Next CM of Karnataka 2021: ಮುಂದಿನ ಸಿಎಂ ಆಯ್ಕೆ; ಅಭಿಪ್ರಾಯ ಸಂಗ್ರಹಿಸಲು ಬರುತ್ತಿದ್ದಾರೆ ವೀಕ್ಷಕರು!

| Updated By: shivaprasad.hs

Updated on: Jul 27, 2021 | 10:43 AM

New Chief Minister of Karnataka: ನೂತನ ಮುಖ್ಯಮಂತ್ರಿಯ ಆಯ್ಕೆಗಾಗಿ ಬಿಜೆಪಿ ಹೈಕಮಾಂಡ್ ನಾಲ್ಕು ಮಂದಿ ವೀಕ್ಷಕರನ್ನು ರಾಜ್ಯಕ್ಕೆ ಕಳುಹಿಸಲಿದೆ. ಶಾಸಕ, ನಾಯಕರೊಂದಿಗೆ ವೀಕ್ಷಕರು ಚರ್ಚಿಸಿ ಮುಂದಿನ ಸಿಎಂ ಆಯ್ಕೆ ಮಾಡುವ ಸಾಧ್ಯತೆ ಇದೆ.

Next CM of Karnataka 2021: ಮುಂದಿನ ಸಿಎಂ ಆಯ್ಕೆ; ಅಭಿಪ್ರಾಯ ಸಂಗ್ರಹಿಸಲು ಬರುತ್ತಿದ್ದಾರೆ ವೀಕ್ಷಕರು!
ವೀಕ್ಷಕರ ತಂಡದಲ್ಲಿರುವ ಅರುಣ್ ಸಿಂಗ್(ಎಡ), ಧರ್ಮೇಂದ್ರ ಪ್ರಧಾನ್(ಬಲ)- (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಸಿಎಂ ಯಾರಾಗಬಹುದು ಎಂಬ ಕುತೂಹಲದ ನಡುವೆಯೇ ಕಮಲದ ಪಾಳಯದಲ್ಲಿ ಸಿಎಂ ಸ್ಥಾನಕ್ಕಾಗಿ ಲಾಬಿ ಜೋರಾಗಿದೆ.  ಈ ಹಿನ್ನೆಲೆಯಲ್ಲಿ ಕೇಂದ್ರದಿಂದ ವೀಕ್ಷಕರ ತಂಡ ರಾಜ್ಯ ರಾಜಧಾನಿಗೆ ಇಂದು ಬಂದಿಳಿಯಲಿದೆ. ಶಾಸಕರಿಂದ, ಮುಖಂಡರಿಂದ ಅಭಿಪ್ರಾಯವನ್ನು ಸಂಗ್ರಹಿಸಿ ತೀರ್ಮಾನ ಕೈಗೊಳ್ಳಲು ಅರುಣ್ ಸಿಂಗ್, ಧರ್ಮೇಂದ್ರ ಪ್ರಧಾನ್ ಅವರನ್ನು ಒಳಗೊಂಡ ವೀಕ್ಷಕರ ತಂಡ ಬೆಂಗಳೂರಿಗೆ ಬರುತ್ತಿದೆ. 

ಒಟ್ಟು ಮೂರು ತಂಡಗಳಾಗಿ ಹೈಕಮಾಂಡ್ ಬೆಂಗಳೂರಿಗೆ ಬಂದಿಳಿಯಲಿದೆ. ಮೊದಲಿಗೆ ಅರುಣ್ ಸಿಂಗ್, ನಳೀನ್ ಕುಮಾರ್ ಕಟೀಲ್ ತಂಡ 12 ಗಂಟೆಯ ಏರ್ ಇಂಡಿಯಾ ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿಯಲಿದೆ. ಮಧ್ಯಾಹ್ನದ ಬಳಿಕ ಧರ್ಮೆಂದ್ರ ಪ್ರಧಾನ್ ಮತ್ತು ಅವರ ತಂಡ ಆಗಮಿಸಲಿದೆ. ಇವರೊಂದಿಗೆ ಪಿಯೂಶ್ ಗೋಯಲ್ ಸಹ ಆಗಮಿಸಲಿದ್ದಾರೆ. ಒಟ್ಟು ಬಿಜೆಪಿ ಹೈಕಮಾಂಡ್​ನಂದ ನಾಲ್ಕು ಮಂದಿ ವೀಕ್ಷಕರು ಆಗಮಿಸಲಿದ್ದಾರೆ. ರಾಜ್ಯದ ನಾಯಕರಲ್ಲಿ ಅಭಿಪ್ರಾಯವನ್ನು ಸಂಗ್ರಹಿಸಿ ಲ್ಲರ ಒಮ್ಮತದಿಂದ ಒಬ್ಬ ನಾಯಕನನ್ನು ಆಯ್ಕೆ ಮಾಡುವ ಗುರುತರ ಜವಾಬ್ದಾರಿ ವೀಕ್ಷಕರ ಮೇಲಿದೆ.

ಸಂಭಾವ್ಯರು ಯಾರು?

ಸಂಭಾವ್ಯ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಬಿ.ಎಲ್‌.ಸಂತೋಷ್, ವಿಶ್ವೇಶ್ವರ ಹೆಗಡೆ ಕಾಗೇರಿ, ಮುರುಗೇಶ್‌ ನಿರಾಣಿ, ಪ್ರಲ್ಹಾದ್‌ ಜೋಶಿ, ಬಸವರಾಜ್‌ ಬೊಮ್ಮಾಯಿ, ಅರವಿಂದ ಬೆಲ್ಲದ್, ಶಿವಕುಮಾರ್‌ ಉದಾಸಿ ಹೆಸರುಗಳು ಮುಖ್ಯವಾಗಿ ಕೇಳಿಬರುತ್ತಿವೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿಯಂತಹ ಉನ್ನತ ಹುದ್ದೆಯಲ್ಲಿರುವ ಬಿ.ಎಲ್‌ ಸಂತೋಷ್‌, ಕೇಂದ್ರ ಸಚಿವರಾಗಿರುವ ಸಂಸದ ಪ್ರಲ್ಹಾದ್‌ ಜೋಶಿ, ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೆಸರು ದೆಹಲಿ ಪ್ರಭಾವದಿಂದ ಆಗುವವರು ಹಾಗೂ  ಹೊಸಮುಖಗಳು ಎಂಬ ನೆಲೆಯಲ್ಲಿ ಚರ್ಚೆಯಾಗುತ್ತಿದೆ.

ಲಿಂಗಾಯತರಿಗೆ ಸಿಎಂ ಸ್ಥಾನ ಎಂಬ ಲೆಕ್ಕಾಚಾರದಲ್ಲಿ ಮಾಜಿ ಸಚಿವ ಮುರುಗೇಶ್‌ ನಿರಾಣಿ, ಬಸವರಾಜ್‌ ಬೊಮ್ಮಾಯಿ ಹೆಸರಿದ್ದರೆ, ಇವರೊಂದಿಗೆ ಶಿವಕುಮಾರ್ ಉದಾಸಿ ಹಾಗೂ ಅರವಿಂದ್ ಬೆಲ್ಲದ್ ಹೆಸರೂ ಕೂಡಾ ಮುನ್ನೆಲೆಯಲ್ಲಿದೆ. ಸಿಎಂ ಆಯ್ಕೆ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, 2-3 ದಿನಗಳಲ್ಲಿ ವರಿಷ್ಠರು ಸಿಎಂ ಅಭ್ಯರ್ಥಿ ಯಾರು ಅನ್ನೋದನ್ನ ತೀರ್ಮಾನಿಸ್ತಾರೆ ಎಂದು ಹೇಳಿರುದವುದು ಕೊನೆಯ ತೀರ್ಮಾನವನ್ನು ‘ಮೇಲಿನವರೇ’ ಮಾಡುತ್ತಾರೆ ಎಂಬ ಸುಳಿವು ನೀಡಿದೆ. ಹಾಗಾಗಿ ರಾಜ್ಯಕ್ಕೆ ವೀಕ್ಷಕರ ಭೇಟಿ ನೆಪಮಾತ್ರಕ್ಕೆ ಜರುಗಿ, ಅವರೇ ಸಿಎಂ ಹೆಸರು ಸೂಚಿಸಿದರೂ ಅಚ್ಚರಿಯಿಲ್ಲ ಎನ್ನಲಾಗಿದೆ.

ಇದನ್ನೂ ನೋಡಿ: ಹೆಚ್​ಡಿ ಕುಮಾರಸ್ವಾಮಿ ಹೆಸರು ಬಳಸಿ ಆಶ್ರಯ ಯೋಜನೆಯಡಿ ಮನೆ ಕೊಡಿಸುವುದಾಗಿ ವಂಚನೆ ಮಾಡ್ತಿದ್ದ ಆರೋಪಿ ಅರೆಸ್ಟ್

ಇದನ್ನೂ ನೋಡಿ: Next CM of Karnataka 2021: ಸಂತೋಷ್​, ಕಾಗೇರಿ, ಉದಾಸಿ, ನಿರಾಣಿ, ಬೊಮ್ಮಾಯಿ, ಬೆಲ್ಲದ್; ಯಾರಾಗ್ತಾರೆ ಕರ್ನಾಟಕದ ನೂತನ ಮುಖ್ಯಮಂತ್ರಿ?

(BJP High command sends a team to Karnataka to choose new CM)