಬಿಜೆಪಿಯ ಸಕ್ರಿಯ ಕಾರ್ಯಕರ್ತ ಸಾವು

ಅನೇಕ ಜನರ ಉದಾರತೆ ನನ್ನನ್ನು ಮೂಕ ವಿಸ್ಮಿತನನ್ನಾಗಿ ಮಾಡಿದೆ. ನಾನು ಎಂದೋ ಮಾಡಿರಬಹುದಾದ ಸಣ್ಣಪುಟ್ಟ ಕೆಲಸಗಳನ್ನು ನೆನಪಿಸಿಕೊಂಡು ಮೆಚ್ಚುಗೆಯ ನುಡಿ ಮಾತುಗಳನ್ನು ಹೇಳಿದ್ದಾರೆ. ಅದೆಷ್ಟೋ ವಿಶಿಷ್ಟ ವ್ಯಕ್ತಿಗಳ ಭೇಟಿ ಆಗಿದೆ. ಅವರ ಛಲದಿಂದ ಕೂಡಿದ ಬದುಕಿನಿಂದ ನಾನು ಸ್ಪೂರ್ತಿಯನ್ನು ಪಡೆದಿದ್ದೇನೆ. ಅನೇಕ ಮನೆಗಳಿಗೆ ಅಗತ್ಯ ಸೇವಾಕಾರ್ಯ ಮಾಡುವ ಅವಕಾಶವೂ ನಮಗೆ ಸಿಕ್ಕಿದೆ. ಒಟ್ಟಿನಲ್ಲಿ ನಮ್ಮ ಈ ಮನೆ ಮನ ಭೇಟಿ ಕಾರ್ಯಕ್ರಮ ನಮ್ಮಲ್ಲಿ ಶಕ್ತಿ ತುಂಬಿದೆ. ಆತ್ಮವಿಶ್ವಾಸ ಹೆಚ್ಚಿಸಿದೆ ಎಂದರು.

ಮನೆ ಮನ ಭೇಟಿ ಕಾರ್ಯಕ್ರಮದ ಮೂಲಕ ಆರಂಭಗೊಂಡ ನಮ್ಮ ಈ ಪಯಣ ಇನ್ನು ಮುಂದೆಯೂ ಮುಂದುವರಿಯುವುದು. ತಮಗೆಷ್ಟೇ ಅಡಚಣೆ ಇದ್ದರೂ ಅವರವರ ವಾರ್ಡುಗಳಲ್ಲಿ ನನ್ನ ಜೊತೆ ಹೆಜ್ಜೆ ಹಾಕಿ, ನೂರಾರು ಮೆಟ್ಟಿಲುಗಳನ್ನು ಹತ್ತಿ, ಮನೆಗಳ ಭೇಟಿಯಲ್ಲಿ ಸಾಥ್ ನೀಡಿರುವ ಕಾರ್ಯಕರ್ತರೇ ಈ ಕಾರ್ಯಕ್ರಮಕ್ಕೆ ಶಕ್ತಿ ತುಂಬಿದವರು ಎಂದು ಶಾಸಕ ಸುರೇಶ್ ಕುಮಾರ್ ಹೇಳಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:58 pm, Mon, 27 February 23