JC Madhuswamy: ಕಾಂಗ್ರೆಸ್ ಸೇರ್ಪಡೆ ವದಂತಿಗೆ ತೆರೆ ಎಳೆದ ಮಾಜಿ ಸಚಿವ ಜೆಸಿ ಮಾಧುಸ್ವಾಮಿ

ಕಾಂಗ್ರೆಸ್ ಸೇರುತ್ತಾರೆ ಎನ್ನುವ ಅಂತೆ-ಕಂತೆಗಳಿಗೆ ಸ್ವತಃ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರೇ ತೆರೆ ಎಳೆದಿದ್ದಾರೆ. ಅಲ್ಲದೇ ಈ ಬಗ್ಗೆ ಸುದ್ದಿ ಹಬ್ಬಿಸಿದವರ ವಿರುದ್ಧ ಗರಂ ಆಗಿದ್ದಾರೆ.

JC Madhuswamy: ಕಾಂಗ್ರೆಸ್ ಸೇರ್ಪಡೆ ವದಂತಿಗೆ ತೆರೆ ಎಳೆದ ಮಾಜಿ ಸಚಿವ ಜೆಸಿ ಮಾಧುಸ್ವಾಮಿ
ಮಾಜಿ ಸಚಿವ ಜೆಸಿ ಮಾಧುಸ್ವಾಮಿ
Follow us
ಮಹೇಶ್ ಇ, ಭೂಮನಹಳ್ಳಿ
| Updated By: ರಮೇಶ್ ಬಿ. ಜವಳಗೇರಾ

Updated on: Jul 02, 2023 | 5:59 PM

ತುಮಕೂರು: ಮಾಜಿ ಸಚಿವ ಜೆಸಿ ಮಾಧುಸ್ವಾಮಿ (JC Madhu Swamy) ಕಾಂಗ್ರೆಸ್ (Congress) ಸೇರ್ತಾರೆ ಎನ್ನುವ ಸುದ್ದಿಗೆ ಸ್ವತಃ ಅವರೇ ಪ್ರತಿಕ್ರಿಯಿಸಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಇಂದು (ಜುಲೈ 02) ತುಮಕೂರಿನ ಚಿಕ್ಕನಾಯಕನಹಳ್ಳಿ ನಡೆದ ಸಭೆಯಲ್ಲಿ ಮಾತನಾಡಿದ ಮಾಧುಸ್ವಾಮಿ, ಕಾಂಗ್ರೆಸ್ ಸೇರುವ ದುಃಸ್ಥಿತಿ ನನಗೆ ಬಂದಿಲ್ಲ. ಯಾವನೋ ಮುಠ್ಠಾಳ ಈ ರೀತಿ ಹೇಳಿ ಸುಳ್ಳು ಸುದ್ದಿಯನ್ನು ಟಿವಿಗೆ ಹಾಕಿಸಿದ್ದಾನೆ ಎಂದು ಮಾಜಿ ಸಚಿವ ಮಾಧುಸ್ವಾಮಿ ಗರಂ ಆದರು. ಈ ಮೂಲಕ ಎಲ್ಲಾ ಅಂತೆ-ಕಂತೆಗಳಿಗೆ ತೆರೆ ಎಳೆದರು.

ಇದನ್ನೂ ಓದಿ: ದೊಡ್ಡ ವೇದಿಕೆ ಮೇಲೆಯೇ ಬಿಜೆಪಿ ಶಾಸಕನ ಗುಣಗಾನ: ಬಾಂಬೆ ಫ್ರೆಂಡ್‌ಗೆ ಸಿದ್ದರಾಮಯ್ಯ ಮೇಲೆ ಉಕ್ಕಿತು ಪ್ರೀತಿ

ನಾನು ಕಾಂಗ್ರೆಸ್ ಗೆ ಹೋಗುತ್ತೇನೆ ಎಂದು ಯಾವನೋ ಮಠ್ಠಾಳ ಟಿವಿಗೆ ಹಾಕಿಸಿದ್ದಾನೆ. ಇದರಿಂದ ನಾನು ಕಾಂಗ್ರೆಸ್ ಗೆ ಹೋಗುತ್ತೇನೆ ಎಂದು ನಮ್ಮ ಕಾರ್ಯಕರ್ತರು ತಲೆ ಕೆಡಿಸಿಕೊಂಡಿದ್ರು. ನಾನೇ ಕಾಂಗ್ರೆಸ್ ಸಿದ್ದಾಂತ ವಿರೋಧ ಮಾಡಿ ಆ ಪಕ್ಷಕ್ಕೆ ಸೇರುತ್ತೀನಾ? ಇಡೀ ಜೀವಮಾನದಲ್ಲಿ ಕಾಂಗ್ರೆಸ್ ವಿರೋಧ ಮಾಡಿಕೊಂಡು ಬಂದವನು ನಾನು. ಕಾಂಗ್ರೆಸ್ ಗೆ ಹೋಗುವುದು ನನಗೇನ್ರಿ ಅಂತಹ ದುಃಸ್ಥಿತಿ ಬಂದಿದೆ. ಜೆಪಿ ಚಳವಳಿಯಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಡಿದವನು ನಾನು. ಅಂತಹದರಲ್ಲಿ ಕಾಂಗ್ರೆಸ್ ಸೇರುತ್ತೇನಾ? ಇಂತಹ ವದಂತಿಗೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬಾರದು ಎಂದು ಸಭೆಯಲ್ಲಿ ಸ್ಪಷ್ಟಪಡಿಸಿದರು. ಈ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದರು.

ವಿಧಾನಸಭೆ ಕ್ಷೇತ್ರದ ಚುನಾವಣೆಯಲ್ಲಿ ಸೋಲುಕಂಡಿರುವ ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಬಿಜೆಪಿ ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಉಳಿದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಅಲ್ಲದೇ ತುಮಕೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಸುದ್ದಿ ರಾಜಕಾರಣದಲ್ಲಿ ಸದ್ದು ಮಾಡಿತ್ತು. ಆದರೆ ಇದೀಗ ಇವೆಲ್ಲದಕ್ಕೂ ಮಾಧುಸ್ವಾಮಿ ಫುಲ್ ಸ್ಟಾಪ್ ಇಟ್ಟಿದ್ದಾರೆ.

ಒಳ್ಳೆ ಮಾತುಗಾರಿಕೆಯಿಂದಲೇ ಕರ್ನಾಟಕ ಬಿಜೆಪಿಯಲ್ಲಿ ಅಗ್ರಗಣ್ಯ ನಾಯಕರಾಗಿ ಗುರುತಿಸಿಕೊಂಡಿದ್ದರು. ಆದ್ರೆ, ಕಳೆದು ಮೇ ತಿಂಗಳಲ್ಲಿ ನಡೆದಿದ್ದ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾಧುಸ್ವಾಮಿ, ಜೆಡಿಎಸ್‌ನ ಸುರೇಶಬಾಬು ವಿರುದ್ಧ ಸೋಲುಕಂಡಿದ್ದರು. ಬಳಿಕ ಅವರು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರು ಉಳಿದುಕೊಂಡಿದ್ದರು. ಹೀಗಾಗಿ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಸುದ್ದಿ ಹಬ್ಬಿತ್ತು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ