ಬಿಹಾರ ಚುನಾವಣೆ: ಕಾಂಗ್ರೆಸ್-ಆರ್​ಜೆಡಿ ನಡುವೆ ಮತ್ತಷ್ಟು ಬಿರುಕು, ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ವ್ಯಂಗ್ಯವಾಡಿದ ಲಾಲು ಪ್ರಸಾದ್ ಯಾದವ್

| Updated By: Digi Tech Desk

Updated on: Oct 25, 2021 | 1:17 PM

ಕಾಂಗ್ರೆಸ್ ಅಭ್ಯರ್ಥಿಗಳು ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳುವ ಅಪಾಯ ಇದೆ ಎಂದು ಲಾಲು ಪ್ರಸಾದ್ ಯಾದವ್ ವ್ಯಂಗ್ಯವಾಡಿದ್ದರು.

ಬಿಹಾರ ಚುನಾವಣೆ: ಕಾಂಗ್ರೆಸ್-ಆರ್​ಜೆಡಿ ನಡುವೆ ಮತ್ತಷ್ಟು ಬಿರುಕು, ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ವ್ಯಂಗ್ಯವಾಡಿದ ಲಾಲು ಪ್ರಸಾದ್ ಯಾದವ್
ಕಾಂಗ್ರೆಸ್ ನಾಯಕ ಭಕ್ತ ಚರಣ್ ದಾಸ್ ಮತ್ತು ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್
Follow us on

ಪಾಟ್ನಾ: ಬಿಹಾರ ವಿಧಾನಸಭೆಯ ಎರಡು ಸ್ಥಾನಗಳಿಗೆ ಉಪ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ಮತ್ತು ಕಾಂಗ್ರೆಸ್ ಪಕ್ಷದ ನಡುವಣ ಬಿರುಕು ಹೆಚ್ಚಾಗಿದೆ. ಎರಡು ಸ್ಥಾನಗಳ ಪೈಕಿ ಒಂದನ್ನಾದರೂ ಕಾಂಗ್ರೆಸ್​ ಪಕ್ಷಕ್ಕೆ ಬಿಟ್ಟುಕೊಡಬೇಕಿತ್ತು ಎಂಬ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಕಾಂಗ್ರೆಸ್ ಅಭ್ಯರ್ಥಿಗಳು ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳುವ ಅಪಾಯ ಇದೆ ಎಂದು ವ್ಯಂಗ್ಯವಾಡಿದ್ದರು. ಇದೇ ತಿಂಗಳ 30ರಂದು ಬಿಹಾರದ ಕುಶೇಶ್ವರ್ ಆಸ್ತಾನ್ ಮತ್ತು ತಾರಾಪುರ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ. ಎರಡೂ ಕ್ಷೇತ್ರಗಳಲ್ಲಿ ಹಾಲಿ ಜೆಡಿಯು ಶಾಸಕರು ಸಾವನ್ನಪ್ಪಿದ ಕಾರಣ ಉಪ-ಚುನಾವಣೆ ನಡೆಯುತ್ತಿದೆ.

2020ರ ಬಿಹಾರ ವಿಧಾನಸಭಾ ಚುನಾವಣೆಯನ್ನು ಆರ್​ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳು ಮೈತ್ರಿ ಮಾಡಿಕೊಂಡು, ಸ್ಥಾನ ಹೊಂದಾಣಿಕೆಯೊಂದಿಗೆ ಎದುರಿಸಿದ್ದವು. ಕುಶೇಶ್ವರ್ ಅಸ್ತಾನ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ 7,200 ಮತಗಳ ಅಂತರದಿಂದ ಸೋಲೊಪ್ಪಿಕೊಂಡಿತ್ತು. ಆದರೆ ಈ ಬಾರಿ ಎರಡು ಕ್ಷೇತ್ರಗಳಲ್ಲಿ ಯಾವೊಂದು ಕ್ಷೇತ್ರದಲ್ಲಿಯೂ ಕಾಂಗ್ರೆಸ್​ ಸ್ಪರ್ಧೆಗೆ ಅವಕಾಶ ನೀಡಲು ಆರ್​ಜೆಡಿ ಈ ಬಾರಿ ಒಪ್ಪಿಲ್ಲ. ಎರಡೂ ಕ್ಷೇತ್ರಗಳಲ್ಲಿ ಆರ್​ಜೆಡಿ ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿಯೇ ಸ್ಪರ್ಧಿಸಿವೆ.

‘ನಾವು ಕಾಂಗ್ರೆಸ್​ ಪಕ್ಷಕ್ಕೆ ಏಕೆ ಸ್ಥಾನ ಬಿಟ್ಟು ಕೊಡಬೇಕು? ಅವರು ಸೋತು ಠೇವಣಿ ಕಳೆದುಕೊಳ್ಳಲು ಅವರಿಗೆ ಸ್ಥಾನ ಬಿಟ್ಟುಕೊಡಬೇಕೆ’ ಎಂದು ಆರ್​ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಭಾನುವಾರ ಪ್ರಶ್ನಿಸಿದ್ದರು. ಎರಡೂ ಪಕ್ಷಗಳ ನಡುವೆ ಈ ಹಿಂದೆ ಮೈತ್ರಿ ಬೆಸೆದಿದ್ದ ಬಿಹಾರದ ಕಾಂಗ್ರೆಸ್ ನಾಯಕ ಭಕ್ತ ಚರಣ್ ದಾಸ್​ ನೀಡಿದ್ದ ಹೇಳಿಕೆಗೆ ಲಾಲು ಯಾದವ್ ಮೇಲಿನಂತೆ ಪ್ರತಿಕ್ರಿಯಿಸಿದ್ದರು. ಎರಡು ಉಪ ಚುನಾವಣೆಗಳ ಪೈಕಿ ಒಂದಾದರೂ ಸ್ಥಾನವನ್ನು ಕಾಂಗ್ರೆಸ್​ಗೆ ಬಿಟ್ಟುಕೊಟ್ಟಿದ್ದರೆ ಮೈತ್ರಿ ಮುಂದುವರಿಯುತ್ತಿತ್ತು ಎನ್ನುವುದು ಅವರ ವಾದವಾಗಿತ್ತು.

ಈ ವಾರದ ಆರಂಭದಲ್ಲಿ ಭಕ್ತ ಚರಣ್ ದಾಸ್​ ಬಗ್ಗೆ ಆರ್​ಜೆಡಿ ನಾಯಕ ಮನೋಜ್​ ಝಾ ಟೀಕಿಸಿದ್ದರು. ‘ತಮ್ಮ ಮನೆಯ ಕೋಣೆಯಿಂದ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ’ ಎಂಬ ಅವರ ಟೀಕೆಯನ್ನು ಕಾಂಗ್ರೆಸ್​ ಖಂಡಿಸಿತ್ತು. ‘ದಾಸ್ ಅವರಂಥವರು ಕಾಂಗ್ರೆಸ್​ನಲ್ಲಿ ಇಲ್ಲದಿದ್ದರೆ ನಾನು ಮತ್ತು ಜಿಗ್ನೇಶ್ ಮೆವಾನಿ ಅತ್ತ ಹೋಗುತ್ತಲೇ ಇರಲಿಲ್ಲ. ಭಕ್ತ ಚರಣ್ ದಾಸ್ ಯಾರು ಎಂದು ನಿಮ್ಮ ನಾಯಕರನ್ನು ಕೇಳಿಯೇ ತಿಳಿದುಕೊಳ್ಳಿ’ ಏಂದು ಕನ್ಹಯ್ಯ ಕುಮಾರ್ ಹರಿಹಾಯ್ದಿದ್ದರು.

ಕಾಂಗ್ರೆಸ್ ನಾಯಕ ಆರ್​.ಪಿ.ಎನ್.ಸಿಂಗ್ ಅವರ ಭೇಟಿಯ ನಂತರ ಜನ್ ಅಧಿಕಾರ್ ಪಕ್ಷದ ನಾಯಕ ಪಪ್ಪು ಯಾದವ್ ಸಹ ಲಾಲು ಬಗ್ಗೆ ತೀವ್ರ ಟೀಕೆ ಮಾಡಿದ್ದರು. ‘ಬಿಜೆಪಿ ಬಿ ಟೀಂನಂತೆ ಆರ್​ಜೆಡಿ ಇದೆ’ ಎಂದು ಅವರು ದೂರಿದ್ದರು. ಬಿಜೆಪಿಯ ಜೊತೆಗೆ ಆರ್​ಜೆಡಿ ಕೈಜೋಡಿಸಲಿದೆ ಎಂಬ ಆರೋಪವನ್ನು ಆರ್​ಜೆಡಿ ಭಾನುವಾರ ಸ್ಪಷ್ಟವಾಗಿ ನಿರಾಕರಿಸಿತ್ತು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಲಾಲು ಪ್ರಸಾದ್ ಯಾದವ್, ಆರ್​ಜೆಡಿ ನಾಯಕರಾದ ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ನಡುವೆ ಭಿನ್ನಮತವಿದೆ ಎಂಬ ವರದಿಗಳನ್ನೂ ಅಲ್ಲಗಳೆದಿದ್ದರು.

ಇದನ್ನೂ ಓದಿ: ಮೂರು ವರ್ಷಗಳ ನಂತರ ಪಾಟ್ನಾಕ್ಕೆ ಮರಳಿದ ಲಾಲು ಪ್ರಸಾದ್ ಯಾದವ್
ಇದನ್ನೂ ಓದಿ: ‘ನಿತೀಶ್​ ಕುಮಾರ್ ಪ್ರಧಾನಿ ಅಭ್ಯರ್ಥಿ‘- ಸುಶೀಲ್​ ಮೋದಿ ಮೌನ, ಅಫ್ಘಾನ್​​ನಲ್ಲಿ ವೆಕೆನ್ಸಿ ಇದೆ ಎಂದ ಆರ್​ಜೆಡಿ

Published On - 1:07 pm, Mon, 25 October 21