ಯಲಹಂಕ ಬಿಜೆಪಿ ಶಾಸಕ ಎಸ್‌.ಆರ್.ವಿಶ್ವನಾಥ್ ಕಾರ್ಯಕ್ರಮದಲ್ಲಿ ರೌಡಿಗಳು ಭಾಗಿ: ಫೋಟೋ ವೈರಲ್

|

Updated on: Feb 26, 2023 | 6:22 PM

ಕರ್ನಾಟಕ ರಾಜ್ಯ ರಾಜಕಾರಣಕ್ಕೆ ರೌಡಿಗಳು ಕೂಡ ಎಂಟ್ರಿ ಕೊಡಲು ಆರಂಭಿಸಿದ್ದಾರೆ. ಸಮಾಜ ಸೇವೆ ಹೆಸರಿನಲ್ಲಿ ಕೆಲವೊಂದು ರೌಡಿಗಳ ಬ್ಯಾನರ್, ಕಟೌಟ್​ಗಳು ರಾರಾಜಿಸುತ್ತಿವೆ. ಸೈಲೆಂಟ್ ಸುನೀಲ ಬಿಜೆಪಿಯೊಂದಿಗೆ ಗುರುತಿಸಿಕೊಂಡ ನಂತರ ರೌಡಿ ರಾಜಕಾರಣ ಭಾರೀ ಸುದ್ದು ಮಾಡಲು ಆರಂಭಿಸಿತು.

ಯಲಹಂಕ ಬಿಜೆಪಿ ಶಾಸಕ ಎಸ್‌.ಆರ್.ವಿಶ್ವನಾಥ್ ಕಾರ್ಯಕ್ರಮದಲ್ಲಿ ರೌಡಿಗಳು ಭಾಗಿ: ಫೋಟೋ ವೈರಲ್
ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಆರ್.ವಿಶ್ವನಾಥ್ ಕಾರ್ಯಕ್ರಮದಲ್ಲಿ ರೌಡಿಗಳು
Follow us on

ಬೆಂಗಳೂರು: ಇತ್ತೀಚೆಗೆ ನೆಲಮಂಗಲದ ನಟೋರಿಯಸ್ ರೌಡಿ ಶೀಟರ್ ಬೆತ್ತನಗೆರೆ ಶಂಕರ ಬಿಜೆಪಿ ಪಕ್ಷ ಸೇರ್ಪಡೆಯಾಗುವ ಸುದ್ದಿ ರಾಜಕೀಯ ರಂಗದಲ್ಲಿ ಚರ್ಚೆಗೆ ಗ್ರಾಸವಾದ ಬೆನ್ನಲ್ಲೆ, ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಆರ್.ವಿಶ್ವನಾಥ್ (Yelahanka BJP MLA S.R.Vishwanath) ಅವರ ಕಾರ್ಯಕ್ರಮದಲ್ಲಿ ರೌಡಿಗಳು ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Photos) ಆಗುತ್ತಿವೆ. ಕಾರ್ಯಕ್ರಮದಲ್ಲಿ ರೌಡಿಶೀಟರ್ ಬೆತ್ತನಗೆರೆ ಮಂಜ, ಹುಸ್ಕೂರು ಶಿವ ಭಾಗಿಯಾಗಿದ್ದಾರೆ. ಬೆತ್ತನಗೆರೆ ಮಂಜ ಬೆಮೆಲ್‌ ಕೃಷ್ಣಪ್ಪ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಹುಸ್ಕೂರು ಶಿವ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದಾನೆ. ಇವರಿಬ್ಬರು ಬೆಂಗಳೂರು ಉತ್ತರ ತಾಲೂಕಿನ ಹುಸ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ‘2023ಕ್ಕೆ ಮತ್ತೊಮ್ಮೆ ಶಾಸಕರು ಎಸ್​.ಆರ್. ವಿಶ್ವನಾಥ್’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ರೌಡಿಸಂ ಹಾಗೂ ರಾಜಕಾರಣ ಯಾವಾಗಲೂ ಜೊತೆಜೊತೆಗೆ ಹೆಜ್ಜೆ ಹಾಕುತ್ತವೆ. ರಾಜಕೀಯ ತೆರೆಯ ಮುಂದಿನ ಕೆಲಸ ಮಾಡಿದರೆ, ರೌಡಿಸಂ ತೆರೆಯ ಹಿಂದಿನ ಕೆಲಸ ಮಾಡುತ್ತದೆ. ರೌಡಿಸಂ ಹಿನ್ನೆಲೆಯಿರುವ ಸೋಕಾಲ್ಡ್ ಡಾನ್​ಗಳು ಈಗ ರಾಜಕೀಯಕ್ಕೆ ಬರಲು ಮುಂದಾಗಿದ್ದಾರೆ. ಇಂಥವರ ಪೈಕಿ ಸೈಲೆಂಟ್ ಸುನೀಲ ಸಹ ಒಬ್ಬ. ಬಿಜೆಪಿಯ ಕೆಲ ನಾಯಕರು ಕುಖ್ಯಾತ ರೌಡಿಶೀಟರ್​ಗಳ ಜೊತೆ ಕಾಣಿಸಿಕೊಂಡಿದ್ದರು. ಸೈಲೆಂಟ್ ಸುನೀಲ ಬಿಜೆಪಿ ನಾಯಕರೊಂದಿಗೆ ಗುರುತಿಸಿಕೊಂಡ ವೇಳೆ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಬಳಿಕ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಭೇಟಿ ತೀರ್ವ ಕುತೂಹಲ ಮೂಡಿಸಿತ್ತು. ತದನಂತರದ ದಿನಗಳಲ್ಲಿ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಎಂಎಲ್​ಸಿ ಪುಟ್ಟಣ್ಣ ಜೊತೆ ಮಾಜಿ ರೌಡಿ ಜೇಡರಹಳ್ಳಿ ಕೃಷ್ಣಪ್ಪ ವೇದಿಕೆ ಹಂಚಿಕೊಂಡಿದ್ದ.

ಇದನ್ನೂ ಓದಿ: Election Time: ರೌಡಿ ಶೀಟರುಗಳಿಗೆ ರೆಡ್ ಕಾರ್ಪೆಟ್ ಹಾಕಿ ಪಕ್ಷಕ್ಕೆ ಸ್ವಾಗತಿಸಿದ ಜೆಡಿಎಸ್ ಶಾಸಕ ಡಿಸಿ ತಮ್ಮಣ್ಣ!

ಇದರ ಬೆನ್ನಲ್ಲೆ ನೆಲಮಂಗಲದ ನಟೋರಿಯಸ್ ರೌಡಿ ಶೀಟರ್ ಬೆತ್ತನಗೆರೆ ಶಂಕರ ಬಿಜೆಪಿ ಪಕ್ಷ ಸೇರ್ಪಡೆಯಾಗುವ ಸುದ್ದಿ ರಾಜಕೀಯ ರಂಗದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಬೆತ್ತನಗೆರೆ ಶಂಕರ ಅಂತಿದ್ದ ತನ್ನ ಹೆಸರನ್ನು ನಲ್ಲೂರು ಶಂಕರ್‌ಗೌಡ ಎಂದು ಬದಲಾಯಿಸಿಕೊಂಡು ಸಮಾಜ ಸೇವೆ ಹೆಸರಿನಲ್ಲಿ ಬಿಜೆಪಿ ಪಕ್ಷ ಸೇರ್ಪಡೆಗೆ ಮುಂದಾಗಿದ್ದಾನೆ. ಅಲ್ಲದೆ ಬಿಜೆಪಿ ನಾಯಕರುಗಳಾದ ಬಿ‌.ಎಸ್.ಯಡಿಯೂರಪ್ಪ, ವಿಜಯೇಂದ್ರ, ಎಸ್‌.ಟಿ. ಸೋಮಶೇಖರ್, ಬಿ.ಸಿ. ಪಾಟೀಲ್ ಸೇರಿದಂತೆ ಹಲವು ನಾಯಕರುಗಳೊಂದಿಗೆ ವೇದಿಕೆ ಹಂಚಿಕೊಂಡಿದ್ದ.

ಬಿಜೆಪಿಯ ಕೆಲ ನಾಯಕರು ಕುಖ್ಯಾತ ರೌಡಿಶೀಟರ್​ಗಳ ಜೊತೆ ಕಾಣಿಸಿಕೊಂಡಾಗ ಹೆಚ್ಚು ಟೀಕೆ ನಡೆಸಿದ್ದವರ ಸಾಲಿನಲ್ಲಿ ಹೆಚ್.ಡಿ. ಕುಮಾರಸ್ವಾಮಿ ಕೂಡ ಒಬ್ಬರಾಗಿದ್ದರು. ದಿನಗಳು ಉರುಳುತ್ತಿದ್ದಂತೆ, ಮಂಡ್ಯದ ಮದ್ದೂರು ಜೆಡಿಎಸ್ ಶಾಸಕ ಡಿ.ಸಿ. ತಮ್ಮಣ್ಣ ಆವರ ಸಮ್ಮುಖದಲ್ಲಿ ಮದ್ದೂರು ಪೊಲೀಸ್ ಠಾಣೆಯ ಇಬ್ಬರು ರೌಡಿಶೀಟರ್ ಗಳಾದ ವರುಣ್ ಗೌಡ ಮತ್ತು ಪ್ರಶಾಂತ್ ಜೆಡಿಎಸ್ ಪಕ್ಷ ಸೇರಿದ್ದರು. ಶಾಸಕ ತಮ್ಮಣ್ಣ ಅವರು ರೌಡಿಶೀಟರ್ ಗಳ ಜೊತೆ ನೂರಾರು ಯುವಕರಿಗೆ ಮಾಂಸದೂಟದ ಔತಣ ಏರ್ಪಡಿಸಿ ಪಕ್ಷಕ್ಕೆ ಸೇರಿಸಿಕೊಂಡಿದ್ದರು.

ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:18 pm, Sun, 26 February 23