ದೆಹಲಿ: ಕರ್ನಾಟಕದಲ್ಲಿ ಜೆಡಿಎಸ್ ಪಕ್ಷಕ್ಕೆ ದೊಡ್ಡಮಟ್ಟದ ಹಿನ್ನಡೆಯಾಗಿದೆ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು. ತಮ್ಮ ಪಕ್ಷದ ವಿರುದ್ಧ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಷಡ್ಯಂತ್ರ ಹೂಡಿ, ನಿರಂತರ ಅಪಪ್ರಚಾರ ನಡೆಸಿದವು. ಕೊನೆಯ ಎರಡು ದಿನಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ನಮ್ಮ ವಿರುದ್ಧ ಒಪ್ಪಂದ ಮಾಡಿಕೊಂಡವು ಎಂದು ನೇರ ಆರೋಪ ಮಾಡಿದರು.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಲ್ಲ ಅಭ್ಯರ್ಥಿಗಳನ್ನು ಮತ್ತು ನಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ದುಡಿದ ಕಾರ್ಯಕರ್ತರನ್ನು ಅಭಿನಂದಿಸುವೆ ಎಂದರು. ಮಂಡ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಮುಖಭಂಗವಾಗಿಲ್ಲ. ಅಲ್ಲಿ ಬಿಜೆಪಿ ಮತಗಳನ್ನು ಕಾಂಗ್ರೆಸ್ ಪಡೆದಿದೆ. ನಮಗೆ ಕಾಂಗ್ರೆಸ್ ಪಕ್ಷದಿಂದ ಮುಖಭಂಗವಾಗಿದೆ. ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸುವ ಉದ್ದೇಶದಿಂದ ಬಿಜೆಪಿ ಅಭ್ಯರ್ಥಿಯನ್ನು ನಿಲ್ಲಿಸಿತ್ತು. ಕಾಂಗ್ರೆಸ್-ಬಿಜೆಪಿ ರಾಜಕೀಯ ಒಪ್ಪಂದ ಮಾಡಿಕೊಂಡಿವೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಸಿದ್ಧಹಸ್ತರು ಮೈತ್ರಿ ಸರ್ಕಾರ ಉರುಳಿಸಿದರು. ಇದೀಗ ಸ್ಥಳೀಯ ಬಿಜೆಪಿ ಮುಖಂಡರ ಜೊತೆ ಒಳಒಪ್ಪಂದ ಮಾಡಿಕೊಂಡು ನಮಗೆ ಹಿನ್ನಡೆ ಉಂಟು ಮಾಡಿದರು. ಈ ಒಂದು ಚುನಾವಣೆಯಿಂದ ಜೆಡಿಎಸ್ ಪಕ್ಷ ಮುಗಿಸಲು ಆಗುವುದಿಲ್ಲ. ಜೆಡಿಎಸ್ನ ಶಕ್ತಿ ಉಳಿದಿರುವುದು ದೇವೇಗೌಡರ ಕುಟುಂಬದಿಂದ. ಕಾಂಗ್ರೆಸ್ನಲ್ಲಿ ಕುಟುಂಬ ರಾಜಕಾರಣದಿಂದ ಬಂದಿರುವ ಎಂಟು ಮಂದಿ ಇದ್ದಾರೆ. ನಮ್ಮ ಬಗ್ಗೆ ಮಾತಾಡುವ ನೈತಿಕತೆ ಕಾಂಗ್ರೆಸ್, ಬಿಜೆಪಿ ಪಕ್ಷಗಳ ನಾಯಕರಿಗೆ ಇಲ್ಲ ಎಂದರು.
ಬಿಜೆಪಿ ಮತಗಳು ಕಾಂಗ್ರೆಸ್ಗೆ ಹೋಗಿದ್ದಕ್ಕೆ ಆ ಪಕ್ಷದ ಕೆಲ ಅಭ್ಯರ್ಥಿಗಳು ಗೆದ್ದಿದ್ದಾರೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಬೆಂಬಲದ ಭಿಕ್ಷೆ ಬೇಡಿದವರು ಯಾರು?- ಸಿದ್ದರಾಮಯ್ಯ ಹೇಳಿಕೆಗೆ ಕುಮಾರಸ್ವಾಮಿ ಪ್ರಶ್ನೆ
ಇದನ್ನೂ ಓದಿ: ಬೆಂಬಲ ಕೊಟ್ಟಂತೆ ಮಾಡಿ ಕುತ್ತಿಗೆ ಕುಯ್ಯುವುದೇ ಇವರ ಕೆಲಸ; ನನಗೆ ಅನುಭವ ಆಗಿದೆ: ಕಾಂಗ್ರೆಸ್ ವಿರುದ್ಧ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ