Nitish Kumar ಬಿಹಾರ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಿದ ನಿತೀಶ್ ಕುಮಾರ್, ಬಿಜೆಪಿಯಿಂದ ಕಲಾಪ ಬಹಿಷ್ಕಾರ

| Updated By: ರಶ್ಮಿ ಕಲ್ಲಕಟ್ಟ

Updated on: Aug 24, 2022 | 6:35 PM

ಜೆಡಿಯು ಮುಖ್ಯಸ್ಥ ನಿತೀಶ್ ವಿಧಾನಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಂತೆ ಬಿಜೆಪಿ ಕಲಾಪ ಬಹಿಷ್ಕರಿಸಿ ಸದನದಿಂದ ಹೊರನಡೆದಿದೆ. ನಿತೀಶ್ ಕುಮಾರ್ ಪರ 160 ದನಿಮತಗಳು ಸಿಕ್ಕಿವೆ.

Nitish Kumar ಬಿಹಾರ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಿದ ನಿತೀಶ್ ಕುಮಾರ್,  ಬಿಜೆಪಿಯಿಂದ ಕಲಾಪ ಬಹಿಷ್ಕಾರ
ನಿತೀಶ್ ಕುಮಾರ್
Follow us on

ಬಿಹಾರ ವಿಧಾನಸಭೆಯಲ್ಲಿ (Bihar Assembly) ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ನೇತೃತ್ವದ ಮಹಾಘಟಬಂಧನ್ ಸರ್ಕಾರ ಬುಧವಾರ ಬಹುಮತ ಸಾಬೀತು ಪಡಿಸಿದೆ. ಜೆಡಿಯು ಮುಖ್ಯಸ್ಥ ನಿತೀಶ್ ವಿಧಾನಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಂತೆ ಬಿಜೆಪಿ ಕಲಾಪ ಬಹಿಷ್ಕರಿಸಿ ಸದನದಿಂದ ಹೊರನಡೆದಿದೆ. ನಿತೀಶ್ ಕುಮಾರ್ ಪರ 160 ದನಿಮತಗಳು ಸಿಕ್ಕಿವೆ. ವಿಧಾನಸಭಾ ಕಲಾಪ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿತ್ತು, ಈ ಕಲಾಪವನ್ನು ಡೆಪ್ಯುಟಿ ಸ್ಪೀಕರ್ ಮಹೇಶ್ವರ್ ಹಜಾರಿ ಅಧ್ಯಕ್ಷತೆ ವಹಿಸಿದ್ದರು. ನಿತೀಶ್ ಕುಮಾರ್ ಭಾಷಣ ನಂತರ ಆರ್ ಜೆಡಿ ನಾಯಕ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಸದನವನ್ನುದ್ದೇಶಿಸಿ ಮಾತನಾಡಿದ್ದಾರೆ. ಬಹುಮತ ಸಾಬೀತು ಪಡಿಸುವ ಮುನ್ನ ಬಿಜೆಪಿಯ ವಿಜಯ್ ಕುಮಾರ್ ಸಿನ್ಹಾ ಅವರು ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಿತೀಶ್ ಕುಮಾರ್ ನೇತೃತ್ವದ ಮಹಾಮೈತ್ರಿ ಸರ್ಕಾರ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ ಹಿನ್ನೆಲೆಯಲ್ಲಿ ವಿಜಯ್ ಕುಮಾರ್ ಸಿನ್ಹಾ ತಮ್ಮ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.  ರಾಜೀನಾಮೆ ನೀಡಿದ ಸಿನ್ಹಾ “ಬಹುಮತಕ್ಕೆ ತಲೆಬಾಗಿದ್ದೇನೆ” ಎಂದು ಹೇಳಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ವಿಜಯ್ ಕುಮಾರ್ ಸಿನ್ಹಾ, ನರೇಂದ್ರ ನಾರಾಯಣನ್ ಯಾದವ್ ಅವರು ಸ್ಪೀಕರ್ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ ಎಂದು ಹೇಳಿದರು. ಸ್ಪೀಕರ್ ಪೀಠದ ಮೇಲೆ ಅನುಮಾನಗಳನ್ನು ಮೂಡಿಸುವ ಮೂಲಕ ನೀವು ಯಾವ ಸಂದೇಶವನ್ನು ನೀಡಲು ಬಯಸುತ್ತೀರಿ? ಜನರೇ ತೀರ್ಮಾನ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಲಹೆಯ ಮೇರೆಗೆ ಬಿಹಾರ ವಿಧಾನಸಭೆಯ ಸೆಕ್ರೆಟರಿಯೇಟ್ ಮಂಗಳವಾರ ಸಂಜೆ ಸಿನ್ಹಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು 2 ದಿನಗಳ ವಿಶೇಷ ಅಧಿವೇಶನದ ವೇಳಾಪಟ್ಟಿಯನ್ನು ಬದಲಾಯಿಸಿತ್ತು. ಇದಕ್ಕೂ ಮುನ್ನ ಸಿನ್ಹಾ ರಾಜೀನಾಮೆ ನೀಡಲು ನಿರಾಕರಿಸಿದ್ದರು. ಬಳಿಕ ರಾಜೀನಾಮೆಯನ್ನು ಪ್ರಕಟಿಸಿದ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ವಿಧಾನಸಭೆ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

Published On - 6:09 pm, Wed, 24 August 22