ಕುಮ್ಕಿ ಸಕ್ರಮಕ್ಕೆ ಸಮಿತಿ, ಆಸ್ತಿಗಳಿಗೆ ಡಿಜಿಟಲ್ ನಂಬರ್: ವಿಧಾನ ಪರಿಷತ್​ನಲ್ಲಿ ಕಂದಾಯ ಸಚಿವರ ಮಹತ್ವದ ಘೋಷಣೆ

‘ನಿಂಬೆಹಣ್ಣಿನ ಸಲಹೆ ಪಡೆದುಕೊಂಡು ಬನ್ನಿ ಸರವಣ ಅವರೇ’ ಎಂದು ಸಭಾಪತಿ ಹಾಸ್ಯ ಚಟಾಕಿ ಹಾರಿಸಿದರು. ‘ಸರವಣ ಆಸ್ಟ್ರಾಲಜಿ ಯುನಿವರ್ಸಿಟಿ ಬಳಿಯೇ ಇದ್ದಾರೆ’ ಎಂದು ಸಚಿವ ಸುಧಾಕರ್ ದನಿಗೂಡಿಸಿದರು.

ಕುಮ್ಕಿ ಸಕ್ರಮಕ್ಕೆ ಸಮಿತಿ, ಆಸ್ತಿಗಳಿಗೆ ಡಿಜಿಟಲ್ ನಂಬರ್: ವಿಧಾನ ಪರಿಷತ್​ನಲ್ಲಿ ಕಂದಾಯ ಸಚಿವರ ಮಹತ್ವದ ಘೋಷಣೆ
ಸಚಿವ ಆರ್ ಅಶೋಕ
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Sep 21, 2022 | 3:35 PM

ಬೆಂಗಳೂರು: ವಿಧಾನ ಪರಿಷತ್​ ಕಲಾಪವು ಬುಧವಾರ ಹಲವು ಮಹತ್ವದ ವಿದ್ಯಮಾನಗಳಿಗೆ ಸಾಕ್ಷಿಯಾಯಿತು. ಸದನದಲ್ಲಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಯ ರೈತರ ಕುಮ್ಕಿ ಜಮೀನು ಸಮಸ್ಯೆ ಕುರಿತು ಪ್ರಸ್ತಾಪಿಸಿದರು. ಬಹಳ ಕಾಲದಿಂದ ದಕ್ಷಿಣ ಕನ್ನಡ ಉಡುಪಿಯ ರೈತರು ಕುಮ್ಕಿ ಜಮೀನು ಸಕ್ರಮ ಆಗದ ಕಾರಣ ಕಾಯುತ್ತಿದ್ದಾರೆ. ಕುಮ್ಕಿ ಜಮೀನು ಸಕ್ರಮಕ್ಕೆ ಕಾನೂನು ನಿಯಮಾವಳಿ ರೂಪಿಸಬೇಕಿದೆ ಎಂದು ವಿನಂತಿಸಿದರು. ಸರ್ಕಾರದ ಪರವಾಗಿ ಉತ್ತರಿಸಿದ ಕಂದಾಯ ಸಚಿವ ಆರ್.ಅಶೋಕ್, ಕರಾವಳಿ ಭಾಗದಲ್ಲಿ ಕುಮ್ಕಿ, ಬಾಣೆ, ಕಾಣೆ ಭೂಮಿ ಉಳುಮೆ ಮಾಡುತ್ತಿದ್ದಾರೆ. ಹಿಂದಿನ ಯಾವ ಸರ್ಕಾರಗಳೂ ಇದನ್ನು ಸಕ್ರಮಗೊಳಿಸುವ ಪ್ರಯತ್ನ ಮಾಡಿರಲಿಲ್ಲ. ಉಳುಮೆ ಮಾಡುತ್ತಿರುವ ರೈತರಿಂದ ಗೋಮಾಳ, ಸೊಪ್ಪಿನ ಬೆಟ್ಟ, ಕುಮ್ಕಿ ಜಮೀನು ಸಕ್ರಮಕ್ಕೆ ಕ್ರಮ ವಹಿಸುತ್ತಿದ್ದೇವೆ. ಇದಕ್ಕಾಗಿ ಸಚಿವ ಸಂಪುಟ ಉಪ ಸಮಿತಿ ರಚನೆ ಆಗಿದೆ ಎಂದರು.

ಆಸ್ತಿಗಳ ಡಿಜಿಟಲೀಕರಣಕ್ಕೆ ಅನುದಾನ

ನಗರ ಕೃಷಿ ಜಮೀನುಗಳಿಗೆ ಪ್ರತ್ಯೇಕ ಸಂಖ್ಯೆ (Unique Land Parcel Identification Number) ಕೊಡುತ್ತಿದ್ದೇವೆ. ಆರ್​ಟಿಸಿಗಳಲ್ಲಿ ಈ ನಂಬರ್ ಅಳವಡಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಡ್ರೋನ್ ಬಳಸಿ ಡಿಜಿಟಲ್ ಸರ್ವೆ ಕಾರ್ಯ ಕೂಡ ನಡೆಯುತ್ತಿದೆ. ಭೌತಿಕ ಕಡತಗಳ ಡಿಜಿಟಲೀಕರಣಕ್ಕೆ ₹ 10 ಕೋಟಿ ಬಿಡುಗಡೆ ಆಗಿದೆ. ಬೆಂಗಳೂರಿನ 198 ವಾರ್ಡ್​ಗಳಲ್ಲಿ ಡ್ರೋನ್ ಸರ್ವೇ ಪೂರ್ಣಗೊಂಡಿದೆ. ಐದು ಜಿಲ್ಲೆಗಳಲ್ಲಿ ಡ್ರೋನ್ ಸರ್ವೆ ನಡೆಯುತ್ತಿದೆ. ಎಲ್ಲ ಕೃಷಿ ಜಮೀನು ಗಳ ದಾಖಲೆ ಡಿಜಿಟಲೀಕರಣ ಆಗಲಿದೆ ಎಂದು ಸದನಕ್ಕೆ ಭರವಸೆ ನೀಡಿದರು.

ವಕ್ಫ್​ ವರದಿ ಮಂಡನೆಗೆ ಬಿಜೆಪಿ ಪಟ್ಟು

ವಿಧಾನ ಪರಿಷತ್ ಸದನ ಸಭೆ ಸೇರುತ್ತಿದ್ದಂತೆಯೇ ವಕ್ಫ್ ಮಂಡಳಿ​​ ಆಸ್ತಿ ಹಗರಣದ ಬಗ್ಗೆ ಬಿಜೆಪಿ ಸದಸ್ಯರು ಪ್ರಸ್ತಾಪಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪಿಸಿದರು. ಬಿಜೆಪಿ ಸದಸ್ಯರು ಕಾರ್ಯ ಪದ್ಧತಿ ಉಲ್ಲಂಘಿಸುತ್ತಿದ್ದಾರೆ. ನೋಟಿಸ್​​ ನೀಡದೇ ವಿಷಯ ಪ್ರಸ್ತಾಪ ಮಾಡುತ್ತಿದ್ದಾರೆ. ಧಮ್ಮು, ತಾಕತ್​​ ಇದ್ದರೆ ಇದ್ದರೆ ಸರ್ಕಾರ ತನಿಖೆ ಮಾಡಲಿ. ಇವರಿಗೆ ಧಮ್ ಇರುವುದು 40 ಪರ್ಸೆಂಟ್ ಕಮಿಷನ್​​ಗೆ​​​​ ಮಾತ್ರ. ವಕ್ಫ್ ಬೋರ್ಡ್​​ನಲ್ಲಿ ಇವರಿಗೆ 40 ಪರ್ಸೆಂಟ್ ಕಮಿಷನ್ ಸಿಕ್ಕಿಲ್ಲ ಎಂದು ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು. ನಿಮ್ಮದು 80 ಪರ್ಸೆಂಟ್ ಸರ್ಕಾರ ಆಗಿತ್ತು ಎಂದು ಬಿಜೆಪಿಯ ನಾರಾಯಣಸ್ವಾಮಿ ತಿರುಗೇಟು ನೀಡಿದರು.

ಬಿದ್ದು ಹೋಗುತ್ತಿವೆ ಸೇತುವೆಗಳು

ಕರ್ನಾಟಕದಲ್ಲಿ ಮಳೆಯಿಂದಾಗಿ ಈ ವರ್ಷ 970 ಸೇತುವೆಗಳು ಹಾಳಾಗಿವೆ ಎಂದು ವಿಧಾನ ಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ ಹಾಗೂ ಎಸ್.ವಿ.ಸಂಕನೂರು ಪ್ರಸ್ತಾಪಿಸಿದರು. ಸೇತುವೆಗಳ ಆಯಸ್ಸು 100 ವರ್ಷ ಎನ್ನುತ್ತಾರೆ. ಆದರೆ 10ರಿಂದ 15 ವರ್ಷಕ್ಕೇ ಸೇತುವೆಗಳು ಬಿದ್ದು ಹೋಗುತ್ತಿವೆ ಎಂದರು. ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಪರವಾಗಿ ಶಶಿಕಲಾ ಜೊಲ್ಲೆ ಉತ್ತರ ನೀಡಿ, ಮಳೆಯಿಂದಾಗಿ 15 ಸೇತುವೆಗಳು ಕೊಚ್ಚಿ ಹೋಗಿವೆ. ಸೇತುವೆ ಹಾಗೂ ರಸ್ತೆಗಳ ರಿಪೇರಿಗಾಗಿ ಹಣ ಬಿಡುಗಡೆ ಆಗಿದೆ ಎಂದರು.

ಶಾಸ್ತ್ರ ಕೇಳ್ಕೊಂಡು ಬನ್ನಿ ಸರವಣ: ಹಾಸ್ಯ ಚಟಾಕಿ ಹಾರಿಸಿದ ಸಭಾಪತಿ

ಕಂದಾಯ ಸಚಿವ ಆರ್.ಅಶೋಕ್ ಸಮರ್ಪಕ ಉತ್ತರ ಒದಗಿಸಿಲ್ಲ ಎಂದು ದೂರಿ ಪ್ರತಿಪಕ್ಷಗಳ ಸದಸ್ಯರಾದ ಪಿ.ಆರ್.ರಮೇಶ್ ಮತ್ತು ಟಿ.ಎ.ಸರವಣ ಧರಣಿಗೆ ಮುಂದಾದರು. ‘ಸಚಿವರಿಗೆ ಪ್ರಶ್ನೆಯೇ ಅರ್ಥ ಆಗಿಲ್ಲ’ ಎಂದು ರಮೇಶ್ ಹೇಳಿದಾಗ, ‘ಹೌದು ನನಗೆ ಜ್ಞಾನ ಇಲ್ಲ ತಿಳಿವಳಿಕೆ ಇಲ್ಲ. ನಾನು ಓದಿದ್ದು ಸರ್ಕಾರಿ ಶಾಲೆಯಲ್ಲಿ. ನನಗೆ ಸರಿಯಾಗಿ ಕಲಿಸಿಲ್ಲ ಅಂದರೆ ಅದು ನನ್ನ ತಪ್ಪಾ’ ಎಂದು ಅಶೋಕ್ ಪ್ರಶ್ನಿಸಿದರು. ಶುಕ್ರವಾರದ ಒಳಗೆ ಉತ್ತರ ಕೊಡಿಸುವುದಾಗಿ ಅಶೋಕ್ ಭರವಸೆ ನೀಡಿದ ನಂತರ ಸದಸ್ಯರು ಧರಣಿ ಹಿಂಪಡೆದರು.

‘ಮೂರು ವರ್ಷದ ದಾಖಲೆ ಕೊಡುವುದಕ್ಕೆ ಸಾಧ್ಯವಿಲ್ವಾ? ಸಲೀಂ ಅಹಮದ್ ಪ್ರಶ್ನೆ ಕೇಳಿದಾಗೆಲ್ಲ ಉತ್ತರ ಸಿಗ್ತಿಲ್ಲ. ಸಲೀಂಗೆ ರಾಹುಕಾಟ ಇದೆಯೋ ಏನೋ ಗೊತ್ತಿಲ್ಲ. ಸಲೀಂ ಅಹಮದ್ ಅವರ ಚೇರ್ ಬದಲಾಯಿಸಿ’ ಎಂದು ಸರವಣ ಹೇಳಿದರು. ‘ನಿಂಬೆಹಣ್ಣಿನ ಸಲಹೆ ಪಡೆದುಕೊಂಡು ಬನ್ನಿ ಸರವಣ ಅವರೇ’ ಎಂದು ಸಭಾಪತಿ ಹಾಸ್ಯ ಚಟಾಕಿ ಹಾರಿಸಿದರು. ‘ಸರವಣ ಆಸ್ಟ್ರಾಲಜಿ ಯುನಿವರ್ಸಿಟಿ ಬಳಿಯೇ ಇದ್ದಾರೆ’ ಎಂದು ಸಚಿವ ಸುಧಾಕರ್ ದನಿಗೂಡಿಸಿದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada