Shivamogga Airport: ಮೋದಿ ಕಾರ್ಯಕ್ರಮದಲ್ಲಿ ಅಸ್ವಸ್ಥಗೊಂಡಿದ್ದ ಬಿಜೆಪಿಯ ಸಕ್ರಿಯ ಕಾರ್ಯಕರ್ತ ಸಾವು
ಯಡಿಯೂರಪ್ಪ ಅವರ ಕನಸಿನ ಯೋಜನೆಯಾದ ಸೋಗಾನೆಯ ನಿರ್ಮಾಣವಾಗಿರುವ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಲ್ಲಿಕಾರ್ಜುನ್ ಅವರು, ಏರಪೋರ್ಟ್ ರಸ್ತೆಯ ಸಂತೆಕಡೂರಿನ ಕೆಇಬಿ ಕಚೇರಿ ಬಳಿ ಅಸ್ವಸ್ಥಗೊಂಡಿದ್ದಾರೆ. ಇದೀಗ ಅವರು ನಿಧನಹೊಂದಿದ್ದಾರೆ.
ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಮಿಸಿದ ಶಿವಮೊಗ್ಗ ವಿಮಾನ ನಿಲ್ದಾಣ (Shivamogga Airport) ಉದ್ಘಾಟನಾ ಕಾರ್ಯಕ್ರಮದಲ್ಲಿ ಅಸ್ವಸ್ಥಗೊಂಡಿದ್ದ ಬಿಜೆಪಿಯ ಸಕ್ರಿಯ ಕಾರ್ಯಕರ್ತ ಕೊನೆಯುಸಿರೆಳೆದಿದ್ದಾರೆ. ಚಿಮನೂರು ಗ್ರಾಮ ಸೊರಬ ತಾಲೂಕಿನ ನಿವಾಸಿ ಮಲ್ಲಿಕಾರ್ಜುನ್ (55) ಮೃತ ದುರ್ದೈವಿ. ಯಡಿಯೂರಪ್ಪ (BS Yediyurappa) ಅವರ ಕನಸಿನ ಯೋಜನೆಯಾದ ಸೋಗಾನೆಯ ನಿರ್ಮಾಣವಾಗಿರುವ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಲ್ಲಿಕಾರ್ಜುನ್ ಅವರು, ಏರಪೋರ್ಟ್ ರಸ್ತೆಯ ಸಂತೆಕಡೂರಿನ ಕೆಇಬಿ ಕಚೇರಿ ಬಳಿ ಅಸ್ವಸ್ಥಗೊಂಡಿದ್ದಾರೆ. ಇದೀಗ ಅವರು ನಿಧನಹೊಂದಿದ್ದಾರೆ.
ಕಳೆದ 30 ವರ್ಷಗಳಿಂದ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿರುವ ಮಲ್ಲಿಕಾರ್ಜುನ ಅವರು, ಮೋದಿ ಕಾರ್ಯಕ್ರಮ ಮುಗಿದು ವಾಪಸ್ ಆಗುತ್ತಿದ್ದರು. ಈ ವೇಳೆ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ಬಸ್ ಪಾರ್ಕಿಂಗ್ ಸ್ಥಳಕ್ಕೆ ಹೋಗಲು ಪರದಾಟ ನಡೆಸಲಾಯಿತು. ಈ ನಡುವೆ ಮಲ್ಲಿಕಾರ್ಜುನ ಅವರಿಗೆ ತೀವ್ರ ಬಾಯಾರಿಕೆಯಾಗಿದ್ದು, ಸುಮಾರು ಒಂದು ಗಂಟೆ ಬಳಿಕ ಕುಡಿಯುವ ನೀರು ಸಿಕ್ಕಿದೆ. ನೀರು ಕುಡಿದ ನಂತರ ಮೋದಿ.. ಮೋದಿ.. ಎಂದು ಜೈಕಾರ ಹಾಕುತ್ತಿದ್ದರು. ಆದರೆ ದುರ್ದೈವವೆಂದರೆ ಆ ವೇಳೆಯಲ್ಲಿ ಅವರು ಅಸ್ವಸ್ಥಗೊಂಡು ಸಾವನ್ನಪ್ಪಿದ್ದು, ಹೃದಯಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇದೆ.
ಇದನ್ನೂ ಓದಿ: PM Modi in Karnataka: ಶಿವಮೊಗ್ಗ, ಬೆಳಗಾವಿಯಲ್ಲಿ ಮೋದಿ ಮೋಡಿ; ಚಿತ್ರಗಳಲ್ಲಿ ನೋಡಿ
ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ನಮ್ಮೆಲ್ಲರಿಗೆ ಗೊತ್ತಿರುವ ಸಂಗತಿ. ಅದರಂತೆ ಇಂದು ಶಿವಮೊಗ್ಗಗೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು. ಅತ್ತ ನೋಡಿದರೂ ಜನ ಇತ್ತ ನೋಡಿದರೂ ಜನ. ಶಿವಮೊಗ್ಗ ವಿಮಾನ ನಿಲ್ದಾಣದ ಬಳಿ ಬಂದ ಜನರ ಸಂಖ್ಯೆ ಹೆಚ್ಚುತ್ತಲೇ ಇತ್ತು. ಎಷ್ಟು ಜನ ಸೇರಿರಬಹುದೆಂದು ಈಗಲೇ ಅಂದಾಜಿಸುವುದು ಸಾದ್ಯವಿಲ್ಲ.
ಆಯನೂರು ಅಥವಾ ಸೋಗಾನೆಯಲ್ಲಿ ಏರ್ ಪೋರ್ಟ್ ನಿರ್ಮಾಣ ಮಾಡುವ ಕುರಿತು ಚರ್ಚೆಯಾಗಿತ್ತು. ಕೊನೆಗೆ ಸೋಗಾನೆಯಲ್ಲಿ 2006ರಲ್ಲಿ ವಿಮಾನ ನಿಲ್ದಾಣ ಯೋಜನೆಗೆ ಚಾಲನೆ ಸಿಕ್ಕಿತ್ತು. 2008 ಜೂನ್ 20ರಂದು ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಅವರ ಸಮ್ಮುಖದಲ್ಲೇ ಮುಖ್ಯವಾಗಿ ಅವರ ಜನ್ಮದಿನದಂದೇ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದಾರೆ. 775 ಎಕರೆ ಪ್ರದೇಶದಲ್ಲಿ 450 ಕೋಟಿ ರೂಪಾಯಿ ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಾಗಿದ್ದು, ಇದು ಕರ್ನಾಟಕ ರಾಜ್ಯದ ಅತಿದೊಡ್ಡ ಎರಡನೇ ವಿಮಾನ ನಿಲ್ದಾಣ ಎನ್ನುವ ಹೆಗ್ಗಳಿಗೆ ಪಾತ್ರವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:33 pm, Mon, 27 February 23