ಗ್ಯಾರಂಟಿ ಎಂದು ಕಾಂಗ್ರೆಸ್ ಕಡಿದು ಕಟ್ಟಿಹಾಕಿದ್ದು ಏನಿಲ್ಲ, ಅಭಿವೃದ್ಧಿ ಶೂನ್ಯ: ಬಿವೈ ವಿಜಯೇಂದ್ರ
ಇಡೀ ದೇಶಕ್ಕೆ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳು ಮಾದರಿಯಾಗಿವೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬಜೆಟ್ ಅಧಿವೇಶನದಲ್ಲಿ ಭಾಷಣ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಗ್ಯಾರಂಟಿ ಎಂದು ಕಾಂಗ್ರೆಸ್ನವರು ಕಡಿದು ಕಟ್ಟಿಹಾಕಿದ್ದು ಏನಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಎಂದಿದ್ದಾರೆ.
ಚಿಕ್ಕಬಳ್ಳಾಪುರ, ಫೆ.12: ಗ್ಯಾರಂಟಿ (Congress Guarantees) ಎಂದು ಕಾಂಗ್ರೆಸ್ನವರು ಕಡಿದು ಕಟ್ಟಿಹಾಕಿದ್ದು ಏನಿಲ್ಲ. ಕಾಂಗ್ರೆಸ್ ಸಾಕಷ್ಟು ಭರವಸೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದಿದೆ.ಅಧಿಕಾರಕ್ಕೆ ಬಂದು ಎಂಟು ಒಂಬತ್ತು ತಿಂಗಳಾದರೂ ಅಭಿವೃದ್ಧಿ ಕಾಣಿಸುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಆರೋಪಿಸಿದ್ದಾರೆ. ಇಡೀ ದೇಶಕ್ಕೆ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳು ಮಾದರಿಯಾಗಿವೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬಜೆಟ್ ಅಧಿವೇಶನದಲ್ಲಿ ಭಾಷಣ ಮಾಡಿದ ಬೆನ್ನಲ್ಲೇ ಈ ಹೇಳಿಕೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರು ಗ್ರಾಮದಲ್ಲಿ ಗ್ರಾಮ ಪರಿಕ್ರಮ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ವಿಜಯೇಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದನ್ನು ಮರೆಮಾಚಲು ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದಾರೆ. ಪದೇ ಪದೇ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿರುವ ಸಿಎಂ ಸಿದ್ದರಾಮಯ್ಯ ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಕೇಂದ್ರ ಸಚಿವ ಅಮಿತ್ ಶಾ ಸಭೆಯ ಬಗ್ಗೆ ಸಿಟಿ ರವಿ, ವಿಜಯೇಂದ್ರ ವ್ಯತಿರಿಕ್ತ ಹೇಳಿಕೆ
ರಾಜ್ಯದಲ್ಲಿ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಒಬ್ಬ ರೈತ ಕೂಡ ಸಾವನ್ನಪ್ಪಿಲ್ಲ ಎಂದು ರಾಜ್ಯಪಾಲರ ಬಳಿ ಹೇಳಿಸಿದ್ದಾರೆ. ರೈತರ ಪಂಪ್ ಸೆಟ್ಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗುತ್ತಿಲ್ಲ. ದಿನೆ ದಿನೇ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದರು. ಮೈತ್ರಿ ಬಗ್ಗೆ ಮಾತನಾಡಿದ ವಿಜಯೇಂದ್ರ, ರಾಷ್ಟ್ರದ ಹಿತಾಸಕ್ತಿಗಾಗಿ ಜೆಡಿಎಸ್ ಎನ್ಡಿಎ ಜೊತೆ ಸೇರಿದೆ ಎಂದರು.
SCP/TSP ಹಣ ಲೂಟಿ ಮಾಡಿದ ರಾಜ್ಯ ಸರ್ಕಾರ
SCP/TSP ಮೀಸಲಾದ ಹಣವನ್ನು ರಾಜ್ಯ ಸರ್ಕಾರ ಲೂಟಿ ಮಾಡಿದೆ ಎಂದು ಮಾಜಿ ಸಚಿವ ಕೆ ಸುಧಾಕರ್ ಆರೋಪಿಸಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ SCP/TSP ಮೀಸಲಾದ 11 ಸಾವಿರ ಕೋಟಿ ರೂಪಾಯಿ ಹಣವನ್ನು ಡೈವರ್ಟ್ ಮಾಡಲಾಗಿದೆ. ಆ ಮೂಲಕ ದಲಿತ ಸಮುದಾಯಗಳಿಗೆ ರಾಜ್ಯ ಸರಕಾರ ಘನಘೋರ ಅಪರಾಧ ಮಾಡಿದೆ. ಇದರ ಬಗ್ಗೆ ದಲಿತ ಸಮುದಾಯಗಳು ಯ್ಯಾಕೆ ಧ್ವನಿ ಎತ್ತುತ್ತಿಲ್ಲ. ಹೋರಾಟ ಮಾಡುವಂತೆ ಕರೆ ನೀಡಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ