Bharat Jodo Yatra: ಕರ್ನಾಟಕಕ್ಕೆ ನಾಳೆ ‘ಭಾರತ ಐಕ್ಯತಾ ಯಾತ್ರೆ’ ಪ್ರವೇಶ: ಜನರಿಗೆ ಪತ್ರ ಬರೆದು ಬೆಂಬಲ ಕೋರಿದ ಡಿಕೆ ಶಿವಕುಮಾರ್
ಭಾರತ್ ಜೋಡೋ ಯಾತ್ರೆಯನ್ನು ಬೆಂಬಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜನರಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ಆರಂಭವಾಗಿರುವ ‘ಭಾರತ್ ಜೋಡೋ ಯಾತ್ರಾ’ (Bharat Jodo Yatra – ಭಾರತ ಐಕ್ಯತಾ ಯಾತ್ರೆ) ನಾಳೆ (ಸೆ 30) ಕರ್ನಾಟಕವನ್ನು ಪ್ರವೇಶಿಸಲಿದೆ. ಯಾತ್ರೆಯನ್ನು ಬೆಂಬಲಿಸಬೇಕು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಜನರಲ್ಲಿ ಮನವಿ ಮಾಡಿದ್ದಾರೆ. ಈ ಕುರಿತು ನಾಡಿನ ಜನತೆಗೆ ಪತ್ರ ಬರೆದಿರುವ ಅವರು, ‘ಜನ-ಮನ ಒಂದಾಗದೆ ಜಗತ್ತಿನಲ್ಲಿ ಯಾವುದೇ ದೊಡ್ಡ ಬದಲಾವಣೆ ಸಂಭವಿಸಿಲ್ಲ. ಕೇವಲ 5 ವರ್ಷಕ್ಕೊಮ್ಮೆ ಮತ ಹಾಕಿದರೆ ಸಾಲದು. ನಮ್ಮ ಕಾಲದ ಸಮಸ್ಯೆಗಳಿಗೆ ಪ್ರತಿದಿನ ಸ್ಪಂದಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಬದಲಾವಣೆ ಕಾಣಬೇಕಾದರೆ ಬದಲಾವಣೆಗೆ ಮುಂದಾಗಬೇಕು’ ಎಂದು ಅವರು ಹೇಳಿದ್ದಾರೆ.
ಭಾರತ ಐಕ್ಯತಾ ಯಾತ್ರೆಯು ಬದಲಾವಣೆಯ ಮೊದಲ ಹೆಜ್ಜೆಯಾಗಿದೆ. ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಯ ನಿರಂಕುಶ ಅಧಿಕಾರದ ವಿರುದ್ಧ, ದ್ವೇಷ ರಾಜಕಾರಣದ ವಿರುದ್ಧ ಧ್ವನಿ ಎತ್ತುತ್ತಿದೆ. ಬೆಲೆ ಏರಿಕೆ, ನಿರುದ್ಯೋಗ, ಕೋಮು ಸೌಹಾರ್ದ, ಮಹಿಳಾ ಸುರಕ್ಷೆ ಅಥವಾ ಆರ್ಥಿಕ ಅಭಿವೃದ್ಧಿಯಂಥ ಪ್ರಮುಖ ವಿಷಯಗಳ ಬಗ್ಗೆ ಸರ್ಕಾರವು ಮಾತೇ ಆಡುತ್ತಿಲ್ಲ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಯಾತ್ರೆಯಲ್ಲಿ ಪಾಲ್ಗೊಂಡು ನಮ್ಮೊಂದಿಗೆ ಹೆಜ್ಜೆ ಹಾಕಿದಾಗ ಬದಲಾವಣೆಯ ಶಕ್ತಿಯೇನು ಎಂಬುದು ಅರಿವಾಗಲಿದೆ. ನಾವು 40 ಪರ್ಸೆಂಟ್ ಭ್ರಷ್ಟಾಚಾರದೊಂದಿಗೆ ಬದುಕಬೇಕಿಲ್ಲ ಎಂದು ನೀವೂ ನಂಬಲು ಆರಂಭಿಸುತ್ತೀರಿ. ಇತರ ಪಕ್ಷಗಳಲ್ಲಿರುವ ನನ್ನ ಸ್ನೇಹಿತರನ್ನೂ ನಾನು ಯಾತ್ರೆಯಲ್ಲಿ ಹೆಜ್ಜೆ ಹಾಕಲು ಆಹ್ವಾನಿಸುತ್ತೇವೆ. ಇದು ಪಿಕ್ನಿಕ್ ಅಲ್ಲ. ಹವಾಮಾನ ಹೇಗಿದ್ದರೂ ನಾವು ದಿನಕ್ಕೆ 20 ಕಿಮೀ ನಡೆಯಲಿದ್ದೇವೆ. ಉಚಿತ ಸಿಲಿಂಡರ್ ಪಡೆದು ರಿಫಿಲ್ಗಾಗಿ ದುಬಾರಿ ಹಣ ತೆರಲು ಸಾಧ್ಯವಾಗದ ಅಸಹಾಯಕ ಮಹಿಳೆಯರನ್ನು ಭೇಟಿಯಾಗಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಸನ್ಮಾನ್ಯ @RahulGandhi ಅವರ ನೇತೃತ್ವದ #BharathAikyataYatre ಕರ್ನಾಟಕದಲ್ಲಿ ಆರಂಭಗೊಳ್ಳುತ್ತಿದೆ.
ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಯಶಸ್ಸಿಗಾಗಿ ಹಾಗೂ ಯಾತ್ರೆಯ ಆಶಯಗಳ ಸಾಕಾರಕ್ಕಾಗಿ ಕೈಜೋಡಿಸುವಂತೆ ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರು ಕರ್ನಾಟಕದ ಜನತೆಗೆ ಸಂದೇಶ ನೀಡಿದ್ದಾರೆ. pic.twitter.com/zpE2zNJECp
— Karnataka Congress (@INCKarnataka) September 29, 2022
ಯಾತ್ರೆ ಮತ್ತು ಸಂಕಷ್ಟ
ಕಾಂಗ್ರೆಸ್ ಪಕ್ಷವು ಭಾರತ್ ಜೋಡೋ ಯಾತ್ರೆ ಆರಂಭಿಸಿದ ನಂತರ ಒಂದಲ್ಲ ಒಂದು ಸಂಕಷ್ಟ ಎದುರಾಗುತ್ತಲೇ ಇದೆ. ಗೋವಾದಲ್ಲಿ ಕಾಂಗ್ರೆಸ್ ಶಾಸಕರು ಪಕ್ಷಾಂತರ ಮಾಡಿದ್ದರೆ, ಕಾಶ್ಮೀರದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಪಕ್ಷ ತೊರೆದರು. ಮತ್ತೊಂದೆಡೆ ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಪರ ಇರುವ ಶಾಸಕರು ಬಂಡಾಯ ಎದ್ದಿದ್ದು ಎಐಸಿಸಿ ಚುನಾವಣೆಯ ಮೇಲೆ ಕರಿನೆರಳು ಬೀರಿದೆ. ಭಾರತವನ್ನು ಒಗ್ಗೂಡಿಸುವ ಪಾದಯಾತ್ರೆ ಆರಂಭಿಸಿರುವ ಕಾಂಗ್ರೆಸ್ ಪಕ್ಷವು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಆರೋಪದ ಮೇಲೆ ಪಿಎಫ್ಐ ನಿಷೇಧಿಸಿದ ಕೇಂದ್ರದ ಕ್ರಮವನ್ನು ಗಟ್ಟಿಯಾಗಿ ಸ್ವಾಗತಿಸಲಿಲ್ಲ. ಇದೂ ಜನರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟಹಾಕಿದೆ.