ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಸೋಲಿನ ಬಳಿಕ ಬಿಜೆಪಿಯಲ್ಲಿ(BJP) ಅಂತರ್ಯುದ್ಧ ಶುರುವಾಗಿದೆ. ಬಿಹಿರಂಗವಾಗಿಯೇ ಬಿಜೆಪಿ ನಾಯಕರು ಪರಸ್ಪರ ಬೈದಾಡಿಕೊಳ್ಳುತ್ತಿದ್ದಾರೆ. ಅದರಂತೆ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ (MP Renukacharya) ಮತ್ತೊಂದೆಜ್ಜೆ ಮುಂದೆ ಹೋಗಿ ಸ್ವಪಕ್ಷದ ನಾಯಕರ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರೆಸಿದ್ದಾರೆ. ಈ ಹಿಂದೆ ಜಗದೀಶ್ ಶೆಟ್ಟರ್ ಅವರು ಪಕ್ಷ ಬಿಜೆಪಿ ತೊರೆದ ಬಳಿಕ ವಿಧಾನಸಭೆ ಚುನಾವಣೆ ಸಹ ಉಸ್ತುವಾರಿಯಾಗಿದ್ದ ಅಣ್ಣಮಲೈ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಸೇರಿದಂತೆ ಕೆಲ ನಾಯಕರ ಕಾರ್ಯವೈಖರಿ ಬಗ್ಗೆ ಬಿಚ್ಚಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ರೇಣುಕಾಚಾರ್ಯ ಸರದಿ.
ಬೆಂಗಳೂರಿನಲ್ಲಿ ಇಂದು(ಜೂನ್ 29) ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಗ್ರಾಮ ಪಂಚಾಯಿತಿ ಗೆಲ್ಲದವರು ನಮಗೆ ಮಾರ್ಗದರ್ಶನ ಮಾಡುತ್ತಾರೆ. ಅಣ್ಣಾಮಲೈ ಬಂದು ನಮಗೆ ಮಾರ್ಗದರ್ಶನ ಕೊಡುತ್ತಾರೆ. ಅಣ್ಣಾಮಲೈ ಏನು ದೊಡ್ಡ ಹೀರೋ ನಾ? ಸೆಲ್ಯೂಟ್ ಹೊಡೆಸಿಕೊಳ್ಳುತ್ತಿದ್ದವರಿಂದ ಬೊಮ್ಮಾಯಿ ಅವರಿಗೆ ಹೇಳಿಸಿಕೊಳ್ಳುವ ಮುಜುಗರ. ಇವೆಲ್ಲಾ ನನ್ನ ಮಾತುಗಳಲ್ಲ, ಕಾರ್ಯಕರ್ತರ ಭಾವನೆಗಳು. ಮೋದಿ ಬಂದು ಹೋದ ಮೇಲೆ ಅದನ್ನು ಮತಗಳಾಗಿ ಪರಿವರ್ತನೆ ಮಾಡುವ ಮುಖಗಳು ಬೇಕಲ್ವಾ? ಅಂತೆಲ್ಲ ಎಂದು ವಾಗ್ದಾಳಿ ನಡೆಸಿದರು.
ಸುಧಾಕರ್ ಸೋತಾಗ ಅವರ ಮನೆಗೆ ಹೋಗಿ ಸಾಂತ್ವನ ಹೇಳಿದ್ರಿ. ಬೇರೆ ಯಾರೂ ಸೋತ ಅಭ್ಯರ್ಥಿಗಳು ಕಾಣಲಿಲ್ವಾ? 2 ಖಾತೆ ಕೊಡದಿದ್ದರೆ ಬಿಜೆಪಿ ಮುಗಿಸಿಬಿಡುತ್ತೇನೆ ಎಂದು ಬೆದರಿಕೆ. ಬಿಜೆಪಿ ಮುಗಿಸಿಬಿಡುತ್ತೇನೆ ಎಂದು ಹೇಳಿದವರ ಮನೆಗೆ ಹೋಗಿದ್ದೀರಿ
ಕಾಂಗ್ರೆಸ್ ಗ್ಯಾರಂಟಿ ಕೊಡುತ್ತಾ ಹೋದರು, ನಮ್ಮವರು ಮಲಗಿದ್ದರು. ಬಿಜೆಪಿ ಪ್ರಣಾಳಿಕೆ ಜನರಿಗೆ ತಲುಪಲೇ ಇಲ್ಲ. ಸತಾಯಿಸಿ ಓಡಾಡಿಸಿ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ಕೊಟ್ಟರು. ಅಭಿಪ್ರಾಯ ಹಂಚಿಕೊಳ್ಳಲು ಶಾಸಕಾಂಗ ಸಭೆ ಕರೆಯಲೇ ಇಲ್ಲ. ಬಸವರಾಜ ಬೊಮ್ಮಾಯಿ ಅವರ ಕೈಕಟ್ಟಿ ಹಾಕಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಾಧ್ಯಕ್ಷರ ಬಗ್ಗೆ ಗೌರವ ಇದೆ, ಪ್ರವಾಸ ಮಾಡಿದರು ನಿಜ. ಆದರೆ ಮತಗಳಾಗಿ ಪರಿವರ್ತನೆ ಆಗಲಿಲ್ಲ. ಸೋಲಿನ ಬಳಿಕ ರಾಜ್ಯಾಧ್ಯಕ್ಷರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಿತ್ತು. ವ್ಯವಸ್ಥೆ ಸರಿಪಡಿಸಿಕೊಳ್ಳಿ, ಅವಲೋಕನ ಮಾಡಿಕೊಳ್ಳಿ. ಕಾರ್ಯಕರ್ತರನ್ನು ಬೆದರಿಸುವುದು ಬಿಡಿ ಎಂದು ನಳಿನ್ ಕುಮಾರ್ ಕಟೀಲ್ಗೆ ಸಲಹೆ ನೀಡಿದರು.
ಯಡಿಯೂರಪ್ಪ ಪರ ಮಾತಾಡಿದರೆ ಪಕ್ಷ ವಿರೋಧಿ ಚಟುವಟಿಕೆ. ಯಡಿಯೂರಪ್ಪ ವಿರುದ್ಧವಾಗಿ ಮಾತಾಡಿದರೆ ಶಹಬ್ಬಾಸ್ ಕೊಡುತ್ತಾರೆ. ಅನಿವಾರ್ಯವಾಗಿ ನಾನು ಈ ರೀತಿ ಮಾತಾಡುತ್ತಿದ್ದೇನೆ. ಸೋತವರಿಗೆ ಬಿಎಸ್ವೈ, ವಿಜಯೇಂದ್ರ ಕರೆಮಾಡಿ ಮಾತನಾಡಿದ್ರು. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಯಾರಿಗಾದರೂ ಕರೆ ಮಾಡಿದ್ರಾ? ಆತ್ಮಾವಲೋಕನ ಸಭೆ ಅಂತಾ ಯಾರೋ ಕರೆ ಮಾಡುತ್ತಾರೆ. ಪಕ್ಷದ ಕಚೇರಿ ಕೆಲವರು ಕಾರ್ಪೊರೇಟ್ ಕಚೇರಿ ಮಾಡಿಕೊಂಡಿದ್ದಾರೆ ಎಂದು ಸ್ವಪಕ್ಷದ ಪ್ರಮುಖ ನಾಯಕರಿಗೆ ಕುಟುಕಿದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ