ಬೆಂಗಳೂರು, (ಸೆಪ್ಟೆಂಬರ್ 12): ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Loksabha Elections 2024) ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ (BJP-JDS alliance) ಫೈನಲ್ ಆಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಜೊತೆ ಮಾತನಾಡಿರುವುದು ನಿಜ ಎಂದು ಸ್ವತಃ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ (HD Devegowda) ಒಪ್ಪಿಕೊಂಡಿದ್ದಾರೆ. ಆದ್ರೆ, ಸೀಟು ಹಂಚಿಕೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಸೀಟು ಹಂಚಿಕೆ ಬಗ್ಗೆ ಮೋದಿ ಜೊತೆ ಕುಮಾರಸ್ವಾಮಿ ಮಾತಾಡುತ್ತಾರೆ ಎಂದು ಪುತ್ರನ ಹೆಗಲ ಮೇಲೆ ಹಾಕಿದ್ದಾರೆ. ಇದರ ಬೆನ್ನಲ್ಲೇ ಇದೀಗ ಹೆಚ್ಡಿ ಕುಮಾರಸ್ವಾಮಿ ಪ್ರಧಾನಿ ಮೋದಿ ಆಹ್ವಾನಕ್ಕೆ ಕಾಯುತ್ತಿದ್ದಾರೆ.
ಹೌದು.. ಕುಮಾರಸ್ವಾಮಿ ಅವರು ಇಂದು(ಸೆಪ್ಟೆಂಬರ್ 12) ದೆಹಲಿಗೆ ತೆರಳಬೇಕಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರಿಂದ ಇನ್ನೂ ಕರೆ ಬಾರದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ದಿಲ್ಲಿಗೆ ಹೋಗದೇ ಬೆಂಗಳೂರಿನಲ್ಲಿ ಉಳಿದುಕೊಂಡಿದ್ದಾರೆ. ಮೋದಿಯಿಂದ ಆಹ್ವಾನ ಬಂದ ಕೂಡಲೇ ಕುಮಾರಸ್ವಾಮಿ ದೆಹಲಿಗೆ ತೆಳಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಜನತಾ ದಳದ ಹೆಸರನ್ನು ಕಮಲ ದಳ ಎಂದು ಬದಲಿಸಿಕೊಂಡರೆ ಒಳಿತು: ಜೆಡಿಎಸ್ಗೆ ಕಾಂಗ್ರೆಸ್ ಟಾಂಗ್
ಈಗಾಗಲೇ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಅವರು ಮೈತ್ರಿ ಬಗ್ಗೆ ದೂರವಾಣಿ ಮೂಲಕ ಬಿಜೆಪಿ ವರಿಷ್ಠರ ಜತೆ ಚರ್ಚಿಸಿದ್ದಾರೆ. ಇದೀಗ ಖುದ್ದು ಮುಖಾಮುಖಿಯಾಗಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ಒಂದೇ ಬಾಕಿ ಇದೆ. ಇದೇ ಶುಕ್ರವಾರ ದೇವೇಗೌಡ, ಕುಮಾರಸ್ವಾಮಿ ದೆಹಲಿಗೆ ತೆರಳಿ ಅಂತಿಮ ಸುತ್ತಿನ ಮಾತುಕತೆ ನಡೆಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಾಳೆ(ಸೆಪ್ಟೆರಂಬರ್ 13) ದೆಹಲಿಗೆ ತೆರಳುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಎಲ್ಲವೂ ಅಂದುಕೊಂಡತೆ ಯಶಸ್ವಿಯಾದರೆ ಗಣೇಶ ಹಬ್ಬಕ್ಕೂ ಮುನ್ನವೇ ದೆಹಲಿಯಲ್ಲೇ ಉಭಯ ನಾಯಕರು ಮೈತ್ರಿ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇನ್ನೊಂದೆಡೆ ಬಿಜೆಪಿಯೊಂದಿಗಿನ ಮೈತ್ರಿ ಬಗ್ಗೆ ಜೆಡಿಎಸ್ನಲ್ಲೇ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಕೆಲ ಶಾಸಕರು ಈ ಮೈತ್ರಿಗೆ ಪರೋಕ್ಷ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗೇ ಅಲ್ಪಸಂಖ್ಯಾತ ಸಮುದಾಯದ ಮುಖಂಡರನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ