DK Shivakumar: ನನ್ನ ಜೊತೆ ವ್ಯವಹಾರ ಮಾಡಿದವರಿಗೆಲ್ಲ ಸರ್ಕಾರದಿಂದ ಕಿರುಕುಳ; ಡಿಕೆ ಶಿವಕುಮಾರ್
ಬಿಜೆಪಿ ಸರ್ಕಾರದ ಸಚಿವರು ನಡೆಸುತ್ತಿರುವ ವ್ಯವಹಾರಗಳ ಬಗ್ಗೆ ತನಿಖೆ ಮಾಡಿಸಲಿ ನೋಡೋಣ ಎಂದು ಸವಾಲು ಹಾಕಿದರು.
ಬೆಂಗಳೂರು: ನನ್ನ ಜೊತೆ ವ್ಯವಹಾರ ಮಾಡಿದವರಿಗೆ ತನಿಖಾ ಸಂಸ್ಥೆಗಳಿಂದ ನೊಟೀಸ್ಗಳು ಬರುತ್ತಿವೆ. ವಿಜಯ್ ಮುಳಗುಂದ ಮಾತ್ರವಲ್ಲ ಇತರ 30-40 ಜನರಿಗೆ ನೋಟಿಸ್ ಕೊಟಿದ್ದಾರೆ. ಕಿರುಕುಳ ಕೊಡುವುದಕ್ಕೂ ಒಂದು ಮಿತಿ ಇರಬೇಡವೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಪ್ರಶ್ನಿಸಿದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಾಧ್ಯವಾದರೆ ಬಿಜೆಪಿ ಸರ್ಕಾರದ ಸಚಿವರು ನಡೆಸುತ್ತಿರುವ ವ್ಯವಹಾರಗಳ ಬಗ್ಗೆ ತನಿಖೆ ಮಾಡಿಸಲಿ ನೋಡೋಣ ಎಂದು ಸವಾಲು ಹಾಕಿದರು.
ಇದೀಗ ಸಚಿವರಾಗಿರುವ ಕೆಲವರ ಆದಾಯ ಶಾಸಕರಾಗಿದ್ದ ಸಂದರ್ಭದಲ್ಲಿ ಎಷ್ಟಿತ್ತು? ಈಗ ಅವರ ಆಸ್ತಿ ಮೌಲ್ಯ ಎಷ್ಟಾಗಿದೆ? ಅವರೆಲ್ಲ ಬೆಳ್ಳುಳ್ಳಿ ಅಡಿಕೆ ಬೆಳೆದು ಆಸ್ತಿ ಮಾಡಿದ್ದಾ ಎಂದು ಡಿಕೆಶಿ ಪ್ರಶ್ನಿಸಿದರು. ನಾನೂ ಮಂತ್ರಿಗಳ ಆಸ್ತಿ ವಿವರವನ್ನು ಮಾಹಿತಿ ಹಕ್ಕು ಕಾಯ್ದೆಯಡಿ ದಾಖಲೆ ಸಂಗ್ರಹ ಮಾಡಿದ್ದೇನೆ. ನನಗೆ ಕಿರುಕುಳ ಕೊಡಲು ಇನ್ನೇನೂ ಬಾಕಿ ಉಳಿದಿಲ್ಲ. ನನ್ನ ತಾಯಿಯ ಆಸ್ತಿಗೆ ನಾನು ಬೇನಾಮಿ ಅಂತ ಸೀಜ್ ಮಾಡಿದ್ದಾರೆ. ಇನ್ನೇನು ಬಾಕಿ ಉಳಿಯಿತು ಎಂದು ಕೇಳಿದರು.
ಉದ್ಯಮಿ ವಿಜಯ್ ಮುಳುಗುಂದ್ ಅವರು ನನ್ನ ಆಪ್ತರು. ನನಗೆ ಹತ್ತಿರದವರು ಎನ್ನುವ ಕಾರಣಕ್ಕೆ ಅವರಿಗೆ ನೋಟಿಸ್ ಕೊಟ್ಟಿದ್ದಾರೆ. ವಿಜಯ್ ಮುಳಗುಂದ ಮಾತ್ರವಲ್ಲ ನನ್ನ ಜೊತೆಗೆ ವ್ಯವಹಾರ ಮಾಡಿದ ಹಲವರಿಗೆ ನೊಟೀಸ್ಗಳು ಬಂದಿವೆ. ನನ್ನ ಕಟ್ಟಡಗಳಲ್ಲಿ ಬಾಡಿಗೆದಾರರಾಗಿರುವವರು, ಅಗ್ರಿಮೆಂಟ್ ಮಾಡಿಕೊಂಡಿರುವವರು, ನನ್ನೊಂದಿಗೆ ಪಾಲುದಾರಿಕೆ ವ್ಯವಹಾರಗಳನ್ನು ಮಾಡಿದವರು ಸೇರಿದಂತೆ ಎಲ್ಲರಿಗೂ ನೊಟೀಸ್ಗಳು ಬಂದಿವೆ ಎಂದು ವಿವರಿಸಿದರು.
ಮುಂದಿನ ಆಗಸ್ಟ್ನಿಂದ ನನ್ನ ವಿರುದ್ಧದ ದಾಳಿ ಹೆಚ್ಚಾಗುತ್ತದೆ ಎಂದು ಹೇಳಿದ್ದೆ. ಅದೇ ರೀತಿ ಈಗ ಸುತ್ತಿಕೊಂಡು ನೊಟೀಸ್ಗಳು ಬರುತ್ತಿವೆ. ನಾನು ಯಾವುದಕ್ಕೂ ಹೆದರುವುದಿಲ್ಲ. ನಮಗೂ ಮಾಹಿತಿ ಕೊಡುವವರು ಇದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಟ್ಟದಲ್ಲಿ ಏನೆಲ್ಲಾ ಬೆಳವಣಿಗೆಗಳು ನಡೆಯುತ್ತಿವೆ ಎನ್ನುವ ಬಗ್ಗೆ ಮಾಹಿತಿ ಸಿಗುತ್ತಿದೆ. ಇವರು ಇನ್ನೇನನ್ನೂ ಬಾಕಿ ಉಳಿಸಿಲ್ಲ. ಏನು, ಬಿಜೆಪಿಯಲ್ಲಿ ಇರುವವರೆಲ್ಲರೂ ಸತ್ಯ ಹರಿಶ್ಚಂದ್ರರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ದೇಶದ ಕಾನೂನಿನ ಬಗ್ಗೆ, ನನ್ನ ಶ್ರಮಕ್ಕೆ ಬೆಲೆ ಸಿಗುವ ಬಗ್ಗೆ, ನಮ್ಮ ಪಕ್ಷದ ಬಗ್ಗೆ ನನಗೆ ನಂಬಿಕೆ ಇದೆ. ಇವರು ಏನು ಬೇಕಾದರೂ ಮಾಡಿಕೊಳ್ಳಲಿ. ನಾನು ಎಲ್ಲವನ್ನೂ ಫೇಸ್ ಮಾಡುವುದಕ್ಕೆ ರೆಡಿ ಇದ್ದೀನಿ. ನನ್ನ ಕನಕಪುರದ ಮನೆಯನ್ನೂ ಸೀಜ್ ಮಾಡಿದ್ದರು. ನನ್ನ ಮೇಲೆ ಎಷ್ಟು ಕೇಸ್ ಹಾಕಿಸಿದ್ದಾರೆ? ಇನ್ಕಮ್ಟ್ಯಾಕ್ಸ್ ಕೇಸ್ಗಳು ಎಷ್ಟು ಆಗಿವೆ? ಆರ್ಥಿಕ ಅಪರಾಧಗಳ ಪ್ರಕರಣಗಳು ಎಷ್ಟು ದಾಖಲಾಗಿವೆ ಎನ್ನುವ ಬಗ್ಗೆ ನಾನು ಪಟ್ಟಿ ಮಾಡಿಕೊಂಡಿದ್ದೇನೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ. ಈಗ ಆಡಳಿತದಲ್ಲಿರುವವರು ನಮಗೂ ಅಂಥದ್ದೇ ಅರ್ಜಿ ಹಾಕುವ ಸಾಮರ್ಥ್ಯವಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸವಾಲು ಹಾಕಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಓರ್ವ ಕಾಂಗ್ರೆಸ್ ಏಜೆಂಟ್ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಕೆಂಪಣ್ಣ ಅವರು ಇವತ್ತಿನ ತನಕ ನನ್ನನ್ನಾಗಲಿ ಸಿದ್ದರಾಮಯ್ಯನವರನ್ನಾಗಲಿ ಭೇಟಿ ಆಗಿರಲಿಲ್ಲ. ನಿನ್ನೆ ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಿದ್ದಾರೆ. ಕಾಂಗ್ರೆಸ್ ಏಜೆಂಟ್ ಆಗಿದ್ರೆ ಯಾಕೆ ಸಿಎಂ ಭೇಟಿ ಮಾಡಿದ್ದರು? ಇವರು ಇವರ ಅನುಕೂಲಕ್ಕೋಸ್ಕರ ಆರೋಪ ಮಾಡುತ್ತಾರೆ ಎಂದರು.
ಬಿಜೆಪಿಯವರು ಏಳು ಎಂಟು ಕಡೆ ಜನೋತ್ಸವ ಆಚರಣೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಬೇಕಿದ್ದರೆ ಮಾಡಿಕೊಳ್ಳಲಿ, ಅದು ಅವರಿಷ್ಟ. ವಿರೋಧ ಪಕ್ಷವಾಗಿ ನಾವು ಇವರ ಭ್ರಷ್ಟೋತ್ಸವ ಆಚರಣೆ ಮಾಡಬೇಕಲ್ಲ. ವಿರೋಧ ಪಕ್ಷವಾಗಿ ನಮ್ಮ ಮೇಲೂ ಜವಾಬ್ದಾರಿ ಇದೆಯಲ್ಲ. ಇವರ ಮಾಜಿ ಸಚಿವರೊಬ್ಬರು ಅಪೆಕ್ಸ್ ಬ್ಯಾಂಕ್ನ 700 ಕೋಟಿ ರೂಪಾಯಿ ಸಾಲ ಬಾಕಿ ಉಳಿಸಿಕೊಂಡಿದ್ದಾರೆ. ಅವರ ಬಗ್ಗೆಯೂ ಮಾತನಾಡಬೇಕಲ್ಲ ನಾವು ಎಂದು ಪ್ರಶ್ನಿಸಿದರು.
ಈಶ್ವರಪ್ಪಗೆ ತನಿಖೆ ಆಗೋ ಮೊದಲೇ ಕ್ಲಿನ್ ಚಿಟ್ ಕೊಟ್ರಲ್ಲ ಅದರ ಬಗ್ಗೆಯೂ ನಾವು ಮಾತಾಡಬೇಕಿದೆ. ಇದೇ ಕೋಲಾರ ಉಸ್ತುವಾರಿ ಸಚಿವರ ವಿಷಯಕ್ಕೆ ಚಾಮರಾಜನಗರ ರೈತರು ಪ್ರಧಾನಿಗಳಿಗೇ ಪತ್ರ ಬರೆದರೂ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಕೇಳಿದರು.
Published On - 12:24 pm, Thu, 25 August 22