ನರಿಗಳು ಘೀಳಿಟ್ಟರೆ ಕಾಡಿನ ರಾಜ ಬೆದರುವುದು ಉಂಟಾ?: ವಿಪಕ್ಷಗಳ ಸಭೆಗೆ ಸಿಟಿ ರವಿ ವ್ಯಂಗ್ಯ
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ದೇಶದಲ್ಲಿರುವ ವಿಪಕ್ಷಗಳು ಮೋದಿ ಮತ್ತು ಬಿಜೆಪಿ ಸೋಲಿಸಲು ಒಗ್ಗಟ್ಟಿನ ಮಂತ್ರ ಪಠಿಸಲು ಆರಂಭಿಸಿವೆ. ಬೆಂಗಳೂರಿನಲ್ಲಿ ಸಭೆ ನಡೆಸಿ ರಣವ್ಯೂಹ ನಿರ್ಮಿಸಲು ಸಜ್ಜಾಗುತ್ತಿವೆ. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವ್ಯಂಗ್ಯವಾಡಿದ್ದಾರೆ.
ಚಿಕ್ಕಮಗಳೂರು, ಜುಲೈ 16: ನರಿಗಳು ಘೀಳಿಟ್ಟರೆ ಕಾಡಿನ ರಾಜ ಬೆದರುವುದು ಉಂಟಾ? ಎಂದು ಹೇಳುವ ಮೂಲಕ ವಿಪಕ್ಷ ನಾಯಕರ ಸಭೆಯನ್ನು (Opposition leaders meeting) ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ವ್ಯಂಗ್ಯವಾಡಿದರು. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ದೇಶದಲ್ಲಿರುವ ವಿಪಕ್ಷಗಳು ಮೋದಿ ಮತ್ತು ಬಿಜೆಪಿ ಸೋಲಿಸಲು ಒಗ್ಗಟ್ಟಿನ ಮಂತ್ರ ಪಠಿಸಿದ್ದು, ಬೆಂಗಳೂರಿನಲ್ಲಿ ನಾಳೆಯಿಂದ ಸಭೆಯೂ ನಡೆಸಲಿದ್ದಾರೆ.
ಈ ಬಗ್ಗೆ ವ್ಯಂಗ್ಯವಾಡಿದ ಸಿಟಿ ರವಿ, ಅಲ್ಲಿ ಇಲ್ಲಿ ನರಿಗಳು ಘೀಳಿಟ್ಟರೆ ಹೃದಯ ಸಾಮ್ರಾಟ ಸಿಂಹ ಬೆದರುವುದು ಉಂಟಾ? ನಮ್ಮ ಪ್ರಧಾನಿ ನರೇಂದ್ರ ಮೋದಿ ಅನಭಿಷಿಕ್ತ ರಾಜನಿದ್ದಂತೆ. ಪ್ರಜಾಪ್ರಭುತ್ವದಲ್ಲಿ ಜನರ ಹೃದಯದಲ್ಲಿ ಸ್ಥಾನ ಪಡೆದ ಸಾಮ್ರಾಟರಾಗಿದ್ದಾರೆ. 100 ನರಿಗಳು ಕೂಗಾಡಿದರೂ ಸಿಂಹ ಅದರ ದಾರಿಯಲ್ಲೇ ನಡೆಯುತ್ತದೆ. ಕಾಡಿನ ರಾಜ ಸಿಂಹನನ್ನ ಬೆದರಿಸಲು ಆಗುತ್ತಾ? ನೂರು ವಿರೋಧ ಪಕ್ಷಗಳಿಗೆ ಭಯ ಇದೆ, ಹಾಗಾಗಿ ಒಂದಾಗುತ್ತಿವೆ. ವಿರೋಧ ಪಕ್ಷಗಳ ಒಗ್ಗಟ್ಟು ದೇಶದ ಹಿತದೃಷ್ಟಿಯಿಂದಲ್ಲ. ಅವರಿಗೆ ಹೆದರುವ ಅಗತ್ಯವಿಲ್ಲ ಎಂದರು.
ದೇಶ ವಿಶ್ವಗುರು ಆಗಬೇಕು ಎಂಬುವುದು ನಮ್ಮ ಅಜೆಂಡಾ. ಭಾರತ ವಿಶ್ವಗುರು ಆಗಬೇಕು, ಭಾರತದ ಗೌರವ ಜಾಸ್ತಿ ಆಗಬೇಕು ಎಂಬುದು ಮೋದಿ ಅವರ ಕನಸು ಎಂದು ಹೇಳಿದ ಸಿಟಿ ರವಿ, ಬೆಂಗಳೂರಿನಲ್ಲಿ ಸಭೆ ಸೇರುತ್ತಿರುವ ವಿರೋಧ ಪಕ್ಷಗಳ ಅಜೆಂಡಾ ಏನು? ನರೇಂದ್ರ ಮೋದಿಯನ್ನು ಸೋಲಿಸಬೇಕು ಎಂಬುದು ವಿಪಕ್ಷಗಳ ಕನಸು. ವಂಶ ಪಾರಂಪರ್ಯ ರಾಜಕೀಯ ಆಡಳಿತಕ್ಕೆ ಈಗ ಕುತ್ತು ಬಂದಿದೆ. ಭ್ರಷ್ಟಾಚಾರದ ಹಲವು ಪ್ರಕರಣಗಳಲ್ಲಿ ಜಾಮೀನಿನಲ್ಲಿ ಇದ್ದಾರೆ. ಹೀಗಾಗಿ ಮೋದಿ ಮತ್ತೆ ಪ್ರಧಾನಿಯಾದರೆ ನಮ್ಮ ಕುಟುಂಬದ ಕನಸು ಭಗ್ನವಾಗುತ್ತದೆ, ರಾಜಕೀಯ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎಂಬುದು ವಿಪಕ್ಷಗಳ ಅಜೆಂಡಾ ಎಂದರು.
ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನ ಬಿಜೆಪಿ ಬೆಂಬಲಿಸಿದ್ದಾರೆ ಎಂದು ಹೇಳಿದ ಸಿಟಿ ರವಿ, 1998ರಿಂದ ನಿರಂತರವಾಗಿ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆದ್ದಿದ್ದೇವೆ. ಒಂದೊಂದು ಸಂದರ್ಭಕ್ಕೆ ತಕ್ಕಂತೆ ಆಲೋಚನೆ ಮಾಡಬೇಕಾಗುತ್ತದೆ. ದೇಶದ ಹಿತದೃಷ್ಟಿಯಿಂದ ಬಿಜೆಪಿಯ ಗೆಲುವು ಅನಿವಾರ್ಯತೆ ಇದೆ ಎಂದರು.
ಆರ್ಕವತಿ ಪ್ರಕರಣದಲ್ಲಿ ಇದ್ದವರು ಅವರೇ ಕದ್ದವರೂ ಅವರೇ: ಸಿಟಿ ರವಿ
ವಿಪಕ್ಷ ನಾಯಕರು ಇದ್ದಿದ್ದರೆ ಆರ್ಕವತಿ ಪ್ರಕರಣ ಹೊರ ತೆಗೆಯುತ್ತಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ. ವಿಧಾನಸಭೆ ಮತ್ತು ಪರಿಷತ್ ವಿಪಕ್ಷ ನಾಯಕರ ಆಯ್ಕೆ ವಿಳಂಬವಾಗುತ್ತಿರುವುದನ್ನು ಟೀಕಿಸುತ್ತಿರುವ ಆಡಳಿತ ಪಕ್ಷ ಕಾಂಗ್ರೆಸ್ಗೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್ನವರಿಗೆ ಈಗ ಆರಾಮಾವಾಯಿತಲ್ಲ, ಈಗ ಅವರಿಗೇಕೆ ಭಯ? ಅರ್ಕಾವತಿ ಖದೀಮರು ಯಾರು ಎಂದು ಕೇಳಿದ್ದಿದ್ದರೆ ತಡಬಡಾಯಿಸಬೇಕಿತ್ತು. ಈಗ ಅವರು ನಿಶ್ಚಿಂತೆಯಾಗಿ ಇರಬಹುದಲ್ವಾ ಎಂದು ಹೇಳಿದರು.
ನಾನು ಹತ್ತಾರು ಬಾರಿ ಕೇಳಿದ್ದೇನೆ ಈವರೆಗೂ ಉತ್ತರ ಕೊಟ್ಟಿಲ್ಲ. ಅರ್ಕಾವತಿ ಹಗರಣದಲ್ಲಿ ಇದ್ದ ಮೂವರಲ್ಲಿ ಕದ್ದವರು ಯಾರು? 8000 ಕೋಟಿ ಲೂಟಿ ಹೊಡೆದವರು ಯಾರೆಂದು ಕೇಳುತ್ತಲೇ ಇದ್ದೇನೆ. ಆದೆರೆ ಉತ್ತರ ಕೊಡುವ ಧೈರ್ಯವೂ ಅವರಿಗಿಲ್ಲ. ಯಾಕಂದರೆ ಇದ್ದವರು ಅವರೇ, ಕದ್ದವರೂ ಅವರೇ ಎಂದು ಸಿಟಿ ರವಿ ಹೇಳಿದರು.
ಮಾಜಿ ಸಿಎಂ ಕುಮಾರಸ್ವಾಮಿ ವಿಪಕ್ಷ ನಾಯಕ ಎಂಬ ಚರ್ಚೆ ವಿಚಾರವಾಗಿ ಮಾತನಾಡಿದ ಅವರು, ರಾಜಕಾರಣದಲ್ಲಿ ಇವನ್ನೆಲ್ಲಾ ಸುಮ್ಮನೆ ಬಿಟ್ಟಿರುವುದಿಲ್ಲ. ಅದಕ್ಕೆಲ್ಲಾ ಕಾರಣ ಇರುತ್ತದೆ, ಈಗ ಅದರ ವಿಶ್ಲೇಷಣೆ ಬೇಡ ಎಂದ ಸಿಟಿ ರವಿ, ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿದರು.
ಜೆಡಿಎಸ್ ಜೊತೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿರಬಹುದು: ಸಿಟಿ ರವಿ
ರಾಜಕಾರಣ ನಿಂತ ನೀರಲ್ಲ, ಅದು ಹರಿಯುವ ನದಿ ಇದ್ದಂತೆ. ಶಾಶ್ವತವಾಗಿ ಯಾರೂ ಶತ್ರುಗಳಲ್ಲ, ಮಿತ್ರರೂ ಅಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಜನಪರ ಕೆಲಸ ಆಗುತ್ತಿದೆ. ಜನಪರ ಕೆಲಸ ಬೆಂಬಲಿಸಿ ಯಾರು ಬೇಕಾದರೂ ಬರಬಹುದು. ಜೆಡಿಎಸ್ ಜೊತೆ ನಮ್ಮ ಹಂತದಲ್ಲಿ ಯಾವುದೇ ಚರ್ಚೆಯಾಗಿಲ್ಲ. ಇದಕ್ಕಿಂತ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿರಬಹುದು. ದೇಶ ಮೊದಲು ಎನ್ನುವವರು ಯಾರು ಬೇಕಿದ್ದರೂ ಬರಬಹುದು ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:32 pm, Sun, 16 July 23