ನಮಗೆ ಬಹುಮತವಿದ್ದರೂ ಜೆಡಿಎಸ್ ನಿರ್ಲಕ್ಷಿಸುವುದಿಲ್ಲ: ಗೆಲುವಿನ ಸಂಭ್ರಮದಲ್ಲಿ ಯಡಿಯೂರಪ್ಪ ಅಭಯ
ಕನಿಷ್ಠ 15 ಸ್ಥಾನದಲ್ಲಿ ಗೆಲುವು ಸಾಧಿಸುವ ವಿಶ್ವಾಸ ನಮಗಿತ್ತು. ಆದರೆ ತುಮಕೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ನಮ್ಮ ನಿರೀಕ್ಷೆ ಹುಸಿಯಾಗಿದೆ ಎಂದು ಯಡಿಯೂರಪ್ಪ ಹೇಳಿದರು.
ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಒಟ್ಟು 20 ಸ್ಥಾನಗಳಿಗೆ ಸ್ಪರ್ಧಿಸಿದ್ದರು. ಕನಿಷ್ಠ 15 ಸ್ಥಾನದಲ್ಲಿ ಗೆಲುವು ಸಾಧಿಸುವ ವಿಶ್ವಾಸ ನಮಗಿತ್ತು. ಆದರೆ ತುಮಕೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ನಮ್ಮ ನಿರೀಕ್ಷೆ ಹುಸಿಯಾಗಿದೆ. ಒಟ್ಟಾರೆ ವಿಧಾನ ಪರಿಷತ್ನಲ್ಲಿ ಯಾರಿಗೂ ಸ್ಪಷ್ಟ ಬಹುಮತ ಇರಲಿಲ್ಲ. ಈಗ ನಮಗೆ ಬಹುಮತ ಸಿಕ್ಕಿದೆ. ನಮ್ಮನ್ನು ಬೆಂಬಲಿಸಿದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಮಗೆ ಬಹುಮತ ಸಿಕ್ಕಿದ್ದರೂ ಜೆಡಿಎಸ್ ಪಕ್ಷವನ್ನು ನಿರ್ಲಕ್ಷಿಸುವುದಿಲ್ಲ ಎಂದರು.
ಗೆಲುವಿನ ಬಳಿಕ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಈ ಬಾರಿ ಪ್ರದೀಪ್ ಶೆಟ್ಟರ್ ಆರಿಸಿ ಬಂದಿದ್ದಾರೆ. ಮತದಾರರಿಗೆ ಧನ್ಯವಾದ ಹೇಳುತ್ತೇನೆ. ಅತಿ ಹೆಚ್ಚಿನ ಸ್ಥಾನಗಳಲ್ಲಿ ನಮ್ಮ ಪಕ್ಷ ಗೆಲುವು ಸಾಧಿಸಿದೆ. ಕಳೆದ ಬಾರಿ ಕೇವಲ 6 ಸ್ಥಾನಗಳಲ್ಲಿ ಗೆದ್ದಿದ್ದೆವು. ಈ ಬಾರಿ ಹೆಚ್ಚುವರಿಯಾಗಿ ಆರು ಸ್ಥಾನಗಳನ್ನು ಪಡೆದುಕೊಂಡಿದ್ದೇವೆ. ಜನರ ಬೆಂಬಲ ನಮಗೆ ಸಿಕ್ಕಿದೆ. ಮೈಸೂರಿನಲ್ಲಿಯೂ ಜನರು ನಮ್ಮನ್ನು ಆಶೀರ್ವದಿಸಿದ್ದಾರೆ. ಪಕ್ಷವು ಇಡೀ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ. ಬೆಳಗಾವಿಯಲ್ಲಿ ನಮಗೆ ಹಿನ್ನಡೆಯಾಗಿರುವ ಅಂಶವನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ, ಪರಾಮರ್ಶಿಸುತ್ತೇವೆ ಎಂದರು. ಕಾಂಗ್ರೆಸ್ನವರು ಮುಂದಿನ ಚುನಾವಣೆ ಗೆಲ್ಲುವ ಕನಸಿನಲ್ಲಿದ್ದಾರೆ. ಪರಿಷತ್ ಚುನಾವಣೆ ಫಲಿತಾಂಶ ಅವರ ಸ್ಥಿತಿ ತೋರಿಸುತ್ತದೆ ಎಂದು ವಿಶ್ಲೇಷಿಸಿದರು.
ಕೊಡಗಿನಲ್ಲಿ ಸಂಭ್ರಮಾಚರಣೆ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಮಡಿಕೇರಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ನಡೆಸಿದರು. ಗೆಲುವು ಸಾಧಿಸಿದ ಅಭ್ಯರ್ಥಿ ಸುಜಾ ಕುಶಾಲಪ್ಪ ಅವರ ಮೆರವಣಿಗೆಯು ತೆರೆದ ಜೀಪ್ನಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಮುಖ್ಯ ರಸ್ತೆಯಲ್ಲೇ ವಾಲಗಕ್ಕೆ ಮಹಿಳಾ ಮತ್ತು ಪುರುಷ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು. ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ ವಿರುದ್ಧ ಸುಜಾ ಅವರು 102 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಬಳ್ಳಾರಿಯಲ್ಲಿ ಬಿಜೆಪಿ ವಿಜಯಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎಂ.ಸತೀಶ್ 757 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ವೈ.ಎಂ.ಸತೀಶ್‌ಗೆ 2659 ಮತ, ಕೊಂಡಯ್ಯಗೆ 1902 ಮತಗಳು ಬಂದಿವೆ. 87 ಮತಗಳು ತಿರಸ್ಕೃತಗೊಂಡಿದ್ದರೆ, ಗಂಗಿರಡ್ಡಿಗೆ 4, ಸಿ.ಎಂ.ಮಂಜುನಾಥ್ ಅವರಿಗೆ 2 ಮತಗಳು ಸಿಕ್ಕಿವೆ. ಕ್ಷೇತ್ರದಲ್ಲಿ ಒಟ್ಟು 4654 ಮತಗಳು ಚಲಾವಣೆಯಾಗಿತ್ತು.
ಮಂಡ್ಯ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ 50 ಮತಗಳನ್ನು ಪಡೆದಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಸಿಂಧುಗೊಂಡ ಮತಗಳಿಗಿಂತಲೂ ಬಿಜೆಪಿಗೆ ಸಿಕ್ಕಿರುವ ಮತಗಳ ಸಂಖ್ಯೆ ಕಡಿಮೆಯಿದೆ. ಕ್ಷೇತ್ರದ ಅಸಿಂಧು ಮತಗಳು 56, ಬಿಜೆಪಿ ಅಭ್ಯರ್ಥಿ ಪಡೆದ ಮತ ಕೇವಲ 54.
ಇದನ್ನೂ ಓದಿ: MLC Election Results: ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟ; ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು? ಇಲ್ಲಿದೆ ವಿವರ ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ: ಹಳೇ ಮೈಸೂರು ಭಾಗದಲ್ಲಿಯೇ ಜೆಡಿಎಸ್ಗೆ ತೀವ್ರ ಹಿನ್ನಡೆ
Published On - 5:01 pm, Tue, 14 December 21