ಹಳೇ ಮೈಸೂರು ಭಾಗದ ಬಿಜೆಪಿ ನಾಯಕರಿಗೆ ಗಂಡಸ್ತನ ಇಲ್ಲ: ಸಿ.ಎಂ.ಇಬ್ರಾಹಿಂ ವಿವಾದಾತ್ಮಕ ಹೇಳಿಕೆ
ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರದ ಬಿಜೆಪಿ ನಾಯಕರು ಭೇಟಿ ಕೊಡುತ್ತಿದ್ದಾರೆ. ಈ ಬಗ್ಗೆ ಟೀಕಿಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಸಿ.ಎಂ.ಇಬ್ರಾಹಿಂ, ಹಳೇ ಮೈಸೂರು ಭಾಗದ ಬಿಜೆಪಿ ನಾಯಕರಿಗೆ ಗಂಡಸ್ತನ ಇಲ್ಲ ಎಂದಿದ್ದಾರೆ.
ಮಂಡ್ಯ: ಹಳೇ ಮೈಸೂರು ಭಾಗದ (Old Mysuru region) ಬಿಜೆಪಿ ನಾಯಕರಿಗೆ ಗಂಡಸ್ತನ ಇಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರನ್ನು ಕರೆಸಿ ಪ್ರಚಾರ ನಡೆಸುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ (C. M. Ibrahim) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಹೇಳಿಕೆ ನೀಡಿದ ಅವರು, ಸ್ಥಳೀಯ ಬಿಜೆಪಿ ನಾಯಕರಿಗೆ ಶಕ್ತಿ ಇಲ್ಲ. ಮೇಲ್ಗಡೆಯಿಂದ ಬಂದು ಇವರಿಗೆ ಇಂಜಕ್ಷನ್ ಕೊಡುತ್ತಿದ್ದಾರೆ ಅಷ್ಟೇ. ಇವರೆಲ್ಲಾ ಗಟ್ಟಿಯಾಗಲಿ ಅಂತಾ ಡೆಲ್ಲಿಯಿಂದ ಬಂದು ಇವರಿಗೆ ಚುಚ್ಚುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಭಾರೀ ಸುದ್ದಿ ಮಾಡಿದ ನಂತರ ಕೆಲವು ಶಾಸಕರು ಕೋರ್ಟ್ನಿಂದ ಸ್ಟೇ ಆರ್ಡರ್ ತಂದಿದ್ದರು. ಈ ಬಗ್ಗೆ ಮಾತನಾಡಿದ ಸಿ.ಎಂ. ಇಬ್ರಾಹಿಂ, 12 ಮಂದಿ ನಿಮ್ಮ ಶಾಸಕರು ಯಾಕೆ ಕೋರ್ಟ್ನಿಂದ ಸ್ಟೇ ತಗೊಂಡಿದ್ದಾರೆ ಎಂದು ಕೇಳಬೇಕು. ಅದ್ಯಾರೋ ಆಹಾರ ಸಚಿವ ಇದಾರಲ್ಲ ದಪ್ಪವಾಗಿ, ಅವರು ಹೇಳುತ್ತಾರೆ ನಾನು ಯಾವುದೇ ಸ್ಟೇ ತೆಗೆದುಕೊಂಡಿಲ್ಲ ಅಂತ. ಪಾಪ ಅವರ ಕೈಯಲ್ಲಿ ಏನಾಗುತ್ತೆ ಏನು ಆಗುವುದಿಲ್ಲ ಎಂದು ಪರೋಕ್ಷವಾಗಿ ಸಚಿವ ಗೋಪಾಲಯ್ಯ ಅವರಿಗೆ ಟಾಂಗ್ ಕೊಟ್ಟರು.
ಇವರ ದಡಕ ಬಡಕ ಆಟ ನಮಗೆ ಗೊತ್ತಿಲ್ವ? ಮಾಜಿ ಸಚಿವರೂ ಆಗಿರುವ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಂದೇ ತೋಟದ ಹೂವಿದ್ದಂತೆ. ಅವರ ಬಗ್ಗೆ ಜಾಸ್ತಿ ಮಾತನಾಡುವುದಿಲ್ಲ ಎಂದು ಹರಳಹಳ್ಳಿಯಲ್ಲಿ ಸಿಎಂ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ನಾನು ಕಾಂಗ್ರೆಸ್ ಬಿಟ್ಟಾಯ್ತು, ಈಗ ಅಲ್ಲಿ ಇರೋದೆಲ್ಲಾ ಬರಿ ಕತ್ತೆಗಳೆ: ಸಿದ್ದರಾಮಯ್ಯಗೆ ಸಿ.ಎಂ.ಇಬ್ರಾಹಿಂ ಟಾಂಗ್
ಒಕ್ಕಲಿಗರ ಪ್ರಾಬಲ್ಯವೇ ಹೆಚ್ಚಾಗಿರುವ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಅಷ್ಟಾಗಿ ಜನಬೆಂಬಲವಿಲ್ಲ. ಉಸ್ತುವಾರಿ ಸಚಿವರಾಗಿ ಗೋಪಾಲಯ್ಯ ನೇಮಕವಾದ ನಂತರ ಸಂಘಟನೆ ಚುರುಕುಗೊಳಿಸಲು ಹಲವು ಹಂತಗಳಲ್ಲಿ ಕ್ರಮ ತೆಗೆದುಕೊಳ್ಳಲಾಗಿತ್ತು. ಸ್ಥಳೀಯ ಬಿಜೆಪಿ ಕಾರ್ಯಕರ್ತರು ಸ್ವಲ್ಪ ಹುರುಪಾಗಿ ಓಡಾಡಲು ಆರಂಭಿಸಿದ್ದರು. ಮಾತ್ರವಲ್ಲದೆ ಈ ಭಾಗವನ್ನೇ ಟಾರ್ಗೆಟ್ ಮಾಡಿರುವ ಬಿಜೆಪಿ ಚಾಣಕ್ಯ ಅಮಿತ್ ಶಾ ಅವರು ನಾನಾ ತಂತ್ರಗಳು, ಟಾಸ್ಕ್‌ಗಳನ್ನ ಹೆಣೆದು ವ್ಯೂಹವನ್ನೇ ರಚಿಸಿದ್ದಾರೆ.
2023 ವರ್ಷ ಆರಂಭವಾದಾಗಿನಿಂದ ಪ್ರಧಾನಿ ಮೋದಿ ನಾಲ್ಕು ಬಾರಿ ರಾಜ್ಯಕ್ಕೆ ಆಗಮಿಸಿದ್ದಾರೆ. ಚುನಾವಣಾ ಹೊಸ್ತಿಲಿನಲ್ಲಿ, ಪ್ರಧಾನಿಯವರ ರಾಜ್ಯ ಪ್ರವಾಸ ರಾಜ್ಯ ಬಿಜೆಪಿ ಪಾಲಿಗೆ ವರದಾನವಾಗಲಿದೆ. ಈಗಾಗಲೇ ಮೋದಿ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ, ಬೆಂಗಳೂರು ಮತ್ತು ಹಳೇ ಮೈಸೂರು ಭಾಗದಲ್ಲಿ ಸಂಚರಿಸಿ ಸಂಚಲನ ಮೂಡಿಸಿದ್ದಾರೆ. ಮೋದಿ ಸುತ್ತಾಡಿದ ಈ ಪ್ರದೇಶಗಳಲ್ಲಿ ಬಿಜೆಪಿ ಅಲೆ ಎದ್ದಿದ್ದು ಇವು ಮತಗಳಾಗಿ ಬದಲಾಗುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:07 pm, Sun, 26 February 23