ಬೆಂಗಳೂರು: ಪ್ರತಿಪಕ್ಷಗಳು ರಾಜ್ಯ ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಸರ್ಕಾರ, ಭಷ್ಟ ಸರ್ಕಾರ ಎಂಬಿತ್ಯಾದಿ ಟೀಕೆಗಳನ್ನು ಮಾಡುವುದರ ಜೊತೆಗೆ ಪೇ ಸಿಎಂ (PayCM) ಎಂಬ ಅಭಿಯಾನವನ್ನು ಆರಂಭಿಸಿತ್ತು. ಇದು ಆಡಳಿತ ಪಕ್ಷ ಬಿಜೆಗೆ ಇರಿಸುಮುರಿಸು ಉಂಟುಮಾಡಿದ್ದಲ್ಲದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಕೆರಳಿಸಿತ್ತು. ಇದರ ಬೆನ್ನಲ್ಲೆ ಕಾಂಗ್ರೆಸ್ನ ಪೇ ಸಿಎಂ ಅಭಿಯಾನಕ್ಕೆ ಪ್ರತಿಯಾಗಿ ಬಿಜೆಪಿ ಎದಿರೇಟು ಕೊಟ್ಟಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಅವರನ್ನು ನೇರವಾಗಿ ಗುರಿಯಾಸಿ ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರ (Corruption)ದ ವ್ಯಂಗಭರಿತ 48 ಸೆಕೆಂಡುಗಳ ವೀಡಿಯೋ ಬಿಡುಗಡೆ ಮಾಡಿದೆ. ತೊಗರಿ ತಿಪ್ಪಾ ಎಂಬ ಟೈಟಲ್ ಅನ್ನು ಈ ವಿಡಿಯೋಗೆ ನೀಡಲಾಗಿದ್ದು, ರೀಡೂ ಹಗರಣ, ಸೋಲಾರ್ ಹಗರಣ, ಹಾಸಿಗೆ-ದಿಂಬು ಹಗರಣ, ಕಚೇರಿಯಲ್ಲಿ ಹಣ ಪಡೆದ ಬಗ್ಗೆ ಆರೋಪ ಮಾಡಲಾಗಿದೆ.
ತೊಗರಿ ತಿಪ್ಪಾ ಹೆಸರಿನಲ್ಲಿ ಮಾಡಿದ ಈ ವಿಡಿಯೋದಲ್ಲಿ ಕಾರ್ಟೂನ್ ಮೂಲಕ “ಕೇಳಿರಣ್ಣ ಕೇಳಿರಿ ಭ್ರಷ್ಟಾಚಾರ ಕಥೆಯ, ರಾಜ್ಯ ಲೂಟಿ ಮಾಡಿದ ಕಾಂಗ್ರೆಸ್ ಕಥೆಯ” ಎಂಬ ಡೈಲಾಗ್ನಿಂದ ಆರಂಭಿಸಿ ಕಾಂಗ್ರೆಸ್ ಸರ್ಕಾರ ಇದ್ದಾಗ ನಡೆದ ಭ್ರಷ್ಟಾಚಾರದ ಬಗ್ಗೆ ವಿವರಿಸಲಾಗಿದೆ. ಅದರಲ್ಲೂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರನ್ನೇ ಟಾರ್ಗೆಟ್ ಮಾಡಿ ಕಥೆ ಹೇಳುವ ರೀತಿ ಭ್ರಷ್ಟಾಚಾರದ ಬಗ್ಗೆ ಉಲ್ಲೇಖ ಮಾಡಲಾಗಿದೆ.
ವ್ಯಂಗ್ಯ ವಿಡಿಯೋದಲ್ಲಿ ಏನು ಹೇಳಲಾಗಿದೆ?
ವಿಡಿಯೋದಲ್ಲಿ ಇಬ್ಬರು ಸಹೋದರರು (ಕಾರ್ಟೂನ್) ಇರುತ್ತಾರೆ. ಅದರಂತೆ ತಮ್ಮ ಒಂದೊಂದಾಗಿಯೇ ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ಪ್ರಶ್ನಿಸಿದಾಗ ಅಣ್ಣ ಉತ್ತರಿಸುವುದನ್ನು ನೋಡಬಹುದು.
ಕೇಳಿರಣ್ಣ ಕೇಳಿರಿ ಭ್ರಷ್ಟಾಚಾರ ಕಥೆಯ, ರಾಜ್ಯ ಲೂಟಿಯು ಮಾಡಿದ ಕಾಂಗ್ರೆಸ್ ಕಥೆಯ ಎಂದು ಡೈಲಾಗ್ ಮೂಲಕ ಆರಂಭವಾಗುವ ಈ ವಿಡಿಯೋದಲ್ಲಿ ಮೊದಲು ರೀಡೂ ಹಗರಣದ ಬಗ್ಗೆ ಪ್ರಸ್ತಾಪಿಸಲಾಗಿದೆ. “ರೀಡೂ ಹಗರಣ ಪಿತಾಮಹ ಯಾರು ಹೇಳಣ್ಣ? ಭ್ರಷ್ಟರಾಮಯ್ಯ ಅಲ್ವೆನೋ ತಮ್ಮಾ..” ಅಂತ ಹೇಳಲಾಗಿದೆ. ನಂತರ ಅಂದು ರಾಜ್ಯದಲ್ಲಿ ಭಾರೀ ಚರ್ಚೆ ಮಾಡಿದ್ದ ಸೋಲಾರ್ ಹಗರಣದ ಬಗ್ಗೆ ಪ್ರಸ್ತಾಪಿಸಲಾಗಿದೆ. “ಸೋಲಾರ್ ಹಗರಣದ ರೂವಾರಿ ಯಾರು ಹೇಳಣ್ಣ? ಕನಕಪುರದ ಡಿಕೆಶಿ ಅಲ್ವೆನೋ ತಮ್ಮಾ..” ಎಂದು ಹೇಳಲಾಗಿದೆ. “ಹಾಸಿಗೆ ದಿಂಬಿನಲ್ಲಿ ತಿಂದಿರುವುದು ಯಾರಣ್ಣ? ಹೊಳಲ್ಕೆರೆ ಆಂಜನೇಯ ಅಲ್ವೆನೋ ತಮ್ಮಾ”, “ಕಚೇರಿಯಲ್ಲಿ ಲಂಚ ಪಡೆದವರು ಯಾರಣ್ಣ? ಪುಟ್ಟರಂಗ ಶೆಟ್ರು ಅಲ್ವೆನೋ ತಮ್ಮಾ” ಅಂತ ಹೇಳಿ “ಇನ್ನಷ್ಟು ಭ್ರಷ್ಟರ ಕಥೆ ಬೇಕೇನೋ ಅಣ್ಣ” ಅಂತ ಹೇಳಿ “ಇವತ್ತಿಗೆ ಇಷ್ಟು ಸಾಕು ಎದ್ದೇಳು ತಮ್ಮಾ..” ಅಂತ ಹೇಳಿ ವಿಡಿಯೋ ಮುಕ್ತಾಯಗೊಳಿಸಲಾಗಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:02 am, Thu, 22 September 22