ತುಮಕೂರು: ಅಭಿವೃದ್ಧಿ ಕಾರ್ಯ ಮಾಡಿದಕ್ಕೆ ಪ್ರತಿಫಲ ಕೊಡುತ್ತಾರೆ ಅಂದುಕೊಂಡಿದ್ದೆ. ಆದ್ರೆ, ಉಚಿತ ಭಾಗ್ಯದ ಮುಂದೆ ನಮ್ಮ ಕೆಲಸ ಕೊಚ್ಚಿಕೊಂಡು ಹೋಯಿತು ಎಂದು ಮಾಜಿ ಸಚಿವ ಜೆಸಿ ಮಾಧುಸ್ವಾಮಿ(JC Madhuswamy) ಬೇಸರ ವ್ಯಕ್ತಪಡಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಬಳಿಕ ಮೊದಲ ಬಾರಿಗೆ ಚಿಕ್ಕನಾಯಕನಹಳ್ಳಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾಡಿದ ಮಾಧುಸ್ವಾಮಿ, ಇಡೀ ರಾಜ್ಯದಲ್ಲಿ ನನ್ನಂತೆ ಕೆಲಸ ಮಾಡಿದ ಹಲವು ಶಾಸಕರಿದ್ದಾರೆ. ಪ್ರತಿಫಲ ಸಿಗದಿರುವುದು ಕೇವಲ ಚಿಕ್ಕನಾಯಕನಹಳ್ಳಿಗೆ ಮಾತ್ರವಲ್ಲ. ಜನರಿಗೆ ಊರಿನ ಕೆಲಸ, ಕ್ಷೇತ್ರದ ತಮ್ಮ ಕೆಲಸವೆಂದು ಅನಿಸಲೇ ಇಲ್ಲ. ಕಾಂಗ್ರೆಸ್ ಕೊಡುವ ಅಕ್ಕಿ, ದುಡ್ಡೇ ಶ್ರೇಷ್ಠ ಅನಿಸಿತು. ಹೀಗಾಗಿ ಉಚಿತ ಭಾಗ್ಯದ ಮುಂದೆ ಕೆಲಸ ಕೊಚ್ಚಿಕೊಂಡು ಹೋಯಿತು ಎಂದು ತಮ್ಮ ಸೋಲಿನ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ: JC Madhuswamy: ಕಾಂಗ್ರೆಸ್ ಸೇರ್ಪಡೆ ವದಂತಿಗೆ ತೆರೆ ಎಳೆದ ಮಾಜಿ ಸಚಿವ ಜೆಸಿ ಮಾಧುಸ್ವಾಮಿ
ಉಚಿತ ಭಾಗ್ಯ ಮುಂದುವರಿದರೆ ಚುನಾವಣೆ ಮಾಡುವುದು ತುಂಬಾ ಕಷ್ಟವಾಗುತ್ತೆ. ರಾಜ್ಯದ ತೆರಿಗೆದಾರರ ದುಡ್ಡು ಇಷ್ಟಬಂದ ಹಾಗೇ ಹಂಚುತ್ತೇನೆ ಅಂದರೇ ಮನೆಯಲ್ಲಿ ಕೂತವರಿಗೆ ಹಂಚುತ್ತೇನೆ ಅಂದ್ರೆ ರಾಜ್ಯದ ಪರಿಸ್ಥಿತಿ ಏನಾಗಬೇಡ. ಕಾಂಗ್ರೆಸ್ ಮಾಡಿದ ಪಾಪಕ್ಕೆ ಮೋದಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ನಾವು ಕನಿಷ್ಠ 7 ಕೆಜಿ ಅಕ್ಕಿ ಕೊಡಬೇಕೆಂದು ಪ್ರಯತ್ನಿಸಿದ್ದೇವೆ. ಆದರೆ ಹೆಚ್ಚುವರಿ ಅಕ್ಕಿ ಕೊಡಲು ಪ್ರಧಾನಿ ನರೇಂದ್ರ ಮೋದಿ ಒಪ್ಪಿಲ್ಲ. ಬಿಜೆಪಿ ಆಡಳಿತದ ರಾಜ್ಯಕ್ಕೂ ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ಕೊಟ್ಟಿಲ್ಲ. ಆಹಾರ ಭದ್ರತಾ ಕಾಯ್ದೆ ಪ್ರಕಾರ ಒಬ್ಬರಿಗೆ ದಿನಕ್ಕೆ 150-200 ಗ್ರಾಂ ಅಕ್ಕಿ. 150-200 ಗ್ರಾಂ ಅಕ್ಕಿ ಸಾಕು ಎಂದು ವೈಜ್ಞಾನಿಕವಾಗಿ ಅಂದಾಜಿಸಲಾಗಿದೆ. ಹಾಗಾಗಿ ತಿಂಗಳಿಗೆ 5 ಕೆಜಿ ಅಕ್ಕಿ ಕೊಡಲಾಗುತ್ತಿದೆ ಎಂದರು.
ದಾಸ್ತಾನು ಇರುವ ಅಕ್ಕಿ ಬರಗಾಲ, ಅತಿವೃಷ್ಟಿ ಸಂದರ್ಭದಲ್ಲಿ ನೀಡುತ್ತಾರೆ. ನಮ್ಮಲ್ಲಿ ಅಕ್ಕಿ ಇದೆ ಎಂದು ಹೇಳಿ ಬೇಕಾಬಿಟ್ಟಿ ಹಂಚೋಕಾಗುತ್ತಾ? ಕರ್ನಾಟಕಕ್ಕೆ ಅಂತಹ ಪರಿಸ್ಥಿತಿ ಬಂದರೇ ಮೋದಿ ಅಕ್ಕಿ ಕೊಟ್ಟೇ ಕೊಡುತ್ತಾರೆ. ಮನೆಯಲ್ಲಿ ಕಷ್ಟ ಕಾಲಕ್ಕೆ ಆಗಲಿ ಎಂದು ಹಣವನ್ನು ಕೂಡಿಡುತ್ತಾರೆ. ಅದನ್ನು ನಾನು ಸಿನಿಮಾ ನೋಡುವುದಕ್ಕೆ ಹೋಗಬೇಕು ಹಾಗೂ ಸ್ವೀಟ್ ತಿನ್ನೋಕೆ ಕೊಡು ಅಂದ್ರೆ ಕೊಡಲು ಆಗುತ್ತಾ? ಎಂದು ಪ್ರಶ್ನಿಸಿದರು.
ಒಳ್ಳೆ ಮಾತುಗಾರಿಕೆಯಿಂದಲೇ ಕರ್ನಾಟಕ ಬಿಜೆಪಿಯಲ್ಲಿ ಅಗ್ರಗಣ್ಯ ನಾಯಕರಾಗಿ ಗುರುತಿಸಿಕೊಂಡಿದ್ದರು. ಆದ್ರೆ, ಕಳೆದು ಮೇ ತಿಂಗಳಲ್ಲಿ ನಡೆದಿದ್ದ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾಧುಸ್ವಾಮಿ, ಜೆಡಿಎಸ್‌ನ ಸುರೇಶಬಾಬು ವಿರುದ್ಧ ಸೋಲುಕಂಡಿದ್ದರು. ಬಳಿಕ ಅವರು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರು ಉಳಿದುಕೊಂಡಿದ್ದರು. ಹೀಗಾಗಿ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದ್ರೆ, ಅದನ್ನು ಅಲ್ಲಗೆಳೆದಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ